Advertisement

ಮಹಾಮಹಿಮರು ಅವಧೂತ ಶ್ರೀ ಸದ್ಗುರು ಭಗವಾನ್‌ ನಿತ್ಯಾನಂದ ಸ್ವಾಮೀಜಿಗಳು

09:55 PM Jan 14, 2023 | Team Udayavani |

ಭವ್ಯ ಭಾರತ ದೇಶದ ಸನಾತನ ಧರ್ಮದ ವೈಭವ ಸಾಂಸ್ಕೃತಿಕ ಪರಂಪರೆಯು ವಿಶ್ವದಲ್ಲಿಯೇ ಶ್ರೀಮಂತವಾಗಿರುವುದು, ಸನಾತನ ಧರ್ಮವು ವಿಶ್ವದೆಲ್ಲೆಡೆ ಪ್ರಜ್ವಲಿಸಲು ಅಸಂಖ್ಯಾತ ಅವಧೂತರು, ಸದ್ಗುರುಗಳು, ಸಂತರು , ಯೋಗಿಗಳು ಆಧ್ಯಾತ್ಮದ ಹೊಂಬೆಳಕಾಗಿ ಬೆಳಗಿದವರು. ಧರ್ಮದ ಸಂರಕ್ಷಣೆಯೊಂದಿಗೆ ಲೋಕದ ಕಲ್ಯಾಣ ಮತ್ತು ಅಸುರೀ ಗುಣಗಳ ಹೋಗಲಾಡಿಸಿ ಮನುಜರಲ್ಲಿ ದೈವೀಗುಣಗಳ ಜಾಗೃತಿಗೊಳಿಸಲು ಭಗವಂತನು ಕಾಲಕ್ಕೆ ಅನುಗುಣವಾಗಿ ಅವತರಿಸುತಿರುತ್ತಾನೆ. ಅಂತಹ ಭಗವಂತನ ಅವತಾರ ದೇವರ ನಾಡು ಎಂದು ಬಣ್ಣಿಸಲ್ಪಡುವ ಕೇರಳ ರಾಜ್ಯದಲ್ಲಿ ಅವತರಿಸಿ ಮಹಾರಾಷ್ಟ್ರ ರಾಜ್ಯದ ಗಣೇಶ್‌ ಪುರಿ ಎಂಬ ಪವಿತ್ರ ಕ್ಷೇತ್ರದಲ್ಲಿ ಮಹಾಸಮಾಧಿ ಪಡೆದಿರುವ ಮಹಾಮಹಿಮರು ಅವಧೂತ ಶ್ರೀ ಸದ್ಗುರು ಭಗವಾನ್‌ ನಿತ್ಯಾನಂದ ಸ್ವಾಮೀಜಿಗಳು.

Advertisement

ನಿತ್ಯಾನಂದರ ಜನ್ಮವು ನಿಗೂಢವಾಗಿ ಉಳಿದಿದೆ. ಕೇರಳದ ಕೊಯಲಾಂಡಿಯ ಅಯ್ಯಪ್ಪ ದೇವಸ್ಥಾನದ ಬಳಿ ಉನ್ನಿ ಅಮ್ಮ ಹಾಗೂ ಚಾತುನಾರ್ಯ ಎಂಬ ಬಡ ಕೂಲಿ ಕಾರ್ಮಿಕ ದಂಪತಿಗಳಿಗೆ ಮಗು ದೊರಕುತ್ತದೆ. ಆ ಮಗುವೆ ಮುಂದೆ ಶ್ರೀ ನಿತ್ಯಾನಂದ ಸ್ವಾಮೀಜಿಯಾಗಿ ಜಗತ್ತಿನೆಲ್ಲೆಡೆ ಭಕ್ತರಿಂದ ಪೂಜಿಸಲ್ಪಡುತ್ತಿದ್ದಾರೆ. ನಿತ್ಯಾನಂದರ ಅನೇಕ ಲೀಲೆ, ಪವಾಡಗಳು ಸಾರ್ವಜನಿಕ ವಲಯದಲ್ಲಿ ಗೋಚರಿಸಲಾರಂಭಿಸಿದವು.

