Advertisement

ಆವರಣ ವಿವಿಧ ಆಯಾಮಗಳಲ್ಲಿ ಅನಾವರಣ

09:32 AM Aug 26, 2019 | Suhan S |

ಧಾರವಾಡ: ಎಸ್‌.ಎಲ್.ಭೈರಪ್ಪ ಅವರ ಕಾದಂಬರಿ ಆವರಣ 50ಕ್ಕೂ ಹೆಚ್ಚು ಮುದ್ರಣ ಕಂಡ ಸಂಭ್ರಮಕ್ಕಾಗಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಐವರು ಚಿಂತಕರು ‘ಆವರಣ’ದ ವಿವಿಧ ಆಯಾಮಗಳನ್ನು ಅನಾವರಣಗೊಳಿಸಿದರು.

Advertisement

ಸೃಜನಾ ರಂಗಮಂದಿರದಲ್ಲಿ ಎಸ್‌.ಎಲ್.ಭೈರಪ್ಪ ಸಾಹಿತ್ಯ ಪ್ರತಿಷ್ಠಾನ, ಸಾಹಿತ್ಯ ಪ್ರಕಾಶನ ಹಾಗೂ ಸ್ನೇಹ ಪ್ರತಿಷ್ಠಾನ ಸಹಯೋಗದಲ್ಲಿ ರವಿವಾರ ಕಾರ್ಯಕ್ರಮ ಆಯೋಜಿಸಲಾಗಿತ್ತು.

ಆವರಣ: ಕನ್ನಡ ಕಾದಂಬರಿ ಪ್ರಪಂಚದ ಸಂಭ್ರಮ ಕುರಿತು ಶ್ರೀಧರ ಹೆಗಡೆ ಭದ್ರನ್‌ ಮಾತನಾಡಿ, ತಾವು ನಂಬಿದ ಮೌಲ್ಯಗಳಿಗೆ ನಿಷ್ಠರಾಗಿ, ವೈಚಾರಿಕತೆಗೆ ಬದ್ಧರಾಗಿ ಬರೆಯುವುದೇ ಎಸ್‌.ಎಲ್.ಭೈರಪ್ಪ ಅವರ ಕೃತಿಗಳು ಜನಪ್ರಿಯವಾಗಲು ಕಾರಣ ಎಂದರು.

ಧಾರ್ಮಿಕ ಹಿನ್ನೆಲೆಯ ಕಾದಂಬರಿ ಎಂಬ ಕಾರಣಕ್ಕೆ ಆವರಣ ಬಿಡುಗಡೆಯಾದಾಗ ಒಂದು ಗುಂಪು ಇದನ್ನು ಪ್ರತಿರೋಧಿಸಿತು. ಭಾರತದ ಮಧ್ಯಯುಗದ ಮುಸಲ್ಮಾನರ ಆಡಳಿತ, ಕ್ರೌರ್ಯ, ಮತಾಂತರ ಕುರಿತ ಕಾದಂಬರಿ ಸತ್ಯಸಂಗತಿಗಳನ್ನು ಬಿಚ್ಚಿಟ್ಟಿದೆ. ಶ್ರೇಷ್ಠ ರಾಜರೆಂದು ನಮ್ಮ ಇತಿಹಾಸಕಾರರು ಬಿಂಬಿಸಿದ್ದವರ ಇನ್ನೊಂದು ಮುಖವನ್ನು ಕಾದಂಬರಿ ತೆರೆದಿಟ್ಟಿತು ಎಂದು ನುಡಿದರು.

ಪುಸ್ತಕ ಪ್ರಪಂಚದ ಇತಿಹಾಸದಲ್ಲಿ ಕಾದಂಬರಿ ಯೊಂದು 11 ವರ್ಷಗಳ ಅವಧಿಯಲ್ಲಿ 50ಕ್ಕೂ ಹೆಚ್ಚು ಮುದ್ರಣ ಕಂಡಿಲ್ಲ. ಮಂಕುತಿಮ್ಮನ ಕಗ್ಗ, ಮೈಸೂರು ಮಲ್ಲಿಗೆ ಕೃತಿಯ ನಂತರ ಅತಿ ಹೆಚ್ಚು ಮುದ್ರಣ ಕಂಡ ಕೃತಿ ಇದಾಗಿದೆ. ಆವರಣವನ್ನು ಪ್ರತಿಕ್ರಿಯೆಗಳ ಪ್ರಪಂಚ ಆವರಿಸಿಕೊಂಡಿದೆ ಎಂದು ಹೇಳಿದರು.

