ಮಹಾನಗರ : ನಗರ ಮತ್ತು ಗ್ರಾಮಾಂತರ ಭಾಗದಲ್ಲಿ ಸಂಚರಿಸುವ ಆಟೋ ರಿಕ್ಷಾ ದರ ಪರಿಷ್ಕರಣೆಗೊಂಡಿದ್ದು, ನೂತನ ದರ ಗುರುವಾರ (ಡಿ. 1)ದಿಂದ ಜಾರಿಗೆ ಬಂದಿದೆ. ನಗರದಲ್ಲಿ ಸಂಚರಿಸುವ ಎಲ್ಲ ಆಟೋ ರಿಕ್ಷಾಗಳಲ್ಲಿ ಹೊಸ ದರ ನಿಗದಿಪಡಿಸಲಾಗಿದ್ದು, ಆ ಮೂಲಕ ಬಾಡಿಗೆ ದರ ನಿಗದಿಪಡಿಸಲಾಗಿದೆ. ಬಹುತೇಕ ರಿಕ್ಷಾಗಳ ಮೀಟರ್‌ಗಳಲ್ಲಿ . ನೂತನ ದರವನ್ನು ಅಳವಡಿಸಲಾಗಿದೆ. ಆ ಸಂಬಂಧಿಸಿದ ಚಾರ್ಟ್‌ಗಳನ್ನು ಆಟೋ ರಿಕ್ಷಾ ಮಾಲಕರಿಗೆ ನೀಡಲಾಗಿದೆ.
ಆಟೋ ರಿಕ್ಷಾ ಬಾಡಿಗೆ ದರ ಪರಿಷ್ಕರಿಸಬೇಕು ಎಂದು ಆಟೋ ಚಾಲಕರದ್ದು ಹಲವು ವರ್ಷಗಳ ಬೇಡಿಕೆ. ಈ ಕುರಿತು ಈ ಹಿಂದೆ ಅನೇಕ ಸಭೆ ನಡೆದರೂ ಒಮ್ಮತದ ತೀರ್ಮಾನ ಆಗಿರಲಿಲ್ಲ. ಸಾರಿಗೆ ಪ್ರಾಧಿಕಾರದ ಅಧ್ಯಕ್ಷ ರಾಗಿರುವ ಜಿಲ್ಲಾಧಿಕಾರಿ (ಪ್ರಭಾರ ಜಿಲ್ಲಾಧಿಕಾರಿಯಾಗಿದ್ದ ಡಾ| ಕುಮಾರ್ ಅವರು) ಅ. 27ರಂದು ಆಟೋ ಪ್ರಯಾಣ ದರವನ್ನು ನ. 15ರಿಂದ ಅನ್ವಯವಾಗುವಂತೆ ಪರಿಷ್ಕರಿಸಿ ಅಧಿ ಸೂಚನೆ ಹೊರಡಿಸಿದ್ದರು. ಆದರೆ ಈ ಪರಿಷ್ಕೃತ ದರ ಬೇಡಿಕೆಗಿಂತ ಕಡಿಮೆ ಇದ್ದುದರಿಂದ ಅಧಿಸೂಚನೆ ಹೊರಡಿಸಿದ ಕ್ಷಣದಿಂದಲೇ ಚಾಲಕ-ಮಾಲಕರ ಇದಕ್ಕೆ ವಿರೋಧ ವ್ಯಕ್ತ ಪಡಿಸಿದ್ದರು. ಆದರೆ ಈ ದರ ಜಾರಿಯಾಗಲಿಲ್ಲ. ಬಳಿಕ ಡಿ. 1ರಿಂದ ಅನ್ವಯವಾಗುವಂತೆ ಹೊರಡಿಸಿದ ಪರಿಷ್ಕೃತ ಅಧಿಸೂಚನೆ ಸದ್ಯ ಪಾಲನೆಯಾಗುತ್ತಿದೆ.
“ಉದಯವಾಣಿ ಸುದಿನ’ ಜತೆ ಮಾತನಾಡಿದ ಮಂಗಳೂರು ನಗರ ಆಟೋ ರಿಕ್ಷಾ ಚಾಲಕ-ಮಾಲಕರ ಒಕ್ಕೂಟದ ಗೌರವ ಸಲಹೆಗಾರ ಅರುಣ್ ಕುಮಾರ್ ಅವರು, “ಜಿಲ್ಲಾಡಳಿತ, ಸಾರಿಗೆ ಇಲಾಖೆ ಪರಿಷ್ಕೃತ ದರವನ್ನು ಪ್ರಕಟಿಸಿದ್ದು, ಅದರಂತೆ ಡಿ. 1ರಿಂದ ಜಾರಿಗೆ ತರಲಾಗಿದೆ. ನೂತನ ದರವು ಮುಂದಿನ ಆದೇಶದವರೆಗೆ ಜಾರಿಯಲ್ಲಿರಲಿದೆ’ ಎಂದಿದ್ದಾರೆ.
ನೂತನ ದರವೆಷ್ಟು?
ಆಟೋ ರಿಕ್ಷಾಗಳ ಪ್ರಯಾಣ ದರವನ್ನು ಡಿ. 1ರಿಂದ ಅನ್ವಯವಾಗುವಂತೆ ಜಿಲ್ಲಾ ಪ್ರಾದೇಶಿಕ ಸಾರಿಗೆ ಪ್ರಾಧಿಕಾರವು ಪರಿಷ್ಕರಿಸಿದೆ. 1.5 ಕಿ.ಮೀ. ವ್ಯಾಪ್ತಿಗೆ ಕನಿಷ್ಠ ದರ 35 ರೂ. (ಗರಿಷ್ಠ ಮೂವರು ಪ್ರಯಾಣಿಕರು), ಅನಂತರ ಪ್ರತೀ ಕಿ.ಮೀ.ಗೆ 20 ರೂ. ನಿಗದಿಪಡಿಸಲಾಗಿದೆ. ಕಾಯುವಿಕೆ ಮೊದಲ 15 ನಿಮಿಷ ಉಚಿತ. ಅನಂತರ 15 ನಿಮಿಷದ ವರೆಗೆ 5 ರೂ. ಇರಲಿದೆ. ಪ್ರಯಾಣಿಕರ ಸರಕಿಗೆ (ಲಗೇಜ್) ಒಬ್ಬ ಪ್ರಯಾಣಿಕ ಕಡ್ಡಾಯವಾಗಿ ಜತೆಗೆ ಇರಬೇಕು. ಮೊದಲ 20 ಕಿ.ಗ್ರಾಂ.ಗಳಿಗೆ ಉಚಿತ ಮತ್ತು ಅನಂತರ ಪ್ರತೀ 10 ಕಿಲೋ ಗ್ರಾಂ ಅಥವಾ ಅದರ ಭಾಗಕ್ಕೆ 5 ರೂ. ಹೆಚ್ಚುವರಿ ನೀಡಬೇಕಾಗಿದೆ. ರಾತ್ರಿ 10ರಿಂದ ಬೆಳಗ್ಗೆ 5ರ ವರೆಗೆ ಮಾತ್ರ ಈ ಮೇಲಿನ ದರದ ಒಂದೂವರೆ ಪಟ್ಟು ಪಡೆಯಲು ಅವಕಾಶ ಇದೆ.