ದೇವರ ಅವತಾರ
ಭಕ್ತರ ಅಳಲಿಗೆ ಸ್ಪಂದಿಸುವುದು, ರೋಗಿಗಳಿಗೆ ಔಷಧೋಪಚಾರ ನೀಡುವುದು, ಬರಿಗೈಯಿಂದ ಮಕ್ಕಳಿಗೆ ಸಿಹಿತಿಂಡಿ, ಚಾಕಲೇಟ್‌ ಸೃಷ್ಟಿಸಿ ನೀಡುವುದು, ಲಂಗೋಟಿಯಿಂದ ಹಣ ತೆಗೆದು ನೀಡುವುದು, ಚಲಿಸುತ್ತಿರುವ ರೈಲು ಬಂಡಿಯನ್ನು ತಡೆಹಿಡಿದಿರುವುದು ಹೀಗೆ ಅನೇಕ ಪವಾಡಗಳು ನಿತ್ಯಾನಂದರಿಂದ ನಡೆಯುತ್ತಿದ್ದವು. ನಿತ್ಯಾನಂದ ಸ್ವಾಮೀಜಿಯವರ ಲೀಲೆಗಳನ್ನು ಕಂಡು ಭಕ್ತರು ಅವರನ್ನು ‘ದೇವರ ಅವತಾರ’ ಎಂದು ಶೃದ್ಧಾ ಭಕ್ತಿಯಿಂದ ಆರಾಧಿಸಲು ಆರಂಭಿಸಿದರು. ಅವರನ್ನು ಪ್ರತ್ಯಕ್ಷ ಕಂಡು ಅವರಿಂದ ಆಶಿರ್ವಾದ ಪಡೆದ ಅನೇಕ ಭಕ್ತರು ಪ್ರಾಮಾಣಿಕ ಸಾಧನೆಯಿಂದ ಸಮಾಜದಲ್ಲಿ ಗಣ್ಯ ವ್ಯಕ್ತಿಗಳಾಗಿ ಗುರುತಿಸಿಕೊಂಡು ನಿತ್ಯಾನಂದರ ಬೋಧನೆಯಂತೆ ಜೀವನ ಸಾಗಿಸುತ್ತಿದ್ದಾರೆ. ಅವರ ವಿಶೇಷ ಅನುಗ್ರಹವನ್ನು ಪಡೆದು ಅವರ ಲೀಲೆಗಳನ್ನು ಕಣ್ಣಾರೆ ನೋಡಿದ ಎಷ್ಟೋ ಭಕ್ತರು ಕಾಲಾಧೀನರಾಗಿದ್ದಾರೆ. ನಿಜವನ್ನು ಅರಿತವರು ತಮ್ಮ ಅನುಭವಗಳನ್ನು ಮನಸ್ಸಿನಲ್ಲೇ ಮೆಲುಕು ಹಾಕುತ್ತಾರೆ. ಉಚ್ಚರಿಸಲು ಅಳುಕುತ್ತಾರೆ. ಏಕೆಂದರೆ ಪ್ರಚಾರವೆಂದರೆ ನಿತ್ಯಾನಂದರಿಗೆ ಎಳ್ಳು -ಕಾಳು ಮುಳ್ಳು – ಮೊನೆಯಷ್ಟೂ ಸೇರುತ್ತಿರಲಿಲ್ಲ. ಅವರ ವಿಷಯ ಬರೆದು ಮುಗಿಯುವಂತಿಲ್ಲ. ಎಷ್ಟು ಬರೆದರೂ ಅವರ ಲೀಲಾ ಸಾಗರದ ಒಂದು ಬಿಂದುವೂ ಆಗುವಂತಿಲ್ಲ. ನಿತ್ಯಾನಂದರು ಲೀಲೆಗಳನ್ನು ತೋರಿದ ಸ್ಥಳಗಳಲ್ಲಿ ಮಂದಿರಗಳು ಶಿಷ್ಯರಿಂದ, ಭಕ್ತರಿಂದ ಸ್ಥಾಪನೆಗೊಂಡು ಶ್ರದ್ಧಾ ಕೇಂದ್ರಗಳಾಗಿ ಬೆಳಗುತ್ತಿದೆ.

