Advertisement

ಪ್ಲಾಸ್ಟಿಕ್‌ ಬಳಕೆಗೆ ಕಡಿವಾಣ ಆಸ್ಟ್ರೇಲಿಯಾದ ಮಹತ್ವದ ಹೆಜ್ಜೆ

11:37 PM Nov 05, 2022 | Team Udayavani |

ಪ್ಲಾಸ್ಟಿಕ್‌ ಬಳಕೆ ನಿಷೇಧದ ಕುರಿತು ಇತ್ತೀಚೆಗೆ ಸಾಕಷ್ಟು ಚರ್ಚೆಗಳಾಗುತ್ತಿವೆ. ಭಾರತದ ಸೇರಿದಂತೆ ಹಲವು ರಾಷ್ಟ್ರಗಳಲ್ಲಿ ಪ್ಲಾಸ್ಟಿಕ್‌ ಬಳಕೆಗೆ ನಿಷೇಧ ಹೇರಲಾಗಿದ್ದರೂ ಅದನ್ನು ಸರಿಯಾಗಿ ಅನುಷ್ಠಾನಗೊಳಿಸುವಲ್ಲಿ ಸೋಲುತ್ತಿವೆ. ಆಸ್ಟ್ರೇಲಿಯಾದಲ್ಲಿ 1989ರಿಂದ ಈ ನಿಟ್ಟಿನಲ್ಲಿ ಹಲವು ಉಪಕ್ರಮಗಳನ್ನು ಅನುಸರಿಸಲಾಗುತ್ತಿದ್ದು, ಈಗ ದೃಢ ಹೆಜ್ಜೆಯನ್ನಿಟ್ಟಿದೆ. ಜನಸಂಖ್ಯೆ ಹೆಚ್ಚಿರುವ ರಾಜ್ಯದಲ್ಲಿ ಏಕ ಬಳಕೆಯ ಪ್ಲಾಸ್ಟಿಕ್‌ಗಳಿಗೆ ಸಂಪೂರ್ಣ ನಿಷೇಧ ಹೇರಿದ್ದು ಹಂತಹಂತವಾಗಿ ಉಳಿದ ರಾಜ್ಯಗಳಿಗೆ ಇದು ವಿಸ್ತರಣೆಯಾಗಲಿದೆ. ಸದ್ಯದ ಯೋಜನೆಯಂತೆ ಎಲ್ಲವೂ ವ್ಯವಸ್ಥಿತವಾಗಿ ಅನುಷ್ಠಾನಕ್ಕೆ ಬಂದದ್ದೇ ಆದಲ್ಲಿ ಸದ್ಯೋಭವಿಷ್ಯದಲ್ಲಿ ಆಸ್ಟ್ರೇಲಿಯಾ ಸಂಪೂರ್ಣ ಪ್ಲಾಸ್ಟಿಕ್‌ ಮುಕ್ತ ದೇಶವಾಗಲಿದೆ.

Advertisement

ಎಲ್ಲಿ?
ಪ್ಲಾಸ್ಟಿಕ್‌ ಬಳಕೆಯನ್ನು ಸಂಪೂರ್ಣವಾಗಿ ನಿಷೇಧಿಸುವ ಸಲುವಾಗಿ ಐದು ವರ್ಷಗಳ ಮಾರ್ಗಸೂಚಿ ಅಳವಡಿಸಿರುವ ಆಸ್ಟ್ರೇಲಿಯಾದಲ್ಲಿ ಕಳೆದ ಕೆಲವು ವರ್ಷ ಗಳಿಂದ ಈ ದಿಸೆಯಲ್ಲಿ ನಿರಂತರವಾಗಿ ಪ್ಲಾಸ್ಟಿಕ್‌ ಬಳಕೆಗೆ ಕಡಿವಾಣ ಹಾಕಲು ವಿವಿಧ ಕ್ರಮಗಳನ್ನು ಕೈಗೊಳ್ಳುತ್ತ ಬರಲಾಗಿದೆ. ಇದೀಗ ದೇಶವನ್ನು ಸಂಪೂರ್ಣವಾಗಿ ಪ್ಲಾಸ್ಟಿಕ್‌ ಮುಕ್ತವನ್ನಾಗಿಸುವ ದಿಸೆಯಲ್ಲಿ ಮತ್ತೊಂದು ಮಹತ್ವದ ಹೆಜ್ಜೆಯನ್ನಿರಿಸಿದೆ.

