Advertisement

ವನಿತಾ ವಿಶ್ವಕಪ್ 2022: ಆಸೀಸ್ ವನಿತೆಯರ ಬ್ಯಾಟಿಂಗ್ ಪರಾಕ್ರಮ; ಮತ್ತೆ ಸೋಲುಂಡ ಮಿಥಾಲಿ ಪಡೆ

02:19 PM Mar 19, 2022 | Team Udayavani |

ಆಕ್ಲಂಡ್: ವನಿತೆಯರ ವಿಶ್ವಕಪ್ ನ ಆಸ್ಟ್ರೇಲಿಯಾ ವಿರುದ್ಧದ ಪಂದ್ಯದಲ್ಲಿ ಮಿಥಾಲಿ ರಾಜ್ ಪಡೆ ಸೋಲನುಭವಿಸಿದೆ. ನಾಯಕಿ ಮೆಗ್ ಲ್ಯಾನಿಂಗ್ ಮತ್ತು ಅಲಿಸಾ ಹೀಲಿ ಬ್ಯಾಟಿಂಗ್ ಸಹಾಯದಿಂದ ಆಸೀಸ್ ಪಡೆ ಆರು ವಿಕೆಟ್ ಅಂತರದಿಂದ ಗೆಲುವು ಸಾಧಿಸಿದೆ.

Advertisement

ಭಾರತ ತಂಡ 50 ಓವರ್ ಗಳಲ್ಲಿ ಏಳು ವಿಕೆಟ್ ನಷ್ಟಕ್ಕೆ 277 ರನ್ ಗಳಿಸಿದರೆ, ಗುರಿ ಬೆನ್ನತ್ತಿದ್ದ ಆಸ್ಟ್ರೇಲಿಯಾ ವನಿತೆಯರು 49.3 ಓವರ್ ಗಳಲ್ಲಿ ನಾಲ್ಕು ವಿಕೆಟ್ ಕಳೆದುಕೊಂಡು ಜಯ ಸಾಧಿಸಿದರು.

ಮೊದಲು ಬ್ಯಾಟಿಂಗ್ ಮಾಡಿದ ಭಾರತ ತಂಡ ಆರಂಭದಲ್ಲೇ ಆರಂಭಿಕರಿಬ್ಬರನ್ನೂ ಕಳೆದುಕೊಂಡಿತು. ಮೂರನೇ ವಿಕೆಟ್ ಗೆ ಜೊತೆಯಾದ ನಾಯಕಿ ಮಿಥಾಲಿ ರಾಜ್ ಮತ್ತು ಯಾಸ್ತಿಕಾ ಭಾಟಿಯಾ ಶತಕದ ಜೊತೆಯಾಟವಾಡಿದರು. ಮಿಥಾಲಿ 68 ರನ್ ಗಳಿಸಿದರೆ, ಭಾಟಿಯಾ 59 ರನ್ ಗಳಿಸಿದರು.

ಕೊನೆಯಲ್ಲಿ ಜೊತೆಯಾದ ಹರ್ಮನ್ ಪ್ರೀತ್ ಕೌರ್ ಮತ್ತು ಪೂಜಾ ವಸ್ತ್ರಾಕರ್ ತಂಡದ ಮೊತ್ತವನ್ನು 250ರ ಗಡಿ ದಾಟಿಸಿದರು. ಹರ್ಮನ್ ಅಜೇಯ 57 ರನ್ ಗಳಿಸಿದರೆ, ಪೂಜಾ 34 ರನ್ ಬಾರಿಸಿದರು. ಆಸೀಸ್ ಪರ ಡಾರ್ಸಿ ಬ್ರೌನ್ ಮೂರು ವಿಕೆಟ್ ಕಿತ್ತರೆ, ಅಲಾನ ಕಿಂಗ್ ಎರಡು ವಿಕೆಟ್ ಪಡೆದರು.

ಇದನ್ನೂ ಓದಿ:ನಿಮ್ಮ ಫೋಟೋವನ್ನು ವಾಟ್ಸಾಪ್ ಸ್ಟಿಕ್ಕರ್‌ಗಳಾಗಿ ಪರಿವರ್ತಿಸಬೇಕೆ? ಇಲ್ಲಿದೆ ಸುಲಭ ಉಪಾಯ

Advertisement

ಗುರಿ ಬೆನ್ನತ್ತಿದ ಆಸೀಸ್ ಗೆ ರಾಶೆಲ್ ಹಾಯ್ನೆಸ್ ಮತ್ತು ಅಲಿಸಾ ಹೀಲಿ ಉತ್ತಮ ಆರಂಭ ಒದಗಿಸಿದರು. ಅವರಿಬ್ಬರು ಮೊದಲ ವಿಕೆಟ್ ಗೆ 121 ರನ್ ಒಟ್ಟುಗೂಡಿಸಿದರು. ರಾಶೆಲ್ 43 ರನ್ ಗಳಿಸಿದರೆ, ಹೀಲಿ 72 ರನ್ ಗಳಿಸಿದರು. ನಂತರ ಕ್ರೀಸ್ ಗೆ ಬಂದ ನಾಯಕಿ ಮೆಗ್ ಲ್ಯಾನಿಂಗ್ ತಂಡವನ್ನು ಆಧರಿಸಿದರು. 107 ಎಸೆತಗಳಲ್ಲಿ 97 ರನ್ ಗಳಿಸಿದ ಲ್ಯಾನಿಂಗ್ ಶತಕ ವಂಚಿತರಾದರು. ಕೊನೆಯಲ್ಲಿ ಬೆತ್ ಮೂನಿ ಕೇವಲ 20 ಎಸೆತಗಳಲ್ಲಿ 30 ರನ್ ಗಳಿಸಿ ತಂಡಕ್ಕೆ ಜಯ ಒದಗಿಸಿದರು.

ಭಾರತದ ಪರ ಪೂಜಾ ವಸ್ತ್ರಾಕರ್ ಎರಡು ವಿಕೆಟ್ ಕಿತ್ತರು. ಅನುಭವಿ ಜೂಲನ್ ಗೋಸ್ವಾಮಿ ಮತ್ತು ಮೆಘನಾ ಸಿಂಗ್ ದುಬಾರಿಯಾದರು.

ಆಡಿದ ಐದೂ ಪಂದ್ಯಗಳನ್ನು ಗೆದ್ದ ಆಸೀಸ್ ಅಂಕಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿಯೇ ಮುಂದುವರಿಯಿತು. ಐದು ಪಂದ್ಯಗಳಲ್ಲಿ ಎರಡನ್ನು ಮಾತ್ರ ಗೆದ್ದಿರುವ ಭಾರತ ನಾಲ್ಕನೇ ಸ್ಥಾನದಲ್ಲಿದೆ.

Advertisement

Udayavani is now on Telegram. Click here to join our channel and stay updated with the latest news.

Next