ಭಕ್ತರ ಅಳಲಿಗೆ ಅವರವರ ಮಾತೃ ಭಾಷೆಯಲ್ಲಿ ಪರಿಹಾರ ಸೂಚಿಸುತ್ತಿದ್ದ ಅವಧೂತರು
ನಿತ್ಯಾನಂದ ಸ್ವಾಮೀಜಿ ಅವರಿಂದ ಮಹಾತ್ಕಾರ್ಯಗಳು ಅಚ್ಚರಿ ಪಡೆಯುವಂತೆ ನಡೆಯುತ್ತಿದ್ದವು. ಸ್ವಾಮೀಜಿ ಅವರು ಕೇರಳದ ಕಾಂಞಂಗಾಡಿಗೆ ಬಂದಾಗ, ಅವರಿಗೆ ಹೊಸದುರ್ಗ ಬಳಿಯ ದೊಡ್ಡ ಕೆಂಪು ಕಲ್ಲಿನ ಗುಡ್ಡವು ಗಮನ ಸೆಳೆಯುತ್ತದೆ. ಆ ಮುರ ಕಲ್ಲನ್ನು ಕೊರೆದು 45 ಗುಹೆಗಳನ್ನು ಕಲಾತ್ಮಕವಾಗಿ ರಚಿಸಿದ್ದಾರೆ. ಇದು ಸಾಧಕರಿಗೆ ಆಧ್ಯಾತ್ಮ ಸಾಧನೆಗೆ ಸೂಕ್ತ ಸ್ಥಳವಾಗಿದೆ. ಸ್ವಾಮೀಜಿ ಅವರು, ಗುಹೆಗಳ ಕಾಮಗಾರಿ ನಡೆಯುವ ಸಮಯದಲ್ಲಿ ಎಲ್ಲರೂ ಅಚ್ಚರಿ ಪಡುವಂತೆ , ಸ್ವಾಮಿಗಳು ತಾವು ಧರಿಸಿರುವ ಲಂಗೋಟಿಯಿಂದ ಹಣವನ್ನು ತೆಗೆದು , ದಿನದ ಸಂಬಳವನ್ನು ಕೂಲಿಯಾಳುಗಳಿಗೆ ನೀಡುತ್ತಿದ್ದರು. ಸದ್ಗುರುಗಳು ಕಾಂಞಂಗಾಡಿನಲ್ಲಿ ನಿರ್ಮಾಣ ಮಾಡಿರುವ ಗುಹೆಗಳ ಮೇಲಿನ ಸ್ಥಳದಲ್ಲಿ ಅವರ ಶಿಷ್ಯ ಶ್ರೀ ಜನಾನಂದ ಸ್ವಾಮೀಜಿಯವರು 1964ರಲ್ಲಿ ನಿತ್ಯಾನಂದ ಸ್ವಾಮೀಜಿಯವರು ಮಂದಿರವನ್ನು ನಿರ್ಮಿಸಿದ್ದಾರೆ. ಕಾಂಞಂಗಾಡ್‌ ಆಶ್ರಮದಿಂದ 5 ಕಿಲೋಮೀಟರ್‌ ದೂರದಲ್ಲಿ ಗುರುವನ ಎಂಬ ಪ್ರದೇಶವಿದೆ. ಇಲ್ಲಿ ನಿತ್ಯಾನಂದರು ತಪಃ ಶಕ್ತಿಯಿಂದ ಬಂಡೆ ಕಲ್ಲನ್ನು ಒಡೆದು ಸೃಷ್ಟಿಸಿರುವ ನೀರಿನ ಚಿಲುಮೆಯಿದೆ. ವರ್ಷಪೂರ್ತಿ ಹರಿಯುವ ಈ ಜಲಧಾರೆಯನ್ನು ಪಾಪನಾಶಿನಿ ಗಂಗಾ ಎಂದು ಕರೆಯಲಾಗುತ್ತದೆ. ಇದರ ಪವಿತ್ರ ತೀರ್ಥ ಸ್ನಾನವು ಔಷಧೀಯ ಗುಣವನ್ನು ಹೊಂದಿ ಪುಣ್ಯ ಪ್ರದವಾಗಿದೆ. ಗುರುವನ ಪ್ರದೇಶದಲ್ಲಿ ನಿತ್ಯಾನಂದರ ಭವ್ಯ ಮಂದಿರವಿದೆ.