Advertisement

ವಸುಂಧರಾರಿಂದ ಲೇಖಕಿಯರ ಸಂಘ ಕ್ರಿಯಾಶೀಲ

12:48 AM Jul 16, 2019 | Lakshmi GovindaRaj |

ಬೆಂಗಳೂರು: ಬಹುಪ್ರತಿಭೆಯ ಡಾ.ವಸುಂಧರಾ ಭೂಪತಿ, ಕರ್ನಾಟಕ ಲೇಖಕಿಯರ ಸಂಘಕ್ಕೆ ವಿದ್ಯುನ್ಮಾನ ಹಾಗೂ ಅಂತರ್ಜಾಲದ ಸ್ಪರ್ಶ ನೀಡಿ ಸಂಘವನ್ನು ಕ್ರಿಯಾಶೀಲಗೊಳಿಸಿದವರು ಎಂದು ಹಿರಿಯ ಲೇಖಕ ಡಾ.ಎಂ.ಎಚ್‌.ಕೃಷ್ಣಯ್ಯ ಹೇಳಿದರು.

Advertisement

ಸಂಸ್ಕೃತಿ ಬುಕ್‌ ಪ್ಯಾರಡೈಸ್‌ ಹಾಗೂ ಕರ್ನಾಟಕ ವಿಕಾಸರಂಗದ ಸಹಯೋಗದಲ್ಲಿ ನಯನ ಸಭಾಂಗಣದಲ್ಲಿ ಸೋಮವಾರ ಡಾ. ವಸುಂಧರಾ ಭೂಪತಿ ಅವರ “ಜೀವಸೆಲೆ’ ಸಂದರ್ಶನ ಹಾಗೂ ವ್ಯಕ್ತಿಚಿತ್ರಗಳನ್ನೊಳಗೊಂಡ ಪುಸ್ತಕ ಲೋಕಾರ್ಪಣೆ ಮಾಡಿ ಮಾತನಾಡಿದರು.

ವಸುಂಧರಾ ಭೂಪತಿ ಆಯುರ್ವೇದ ವೈದ್ಯೆಯಾಗಿದ್ದುಕೊಂಡು, ಸಾಹಿತ್ಯ ಕೃಷಿ ಮಾಡಿ 71 ಮಹತ್ವದ ಕೃತಿಗಳನ್ನು ರಚಿಸಿದ್ದಾರೆ. ಕರ್ನಾಟಕ ಲೇಖಕಿಯರ ಸಂಘದ ಅಧ್ಯಕ್ಷರಾಗಿದ್ದಾಗ ಸಂಘವನ್ನು ಕ್ರಿಯಾಶೀಲಗೊಳಿಸಿದರು. ಸಂಘದಿಂದ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಿ ಲೇಖಕಿಯರನ್ನು ಉತ್ತೇಜಿಸುವ ಕಾರ್ಯ ಮಾಡಿದರು. ಸದ್ಯ ಅವರು ಪುಸ್ತಕ ಪ್ರಾಧಿಕಾರದ ಅಧ್ಯಕ್ಷೆಯಾಗಿ ಅಲ್ಲಿ ಕೂಡ ಉತ್ತಮ ರೀತಿಯಲ್ಲಿ ಕಾರ್ಯ ನಿರ್ವಹಿಸುತ್ತಿರುವುದು ಅವರ ಕ್ರಿಯಾಶೀಲತೆಗೆ ಸಾಕ್ಷಿಯಾಗಿದೆ ಎಂದರು.

