Advertisement

ಸಹಸ್ರ ಸಸಿಗಳಿಗೆ ಜೀವ ಕೊಟ್ಟ ಆಟೋ ಜೀವಿ

06:00 AM Jun 05, 2018 | Team Udayavani |

ವಿಶೇಷ ವರದಿ- ಚಿಕ್ಕಬಳ್ಳಾಪುರ: ಇಲ್ಲೋರ್ವ ಆಟೋ ಚಾಲಕ ತನ್ನ ಬದುಕಿನ ಜಟಕಾಬಂಡಿ ನಡುವೆ ಸಹಸ್ರಾರು ಸಸಿಗಳನ್ನು ಬೆಳೆಸುವ ಮೂಲಕ ಸದ್ದಿಲ್ಲದೇ ಪರಿಸರ ಸಂರಕ್ಷಿಸುವ ಕಾರ್ಯದಲ್ಲಿ ತೊಡಗಿಕೊಂಡು ಮಾದರಿಯಾಗಿದ್ದಾರೆ.

Advertisement

ನಗರದ ಎಚ್‌.ಎಸ್‌.ಗಾರ್ಡನ್‌ ನಿವಾಸಿಯಾಗಿರುವ ಆಟೋ ಚಾಲಕ ಸುಭಾನ್‌ ಬಡತನದ ನಡುವೆಯೂ ಮಹತ್ತರ ಕಾರ್ಯ ನಡೆಸುತ್ತಿದ್ದಾರೆ.

ಸುಭಾನ್‌ಗೆ ಪರಿಸರ ಕಾಳಜಿ ಮೂಡಲು ಕಾರಣ ಇದೆ. 5 ವರ್ಷಗಳ ಹಿಂದೆ ಅಪಘಾತವಾದ ಸಂದರ್ಭದಲ್ಲಿ ಮನೆಯಲ್ಲಿ ಕೂತಿದ್ದ ಸುಭಾನ್‌ಗೆ ತನ್ನ ತಾಯಿ ಮನೆ ಎದುರು ಬೆಳೆಸಿದ್ದ ತರಹೇವಾರಿ ಮರ, ಗಿಡಗಳು ಅಶ್ರಯ ನೀಡಿದ್ದವು. ಅಪಘಾತದಲ್ಲಿ ಕೈ, ಕಾಲುಗಳಿಗೆ ಬಲವಾದ ಪೆಟ್ಟು ಬಿದ್ದ ಸಂದರ್ಭದಲ್ಲಿ ಮನೆಯಿಂದ ಹೊರಗೆ ಬರಲು ಸಾಧ್ಯವಾಗದ ಸುಭಾನ್‌ ವಾಕರ್‌ ಸಹಾಯದಿಂದ ತನ್ನ ಮನೆಯ ಆವರಣದಲ್ಲಿ ಕಾಲಕಳೆಯುತ್ತಿದ್ದ. ತಾಯಿ  ಬೆಳೆಸಿದ್ದ ಬೇವು, ನೇರಳೆ ಮರಗಳ ಕೆಳಗೆ ವಿಶ್ರಾಂತಿ ಪಡೆಯುತ್ತಿದ್ದ ಸಂದರ್ಭದಲ್ಲಿ ಮರಗಳ ಆಶ್ರಯದಲ್ಲಿ ಪಕ್ಷಿಗಳ ನಿನಾದ ಕಂಡು ಪುಳಕಿತಗೊಂಡಿದ್ದ.  ತಾನು ಕೂಡ ಗಿಡಗಳನ್ನು ನೆಟ್ಟು  ಪಕ್ಷಿಗಳಿಗೆ ಆಶ್ರಯ ಕಲ್ಪಿಸುವ ಜೊತೆಗೆ ಸಮಾಜಕ್ಕೆ ತನ್ನದೇ ಆದ ಕೊಡುಗೆ ನೀಡಬೇಕೆಂದು ಆಶಯದೊಂದಿಗೆ ಪರಿಸರ ಬೆಳೆಸುವ ಅಶಯ ಮೊಳಕೆ ಹೊಡೆಯಿತು. ಇದೀಗ ಅದು ಬೃಹದಾಕಾರವಾಗಿ ಬೆಳೆದು ನಗರದ ವಿವಿಧಡೆ ಸುಭಾನ್‌ ಬೆಳೆಸಿರುವ ಮರಗಳು ದೊಡ್ಡಾಗಿ ಹಣ್ಣು, ನೆರಳು ನೀಡುವಷ್ಟರ ಮಟ್ಟಿಗೆ ಬೆಳೆದು ನಿಂತಿವೆ.

