ಮೆಲ್ಬರ್ನ್: ಹಾಲಿ ಚಾಂಪಿಯನ್ ರಫೆಲ್ ನಡಾಲ್ ಅವರು ಆಸ್ಟ್ರೇಲಿಯನ್ ಓಪನ್ ಟೆನಿಸ್ ಕೂಟದ ಮೊದಲ ಸುತ್ತಿನಲ್ಲಿ ನಾಲ್ಕು ಸೆಟ್‌ಗಳ ಕಠಿನ ಹೋರಾಟದಲ್ಲಿ ಗೆಲುವು ಸಾಧಿಸಿದ್ದಾರೆ.
ಈ ಪಂದ್ಯದಲ್ಲಿ ನಡಾಲ್ ಉತ್ತಮ ಫಾರ್ಮ್ ನಲ್ಲಿರುವಂತೆ ಕಾಣಲಿಲ್ಲ. ಜಯಕ್ಕಾಗಿ ಮೂರುವರೆ ತಾಸು ಹೋರಾಡಿದ ಅವರು ಅಂತಿಮ ವಾಗಿ ಬ್ರಿಟನ್‌ನ ಜ್ಯಾಕ್ ಡ್ರ್ಯಾಪರ್ ಅವವರನ್ನು 7-5, 2-6, 6-4, 6-1 ಸೆಟ್‌ಗಳಿಂದ ಉರುಳಿಸಿ ದ್ವಿತೀಯ ಸುತ್ತಿಗೇರಿದರು. ಇದು ಈ ವರ್ಷ ನಡಾಲ್ ಅವರ ಮೊದಲ ಗೆಲುವು ಆಗಿದೆ. ದಾಖಲೆ 23ನೇ ಗ್ರ್ಯಾನ್ ಸ್ಲಾಮ್ ಪ್ರಶಸ್ತಿ ಗೆಲ್ಲುವ ಗುರಿ ಇಟ್ಟುಕೊಂಡಿರುವ ನಡಾಲ್ ದ್ವಿತೀಯ ಸುತ್ತಿನಲ್ಲಿ ಮಕೆಂಝಿ ಮೆಕ್‌ಡೋನಾಲ್ಡ್ ಅವರನ್ನು ಎದುರಿಸಲಿದ್ದಾರೆ. ಕಳೆದ ವರ್ಷ ಇಲ್ಲಿ ಕ್ವಾರ್ಟರ್‌ಫೈನಲ್ ತಲುಪಿದ್ದ ಇಟಲಿಯ 15ನೇ ಶ್ರೇಯಾಂಕದ ಜಾನಿಕ್ ಸಿನ್ನರ್ ಬ್ರಿಟನ್‌ನ ಕೈಲ್ ಎಡ್ಮಂಡ್ ಅವರನ್ನು 6-4, 6-0, 6-2 ಸೆಟ್‌ಗಲಿಂದ ಸೋಲಿಸಿ ಮೊದಲ ಆಟಗಾರರಾಗಿ ದ್ವಿತೀಯ ಸುತ್ತು ತಲುಪಿದ್ದರು.
ಅಜರೆಂಕಾ ಮುನ್ನಡೆ
ವಿಕ್ಟೋರಿಯಾ ಅಜರೆಂಕಾ ಅವರು ಕಠಿನ ಪಂದ್ಯದಲ್ಲಿ ಸೋಫಿಯಾ ಕೆನಿನ್ ಅವರನ್ನು 6-4, 7-6 (3) ಸೆಟ್‌ಗಳಿಂದ ಸೋಲಿಸಿ ದ್ವಿತೀಯ ಸುತ್ತಿಗೆ ತೇರ್ಗಡೆಯಾದರು. ಕಳೆದ ವರ್ಷ ಇಲ್ಲಿ ರನ್ನರ್ ಅಪ್ ಆಗಿದ್ದ ಡೇನಿಯೆಲೆ ಕಾಲಿನ್ಸ್, ಜೆಸ್ಸಿಕಾ ಪೆಗುಲಾ ಮತ್ತು ಕೊಕೊ ಗಾಫ್ ಕೂಡ ದ್ವಿತೀಯ ಸುತ್ತು ತಲುಪಿದ್ದಾರೆ.