Advertisement

ಆವರಣಕ್ಕೆ ಎಸ್‌.ಎಲ್.ಭೈರಪ್ಪ ಮಾಡಿಕೊಂಡ ಸಿದ್ಧತೆ ಅಷ್ಟಿಷ್ಟಲ್ಲ. ಹಲವು ಬಾರಿ ಉತ್ತರ ಭಾರತಕ್ಕೆ ಪ್ರವಾಸ ಮಾಡುತ್ತಾರೆ. ನೂರಾರು ಗ್ರಂಥಗಳನ್ನು ತಡಕಾಡುತ್ತಾರೆ. ಮುಸಲ್ಮಾನರೊಬ್ಬರ ಮನೆಯ ಅತಿಥಿಯಾಗಿ ಅವರ ಪದ್ಧತಿಯನ್ನು ಅರಿಯುತ್ತಾರೆ. ಅವರೊಂದಿಗೆ ಮಸೀದಿಗೆ ತೆರಳಿ ನಮಾಜ್‌ ಮಾಡುತ್ತಾರೆ. ಇವೆಲ್ಲ ಕಾರಣಗಳಿಗಾಗಿ ಕಾದಂಬರಿ ವಿಶೇಷವೆನಿಸುತ್ತದೆ ಎಂದರು.

ನೈಜ ಇತಿಹಾಸ ತಿಳಿಸಿದ್ದಾರೆ: ಸಂಪನ್ನ ಮುತಾಲಿಕ ‘ನೈಜ ಇತಿಹಾಸ ಪ್ರಜ್ಞೆ’ ಕುರಿತು ಮಾತನಾಡಿ, ಆವರಣದಲ್ಲಿ ಎಸ್‌.ಎಲ್.ಭೈರಪ್ಪ ಜನಪ್ರಿಯ ಇತಿಹಾಸದ ಅನರ್ಥ ಬಗ್ಗೆ ತಿಳಿಸಿಕೊಡುತ್ತಾರೆ. ಕಣ್ಣಿಗೆ ಕಟ್ಟುವಂತೆ ಮಾಹಿತಿ ನೀಡುತ್ತಾರೆ. ಮೊಘಲರ ಕಾಲದ ಸಾಮಾನ್ಯರ ಜೀವನ, ಸ್ಥಿತಿಗತಿ ಮಾತ್ರವಲ್ಲದೇ ಆಭರಣ, ಕಟ್ಟಡಗಳ ಬಗ್ಗೆಯೂ ಅಧ್ಯಯನ ಮಾಡಿ ಮಾಹಿತಿ ಒದಗಿಸಿದ್ದಾರೆ ಎಂದರು.

ಕೇವಲ ಮುಸಲ್ಮಾನ ದೊರೆಗಳ ಅಟ್ಟಹಾಸವನ್ನಷ್ಟೇ ಹೇಳುವುದಿಲ್ಲ. ವೈಷ್ಣವ ಮಂದಿರಗಳಷ್ಟೇ ದಾಳಿಗೀಡಾಗಿದ್ದರಿಂದ ಶೈವ-ವೈಷ್ಣವರ ಮಧ್ಯದ ಜಗಳ ಕೂಡ ಕಾರಣವಾಗಿರಬಹುದು ಎಂಬುದನ್ನು ತಿಳಿಸುತ್ತಾರೆ. ಭಾರತದ ನೈಜ ಇತಿಹಾಸ ತಿಳಿಸಿದ್ದಾರೆ ಎಂದು ನುಡಿದರು.

ಮನಸಿನ ಮುಸುಕು ತೆರೆಯುತ್ತದೆ: ‘ಆವರಣ: ಪಾತ್ರಗಳು ಇತಿಹಾಸದ್ದಾದರೂ ವರ್ತಮಾನದ್ದಾದರೂ ಎಲ್ಲವೂ ಜೀವಂತವೇ’ ವಿಷಯ ಕುರಿತು ಡಾ| ಶಶಿಧರ ನರೇಂದ್ರ ಮಾತನಾಡಿ, ಕಾದಂಬರಿ ನಮ್ಮ ಮನಸಿನ ಮುಸುಕು ತೆರೆಯುವಲ್ಲಿ ಯಶಸ್ವಿಯಾಗುತ್ತದೆ. ಇತಿಹಾಸದ ಹಲವಾರು ಸತ್ಯಗಳು ಕೃತಿಯಲ್ಲಿ ಅನಾವರಣಗೊಳ್ಳುತ್ತವೆ. ಕಾದಂಬರಿಯಲ್ಲಿನ ಪಾತ್ರಗಳು ನಮ್ಮನ್ನು ಆವರಿಸುತ್ತವೆ. ಜೀವಂತಿಕೆಯ ಕಾರಣದಿಂದ ಮನ ತಟ್ಟುತ್ತವೆ ಎಂದು ಹೇಳಿದರು.

