Advertisement
ಬದುಕಿನಲ್ಲಿ ವೈಯಕ್ತಿಕ ದೌರ್ಬಲ್ಯದ ಜೊತೆಗೆ ಎದುರಾಗಬಹುದಾದ ಅಥವಾ ಎದುರಾದ ಅದೆಷ್ಟೋ ಸಮಸ್ಯೆಗಳನ್ನು ಸುಲಭವಾಗಿ, ಸುಲಲಿತವಾಗಿ ಪರಿಹರಿಸಿಕೊಳ್ಳುತ್ತ, ಆತ್ಮವಿಶ್ವಾಸದಿಂದ ಮುಂದುವರಿದು ಹೊಸ ಹೊಸ ಯೋಚನೆ, ಯೋಜನೆಗಳನ್ನೆಲ್ಲ ಸಾಧನೆಯ ವೇದಿಕೆಗೆ ಎಳೆತಂದು ಯಶಸ್ವಿಯಾದ ಮಹಿಳೆಯೊಬ್ಬಳ ಯಶೋಗಾಥೆ ಆ ಆತ್ಮಕಥನ. ಇಂತಹ ಓದು ಕ್ಷಣಕ್ಷಣಕ್ಕೂ ಆತಂಕಕ್ಕೊಳಪಡುವ ಮನಸುಗಳಿಗೆ ಆಧಾರದ ಕೈಪಿಡಿಯಾಗಬಲ್ಲುದು. ಈ ಓದಿನ ಖುಷಿಯೇ ಬೇರೆ. ಇಂತಹ ಓದಿನಲ್ಲಿ ಮನಸ್ಸು ಅರಳುತ್ತದೆ. ಒಳಗಿನ ಕುತೂಹಲ ಆಕಾಂಕ್ಷೆಗಳು ಜುಗಲ್‌ಬಂದಿ ಹಾಡಿ ರಾಗ ವಿಸ್ತರಿಸುತ್ತವೆ. ಮನದ ಕ್ಯಾನ್ವಾಸಿನಲ್ಲಿ ಚಿತ್ರ ಬರೆಯುತ್ತವೆ. ಪುಟದಿಂದ ಪುಟಕ್ಕೆ ಬಣ್ಣ ತುಂಬಿಕೊಳ್ಳುತ್ತವೆ.
Related Articles
Advertisement
ಕಪ್ಪು ಬಿಳುಪು ಬಣ್ಣದ ಆ ಫೋಟೊ ಮಾಸಲು ಬಣ್ಣಕ್ಕೆ ತಿರುಗಿತ್ತು. ಆದರೆ, ಆ ಫೋಟೊದ ಸೆರೆಯಲ್ಲಿದ್ದ ಆಕೃತಿಗಳು ಮಾತ್ರ ಬರಿದಾಗದ ಬದುಕಿನನುಭವದ ಕಣಜವಾಗಿ ಇಂದಿಗೂ ಮಾಸದ ನೆನಪಾಗಿ ಉಳಿದಿವೆ ಎಂದು ನನಗನಿಸಿತು. ಅಜ್ಜಿಯರ ಪ್ರೀತಿ, ಕಥೆ ಹೇಳುವ ರೀತಿ ಎಲ್ಲ ಸ್ಮತಿಪಟಲದಲ್ಲಿ ಮೂಡಿ ಮತ್ತೆ ಮತ್ತೆ ಫೋಟೊ ನೋಡಿದೆ. ಶಾಲೆಯ ಮುಖ ಕಂಡಿರದ ಅವರ ಅನುಭವದ ಆಳದ ಮಾತು ಮೇಲ್ನೋಟಕ್ಕೆ ಒರಟಾಗಿ ಕಂಡರೂ ಅದರ ಭಾವದಲ್ಲಿ ಬೆಣ್ಣೆಯ ಮೃದುತ್ವವಿತ್ತು ಎಂದು ಈಗ ನನಗೆ ಅನಿಸುತ್ತದೆ.
ಅಂದು ತಲೆ ಬೋಳಿಸಿಕೊಂಡು, ಕೆಂಪು ಸೀರೆಯೊಳಗೆ ಇಡೀ ಬದುಕನ್ನು ಮುದುಡಿಸಿ ಮುದ್ದೆಕಟ್ಟಿದ ಆ ಶೋಷಿತೆಯರ ಶ್ವಾಸ ಉಸುರುವ ಕತೆಯೆಲ್ಲ ಮನೆಯ ಕತ್ತಲಕೋಣೆಯಲ್ಲಿ ಕರಗಿ ಹೋಗಿರಬಹುದು.