ನಿತ್ಯಾನಂದರು ಮಹಾರಾಷ್ಟ್ರದ ಗಣೇಶಪುರಿಯಲ್ಲಿ ನೆಲೆನಿಂತಾಗ ನಿತ್ಯವೂ ಸಾವಿರಾರು ಭಕ್ತರು ದರ್ಶನ ಪಡೆಯಲು ಬರುತ್ತಿದ್ದರು. ಗಣೇಶಪುರಿಯಲ್ಲಿ ಪವಿತ್ರ ಬಿಸಿ ನೀರಿನ ಕುಂಡಗಳಿವೆ.ಇದರಲ್ಲಿ ಸ್ನಾನ ಮಾಡಿದರೆ ಪಾಪ ಕಾರ್ಯಗಳು ನಿವಾರಣೆಯಾಗಿ ಹಲವು ಬಗೆಯ ರೋಗಗಳನ್ನುನಿವಾರಿಸುವ ಶಕ್ತಿಯನ್ನು ಈ ಪವಿತ್ರ ಜಲವು ಹೊಂದಿದೆ. ಭಕ್ತರ ಸಮಸ್ಯೆಗಳು ಗಣೇಶಪುರಿಯ ಬಿಸಿನೀರಿನ ಕುಂಡದ ತೀರ್ಥ ಸ್ನಾನದಿಂದಲೇ ಪರಿಹಾರ ಪಡೆಯುತ್ತಿದ್ದವು. ನಿತ್ಯಾನಂದರು ಗಣೇಶಪುರಿಯಲ್ಲಿ ಸುಮಾರು ಇಪ್ಪತ್ತೈದು ವರ್ಷಗಳ ಕಾಲವನ್ನು ಕಳೆದರು, ಸಂಪರ್ಕ ರಸ್ತೆಗಳನ್ನು ಅಭಿವೃದ್ಧಿ ಪಡಿಸಿದರು, ದೇಶ ವಿದೇಶಗಳಿಂದ ಆಗಮಿಸುವ ಭಕ್ತರಿಗೆ ವಸತಿ ಗೃಹದ ವ್ಯವಸ್ಥೆಗೊಳಿಸಿದರು. ಮಕ್ಕಳೆಂದರೆ ನಿತ್ಯಾನಂದರಿಗೆ ಬಲು ಪ್ರೀತಿ, ಚಿಣ್ಣರಿಗಾಗಿಯೇ ಬಾಲ ಭೋಜನ ವ್ಯವಸ್ಥೆ ಮಾಡಿದರು. ನಿತ್ಯಾನಂದರ ದರ್ಶನ ಪಡೆಯಲು ಬಂದಿರುವ ಭಕ್ತರು ತಮ್ಮ ಕಷ್ಟ ಕಾರ್ಪಣ್ಯಗಳು, ದುಃಖ ದುಮ್ಮಾನಗಳು, ರೋಗ ರುಜಿನಗಳ ಕುರಿತು ನಿವೇದಿಸಿಕೊಳ್ಳುತ್ತಿದ್ದರು. ನಿತ್ಯಾನಂದರು, ಭಕ್ತರ ಅಳಲಿಗೆ ಅವರವರ ಮಾತೃ ಭಾಷೆಯಲ್ಲಿ ಪರಿಹಾರ ಸೂಚಿಸುತ್ತಿದ್ದರು. ಸಲಹೆ, ಸಂದೇಶವನ್ನು ನೀಡುತ್ತಿದ್ದರು. ನಿತ್ಯಾನಂದರು ಹಲವು ಭಾಷೆಗಳನ್ನು ಬಲ್ಲವರಾಗಿದ್ದರು. ವಿದೇಶಿಗರಲ್ಲಿಯೂ ನಿತ್ಯಾನಂದರು ಅವರವರ ಭಾಷೆಯಲ್ಲಿ ಮಾತನಾಡುತ್ತಿದ್ದರು. ಆದರೆ ನಿತ್ಯಾನಂದರ ಒಂದು ಲೀಲೆಯನ್ನು ತಿಳಿಸದಿದ್ದರೆ ಈ ಲೇಖನ ಪರಿಪೂರ್ಣವಾಗಲಿಕ್ಕಿಲ್ಲ, ಅದುವೆ ಗುರುದೇವರ ಪರಮ ಭಕ್ತನಾಗಿ ಮಾರ್ಪಟ್ಟ ಲೋಕಯ್ಯ ಶೆಟ್ರ ಕಥೆ ಗುರುದೇವರ ಪರಮಭಕ್ತ