ಆವರಣ ಪಠ್ಯವಾಗಬೇಕು: ಕಥಾತಂತ್ರ ಕುರಿತು ಪ್ರೇಮಶೇಖರ ಮಾತನಾಡಿ, ಆವರಣ ಕಾದಂಬರಿಯಷ್ಟೇ ಅಲ್ಲ, ಅದನ್ನು ಪಠ್ಯಪುಸ್ತಕವನ್ನಾಗಿಸಬೇಕು. ಇತಿಹಾಸ ವಿದ್ಯಾರ್ಥಿಗಳು ಅದನ್ನು ಅಧ್ಯಯನ ಮಾಡಬೇಕು ಎಂದರು.

ಕಾದಂಬರಿಯಲ್ಲಿ ಸಂಘರ್ಷ ಇರಬೇಕು. ಆವರಣದಲ್ಲಿ ವ್ಯಕ್ತಿಗಳ ನಡುವೆ, ವ್ಯಕ್ತಿ-ಸಮಾಜ ನಡುವೆ ಸಂಘರ್ಷ ಕಾಣ ಸಿಗುತ್ತದೆ. ಕಾದಂಬರಿಯುದ್ದಕ್ಕೂ ಸಂಘರ್ಷ ಕಂಡು ಬರುತ್ತದೆ. ಎಸ್‌.ಎಲ್.ಭೈರಪ್ಪ ಪಾತ್ರಗಳ ಮೂಲಕ ಇತಿಹಾಸ ದಾಖಲಿಸುತ್ತಾರೆ. ಇದು ಅವರ ಅತ್ಯುತ್ತಮ ತಂತ್ರವಾಗಿದೆ ಎಸ್‌.ಎಲ್. ಭೈರಪ್ಪ ಎಲ್ಲಿಯೂ ಕೂಡ ಇತಿಹಾಸಕ್ಕೆ ಅಪಚಾರ ಎಸಗಿಲ್ಲ ಎಂದರು.

ಭೈರಪ್ಪ ಋಷಿ ಕಾದಂಬರಿಕಾರರು: ಆವರಣ: ಭಾರತೀಯ ಆತ್ಮಶಕ್ತಿಯ ಅನಾವರಣ ಕುರಿತು ದಿವಾಕರ ಹೆಗಡೆ ಮಾತನಾಡಿ, ಋಷಿಗಳು ಮಾಡುವ ಕೆಲಸವನ್ನು ಕಾದಂಬರಿಕಾರರು ಮಾಡಿದ್ದಾರೆ. ಭೈರಪ್ಪ ಋಷಿ ಸದೃಷ ಕಾದಂಬರಿಕಾರರು. ಋಷಿ ಪರಂಪರೆಯ ವರ್ತಮಾನದ ಕೊಂಡಿ. ಕಾದಂಬರಿ ಮೂಲಕ ಸತ್ಯದರ್ಶನ ಮಾಡಿಸಿದ್ದಾರೆ ಎಂದರು.

ಶ್ರದ್ಧೆಯನ್ನು ಕೊಂದು ಬದುಕುವ ಪರಿಪಾಠ ನಮ್ಮಲ್ಲಿಲ್ಲ. ಸೃಷ್ಟಿ ಹಾಗೂ ಸೃಷ್ಟಿಕರ್ತ ಇಬ್ಬರನ್ನೂ ಪೂಜಿಸುವ ಸಂಸ್ಕೃತಿ ನಮ್ಮದು. ದಾಂಪತ್ಯವನ್ನು ಆಧ್ಯಾತ್ಮಕ್ಕೇರಿಸುವ ಪರಂಪರೆ ನಮ್ಮದಾಗಿದೆ ಎಂದು ಅಭಿಪ್ರಾಯಪಟ್ಟರು. ಎಂ.ಎ.ಸುಬ್ರಮಣ್ಯ ಪ್ರಾಸ್ತಾವಿಕ ಮಾತನಾಡಿ, ಪುಸ್ತಕ ಲೋಕ ಆತಂಕದಲ್ಲಿದೆ. ಹೊಸ ತಲೆಮಾರು ಕನ್ನಡ ಓದು-ಬರಹದಿಂದ ದೂರ ಉಳಿದಿದೆ. ಪುಸ್ತಕ ಪ್ರಕಾಶನ ಉಳಿವಿಗೆ ಅಡ್ಡಕಸಬು ಮಾಡಬೇಕಿದೆ. ಹೊಸ ಓದುಗರ ಹುಟ್ಟು ಕಡಿಮೆಯಾಗುತ್ತಿರುವಾಗ ಎಸ್‌.ಎಲ್.ಭೈರಪ್ಪ ನಮಗೆ ಆಶಾಕಿರಣವಾಗಿ ಗೋಚರಿಸುತ್ತಾರೆ ಎಂದರು.

