Advertisement

ಜಪಾನ್‌ ಸಮರಾಭ್ಯಾಸಕ್ಕೆ ಅವನಿ ! ದೇಶದ ನಾರಿಶಕ್ತಿಗೆ ಮತ್ತೂಂದು ಗರಿ

12:55 AM Jan 08, 2023 | Team Udayavani |

ಜೋಧಪುರ: ದೇಶದ ನಾರಿಶಕ್ತಿಯ ಮುಡಿಗೆ ಮತ್ತೂಂದು ಕಿರೀಟ ತೊಡಿಸುವ ಕಾಲ ಹತ್ತಿರ ಬಂದಿದೆ. ಇದೇ ಮೊದಲ ಬಾರಿಗೆ ವಿದೇಶದಲ್ಲಿ ನಡೆಯುವ ಸಮರಾಭ್ಯಾಸದಲ್ಲಿ ಭಾರತದ ಮಹಿಳಾ ಫೈಟರ್‌ ಭಾಗಿಯಾಗಲಿದ್ದಾರೆ! ದೇಶದ ಮೊದಲ ಯುದ್ಧ ವಿಮಾನ ಫೈಟರ್‌ ಫೈಲಟ್‌ ಎಂಬ ಖ್ಯಾತಿಯ ಅವನಿ ಚತುರ್ವೇದಿ ಜಪಾನ್‌ ನಲ್ಲಿ ನಡೆಯಲಿರುವ “ವೀರ್‌ ಗಾರ್ಡಿಯನ್‌ 2023′ ಸಮರಾಭ್ಯಾಸದಲ್ಲಿ ಪಾಲ್ಗೊಳ್ಳಲಿದ್ದಾರೆ.

Advertisement

ಜ. 16ರಿಂದ 26ರ ವರೆಗೆ ಈ ಏರಿಯಲ್‌ ವಾರ್‌ಗೇಮ್‌ ನಡೆಯಲಿದೆ. ಸ್ಕ್ವಾಡ್ರನ್‌ ಲೀಡರ್‌ ಆಗಿರುವ ಅವನಿ ಸುಖೋಯ್‌ 30ಎಂಕೆಐನ ಪೈಲಟ್‌ ಆಗಿದ್ದಾರೆ.

ಈ ವಾರ್‌ಗೇಮ್‌ನಲ್ಲಿ ಭಾರತದ ನಾಲ್ಕು ಸುಖೋಯ್‌ 30 ಎಂಕೆಐ, ಎರಡು ಸಿ-17 ಗ್ಲೋಬ್‌ಮಾಸ್ಟರ್‌ ಮತ್ತು ಒಂದು ಐಎಲ್‌-78 ಟ್ಯಾಂಕರ್‌ ಭಾಗಿಯಾಗಲಿವೆ.

ಭಾರತದಲ್ಲಿ ನಡೆಯುವ ಸಮರಾಭ್ಯಾಸ ಗಳಲ್ಲಿ ವಿದೇಶಿ ಮಹಿಳಾ ಫೈಟರ್‌ ಪೈಲಟ್‌ಗಳು ಭಾಗಿಯಾಗುತ್ತಿರುತ್ತಾರೆ. ಆದರೆ ಭಾರತದ ಕಡೆಯಿಂದ ಇದೇ ಮೊದಲ ಬಾರಿಗೆ ವಿದೇಶಿ ನೆಲದಲ್ಲಿ ಮಹಿಳಾ ಫೈಟರ್‌ ಪೈಲಟ್‌ ಒಬ್ಬರು ಭಾಗಿಯಾಗುತ್ತಿದ್ದಾರೆ ಎಂಬುದು ವಿಶೇಷ.

ಜಪಾನ್‌ನ ಒಮಿತಾಮಾ ಮತ್ತು ಸಯೇಮಾ ಏರ್‌ಬೇಸ್‌ನ ಸುತ್ತಮುತ್ತ ಈ ಸಮರಾಭ್ಯಾಸ ನಡೆಯಲಿದೆ. ಇದರಲ್ಲಿ ಅವನಿ ಅವರು ಸುಖೊಯ್‌ ಯುದ್ಧ ವಿಮಾನ ಚಲಾಯಿಸುತ್ತ ಆಗಸದಲ್ಲಿ ತಮ್ಮ ಕೈಚಳಕ ತೋರಲಿದ್ದಾರೆ.

Advertisement

ಯಾರಿವರು ಅವನಿ ಚತುರ್ವೇದಿ?

ಅವನಿ ಚತುರ್ವೇದಿ ಮೂಲತಃ ಮಧ್ಯಪ್ರದೇಶದ ರೇವಾ ಜಿಲ್ಲೆಯವರು. ಇವರ ಸಹೋದರ ಕೂಡ ಸೇನೆಯಲ್ಲೇ ಇದ್ದಾರೆ. 1994ರಲ್ಲಿ ಜನಿಸಿದ ಅವನಿ ಚೆಸ್‌ ಮತ್ತು ಟೇಬಲ್‌ ಟೆನ್ನಿಸ್‌ ಪ್ರಿಯೆ. ಬಿಇ ವಿದ್ಯಾಭ್ಯಾಸ ಮುಗಿಸಿ, ಹೈದರಾಬಾದ್‌ನ ಏರ್‌ಫೋರ್ಸ್‌ ಅಕಾಡೆಮಿಯಲ್ಲಿ ತರಬೇತಿ ಮುಗಿಸಿದ್ದಾರೆ. 2016ರಲ್ಲಿ ವಾಯುಪಡೆಗೆ ಮೊದಲ ಬಾರಿಗೆ ಸೇರಿದ ಮೂವರು ಮಹಿಳೆಯರ ಪೈಕಿ ಒಬ್ಬರು.

ಜಪಾನ್‌ ಮತ್ತು ಭಾರತ ಮಾತ್ರ ಭಾಗಿ

2022ರ ಸೆ. 8ರಂದು ಜಪಾನ್‌ನ ಟೋಕಿಯೋದಲ್ಲಿ ಉಭಯ ದೇಶಗಳ ವಿದೇಶಾಂಗ-ರಕ್ಷಣ ಸಚಿವರ ನಡುವಿನ ಮಾತುಕತೆಯಲ್ಲಿ ರಕ್ಷಣಾತ್ಮಕ ಸಹಭಾಗಿತ್ವದ ಬಗ್ಗೆ ಒಪ್ಪಂದವಾಗಿತ್ತು. ಎರಡು ದೇಶಗಳು ಪರಸ್ಪರ ಶಸ್ತ್ರಾಭ್ಯಾಸ ನಡೆಸುವ ಬಗ್ಗೆಯೂ ತೀರ್ಮಾನವಾಗಿತ್ತು. ಈ ಹಿನ್ನೆಲೆಯಲ್ಲಿ ಈ ಸಮರಾಭ್ಯಾಸ ನಡೆಯುತ್ತಿದೆ.

Advertisement

Udayavani is now on Telegram. Click here to join our channel and stay updated with the latest news.

Next