ಏನು?
ಆಸ್ಟ್ರೇಲಿಯಾದಲ್ಲಿ 2018ರಿಂದಲೇ ಪ್ಲಾಸ್ಟಿಕ್‌ ಚೀಲಗಳನ್ನು ನಿಷೇಧಿಸಲಾಗಿತ್ತು. ಈಗ ಏಕ ಬಳಕೆಯ ಪ್ಲಾಸ್ಟಿಕ್‌ ಉತ್ಪನ್ನಗಳ ಸರದಿ. ದೇಶದ ಶೇ. 50ಕ್ಕೂ ಹೆಚ್ಚು ರಾಜ್ಯಗಳಲ್ಲಿ ಈಗಾಗಲೇ ಬಹುತೇಕ ಏಕ ಬಳಕೆಯ ಪ್ಲಾಸ್ಟಿಕ್‌ಗಳನ್ನು ನಿಷೇಧಿಸಲಾಗಿದೆ. ಇದರೊಂದಿಗೆ ಈಗ ಸ್ಟ್ರಾ, ಕಟ್ಲರಿ ಸಹಿತ ಇನ್ನು ಹಲವಾರು ಪ್ಲಾಸ್ಟಿಕ್‌ ಉತ್ಪನ್ನಗಳನ್ನು ಈ ಪಟ್ಟಿಗೆ ಸೇರಿಸಲಾಗಿದೆ. ಸೂಕ್ಷ್ಮ ಪ್ಲಾಸ್ಟಿಕ್‌ ಕಣಗಳಿಂದ ಉಂಟಾಗುವ ತ್ಯಾಜ್ಯವನ್ನು ಕಡಿಮೆ ಮಾಡುವ ಸಲುವಾಗಿ ಹೆಚ್ಚು ಜನ ಸಂಖ್ಯೆ ಹೊಂದಿರುವ ನ್ಯೂ ಸೌತ್‌ ವೇಲ್ಸ್‌ ನಲ್ಲಿ ಇವುಗಳ ಬಳಕೆಗೆ ಕಳೆದ ಮಂಗಳವಾರ ದಿಂದ ಸಂಪೂರ್ಣ ಕಡಿವಾಣ ಹಾಕಲು ಕ್ರಮಕೈಗೊಳ್ಳಲಾಗಿದೆ.

ಹೇಗೆ?
1989ರಲ್ಲಿ ಕ್ಲೀನ್‌ ಅಪ್‌ ಸಿಡ್ನಿ ಹಾರ್ಬರ್‌ ಅಭಿಯಾನವನ್ನು ಪ್ರಾರಂಭಿಸಿದ ಇಯಾನ್‌ ಕೀರ್ನಾನ್‌ ಅವರ ತಂಡ ಪ್ರಪಂಚದ ಅತ್ಯಂತ ಪ್ರಸಿದ್ಧ ಜಲ ಮಾರ್ಗಗಳ ತಾಜ್ಯವನ್ನು ನಿಭಾಯಿ ಸುವ ನಿಟ್ಟಿನಲ್ಲಿ ಪ್ರಯತ್ನ ಪ್ರಾರಂಭಿ ಸಿತು. ಇದಕ್ಕೆ ಯಾರೂ ಬರಲಾರರು ಎಂದು ಯೋಚಿಸು ತ್ತಿದ್ದ ಅವರಿಗೆ ಸಿಡ್ನಿ ಭಾಗದ ಸುಮಾರು 40 ಸಾವಿರಕ್ಕೂ ಹೆಚ್ಚು ಕೈಜೋಡಿಸಿದ್ದು ಅಚ್ಚರಿ ಉಂಟು ಮಾಡಿತ್ತು. ವರ್ಷದ ಬಳಿಕ ಇದು ರಾಷ್ಟ್ರೀಯ ಕಾರ್ಯಕ್ರಮ ವಾಗಿ ಬದಲಾಯಿತು ಮತ್ತು ಕ್ಲೀನ್‌ ಅಪ್‌ ಆಸ್ಟ್ರೇಲಿಯಾ ಡೇ ಅನ್ನು ಆಚರಿಸಲು ಪ್ರಾರಂಭಿಸಲಾಯಿತು.