ಗುರುದೇವರ ಪರಮ ಭಕ್ತನಾಗಿ ಮಾರ್ಪಟ್ಟ ಬಂಗಾರ್‌ ಲೋಕಣ್ಣರ ಕಥೆ
‘ಲೋಕಯ್ಯ ಶೆಟ್ಟಿ’ ಶ್ರೀಯುತರು ಉಡುಪಿ ಜಿಲ್ಲೆಯ ಪಡುಬಿದ್ರೆ ಕನ್ನಂಗಾರ್‌ ಇಲ್ಲಿಯ ನಿವಾಸಿ. ಬಡತನದ ಕಾರಣದಿಂದ ಅವರು, 1920 ರ ಸುಮಾರಿಗೆ, ತಮ್ಮ ಸಣ್ಣ ಪ್ರಾಯದಲ್ಲಿಯೇ ಮುಂಬಯಿಗೆ ತೆರಳಿದವರು. ಅಲ್ಲಿ ಹೋಟೆಲಿನಲ್ಲಿ ಕ್ಲೀನರ್‌ ಕೆಲಸಕ್ಕೆ ಸೇರಿಕೊಳ್ಳುತ್ತಾರೆ. ನಂತರದ ದಿನಗಳಲ್ಲಿ ಅವರು, ಎಲ್ಲಾ ಬಗೆಯ ಕೆಲಸ ಕಲಿತು, ಅದೇ ಹೋಟೆಲಿನಲ್ಲಿ ಮುಖ್ಯ ಬಾಣಸಿಗರಾಗಿ ಕೆಲಸ ನಿರ್ವಹಿಸುತ್ತಿದ್ದರು. ಲೋಕಯ್ಯ ಶೆಟ್ರ ಪ್ರಾಮಾಣಿಕ ವ್ಯಕ್ತಿಯಾಗಿದ್ದರು. ಅವರು ಅನ್ಯಾಯವನ್ನು ಎಂದೂ ಸಹಿಸುತ್ತಿರಲಿಲ್ಲ. ಆ ಸಮಯದಲ್ಲಿ ಅವರು ದುಡಿಯುತ್ತಿದ್ದ ಹೋಟೆಲಿನ ಮಾಲಿಕರು ಕಾರ್ಮಿಕರಿಗೆ ಸರಿಯಾಗಿ ಸಂಬಳ ನೀಡುತ್ತಿರಲಿಲ್ಲ. ಈ ಬಗ್ಗೆ ಲೋಕಯ್ಯ ಶೆಟ್ಟಿ ಅವರು, ಮಾಲಕರಲ್ಲಿ ಕಾರ್ಮಿಕರಿಗೆ ಸಂಬಳ ನೀಡುವಂತೆ ವಿಧೇಯರಾಗಿ ವಿನಂತಿಸಿಕೊಳ್ಳುತ್ತಾರೆ. ಆವಾಗ ಸಂಬಳದ ವಿಚಾರವಾಗಿ ಇವ‌ರ ನಡುವೆ ಗಲಾಟೆ ನಡೆಯುತ್ತದೆ. ಮಾತಿಗೆ ಮಾತು ಬೆಳೆಯುತ್ತದೆ. ತಾಳ್ಮೆ ಕಳೆದುಕೊಂಡ ಲೋಕಯ್ಯ ಶೆಟ್ರು ಮಾಲಿಕನಿಗೆ ಒಂದು ಏಟನ್ನು ಭಾರಿಸುತ್ತಾರೆ. ಈ ವಿದ್ಯಮಾನದಿಂದ ಮನನೊಂದ ಲೋಕಯ್ಯ ಹೋಟೆಲು ಕೆಲಸ ಬಿಟ್ಟು, ಮುಂಬಯಿಂದ ಪ್ರಥಮ ಬಾರಿಗೆ ಸದ್ಗುರು ನಿತ್ಯಾನಂದ ಸ್ವಾಮೀಜಿ ಅವರ ದರ್ಶನ ಪಡೆಯಲು ಹೋಗುತ್ತಾರೆ.