ಎಲ್ಲ ಅಜ್ಜಿಯಂದಿರದು ಒಂದೊಂದು ದುರಂತ ಕಥೆ. ಬಾಲ್ಯವಿವಾಹ. ಏಳರ ಹರೆಯದ ಹುಡುಗಿಗೆ ಎಪ್ಪತ್ತರ ವಯಸ್ಸಿನವನೊಂದಿಗೆ ವಿವಾಹ. ಈ ವಯಸ್ಸಿನ ಅಂತರದಿಂದಾಗಿ ಬಾಲವಿಧವೆಯರ ಸಾಲು ಸಾಲು ಆ ಕಾಲದಲ್ಲಿ. ಬಾಲ್ಯದ ಸ್ವತ್ಛಂದತೆಯೇ ಇಲ್ಲದ, ಯೌವ್ವನದ ಕನಸುಗಳೇ ಇಲ್ಲದೆ ಮನೆಕೆಲಸ, ಜಪತಪ, ವಾರ, ಒಪ್ಪೊತ್ತು, ವ್ರತ ನಿಯಮಗಳ ವರ್ತುಲದಲ್ಲಿ ಸನ್ಯಾಸಿಯಂತೆ ಹದಿನಾರರ ಹರಯದಲ್ಲೇ ಹದಿನಾರು ಅಂಕಣದ ಮನೆಯ ಹಜಾರದ ಮೂಲೆಯಲ್ಲಿ ಮುಚ್ಚಿಗೆಯ ಅಟ್ಟದಲ್ಲಿ, ಛಾವಣಿಯ ಧಗೆಯಲ್ಲಿ ನಡುಮನೆಯ ಕತ್ತಲಿಲ್ಲ ಮನೆಮಗಳು ಪಡುವ ಬವಣೆಗೆ, ಹತಾಶ ರೋದನಕ್ಕೆ ಮೂಕಸಾಕ್ಷಿಗಳಾಗಿ ನಿಂತಿದ್ದು ಇದೇ ಮನೆಯ ಕಂಬಗಳಲ್ಲವೆ?
ಹಾಗಾಗಿ ಭಾರತೀಯ ಸಾಂಪ್ರದಾಯಿಕ, ಪಾರಂಪರಿಕ ಮನೆ ಎಂಬ ಮನಸ್ಸುಗಳ ಬೀಡು ಹೆಣ್ಣಿನ ಏಳುಬೀಳುಗಳ, ಸಂಭ್ರಮ ಸಂತಾಪಗಳ ಆಡೊಂಬಲವಾಗಿ, ಆಕೆಯ ಪ್ರಗತಿ ನಿಧಾನಗತಿ, ಅಧೋಗತಿಗಳ ಇತಿಹಾಸದ ಅಸ್ತಿಭಾರದ ಮೇಲೆ ಆಕೆಯ ಬದುಕು ಭಾವಗಳ ಮೂರ್ತ ರಂಗಮಂಟಪವಾಗಿ ನಿಲ್ಲುತ್ತದೆ. ಮನೆಯ ಒಳಗೋಡೆಯೆಂಬ ಸ್ಥಾವರದಲ್ಲಿ ಗೃಹಿಣಿಯ ಅದೆಷ್ಟೋ ಭಾವೋದ್ವೇಗದ, ಶಾಂತಿ ಅನುರಾಗದ, ಶೋಷಿತ ಸಂಕಟದ ಏದುಸಿರು, ಬಿಸಿಯುಸಿರು, ನಿಟ್ಟುಸಿರುಗಳ ಮಾರ್ದನಿ ಮಿಡಿಯುತ್ತಿರುತ್ತದೆ.ಈ ಧ್ವನಿ ಅದೆಷ್ಟೋ ಹೆಂಗಳೆಯರ ಆತ್ಮಕಥನಗಳಲ್ಲಿ ಅಕ್ಷರಗಳಾಗಿ ಜೀವ ಪಡೆಯುತ್ತ, ಅನುಭವಗಳ ಸಾಲನ್ನು ಅರುಹುತ್ತ, ಯಾವುದೋ ಒಂದು ಸಂದರ್ಭದಲ್ಲಿ ಅಪೂರ್ಣತೆಯ ಸಂದಿಗ್ಧದಲ್ಲೇ ಪೂರ್ಣ ವಿರಾಮವನ್ನು ಪಡೆಯುತ್ತದೆ. ಅಜ್ಜಿಯ, ಅಮ್ಮನ ಆತ್ಮಕಥನಗಳಲ್ಲೆಲ್ಲ ಮೂಡುವ, ಮಿನುಗುವ, ಮರೆಯಾಗಿ ಇಣುಕುವ, ಮತ್ತೆ ಮತ್ತೆ ಎದುರಾಗುವ, ಢಾಳಾಗಿ ರಾಚುವ ಅಕ್ಷರಗಳೆಲ್ಲ ಒಂದೊಂದು ಅಪ್ರಬುದ್ಧೆಯ, ಅಸಹಾಯಕ ಪ್ರಬುದ್ಧೆಯ ಧ್ವನಿಯಾಗಿ ಕೇಳುಗ, ಓದುಗ ಮನಸುಗಳನ್ನು ಕಾಡುತ್ತ ಪ್ರಶ್ನೆ ಕೇಳುತ್ತವೆ. ಪರಿಹಾರದ ತಲಾಶೆಯಲ್ಲಿ ಸಮಸ್ಯೆಗಳನ್ನು ಇನ್ನಷ್ಟು ಸಂಕೀರ್ಣಗೊಳಿಸುತ್ತದೆ. ಛಾಯಾಚಿತ್ರ ಜೀವ ಪಡೆದು ಕಥೆ ಹೇಳುವಂತೆನಿಸಿತು. ಎಷ್ಟೊಂದು ಆಶ್ಚರ್ಯವಾಗುತ್ತದೆ. ನಮ್ಮ ಅಜ್ಜಿಯಂದಿರ, ಅವರ ಅಮ್ಮಂದಿರ, ಅವರ ಅಜ್ಜಿಯಂದಿರ ಬಾಲ್ಯ-ಯೌವ್ವನವೆಲ್ಲ ಕಾಡ ಬೆಳದಿಂಗಳಂತೆ ಕಳೆದುಹೋದದ್ದು ಇಂಥದ್ದೇ ಮನೆಯ ನಾಲ್ಕು ಗೋಡೆಗಳ ಆವರಣದ ಒಳಗೇ ಅಲ್ಲವೆ ! -ವಿಜಯಲಕ್ಷ್ಮಿ ಶ್ಯಾನ್‌ಭೋಗ್