Advertisement

ಲಹರಿಗೆ ಅವಾಜ್‌: ಆರೋಪಿ ಬಂಧನ

12:06 PM Feb 25, 2017 | Team Udayavani |

ಬೆಂಗಳೂರು: ಲಹರಿ ಆಡಿಯೋ ಸಂಸ್ಥೆಗೆ ಕರೆ ಮಾಡಿ ಅವಾಚ್ಯ ಶಬ್ದಗಳಿಂದ ನಿಂದಿಸಿ, ಬೆದರಿಕೆ ಹಾಕಿದ ಪ್ರಕರಣಕ್ಕೆ ಸಂಬಂಧಿಸಿದಂತೆ ವ್ಯಕ್ತಿಯೊಬ್ಬನನ್ನು ಯಶವಂತಪುರ ಠಾಣೆ ಪೊಲೀಸರು ಬಂಧಿಸಿದ್ದಾರೆ. ರಾಜರಾಜೇಶ್ವರಿ ನಗರ ನಿವಾಸಿ ಪವನ್‌ಕುಮಾರ್‌ ಬಂಧಿತ ಆರೋಪಿ. ಬಳಿಕ ಜಾಮೀನಿನ ಮೇಲೆ ಆರೋಪಿಯನ್ನು ಬಿಡುಗಡೆ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. 

Advertisement

ರಕ್ಷಿತ್‌ ಶೆಟ್ಟಿ ನಿರ್ಮಾಣದ “ಕಿರಿಕ್‌ ಪಾರ್ಟಿ’ ಚಿತ್ರದಲ್ಲಿ ಲಹರಿ ಆಡಿಯೋ ಸಂಸ್ಥೆ ಹಕ್ಕು ಹೊಂದಿರುವ “ಶಾಂತಿ-ಕ್ರಾಂತಿ’ ಚಿತ್ರದ ಹಾಡು ಬಳಸಿಕೊಳ್ಳುವ ವಿಚಾರವಾಗಿ ಜನವರಿಯಲ್ಲಿ ಸಂಸ್ಥೆಗೆ ಕರೆ ಮಾಡಿದ್ದ ಪವನ್‌ ಕುಮಾರ್‌ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದರು ಎನ್ನಲಾಗಿದೆ. ಈ ಸಂಬಂಧ ಲಹರಿ ಸಂಸ್ಥೆ ಮಾಲೀಕ ಲಹರಿ ವೇಲು ಅವರು ನೀಡಿದ್ದ ದೂರಿನ ಮೇರೆಗೆ ಆರೋಪಿಯನ್ನು ಬಂಧಿಸಲಾಗಿತ್ತು. 

ಏನಿದು ಘಟನೆ?: “ಕಿರಿಕ್‌ ಪಾರ್ಟಿ’ ಚಿತ್ರದಲ್ಲಿ ಲಹರಿ ಆಡಿಯೋ ಸಂಸ್ಥೆ ಹಕ್ಕು ಹೊಂದಿರುವ “ಶಾಂತಿ-ಕ್ರಾಂತಿ’ ಚಿತ್ರದ ಹಾಡೊಂದರ ಬಿಟ್‌ನ್ನು ಬಳಸಿಕೊಳ್ಳಲು ಚಿತ್ರದ ನಿರ್ದೇಶಕರು ಲಹರಿ ಸಂಸ್ಥೆ ಮಾಲೀಕರನ್ನು ಸಂಪರ್ಕಿಸಿದ್ದರು. ಆದರೆ, ಸಂಸ್ಥೆ ಇದಕ್ಕೆ ಸಮ್ಮತಿ ನೀಡಿರಲಿಲ್ಲ. ನಮ್ಮ ಅನುಮತಿ ಇಲ್ಲದೆ “ಕಿರಿಕ್‌ ಪಾರ್ಟಿ’ ನಿರ್ದೇಶಕರು “ಶಾಂತಿ ಕಾಂತ್ರಿ’ ಚಿತ್ರದ ಹಾಡೊಂದರ ಬಿಟ್‌ ಬಳಸಿದ್ದಾರೆ ಎಂದು ಆರೋಪಿಸಿ ಸಂಸ್ಥೆಯ ಮಾಲೀಕ ವೇಲು ಅವರು ಕೋರ್ಟ್‌ ಮೆಟ್ಟಿಲೇರಿದ್ದರು.  