Advertisement

ನಿತ್ಯಾನಂದರ ದರ್ಶನ ಪಡೆಯಲು ನಿಂತಿರುವ ಭಕ್ತರ ಸರತಿ ಸಾಲಿನಲ್ಲಿ ಲೋಕಯ್ಯ ಶೆಟ್ಟಿ ಅವರು ನಿಂತಿದ್ದರು. ಅದೇ ಸಮಯದಲ್ಲಿ ನಿತ್ಯಾನಂದರು ಭಕ್ತರಲ್ಲಿ ಇಲ್ಲಿ ಒರ್ವ ನನ್ನ ದರ್ಶನ ಪಡೆಯಲು ಬಂದಿದ್ದಾನೆ. ಹಾಗೆಯೇ ಮುಂಬಯಿಯಲ್ಲಿ ದುಡಿಯುತ್ತಿದ್ದ ಹೋಟೆಲಿನಲ್ಲಿ ಸಂಬಳದ ವಿಚಾರವಾಗಿ ನಡೆದಿರುವ ಮಾತಿನ ಚಕಮಕಿ, ಮಾಲಿಕನ ಮೇಲೆ ಹಲ್ಲೆ ನಡೆಸಿರುವ ಘಟನೆಯನ್ನು ವಿವರವಾಗಿ ಹೇಳುತ್ತಾರೆ. ಗುರುದೇವರ ಮಾತುಗಳನ್ನು ಕೇಳಿಸಿಕೊಂಡ ಲೋಕಯ್ಯ ಶೆಟ್ಟಿ ಅವರಿಗೆ, ಸ್ವಾಮೀಜಿ ಅವರಿಗೆ, ನನ್ನ ವಿಚಾರವು ಹೇಗೆ ತಿಳಿಯಿತು..? ಎಂದು ಒಮ್ಮೆಗೆ ಅಚ್ಚರಿಗೆ ಒಳಗಾಗುತ್ತಾರೆ. ಆವಾಗಲೇ ಲೋಕಯ್ಯ ಅವರಿಗೆ ನಿತ್ಯಾನಂದರು ಸಾಮಾನ್ಯರಲ್ಲ..! ಸಾಕ್ಷತ್‌ ದೇವತಾಸ್ವರೂಪಿ..! ಎಂದು ಅರಿವಾಗುತ್ತದೆ.

ಗಣೇಶಪುರಿಯಲ್ಲಿ ಇದ್ದು ಹೋಟೆಲು ನಡೆಸುವಂತೆ ಅನುಗ್ರಹ
ಲೋಕಯ್ಯ ಶೆಟ್ರಾ, ನಿತ್ಯಾನಂದರ ಚರಣಗಳಿಗೆ ಅಡ್ಡಬಿದ್ದು ನಮಸ್ಕರಿಸುತ್ತಿರುವಾಗ, ನೀನು ಮಾಡಿದ್ದು ಒಳ್ಳೆಯ ಕೆಲಸವೇ ಆಗಿದೆ ನೀನು ಇನ್ನು ಮುಂದೆ ಮುಂಬಯಿಗೆ ಹೋಗುವುದು ಬೇಡ. ಗಣೇಶಪುರಿಯಲ್ಲಿ ಇದ್ದು ಹೋಟೆಲು ನಡೆಸುವಂತೆ ಅನುಗ್ರಹಿಸುತ್ತಾರೆ.ಲೋಕಯ್ಯ ಶೆಟ್ರ ಗಣೇಶಪುರಿಯಲ್ಲಿ ನಿತ್ಯಾನಂದರು ತೋರ್ಪಡಿಸಿದ ಆಯಾಕಟ್ಟಿನ ಜಾಗದಲ್ಲಿ ಹೋಟೆಲು ಸ್ಥಾಪಿಸುತ್ತಾರೆ. ಹೋಟೆಲಿಗೆ ನಿತ್ಯಾನಂದರು ಮಧು ನಿವಾಸ್‌ ಎಂದು ನಾಮಕರಣಗೊಳಿಸುತ್ತಾರೆ. ಆರಂಭದ ದಿನಗಳಲ್ಲಿ ರುಚಿಕರವಾದ ಗಂಜಿ ಊಟದ ವ್ಯವಸ್ಥೆ ಇಲ್ಲಿ ನಡೆಯುತ್ತದೆ. ಭಕ್ತರಿಂದ ಇದು ‘ಗಂಜಿಮಠ’ ಎಂದು ಕರೆಯಲ್ಪಡುತ್ತದೆ. ಗೃಹಸ್ಥಾಶ್ರಮ ಜೀವನ ನಡೆಸಲು ಮನಸ್ಸು ಮಾಡದ, ಲೋಕಯ್ಯ ಶೆಟ್ರ ನಿತ್ಯಾನಂದರ ಸಾಂಗತ್ಯದಲ್ಲಿದ್ದು, ಯಾವುದೇ ಫ‌ಲಾಪೇಕ್ಷೆ ಬಯಸದೆ, ಶ್ರದ್ಧಾ ಭಕ್ತಿಯಿಂದ ಆಶ್ರಮ ಸೇವೆಯಲ್ಲಿ ತಲ್ಲೀನರಾಗಿ ಗಣೇಶಪುರಿಯಲ್ಲಿ ದಿನಗಳನ್ನು ಕಳೆಯುತ್ತಾರೆ. ಸದ್ಗುರುಗಳ ಸೇವೆಯೊಂದಿಗೆ ಕ್ಷೇತ್ರದ ದರ್ಶನಕ್ಕೆ ಬರುವ ಬಡ ಭಕ್ತರುಗಳಿಗೆ ತಮ್ಮ ಹೋಟೆಲಿನಲ್ಲಿ ಧರ್ಮಾರ್ಥ ಉಪಹಾರ – ಭೋಜನವನ್ನು ನೀಡಿ, ಅವರು ಉದರ ಹಸಿವನ್ನು ನೀಗಿಸುತ್ತಿದ್ದರು. ಮುಂಬೈಯಿಂದ ನಡು ರಾತ್ರಿ ತಡರಾತ್ರಿಯ ಸಮಯದಲ್ಲಿ ಬರುವ ಭಕ್ತರಿಗೆ ವಸತಿ ವ್ಯವಸ್ಥೆ ಒದಗಿಸಿಯೂ ಉಪಚರಿಸುತ್ತಿದ್ದರು, ಸರಳ ಸಜ್ಜನಿಯಕೆಯ ದಯಾಗುಣದ ವ್ಯಕ್ತಿಯಾಗಿದ್ದ ಲೋಕಯ್ಯ ಶೆಟ್ರ ದುಡಿಮೆಯಲ್ಲಿ ಬಂದಿರುವ ಲಾಭದ ಹಣದಲ್ಲಿ ಬಡಬಗ್ಗರಿಗೆ ಸಹಾಯ ನೀಡುತ್ತಿದ್ದರು. ಭಕ್ತರು ಲೋಕಣ್ಣ ಅವರನ್ನು ಪ್ರೀತಿಯಿಂದ ಅಜ್ಜೆರ್‌ ಅಂತ ಕರೆಯುತ್ತಿದ್ದರು.