ಯಾವಾಗ?
ಪರಿಸರದೊಂದಿಗೆ ಮಾನವನ ಬಾಂಧವ್ಯ ಹೇಗಿದೆ ಎನ್ನುವ ಕುತೂಹಲ ಹೊಂದಿದ್ದ ಇಯಾನ್‌ ಕೀರ್ನಾನ್‌ ಪ್ರಪಂಚದಾದ್ಯಂತ ಸಂಚರಿಸುತ್ತಿದ್ದರು. ಈ ವೇಳೆ ಅವರು ಪರಿಸರ ಮಾಲಿನ್ಯವು ಅತೀ ಹೆಚ್ಚಾಗಿ ಪ್ಲಾಸ್ಟಿಕ್‌ನಿಂದಲೇ ಆಗುತ್ತಿದೆ ಎಂದರಿತರು. 1980ರ ದಶಕದಲ್ಲಿ ಅಟ್ಲಾಂಟಿಕಾ ಮಹಾಸಾಗರದ ಸರ್ಗಾಸೋ ಸಮುದ್ರದ ನೀರಿನಲ್ಲಿ ಭಾರೀ ಪ್ರಮಾಣದ ಪ್ಲಾಸ್ಟಿಕ್‌ ತ್ಯಾಜ್ಯಗಳನ್ನು ಕಂಡು ದಂಗಾ ದರು. ಹೀಗಾಗಿ ಈ ನಿಟ್ಟಿನಲ್ಲಿ ಏನಾದರೂ ಕ್ರಮಕೈಗೊಳ್ಳಬೇಕು ಎನ್ನುವ ಇಚ್ಛೆ ಅವರಲ್ಲಿ ಪ್ರಬಲವಾಗಿ ಬೆಳೆಯಿತು.

Advertisement

ಉದ್ದೇಶ ಏನು?
ಕ್ಲೀನ್‌ ಅಪ್‌ ಆಸ್ಟ್ರೇಲಿಯಾ ಡೇ ಯಲ್ಲಿ ಪಾಲ್ಗೊಳ್ಳುವವರಿಗೆ ಯಾರು ಏನು ಮಾಡಬೇಕು ಎಂದು ಹೇಳುವುದಿಲ್ಲ. ಆಸ್ಟ್ರೇಲಿಯಾವನ್ನು ಸ್ವತ್ಛಗೊಳಿಸುವ ಅಧಿಕಾರವನ್ನು ಮಾತ್ರ ನೀಡಲಾಗುತ್ತದೆ. ಎಲ್ಲಿ, ಹೇಗೆ ಎಂಬುದನ್ನು ಸ್ವಯಂ ಸೇವಕರೇ ನಿರ್ಧರಿಸಬೇಕು. ಅಗತ್ಯ ಸಾಮಗ್ರಿಗಳನ್ನು ಮಾತ್ರ ನೀಡಲಾಗುತ್ತದೆ. ಇದು ವರ್ಷಂಪ್ರತಿ ಮಿಲಿಯನ್‌ ಸ್ವಯಂಸೇವಕ ತ್ಯಾಜ್ಯ ಯೋಧರನ್ನು ಆಕರ್ಷಿಸುತ್ತಿದೆ. ಇದರ ಮುಖ್ಯ ಉದ್ದೇಶ ಏಕ ಬಳಕೆಯ ಪ್ಲಾಸ್ಟಿಕ್‌ನಿಂದ ಉಂಟಾಗುವ ಸಮಸ್ಯೆಗಳನ್ನು ಜನರೇ ಅರ್ಥ ಮಾಡಿಕೊಳ್ಳಬೇಕು ಎಂದಾಗಿದೆ. ಆದರೆ ವಿಪರ್ಯಾಸ ಎಂದರೆ ಈ ಪ್ಲಾಸ್ಟಿಕ್‌ನಿಂದ ಉಂಟಾಗುವ ಸಮಸ್ಯೆಗಳ ಬಗ್ಗೆ ಅರಿವಿದ್ದರೂ ಇಂದಿಗೂ ಪ್ಲಾಸ್ಟಿಕ್‌ ಉತ್ಪಾದನೆಯಾ ಗುತ್ತಿದೆ ಮತ್ತು ಅದನ್ನು ಬಳಸಲಾಗುತ್ತಿದೆ.