ಈ ನಡುವೆ ಜನವರಿ ತಿಂಗಳಲ್ಲಿ ಆರೋಪಿ ಪವನ್‌ ಕುಮಾರ್‌ ಯಶವಂತಪುರದಲ್ಲಿರುವ ಲಹರಿ ಆಡಿಯೋ ಸಂಸ್ಥೆಗೆ ಕರೆ ಮಾಡಿದ್ದರು. ಕರೆ ಸ್ವೀಕರಿಸಿದ ಸ್ವಾಗತಕಾರಿಣಿಗೆ ಪವನ್‌ಕುಮಾರ್‌ ಹಾಡಿನ ಬಿಟ್‌ ಬಳಸಿಕೊಳ್ಳಲು ಬಿಡಲಿಲ್ಲ ಎಂಬ ಕಾರಣಕ್ಕೆ ಅವಾಚ್ಯ ಶಬ್ದಗಳಿಂದ ನಿಂದಿಸಿ, ಬೆದರಿಕೆ ಹಾಕಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. 

ಫೇಸ್‌ಬುಕ್‌ನಲ್ಲೂ ನಿಂದನೆ
ಇನ್ನೂ ಕೋರ್ಟ್‌ ಮೇಟ್ಟಿಲೇರಿದ ಲಹರಿ ಆಡಿಯೋ ಸಂಸ್ಥೆ ಕ್ರಮದ ವಿರುದ್ಧ ಫೇಸ್‌ಬುಕ್‌ನಲ್ಲಿ ಕೆಲವರು ಕೆಟ್ಟದಾಗಿ ಕಾಮೆಂಟ್‌ ಮತ್ತು ಪೋಸ್ಟರ್‌ಗಳನ್ನು ಹಾಕಿದ್ದಾರೆ. “ಕಿರಿಕ್‌ ಪಾರ್ಟಿ’ ಚಿತ್ರದವರೇ ಈ ರೀತಿ ಹಾಕುತ್ತಿದ್ದಾರೆ. ಫೇಸ್‌ಬುಕ್‌ನಲ್ಲಿ ನಿಂದನೆ ಮಾಡಿರುವವರ ವಿರುದ್ಧವೂ ಕೂಡ ಕ್ರಿಮಿನಲ್‌ ಮೊಕದ್ದಮೆ ದಾಖಲಿಸುವುದಾಗಿ ಲಹರಿ ಸಂಸ್ಥೆ ವೇಲು “ಉದಯವಾಣಿಗೆ’ ಹೇಳಿದ್ದಾರೆ.

Advertisement

ನಾನು ವಿದೇಶದಲ್ಲಿದ್ದಾಗ ಸಂಸ್ಥೆಗೆ ಕರೆ ಮಾಡಿದ್ದ ಅಪರಿಚಿತ ವ್ಯಕ್ತಿಯೊಬ್ಬ ಅವಾಚ್ಯ ಶಬ್ದಗಳಿಂದ ನಿಂದಿಸಿ ಬೆದರಿಕೆ ಹಾಕಿದ್ದ. ಈ ಸಂಬಂಧ ಯಶವಂತಪುರ ಠಾಣೆಯಲ್ಲಿ ದೂರು ದಾಖಲಿಸಲಾಗಿತ್ತು. ಇದಕ್ಕೂ ಮುನ್ನ “ಕಿರಿಟ್‌ ಪಾರ್ಟಿ’ ಚಿತ್ರ ತಂಡ ನಮ್ಮನ್ನು ಸಂಪರ್ಕಿಸಿ ಶಾಂತಿ ಕ್ರಾಂತಿ ಚಿತ್ರದ ಬಿಟ್‌ ಬಳಸಿಕೊಳ್ಳುವ ಬಗ್ಗೆ ಕೇಳಿದ್ದರು. ವಿದೇಶದಲ್ಲಿದ್ದರಿಂದ ಇದಕ್ಕೆ ಒಪ್ಪಿಗೆ ನೀಡಿರಲಿಲ್ಲ. ಈ ಪ್ರಕರಣ ಕೋರ್ಟ್‌ನಲ್ಲಿ ವಿಚಾರಣೆ ಹಂತದಲ್ಲಿದೆ.
-ವೇಲು, ಲಹರಿ ಆಡಿಯೋ ಸಂಸ್ಥೆ ಮಾಲೀಕ

Advertisement

Udayavani is now on Telegram. Click here to join our channel and stay updated with the latest news.

Next