ಸಂದರ್ಶನ ಯಾವ ರೀತಿ ಇರಬೇಕೆಂಬುದಕ್ಕೆ ವಸುಂಧರಾ ಅವರು ಮಾಡಿದ ಸಂದರ್ಶನಗಳು ಮಾದರಿಯಾಗಿವೆ. ಕನ್ನಡದ ಹಿರಿಯ ಹಾಗೂ ಕಿರಿಯ ಸಾಹಿತಿಗಳ ಜೀವನದ ವಿಶೇಷ ಹಾಗೂ ಅಪರೂಪದ ಘಟನೆಗಳನ್ನು ತಮ್ಮ ಕೃತಿಯಲ್ಲಿ ಕಟ್ಟಿಕೊಟ್ಟಿದ್ದಾರೆ ಎಂದು ತಿಳಿಸಿದರು.

ಜೀವಸೆಲೆ ಎಂದರೆ ಅದು ಚೈತನ್ಯದ, ಬದುಕಿನ ಮೂಲ. ಚೈತನ್ಯದ ಅಣುಗಳ ಸಂಯೋಜನೆಯು ಚಿಮ್ಮುವಂಥದ್ದು. ಈ ಕೃತಿ ಶುಭ್ರ ವ್ಯಕ್ತಿತ್ವದಿಂದ ಮುಂದಿನ ಪೀಳಿಗೆಗೆ ಆದರ್ಶವನ್ನು ಕಟ್ಟಿಕೊಡುತ್ತದೆ. ಸಾಹಿತ್ಯ, ಸಾಂಸ್ಕೃತಿಕ ಲೋಕದ ಮಹನಿಯರ ಜೀವನ, ಆಹಾರ ಪದ್ಧತಿ ತಿಳಿಸಿಕೊಡುತ್ತದೆ. ಆಯುರ್ವೇದದ ಹಿರಿಮೆ ಕೃತಿಯಿಂದ ವೇದ್ಯವಾಗುತ್ತದೆ ಎಂದು ನುಡಿದರು.

Advertisement

ಹಿರಿಯ ಪತ್ರಕರ್ತೆ ಆರ್‌.ಪೂರ್ಣಿಮಾ ಮಾತನಾಡಿ, ವ ಮಹಿಳಾ ಕತೃìತ್ವಶಕ್ತಿ, ಸಾಮರ್ಥ್ಯ ನೋಡಿಯೇ ಮಲ್ಟಿ ಟಾಸ್ಕಿಂಗ್‌ ಎಂಬ ಪದವನ್ನು ಸೃಷ್ಟಿಸಿದ್ದಾರೆ ಎಂದೆನಿಸುತ್ತದೆ. ಮನೆ, ಕುಟುಂಬ, ವೃತ್ತಿಯ ಜವಾಬ್ದಾರಿ, ಒತ್ತಡದ ಮಧ್ಯೆಯೂ 70ಕ್ಕೂ ಹೆಚ್ಚು ಪುಸ್ತಕಗಳನ್ನು ಬರೆದಿರುವುದು ವಸುಂಧರಾ ಭೂಪತಿ ಹೆಗ್ಗಳಿಕೆ ಎಂದರು.

ಕೃತಿ ಸಮಕಾಲೀನ ವಿಚಾರಗಳ ದಾಖಲೀಕರಣವಾಗಿದೆ. ಮೂರು ಪೀಳಿಗೆ ಸಾಧಕರ ಜೀವನವನ್ನು ಅವರು ಓದುಗರಿಗೆ ನೀಡುತ್ತಾರೆ. ಸಂದರ್ಶನ ಸುಲಭವಲ್ಲ. ಪ್ರತಿ ವ್ಯಕ್ತಿಗೂ ಅವರ ಜೀವನ, ಸಾಧನೆಯನ್ನು ಪರಿಗಣಿಸಿ ಪ್ರಶ್ನೆಗಳನ್ನು ಕೇಳಬೇಕಾಗುತ್ತದೆ. ವಸುಂಧರಾ ಸೂಕ್ತವಾದ ಪ್ರಶ್ನೆಗಳನ್ನು ಕೇಳಿ ಮಾಹಿತಿ ಪಡೆದುಕೊಂಡು ಪ್ರಮುಖ ಸಂಗತಿಗಳನ್ನು ದಾಖಲಿಸಿದ್ದರೆ ಎಂದು ತಿಳಿಸಿದರು.

ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಚುಟುಕು ಕವಿ ಎಚ್‌.ಡುಂಡಿರಾಜ್‌ ಮಾತನಾಡಿ, ಸಾಹಿತಿಗಳ ಜೀವನದ ಹಲವು ವಿಶಿಷ್ಟ ಸಂಗತಿಗಳನ್ನು ಪುಸ್ತಕ ತಿಳಿಸುತ್ತದೆ. ಆಯುರ್ವೇದ ಮಹತ್ವವನ್ನು ತಿಳಿಯುವುದರೊಂದಿಗೆ ಹಿರಿಯ ಸಾಹಿತಿಗಳ ಆಹಾರ ಪದ್ಧತಿ, ಆರೋಗ್ಯ ರಕ್ಷಣೆಗೆ ಅವರು ಅನುಸರಿಸುತ್ತಿದ್ದ ಕ್ರಮಗಳ ಬಗ್ಗೆ ಮಾಹಿತಿ ಇರುವುದರಿಂದ ಪುಸ್ತಕದ ಓದು ಖುಷಿ ಕೊಡುತ್ತದೆ. ವೈದ್ಯೆಯಾಗಿದ್ದುಕೊಂಡು ಕನ್ನಡ ಸಾಹಿತ್ಯವನ್ನು ಸಿರಿವಂತಗೊಳಿಸುತ್ತಿರುವ ಡಾ| ವಸುಂಧರಾ ಭೂಪತಿ ಅವರ ಕಾರ್ಯ ಶ್ಲಾಘನೀಯ. ಇಂಥ ಕೃತಿಗಳ ಸಂಖ್ಯೆ ಹೆಚ್ಚಬೇಕು ಎಂದು ಆಶಿಸಿದರು.

ಹಿರಿಯ ಸಾಹಿತಿಗಳ ಜೀವನದಲ್ಲಿನ ಕೆಲವು ಹಾಸ್ಯ ಪ್ರಸಂಗಗಳನ್ನು ಹಾಗೂ ಹನಿಗವನಗಳನ್ನು ಹೇಳುವ ಮೂಲಕ ಪ್ರೇಕ್ಷಕರಲ್ಲಿ ನಗೆ ಉಕ್ಕಿಸಿದರು. “ರಾವಣನ ಹೆಂಡತಿ ಮಂಡೋದರಿ, ಕನ್ನಡ ಪುಸ್ತಕಗಳನ್ನು ಕೊಂಡೋದಿರಿ’ ಎಂದು ಹನಿಗವನವನ್ನು ಹೇಳುವ ಮೂಲಕ ಕನ್ನಡಿಗರು ಪುಸ್ತಕ ಖರೀದಿಸಿ ಓದುವ ಪರಿಪಾಠ ಬೆಳೆಸಿಕೊಳ್ಳಬೇಕೆಂದು ತಿಳಿಸಿದರು.

ವ.ಚ.ಚನ್ನೇಗೌಡ ಅಧ್ಯಕ್ಷತೆ ವಹಿಸಿದ್ದರು. ವೇದಿಕೆ ಮೇಲೆ ಕೃತಿಯ ಲೇಖಕಿ ಡಾ| ವಸುಂಧರಾ ಭೂಪತಿ, ಸಂಸ್ಕೃತಿ ಸುಬ್ರಮಣ್ಯ ಇದ್ದರು. ಕಾರ್ಯಕ್ರಮದಲ್ಲಿ ಸಿ.ಆರ್‌.ಚಂದ್ರಶೇಖರ, ಮಾಜಿ ಸಚಿವೆ ಬಿ.ಟಿ.ಲಲಿತಾ ನಾಯಕ, ನೇಮಿಚಂದ್ರ ಮೊದಲಾದವರು ಪಾಲ್ಗೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next