ರಾಮನಗರ: ತಾಲೂಕಿನ ಕೂಟಗಲ್ ಬಳಿ ಇರುಳಿಗರಿಗೆ ಉಚಿತ ನಿವೇಶನ ನೀಡಲು ಮೀನಮೇಷ ಎಣಿಸುತ್ತಿದ್ದ ಅಧಿಕಾರಿಗಳು ಗುರುವಾರ ಬೆಳಗ್ಗೆ ಏಕಾಏಕಿ ಧಾವಿಸಿ ಬಂದು ಕೂಟಗಲ್ ಸರ್ವೆ ಸಂಖ್ಯೆ 94ರಲ್ಲಿ 2 ಎಕರೆ ಭೂಮಿಯನ್ನು ಸರ್ವೆ ಮಾಡಿ ಗುರುತಿಸಿದ್ದಾರೆ.
ಜೆಸಿಬಿ ಯಂತ್ರದ ಮೂಲಕ ಭೂಮಿ ಮಟ್ಟ ಮಾಡುತ್ತಿದ್ದಾರೆ. ಅತಿ ಶೀಘ್ರದಲ್ಲೇ ಇರುಳಿಗ ಕುಟುಂಬಗಳಿಗೆ ನಿವೇಶನ ಗುರ್ತಿಸಿ ಕೊಡುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.
ಬಲಿಗಾಗಿ ಕಾಯುತ್ತಿದ್ದರೇ?: ಹೀಗೆ ಅಧಿಕಾರಿಗಳಿಗೆ ಇದ್ದಕ್ಕಿದ್ದ ಹಾಗೆ ಜ್ಞಾನೋದಯವಾಗಲು ಕಾರಣ ವಿದೆ. ಕೂಟಗಲ್ ಗ್ರಾಮದ ಬಳಿಯ ಇರುಳಿಗ ಕುಟುಂಬಗಳ ಪೈಕಿ ವಾಸವಿದ್ದ ರತ್ನಗಿರಯ್ಯ (50) ಮೃತಪಟ್ಟಿದ್ದಾರೆ. ಮಳೆನೀರು ಗುಡಿಸಲುಗಳ ಮೂಲಕವೇ ಹರಿಯುವುದರಿಂದ ಬುಧವಾರ ರಾತ್ರಿ ಗುಡಿಸಲಿನಲ್ಲಿ ತೂಗುಯ್ನಾಲೆ ರೀತಿ ನಿರ್ಮಿಸಿಕೊಂಡು ಮಲಗಿ ದ್ದಾರೆ. ಆದರೆ ರಾತ್ರಿ ನೆಲಕ್ಕುರುಳಿ ನಿಧನ ಹೊಂದಿದ್ದಾರೆ.
ಇದನ್ನೂ ಓದಿ:- ಹೈಸ್ಕೂಲ್ ಹೊಸ ಕಟ್ಟಡಕ್ಕಿಲ್ಲ ಉದ್ಘಾಟನೆ ಭಾಗ್ಯ!
ಈ ಧಾರುಣ ಸಾವಿಗೆ ರೋಸಿಹೋದ ಇರುಳಿಗರು ಡೀಸಿ ಕಚೇರಿ ಮುಂಭಾಗ ಶವವಿಟ್ಟು ಪ್ರತಿ ಭಟಿಸುವುದಾಗಿ ಎಚ್ಚರಿಸಿ ದ್ದಾರೆ. ಜಿಲ್ಲಾಧಿಕಾರಿಗಳ ಸೂಚನೆ ಮೇರೆಗೆ ತಾಲೂಕು ಆಡಳಿತದ ಅಧಿಕಾರಿಗಳು ಜಿನುಗುತ್ತಿರುವ ಮಳೆ ನಡುವೆಯು ಕೂಟಗಲ್‌ಗೆ ಧಾವಿಸಿ ಸರ್ವೆ ಸಂಖ್ಯೆ 94ರಲ್ಲಿ 2 ಎಕರೆ ಭೂಮಿ ಗುರುತಿಸಿದ್ದಾರೆ. ಜೆಸಿಬಿ ಮೂಲಕ ಭೂಮಿಹದ ಮಾಡಿದ್ದಾರೆ. ಅತಿ ಶೀಘ್ರದಲ್ಲೇ ಈ ಭೂಮಿಯನ್ನು ಇರುಳಿಗ ಕುಟುಂಬಗಳಿಗೆ ವಿತರಿಸುವುದಾಗಿ ತಿಳಿಸಿದ್ದಾರೆ.
ಅಧಿಕಾರಿಗಳು ನೀಡಿದ ಭರವಸೆ ಹಿನ್ನೆಲೆ ರತ್ನ ಗಿರಯ್ಯ ಅಂತ್ಯಸಂಸ್ಕಾರ ಶುಕ್ರವಾರ ಬೆಳಗ್ಗೆ ನಡೆಸುವುದಾಗಿ ಇರುಳಿಗ ಕುಟುಂಬಗಳ ಪರವಾಗಿ ಸಂಶೋಧನಾ ವಿದ್ಯಾರ್ಥಿ ಎಸ್.ರುದ್ರೇಶ್ವರ, ಇರುಳಿಗ ಪ್ರಮುಖರಾದ ಕೃಷ್ಣಮೂರ್ತಿ, ಕೆ.ವಿ. ಕೃಷ್ಣಮೂರ್ತಿ, ಎಸ್.ರಾಜು ಅಂತ್ಯ ಸಂಸ್ಕಾರ ಪತ್ರಿಕೆಗೆ ಮಾಹಿತಿ ತಿಳಿಸಿದ್ದಾರೆ. ಪತ್ರಿಕೆ ವರದಿ ಬಿತ್ತರಿಸಿತ್ತು: ಕೂಟಗಲ್ ಬಳಿಯ ಇರುಳಿಗ ಕುಟುಂಬಗಳ ಧಾರುಣ ಸ್ಥಿತಿಯ ಬಗ್ಗೆ “ನಿತ್ಯ ನರಕದಲ್ಲಿ ಇರುಳಿಗರ ಬದುಕು” ಎಂಬ ಶೀರ್ಷಿಕೆಯಡಿಯಲ್ಲಿ ಉದಯವಾಣಿ ವರದಿ ಮಾಡಿತ್ತು.