Advertisement

ಅವಲಕ್ಕಿ ಪವಲಕ್ಕಿ…

07:01 PM Jan 28, 2020 | mahesh |

ಬೆಳಗ್ಗಿನ ತಿಂಡಿಗಾಗಲಿ, ಸಂಜೆಯ ಸ್ನ್ಯಾಕ್ಸ್‌ಗೆ ಆಗಲಿ, ಅವಲಕ್ಕಿಯನ್ನು ಧಾರಾಳವಾಗಿ ಅವಲಂಬಿಸಬಹುದು. ಯಾಕಂದ್ರೆ, ಇದು ತಯಾರಿಸೋಕೆ ಸುಲಭವಷ್ಟೇ ಅಲ್ಲದೆ, ರುಚಿಕಟ್ಟಾಗಿಯೂ ಇರುತ್ತದೆ. ಅವಲಕ್ಕಿಯನ್ನು ಬಳಸಿ ಯಾವುದೇ ತಿಂಡಿಯನ್ನಾದರೂ ಅರ್ಧ ಗಂಟೆಯೊಳಗೆ ಮಾಡಿ ಮುಗಿಸಬಹುದು. ಚಿತ್ರಾನ್ನ, ಉಪ್ಪಿಟ್ಟು ಬಾತ್‌ ಮಾತ್ರವಲ್ಲ; ಕೆಲವು ಸಿಹಿ ತಿನಿಸುಗಳನ್ನೂ ತಯಾರಿಸಬಹುದು.

Advertisement

1. ಹಯಗ್ರೀವ
ಬೇಕಾಗುವ ಸಾಮಗ್ರಿ: ಅವಲಕ್ಕಿ- 1 ಕಪ್‌, ಕಡಲೆಬೇಳೆ-1 ಕಪ್‌, ತೆಂಗಿನತುರಿ- 1/4 ಕಪ್‌, ಬೆಲ್ಲದ ತುರಿ- 2 ಕಪ್‌ (ಸಿಹಿಗೆ ಅನುಸಾರ ) ತುಪ್ಪ, ಏಲಕ್ಕಿ ಪುಡಿ,ದ್ರಾಕ್ಷಿ, ಗೋಡಂಬಿ, ಚಿಟಿಕೆಯಷ್ಟು ಪಚ್ಚ ಕರ್ಪೂರ.

ಮಾಡುವ ವಿಧಾನ: ಅವಲಕ್ಕಿ ಹಾಗೂ ಕಡಲೇಬೇಳೆಯನ್ನು ಒಟ್ಟಿಗೆ ಬೇಯಿಸಿಕೊಳ್ಳಿ. ದಪ್ಪ ತಳದ ಪಾತ್ರೆಯಲ್ಲಿ ದ್ರಾಕ್ಷಿ, ಗೋಡಂಬಿ ಹಾಕಿ ತುಪ್ಪದಲ್ಲಿ ಹುರಿದು, ತೆಗೆದಿಡಿ. ಅದೇ ಜಿಡ್ಡಿಗೆ ಬೆಲ್ಲ, ಸ್ವಲ್ಪ ನೀರು ಹಾಕಿ, ಕರಗಿಸಿ. ಬೆಲ್ಲ ಪೂರ್ತಿಯಾಗಿ ಕರಗಿದಾಗ ತೆಂಗಿನತುರಿ ಹಾಕಿ ಬಾಡಿಸಿ, ಹಿಂದೆಯೇ ಬೆಂದ ಅವಲಕ್ಕಿ, ಕಡಲೇಬೇಳೆಯನ್ನು ಹಾಕಿ ಸಣ್ಣ ಉರಿಯಲ್ಲಿ ಹತ್ತು ನಿಮಿಷ ಕುದಿಸಿ. ನಂತರ ಹುರಿದ ದ್ರಾಕ್ಷಿ, ಗೋಡಂಬಿ, ಪಚ್ಚಕರ್ಪೂರ, ಏಲಕ್ಕಿ ಪುಡಿ ಹಾಕಿ ಮಿಶ್ರಣ ಮಾಡಿ, ಉರಿ ಆರಿಸಿ ತಣಿಸಿ.

2. ಉಂಡೆ
ಬೇಕಾಗುವ ಸಾಮಗ್ರಿ: ಅವಲಕ್ಕಿ – 1 ಕಪ್‌, ಹುರಿಗಡಲೆ- 1/4 ಕಪ್‌, ಒಣಕೊಬ್ಬರಿ ತುರಿ- 1/4 ಕಪ್‌, ಬೆಲ್ಲದ ತುರಿ- 1 ಕಪ್‌ ಹಾಗೂ ತುಪ್ಪ.