‘ಬಂಗಾರ್‌ ಲೋಕಣ್ಣ’ ಎಂದೇ ಖ್ಯಾತಿ ಪಡೆದ ಲೋಕಯ್ಯ ಶೆಟ್ಟಿ
ಲೋಕಯ್ಯರು ತನ್ನಲ್ಲಿರುವ ಸದ್ಗುಣಗಳಿಂದ ನಿತ್ಯಾನಂದರ ಅಕ್ಕರೆಗೂ ಪಾತ್ರರಾಗಿದ್ದರು. ನಿತ್ಯಾನಂದ ಸ್ವಾಮೀಜಿ ಅವರು, ಲೋಕಯ್ಯ ಶೆಟ್ಟಿ ಅವರನ್ನು ಪ್ರೀತಿಯಿಂದ ಬಂಗಾರ್‌ ಲೋಕಣ್ಣ ಎಂದು ಕರೆಯುತ್ತಿದ್ದರು. ನಿತ್ಯಾನಂದರು ಮಹಾಸಮಾಧಿ ಪಡೆಯುವ ಮೂರು ದಿನಗಳ ಮೊದಲು, ಲೋಕಯ್ಯ ಅವರನ್ನು ‘ಬಂಗಾರ್‌ ಲೋಕಣ್ಣ’ ಎಂದು ಅಕ್ಕರೆಯಿಂದ ಸನಿಹ ಕರೆದಿದ್ದರು. ಗುರುದೇವರಿಂದ ಅಂಗಡಿ ನೋಡು, ಇದ್ದುದರಲ್ಲಿ ತೃಪ್ತಿ ಹೀಗೆಂದು ಸಲಹೆಯನ್ನು ಪಡೆದಿದ್ದರು. ನಿತ್ಯಾನಂದರು ಮಹಾಸಮಾಧಿ ಪಡೆದಬಳಿಕ, ನಿತ್ಯಾನಂದರ ಮೂರ್ತಿ ಸ್ಥಾಪನೆಯಾಗುವ ಮೊದಲು ಸಮಾಧಿ ಪೂಜಿಸುವ ಭಾಗ್ಯವನ್ನು ಲೋಕಣ್ಣರು ಪಡೆದಿದ್ದರು. ಸಮಾಧಿ ಮಂದಿರದ ಸೇವೆಯನ್ನು ಕೊನೆಯ ತನಕವೂ ಮಾಡಿಕೊಂಡಿದ್ದರು. ಅಂದು ಸೋಮವಾರ, ಆಕ್ಟೋಬರ್‌-30, 1989 ಇಸವಿ. ಲೋಕಣ್ಣರು ನಿತ್ಯದ ದಿನಚರಿಯಂತೆ ಹೋಟೆಲಿನಲ್ಲಿ ಸ್ಥಾಪಿಸಿದ ನಿತ್ಯಾನಂದರ ಪೂಜಾ ಮಂದಿರದಲ್ಲಿ ಗುರುದೇವರಿಗೆ ನಮಸ್ಕರಿಸಿ, ನಂತರ ‘ಓಂ ನಮೋ ಭಗವತೇ ನಿತ್ಯಾನಂದಾಯ’ ಮಂತ್ರವನ್ನು ಉಚ್ಚರಿಸಿದರು. ತನ್ನ 90 ರ ಹರೆಯದಲ್ಲಿ ಸ್ವರ್ಗಸ್ಥರಾದರು. ಮಹಾಮಹಿಮ ನಿತ್ಯಾನಂದ ಸ್ವಾಮೀಜಿಯವರು 8-8-1961 ರಲ್ಲಿ ಮಹಾಸಮಾಧಿ ಪಡೆದರು. ಭಕ್ತರು ಸೇರಿ ಅವರ ಭವ್ಯ ಮಂದಿರವನ್ನು ಗಣೇಶಪುರಿಯಲ್ಲಿ ನಿರ್ಮಿಸಿದ್ದಾರೆ. ಈಗಲು ಗುರು ದೇವರು ಭಕ್ತರ ಮನದಲ್ಲಿ ಇದ್ದಾರೆ. ತನ್ನ ಮಂದಿರದ ದರುಶನವನ್ನು ಪಡೆಯುವ ಭಕ್ತರನ್ನು ಹರಸುತ್ತ ಸಮಾಧಿ ನಂತರವೂ ಮಹಿಮೆಯನ್ನು ತೋರ್ಪಡಿಸುತ್ತಿದ್ದಾರೆ. ಗುರುದೇವರ ಭಕ್ತರು ರೋಚಕ ಅನುಭವಗಳನ್ನು ಅನುಭವಿಸುತ್ತಿದ್ದಾರೆ. ಭಾರತ ದೇಶದಲ್ಲಿ ಅಲ್ಲದೆ ವಿದೇಶಗಳಲ್ಲಿಯೂ ನಿತ್ಯಾನಂದ ಮಂದಿರಗಳು ನಿರ್ಮಾಣಗೊಂಡು ಶ್ರದ್ಧಾ ಕೇಂದ್ರಗಳಾಗಿವೆ.