10 ಸಾವಿರ ಗಿಡ ನೆ‌ಟ್ಟಿದ್ದಾರೆ: ಮಾಜಿ ರಾಷ್ಟ್ರಪತಿ ಎಪಿಜೆ ಅಬ್ದುಲ್‌ ಕಲಾಂ ಅಭಿಮಾನಿಯಾಗಿರುವ ಸುಭಾನ್‌, ರಾಷ್ಟ್ರೀಯ ಹೆದ್ದಾರಿ, ಸರ್ಕಾರಿ ಕಚೇರಿಗಳ ಖಾಲಿ ಜಾಗಗಳು, ಶಾಲಾ ಕಾಲೇಜುಗಳು, ರಸ್ತೆ ಬದಿ ಖಾಲಿ ಜಾಗಗಳು ಕಾಣಿಸಿದರೂ ಅಲ್ಲಿ ಗಿಡ ನೆಟ್ಟು ಪೋಷಿಸುತ್ತಿದ್ದಾರೆ. ಆಟೋ ಚಾಲನೆ ಸಂದರ್ಭದಲ್ಲಿ ನಾನಾ ಕಡೆ ಸುತ್ತುವ ಇವರು ಖಾಲಿ ಹಾಗೂ ಗಿಡ ನೆಡಲು ಯೋಗ್ಯವಾದ ಸ್ಥಳಗಳನ್ನು ಗುರುತಿಸುತ್ತಾರೆ. ಇವರೇ ಗುಂಡಿ ತೆಗೆದು ಗಿಡ ನೆಟ್ಟು ಪೋಷಿಸುತ್ತಾರೆ. ಇದುವರೆಗೆ 10 ಸಾವಿರಕ್ಕೂ ಹೆಚ್ಚು ಸಸಿ ನೆಟ್ಟಿದ್ದಾರೆ.

ಸ್ವಂತ ದುಡಿಮೆಯಲ್ಲಿ ಸಸಿಗಳ ಖರೀದಿ
ಆಟೋ ಚಾಲನೆಯನ್ನೇ ವೃತ್ತಿಯನ್ನಾಗಿಸಿಕೊಂಡಿರುವ ಸುಭಾನ್‌ ತನ್ನ ದುಡಿಮೆಯಲ್ಲಿ ಶೇ.20 ರಷ್ಟು ಹಾಗೂ ಸ್ನೇಹಿತರ ಸಹಾಯದೊಂದಿಗೆ ಗಿಡ ನೆಡುವ ಕಾರ್ಯಕ್ಕೆ ಹಣ  ವಿನಿಯೋಗಿಸುತ್ತಿದ್ದಾರೆ. ಖಾಸಗಿ ನರ್ಸರಿ ಫಾರಂಗಳಲ್ಲಿ ಬೇಕಾದ ಸಸಿಗಳನ್ನು ಹಣ ಕೊಟ್ಟು ತರುತ್ತಾರೆ. ಇದರೊಂದಿಗೆ ಸಸಿ ವಿತರಣೆ ಮಾಡುವ ಸ್ಥಳಗಳ ಬಗ್ಗೆ ಮಾಹಿತಿ ಪಡೆದು, ಸಸಿಗಳನ್ನು ಪಡೆಯುತ್ತಾರೆ. 15 ರೂ.ಗಳಿಂದ 80 ರೂ.ವರೆಗೆ ಬೆಳೆ ಬಾಳುವ ಗಿಡಗಳನ್ನು ಖರೀದಿಸಿ ನೆಡುತ್ತಾರೆ. ಗಿಡಗಳಿಗೆ ತನ್ನ ಆಟೋದಲ್ಲಿ ನೀರನ್ನು ಕೊಂಡೊಯ್ದು ನೀರುಣಿಸಿ, ಮೇಕೆ ದನಗಳು ತಿನ್ನದಂತೆ ರಕ್ಷಣೆ ಕಾರ್ಯ ಕೈಗೊಂಡಿದ್ದಾರೆ.

Advertisement

ಭವಿಷ್ಯದ ಪೀಳಿಗೆ ಉತ್ತಮವಾಗಿರಬೇಕಾದರೆ ಪರಿಸರ ಬೆಳೆಸುವುದು ಅಗತ್ಯ. ತನಗೆ ಅಪಘಾತವಾದಾಗ ಮನೆಯ ಮುಂದಿದ್ದ ಮರಗಳ ಅಶ್ರಯ ನೀಡಿದವು. ಆಗಾಗಿ ನಾನು ಒಂದಿಷ್ಟು ಪರಿಸರ ಬೆಳೆಸಬೇಕೆಂಬ ನಿಟ್ಟಿನಲ್ಲಿ ಕಳೆದ 5 ವರ್ಷದಿಂದ ಸಸಿಗಳನ್ನು ನೆಡುತ್ತಿದ್ದೇನೆ.
– ಸುಭಾನ್‌, ಆಟೋ ಚಾಲಕ

Advertisement

Udayavani is now on Telegram. Click here to join our channel and stay updated with the latest news.

Next