ಹು-ಧಾ ಪೊಲೀಸ್‌ ಆಯುಕ್ತ ಆರ್‌.ದಿಲೀಪ್‌ ಕಾರ್ಯಕ್ರಮ ಉದ್ಘಾಟಿಸಿದರು. ಮಹಾನಂದಾ ಗೋಸಾವಿ ಪ್ರಾರ್ಥಿಸಿದರು. ಹರ್ಷ ಡಂಬಳ ಸ್ವಾಗತಿಸಿದರು. ರವಿ ಕುಲಕರ್ಣಿ ನಿರೂಪಿಸಿದರು.

ಭೈರಪ್ಪ ಜೊತೆ ಸೆಲ್ಫಿಗೆ ಮುಗಿಬಿದ್ದ ಜನ:

 ಕಾದಂಬರಿಕಾರ ಎಸ್‌.ಎಲ್.ಭೈರಪ್ಪ ಅವರೊಂದಿಗೆ ಸೆಲ್ಫಿ ತೆಗೆಸಿಕೊಳ್ಳಲು ಅಭಿಮಾನಿಗಳು ಮುಗಿ ಬಿದ್ದರು. ಎಸ್‌.ಎಲ್.ಭೈರಪ್ಪ ಸಾಹಿತ್ಯ ಪ್ರತಿಷ್ಠಾನ, ಸಾಹಿತ್ಯ ಪ್ರಕಾಶನ ಹಾಗೂ ಸ್ನೇಹ ಪ್ರತಿಷ್ಠಾನ ಸಹಯೋಗದಲ್ಲಿ ಸೃಜನಾ ರಂಗಮಂದಿರದಲ್ಲಿ ರವಿವಾರ ನಡೆದ ಕಾರ್ಯಕ್ರಮ ನಂತರ ಕಾದಂಬರಿಕಾರರ ಅಸ್ಮಿತೆಯನ್ನು ಗಟ್ಟಿಗೊಳಿಸಿದ ಭೈರಪ್ಪ ಅವರೊಂದಿಗೆ ಸೆಲ್ಫಿ ತೆಗೆಸಿಕೊಳ್ಳಲು ಅಭಿಮಾನಿಗಳಿಗೆ ಅವಕಾಶ ಕಲ್ಪಿಸಲಾಗಿತ್ತು. ಸಣ್ಣವರು, ದೊಡ್ಡವರೆನ್ನದೇ ಅಭಿಮಾನಿಗಳು ಕಾದಂಬರಿಗಳ ಮೇಲೆ ಕಾದಂಬರಿಕಾರ ಎಸ್‌.ಎಲ್.ಭೈರಪ್ಪ ಅವರ ಹಸ್ತಾಕ್ಷರ ಪಡೆದರು. ಸೆಲ್ಫಿಗಾಗಿ ಹಾಗೂ ಹಸ್ತಾಕ್ಷರ ಪಡೆಯಲು ನೂರಾರು ಜನರು ಸರದಿಯಲ್ಲಿ ನಿಂತರು. ಭೈರಪ್ಪ ಅವರ ಕಾದಂಬರಿಗಳಲ್ಲಿ ಹೆಚ್ಚು ಮಂದಿ ‘ಆವರಣ’ ಖರೀದಿಸುತ್ತಿದ್ದುದು ಕಂಡು ಬಂತು. ಭೈರಪ್ಪ ತಾಳ್ಮೆಯಿಂದಲೇ ಎಲ್ಲ ಅಭಿಮಾನಿಗಳೊಂದಿಗೆ ಸೆಲ್ಫಿ ತೆಗೆಸಿಕೊಂಡರು. ಯುವಕರಿಗೆ ಕನ್ನಡ ಪುಸ್ತಕಗಳನ್ನು ಓದುವಂತೆ ಸಲಹೆ ನೀಡಿದರು.
Advertisement

Udayavani is now on Telegram. Click here to join our channel and stay updated with the latest news.