ಮೂರನೇ ಶ್ರೇಯಾಂಕದ ಪೆಗುಲಾ ಮೊದಲ ಸುತ್ತಿನಲ್ಲಿ ಜ್ಯಾಕ್ವೆಲಿನ್ ಕ್ರಿಸ್ಟಿಯನ್ ಅವರನ್ನು 6-0, 6-1 ಸೆಟ್‌ಗಳಿಂದ ಸುಲಭವಾಗಿ ಮಣಿಸಿದರು. ಪಾದದ ಗಾಯದ ಹೊರತಾಗಿಊ ಅಮೋಘವಾಗಿ ಆಡಿದ ಕಾಲಿನ್ಸ್ ಅವರು ಅನ್ನಾ ಕಲಿನ್‌ನಿಸ್ಕಾಯಾ ಅವರನ್ನು 7-5, 5-7, 6-4 ಸೆಟ್‌ಗಳಿಂದ ಸೋಲಿಸಿದರು. 2021ರ ಚಾಂಪಿಯನ್ ಎಮ್ಮಾ ರಾಡುಕಾನು ಅವರು ತಮರಾ ಕೊರ್ಪಾಟ್ಸ್ ಅವರನ್ನು 6-3, 6-2 ಸೆಟ್‌ಗಳಿಂದ ಕೆಡಸಿದರು. ಅವರು ಮುಂದಿನ ಸುತ್ತಿನಲ್ಲಿ ಗಾಫ್ ಅವರ ಸವಾಲನ್ನು ಎದುರಿಸಲಿದ್ದಾರೆ. ಗಾಫ್ ಮೊದಲ ಸುತ್ತಿನಲ್ಲಿ ಕ್ಯಾತೆರಿನಾ ಸಿನಿಯಾಕೋವಾ ಅವರನ್ನು 6-1, 6-4 ಸೆಟ್‌ಗಳಿಂದ ಸೋಲಿಸಿದ್ದರು.
Related Articles
ಗ್ರೀಕ್‌ನ ಆರನೇ ಶ್ರೇಯಾಂಕದ ಮರಿಯಾ ಸಕ್ಕರಿ ಚೀನದ ಯುಯಾನ್ ಯುಯಿ ಅವರನ್ನು 6-1, 6-4 ಸೆಟ್‌ಗಳಿಂದ ಗೆದ್ದು ಬಂದರು. ಮುಂದಿನ ಸುತ್ತಿನಲ್ಲಿ ರಷ್ಯಾದ ಅರ್ಹತಾ ಆಟಗಾರ್ತಿಯ ಸವಾಲನ್ನು ಎದುರಿಸಲಿದ್ದಾರೆ.
ಹಿಂದೆ ಸರಿದ ಕಿರ್ಗಿಯೋಸ್
ಎಡ ಪಾದದ ಗಾಯದಿಂದಾಗಿ ವಿಂಬಲ್ಡನ್ ಫೈನಲಿಸ್ಟ್ ನಿಕ್ ಕಿರ್ಗಿಯೋಸ್ ಅವರು ಆಸ್ಟ್ರೇ ಲಿಯನ್ ಓಪನ್‌ನಿಂದ ಹಿಂದೆ ಸರಿದಿದ್ದಾರೆ. ಅವರ ಪಾದದ ಗಾಯಕ್ಕೆ ಶಸ್ತ್ರಚಿಕಿತ್ಸೆಯ ಅಗತ್ಯವಿದೆ. ಈ ಕಾರಣಕ್ಕಾಗಿ ಈ ಕೂಟವನ್ನು ತ್ಯಜಿಸಲು ನಿರ್ಧರಿಸಿದ್ದಾರೆ.