ಮಾಡುವ ವಿಧಾನ: ಅವಲಕ್ಕಿ ಮತ್ತು ಹುರಿಗಡಲೆಯನ್ನು ಬೇರೆಬೇರೆಯಾಗಿ ನುಣ್ಣಗೆ ಪುಡಿ ಮಾಡಿಕೊಳ್ಳಿ. ಬಾಣಲೆಗೆ ತುಪ್ಪ ಹಾಕಿ ಅದು ಕರಗುತ್ತಲೇ ಬೆಲ್ಲದ ತುರಿ, ಕೊಬ್ಬರಿ ತುರಿ ಹಾಕಿ ಐದು ನಿಮಿಷ ಹುರಿಯಿರಿ. ನಂತರ ಅವಲಕ್ಕಿ ಮತ್ತು ಹುರಿಗಡಲೆ ಪುಡಿ ಹಾಕಿ ಚೆನ್ನಾಗಿ ಮಗುಚಿ. ಅಗತ್ಯವಿದ್ದರೆ ಮೇಲು¤ಪ್ಪ ಹಾಕಿರಿ. ಆ ಮಿಶ್ರಣ ಪಾತ್ರೆ ಬಿಟ್ಟು ಬರುವಾಗ ಉರಿ ನಂದಿಸಿ, ಬಿಸಿ ಇರುವಾಗಲೇ ಸಣ್ಣಸಣ್ಣ ಉಂಡೆಗಳನ್ನಾಗಿ ಕಟ್ಟಿ.

Advertisement

3. ಸಜ್ಜಿಗೆ
ಬೇಕಾಗುವ ಸಾಮಗ್ರಿ: ಅವಲಕ್ಕಿ – 1 ಕಪ್‌, ಸಕ್ಕರೆ- 1 ಕಪ್‌, ತುಪ್ಪ, ಏಲಕ್ಕಿ ಪುಡಿ, ದ್ರಾಕ್ಷಿ, ಗೋಡಂಬಿ.

ಮಾಡುವ ವಿಧಾನ: ಅವಲಕ್ಕಿಯನ್ನು ತರಿತರಿಯಾಗಿ ಪುಡಿ ಮಾಡಿಕೊಳ್ಳಿ. ಬಾಣಲೆಗೆ ತುಪ್ಪ ಹಾಕಿ ದ್ರಾಕ್ಷಿ, ಗೋಡಂಬಿಯನ್ನು ಹುರಿದು, ಅವಲಕ್ಕಿ ತರಿ ಮತ್ತು ಸಕ್ಕರೆಯನ್ನು ಒಟ್ಟಿಗೆ ಹಾಕಿ ಸ್ವಲ್ಪ ಹುರಿಯಿರಿ. ಅದಕ್ಕೆ ಏಲಕ್ಕಿ ಪುಡಿ ಸೇರಿಸಿ, ಎರಡು ಕಪ್‌ ನೀರು ಹಾಕಿ ಮಿಶ್ರಣ ಮಾಡಿ, ಬಾಣಲೆ ಮುಚ್ಚಿಟ್ಟು ಐದು ನಿಮಿಷ ಬೇಯಿಸಿದರೆ ಸಜ್ಜಿಗೆ ರೆಡಿ.

4. ಬರ್ಫಿ
ಬೇಕಾಗುವ ಸಾಮಗ್ರಿ: ಅವಲಕ್ಕಿ- 1 ಕಪ್‌, ತೆಂಗಿನತುರಿ- 1/2 ಕಪ್‌, ಬೆಲ್ಲದ ತುರಿ- 1 ಕಪ್‌, ತುಪ್ಪ.

ಮಾಡುವ ವಿಧಾನ: ಅವಲಕ್ಕಿಯನ್ನು ಮಿಕ್ಸಿಯಲ್ಲಿ ಹಾಕಿ ನುಣ್ಣಗೆ ಪುಡಿ ಮಾಡಿಕೊಳ್ಳಿ. ದಪ್ಪ ತಳದ ಬಾಣಲೆಯಲ್ಲಿ ಬೆಲ್ಲ ಕರಗಿಸಿ,ಅವಲಕ್ಕಿ ಪುಡಿ, ತೆಂಗಿನತುರಿ, ತುಪ್ಪ ಹಾಕಿ ಸಣ್ಣ ಉರಿಯಲ್ಲಿ ಕೈಯಾಡಿಸುತ್ತಿರಿ. ಮಿಶ್ರಣ ಪಾತ್ರೆ ಬಿಟ್ಟು ಬರುತ್ತಿದ್ದಂತೆ ತುಪ್ಪದ ಜಿಡ್ಡು ಸವರಿದ ತಟ್ಟೆಗೆ ಸುರಿದು, ನಂತರ ಬೇಕಾದ ಆಕಾರಕ್ಕೆ ಕತ್ತರಿಸಿ.

-ಕೆ.ವಿ.ರಾಜಲಕ್ಷ್ಮಿ

Advertisement

Udayavani is now on Telegram. Click here to join our channel and stay updated with the latest news.

Next