ಯಾವಾಗ ನಾನು ಈ ಪ್ರಪಂಚದಲ್ಲಿ ನಾ ಕೇವಲ ಸಾಕ್ಷಿ – ಪ್ರೇಕ್ಷಕ ಎಂಬ ಭಾವನೆಯನ್ನು ನಿನ್ನ ಮನಸ್ಸಿಗೆ ನೀನು ತಂದು ಕೊಳ್ಳುವೆಯೋ ಆಗ ನಿನಗೆ ನಿನ್ನ ಜೀವನದಲ್ಲಿನ ನೋವು, ಕಷ್ಟ, ದುಃಖಗಳು ಮರೆಯಾಗಿ ನಿನ್ನ ಮನಸ್ಸಿಗೆ ವರ್ಣಿಸಲಾಗದ ಆನಂದ ಉಂಟಾಗುತ್ತದೆ, ಒಂದು ವಸ್ತುವಿನ ಮೇಲೆ ಇರುವ ಆಸೆಯೇ ನಮ್ಮ ದುಃಖಕ್ಕೆಲ್ಲ ಕಾರಣ ಎಂಬ ಅನೇಕ ಸಂದೇಶವನ್ನು ಜಗತ್ತಿಗೆ ನೀಡಿದ ಶ್ರೀ ಭಗವಾನ್‌ ನಿತ್ಯಾನಂದ ಸ್ವಾಮೀಜಿಯವರಿಗೆ ವಂದಿಸುತ್ತಾ ಅವರ ಪಾದಾರವಿಂದಕ್ಕೆ ಸಾಷ್ಟಾಂಗ ಪ್ರಣಾಮಗಳು.

ಲೇಖನ:ನರೇಶ್‌ ಕುಮಾರ್‌ ಪೆರಂಪಳ್ಳಿ

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next