ಯಾವ ಸ್ಥಾನ?
ಪ್ಲಾಸ್ಟಿಕ್‌ ತ್ಯಾಜ್ಯ ನಿರ್ವಹಣೆಯಲ್ಲಿ ವಿಶ್ವದ 25 ರಾಷ್ಟ್ರಗಳ ಪೈಕಿ ಆಸ್ಟ್ರೇಲಿಯಾವು 7ನೇ ಸ್ಥಾನದಲ್ಲಿದೆ. ಬಳಿಕ ಯುರೋಪಿಯನ್‌ ರಾಷ್ಟ್ರಗಳು, ಜಪಾನ್‌, ಯುಕೆ, ಯುಎಸ್‌ ಇದೆ. ಸುರಕ್ಷಿತ ವಿಧಾನದಲ್ಲಿ ಪ್ಲಾಸ್ಟಿಕ್‌ ಬಳಕೆ ಮತ್ತು ಜಾಗೃತಿ ಮೂಡಿಸಲ್ಲಿ ಆಸ್ಟ್ರೇಲಿಯಾ ಪ್ರಥಮ ಸ್ಥಾನದಲ್ಲಿದೆ. ಪ್ಲಾಸ್ಟಿಕ್‌ ತ್ಯಾಜ್ಯಗಳ ಸಮರ್ಥ ಸಂಗ್ರಹ ಮತ್ತು ವಿಂಗಡಣೆಯಲ್ಲಿ 16ನೇ ಸ್ಥಾನದಲ್ಲಿದೆ ಎಂದು ಅಂಕಿಅಂಶಗಳು ದೃಢಪಡಿಸಿವೆ.

ಯಾಕೆ?
ಆಸ್ಟ್ರೇಲಿಯಾದ ಮೂರನೇ ಒಂದರಷ್ಟು ಜನರು ನ್ಯೂ ಸೌತ್‌ ವೇಲ್ಸ್‌ನಲ್ಲಿ ವಾಸಿಸುತ್ತಿದ್ದಾರೆ. ಇಲ್ಲಿ ಪ್ಲಾಸ್ಟಿಕ್‌ ಬಳಕೆ ಮೇಲೆ ನಿಯಂತ್ರಣ ಹೇರುವುದು ಬಹುತೇಕ ಸವಾಲಿನ ಕೆಲಸ. ಆದರೆ ಇಲ್ಲಿನ ಪರಿಸರ ಸಚಿವರಾದ ಜೇಮ್ಸ್‌ ಗ್ರಿಫಿನ್‌ ಅವರು ಈ ಸವಾಲನ್ನು ಸ್ವೀಕರಿಸಿದ್ದಾರೆ. ಸಾಗರಗಳಲ್ಲಿರುವ ಪ್ಲಾಸ್ಟಿಕ್‌ ಪ್ರಮಾಣವು 2050ರ ವೇಳೆಗೆ ಮೀನಿನ ಪ್ರಮಾಣವನ್ನೇ ಮೀರಿಸುತ್ತದೆ. ಇದು ಭಯಾನಕ ಮುನ್ಸೂಚನೆ. ಹೀಗಾಗಿ ಈ ನಿಟ್ಟಿನಲ್ಲಿ ಈಗಲೇ ನಾವು ಕಠಿನ ನಿರ್ಧಾರ ಕೈಗೊಂಡರೆ ಭವಿಷ್ಯ ಸುಂದರವಾಗುವುದು ಎಂದಿರುವ ಅವರು, ಮುಂದಿನ 20 ವರ್ಷಗಳಲ್ಲಿ ಪರಿಸರಕ್ಕೆ ಸೇರಬಹುದಾದ 2.7 ಬಿಲಿಯನ್‌ ಪ್ಲಾಸ್ಟಿಕ್‌ ಉತ್ಪನ್ನಗಳಿಗೆ ನಿಷೇಧ ಹೇರುವುದಾಗಿ ಘೋಷಿಸಿದ್ದಾರೆ.

