ಹುಬ್ಬಳ್ಳಿ: ಕೋವಿಡ್ 19 ಸೋಂಕು ಹರಡದಂತೆ ಮುನ್ನೆಚ್ಚರಿಕೆಗೆ ಹೆಚ್ಚಿನ ಒತ್ತು ನೀಡುವ ನಿಟ್ಟಿನಲ್ಲಿ ಇಲ್ಲಿನ ಕೆಎಲ್‌ಇ ಎಂಜಿನೀಯರಿಂಗ್ ಕಾಲೇಜಿನ ವಿದ್ಯಾರ್ಥಿಗಳು ಸೆನ್ಸ್‌ರ್ ಆಧಾರಿತ ಸ್ಯಾನಿಟೈಸರ್ ಯಂತ್ರ ಸಿದ್ಧಪಡಿಸಿದ್ದು, ಕಿಮ್ಸ್ ಆಸ್ಪತ್ರೆಗೆ ಒಂದು ಯಂತ್ರ ನೀಡಲಾಗಿದೆ.
ಸ್ಯಾನಿಟೈಸರ್ ಬಳಕೆ ಸಾಮೂಹಿಕವಾಗಿ ಇರುವ ಕಡೆಗಳಲ್ಲಿ ಸೋಂಕು ಹರಡುವ ಸಾಧ್ಯತೆ ಹೆಚ್ಚು. ಈ ಕಾರಣದಿಂದ ವಿದ್ಯಾರ್ಥಿಗಳು ಸ್ವಯಂಚಾಲಿತ ಯಂತ್ರ ಅಭಿವೃದ್ಧಿಪಡಿಸಿದ್ದಾರೆ. ಕಚೇರಿ, ಆಸ್ಪತ್ರೆ, ಕೈಗಾರಿಕೆಗಳು, ಹೋಟೆಲ್, ಸಮುದಾಯ ಭವನ ಸೇರಿದಂತೆ ಹೆಚ್ಚು ಜನರಿರುವ ಕಡೆಗಳಲ್ಲಿ ಇದು ಬಳಕೆಗೆ ಯೋಗ್ಯವಾಗಿದೆ. ಇನ್ನು ಪಿಪಿಇ ಕಿಟ್ ಧರಿಸಿರುವ ಸಿಬ್ಬಂದಿ ಬಾಟಲ್‌ನಲ್ಲಿರುವ ಸ್ಯಾನಿಟೈಸರ್ ಬಳಸಲು ಸಾಧ್ಯವಾಗದ ಕಾರಣ ಈ ಯಂತ್ರ ಸಹಕಾರಿಯಾಗಲಿದೆ ಎಂಬುದು ವಿದ್ಯಾರ್ಥಿಗಳ ಅಭಿಪ್ರಾಯ.
ವಿದ್ಯಾರ್ಥಿಗಳಾದ ವಿ.ಆರ್.ಕಾರ್ತಿಕ್, ಜಿ. ಅಭಿಲಾಷ್, ವಿನಾಯಕ, ಪ್ರವೀಣ, ಸಂತೋಷ್, ಕೆ.ಅಭಿಲಾಶ ಈ ಸ್ವಯಂಚಾಲಿತ ಯಂತ್ರ ಅಭಿವೃದ್ಧಿಪಡಿಸಿದ್ದಾರೆ. ಮೆಕಾನಿಕಲ್ ವಿಭಾಗದ ಪ್ರಾಧ್ಯಾಪಕ ರವಿ ಗುತ್ತಲ ಹಾಗೂ ಕಿಮ್ಸ್ ವೈದ್ಯ ಎಸ್.ವಿ.ಮುಲ್ಕಿಪಾಟೀಲ ಮಾಗದರ್ಶನ ನೀಡಿದ್ದರು.
ವಿದ್ಯಾರ್ಥಿಗಳು ತಯಾರಿಸಿರುವ ಈ ಯಂತ್ರವನ್ನು ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ ಶೆಟ್ಟರ ವೀಕ್ಷಿಸಿದರು. ವಿದ್ಯಾರ್ಥಿಗಳ ಈ ಪರಿಶ್ರಮಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು.
ಕಿಮ್ಸ್ ವೈದ್ಯರಿಗೆ ನೆರವಾಗಲಿ ಎನ್ನುವ ಕಾರಣಕ್ಕೆ ನಿರ್ದೇಶಕ ಡಾ| ರಾಮಲಿಂಗಪ್ಪ ಅಂಟರತಾನಿ ಅವರಿಗೆ ವಿದ್ಯಾರ್ಥಿಗಳು ಒಂದು ಯಂತ್ರ ಹಸ್ತಾಂತರಿಸಿದರು.