ಯಾರು?
ಅತೀ ಹೆಚ್ಚು ಪ್ಲಾಸ್ಟಿಕ್‌ ತ್ಯಾಜ್ಯ ಉತ್ಪಾದಿ ಸುವ ದೇಶವೆಂದು ದಾಖಲೆ ಬರೆದಿದ್ದ ಆಸ್ಟ್ರೇಲಿಯಾದಲ್ಲಿ ನಿರಂತರವಾಗಿ ಪ್ಲಾಸ್ಟಿಕ್‌ ತ್ಯಾಜ್ಯ ವಿರೋಧಿ ಆಂದೋಲನ ನಡೆಸ ಲಾಗಿದ್ದು, ಇದರ ನೇತೃತ್ವ ವಹಿಸಿದ್ದು ಸಿಡ್ನಿ ಮೂಲದ ಇಯಾನ್‌ ಕೀರ್ನಾನ್‌.

ಮುಂದೇನು?
ಐದು ವರ್ಷಗಳ ಮಾರ್ಗಸೂಚಿಯ ಅನ್ವಯ ಕ್ವೀನ್ಸ್‌ಲ್ಯಾಂಡ್‌ನ‌ಲ್ಲಿ 2023ರ ಸೆಪ್ಟಂಬರ್‌ನಿಂದ ಭಾರೀ ಗಾತ್ರದ ಪ್ಲಾಸ್ಟಿಕ್‌ ಶಾಪಿಂಗ್‌ ಬ್ಯಾಗ್‌ಗಳ ಜತೆಗೆ ಇನ್ನೂ ಹೆಚ್ಚಿನ ಪ್ಲಾಸ್ಟಿಕ್‌ಗಳಿಗೆ ನಿಷೇಧ ಹೇರಲಾಗುತ್ತದೆ. ವಿಕ್ಟೋರಿಯಾದಲ್ಲಿ 2023ರ ಫೆ. 1ರಿಂದ ಏಕ ಬಳಕೆಯ ಪ್ಲಾಸ್ಟಿಕ್‌ಗಳ ಮಾರಾಟ ಮತ್ತು ಪೂರೈಕೆಯನ್ನು ಸಂಪೂರ್ಣವಾಗಿ ನಿಷೇಧಿಸಲಾಗುತ್ತದೆ.

ಏನು ಕ್ರಮ?
ಕಳೆದ ಜೂನ್‌ನಲ್ಲಿ ನ್ಯೂ ಸೌತ್‌ ವೇಲ್ಸ್‌ನಲ್ಲಿ ಹಗುರವಾದ ಪ್ಲಾಸ್ಟಿಕ್‌ ಚೀಲಗಳನ್ನು ನಿಷೇಧಿಸಲಾಗಿತ್ತು. ಇದರೊಂದಿಗೆ ಮಂಗಳವಾರ ದಿಂದ ಏಕ ಬಳಕೆಯ ಪ್ಲಾಸ್ಟಿಕ್‌ಗಳಾದ ಕುಡಿಯಲು ಬಳಕೆ ಯಾಗುವ ಸ್ಟ್ರಾ, ಹತ್ತಿಯ ಬಡ್ಸ್‌, ಆಹಾರ ಕೊಂಡೊಯ್ಯುವ ಪಾಲಿಸ್ಟರ್‌ ಪಾತ್ರೆಗಳನ್ನು ಸೇರಿಸಲಾಗಿದೆ.

ವರದಿಯಲ್ಲೇನಿದೆ?
ಪ್ಲಾಸ್ಟಿಕ್‌ನಿಂದ ಉಂಟಾಗುವ ಮಾಲಿನ್ಯವು 2013ರಿಂದ ಶೇ. 29ರಷ್ಟು ಇಳಿಕೆಯಾಗಿದೆ ಎಂದು ಕಳೆದ ಜೂನ್‌ನಲ್ಲಿ ಆಸ್ಟ್ರೇಲಿಯಾದ ರಾಷ್ಟ್ರೀಯ ವಿಜ್ಞಾನ ಕೇಂದ್ರ ತನ್ನ ವರದಿಯಲ್ಲಿ ತಿಳಿಸಿದೆ. ತಂದೆಯವರ ಯೋಜನೆ ಸಫ‌ಲವಾಗಲು ಮುಂದಿನ ಮೂವತ್ತು ವರ್ಷಗಳೇ ಬೇಕಾಗಬಹುದು ಎಂದು ಇಯಾನ್‌ ಕೀರ್ನಾನ್‌ ಅವರ ಮಗಳು ಪಿಪ್‌ ಕೀರ್ನಾನ್‌ ಸಂದರ್ಶನವೊಂದರಲ್ಲಿ ಹೇಳಿದ್ದಾರೆ.

ಹೇಗಿದೆ ಪರಿಸ್ಥಿತಿ?
ವಿಶ್ವದಲ್ಲೇ ಪ್ಲಾಸ್ಟಿಕ್‌ ಮರುಬಳಕೆಯ ವಿಚಾರ ಚರ್ಚೆಯಲ್ಲಿದೆ. ಮೃದು ಪ್ಲಾಸ್ಟಿಕ್‌ಗಳ ಮರುಬಳಕೆ ತುಂಬಾ ಕಷ್ಟವಾಗಿದೆ. ಹೀಗಾಗಿ ಇದರ ಬಗ್ಗೆ ಎಲ್ಲರ ನಿರ್ಲಕ್ಷ್ಯವಿದೆ. ಪ್ಲಾಸ್ಟಿಕ್‌ ತ್ಯಾಜ್ಯಗಳನ್ನು ನಿರ್ವಹಿಸುವ ನಿಟ್ಟಿನಲ್ಲಿ ಸರಕಾರದ ಪಾಲ್ಗೊಳ್ಳುವಿಕೆಯೂ ಬಹಳ ಮುಖ್ಯ. ಈಗಾಗಲೇ ಆಸ್ಟ್ರೇಲಿಯಾ ಈ ನಿಟ್ಟಿನಲ್ಲಿ ಪ್ರಾರಂಭಿಕ ಹೆಜ್ಜೆ ಇರಿಸಿದೆ. ಇಲ್ಲಿ ಪ್ಲಾಸ್ಟಿಕ್‌ ಮರುಬಳಕೆ ಪ್ರಮಾಣ ಶೇ. 16ರಷ್ಟಿದ್ದು, ಇದು ಶೇ. 70ರಷ್ಟಾದರೂ ಆಗಬೇಕು. ಆಗ ಮಾತ್ರ ಪ್ಲಾಸ್ಟಿಕ್‌ ಬಳಕೆಯ ಮೇಲೆ ಸಂಪೂರ್ಣ ಕಡಿವಾಣ ಬೀಳಲು ಸಾಧ್ಯ.

- ವಿದ್ಯಾ ಇರ್ವತ್ತೂರು

Advertisement

Udayavani is now on Telegram. Click here to join our channel and stay updated with the latest news.

Next