ಮೆಲ್ಬೋರ್ನ್: ಟೆನ್ನಿಸ್ ದಿಗ್ಗಜ ರಫೆಲ್ ನಡಾಲ್ ಅವರು ಆಸ್ಟ್ರೇಲಿಯಾ ಓಪನ್ ಪುರುಷರ ಸಿಂಗಲ್ಸ್ ಟೆನ್ನಿಸ್ ಪ್ರಶಸ್ತಿಯನ್ನು ಗೆದ್ದು ಭಾನುವಾರ ಹೊಸ ದಾಖಲೆಯನ್ನು ಬರೆದಿದ್ದಾರೆ.
ಫೈನಲ್‌ನ ರೋಚಕ ಕಾದಾಟದಲ್ಲಿ 35 ವರ್ಷ ವಯಸ್ಸಿನ ರಫೆಲ್ ನಡಾಲ್ ಅವರು ರಷ್ಯಾದ ಡೇನಿಯಲ್ ಮೆಡ್ವೆಡೆವ್ ಅವರನ್ನು 2-6, 6-7(5), 6-4, 6-4, 7-5 ಸೆಟ್‌ಗಳಿಂದ ಸೋಲಿಸಿದರು.
ರೋಜರ್ ಫೆಡರರ್ ಹಾಗೂ ನೋವಾಕ್ ಜೋಕೋವಿಚ್ ಅವರ ಅತಿಹೆಚ್ಚು ಗ್ರ್ಯಾನ್ ಸ್ಲಾಂ ಗೆಲುವಿನ ದಾಖಲೆ ಮುರಿದ ಸ್ಪೇನ್ ಟೆನಿಸಿಗ ರಫೆಲ್ ನಡಾಲ್ ದಾಖಲೆಯ 21ನೇ ಪ್ರಶಸ್ತಿ ತನ್ನದಾಗಿಸಿಕೊಂಡಿದ್ದಾರೆ.
ಐದು ಗಂಟೆ 24 ನಿಮಿಷಗಳ ಅವಧಿಯ ಮಹಾ ಹೋರಾಟ ರೋಮಾಂಚನಕಾರಿಯಾಗಿತ್ತು. ಇದು ಡೇನಿಯಲ್ ಮೆಡ್ವೆಡೆವ್ ಅವರ ವೃತ್ತಿಜೀವನದ ಸುದೀರ್ಘ ಪಂದ್ಯವಾಗಿದ್ದು, 2019 ರ ಯುಎಸ್ ಓಪನ್ ಫೈನಲ್‌ನಲ್ಲಿ ನಡಾಲ್ ವಿರುದ್ಧ 4 ಗಂಟೆ 53 ನಿಮಿಷಗಳ ಸೆಣಸಾಟವನ್ನು ಮೀರಿಸಿದೆ.
ಹೆಚ್ಚು ಅನುಭವಿ ಆಗಿರುವ ರಾಫೆಲ್ ನಡಾಲ್ ಪ್ರಶಸ್ತಿಯನ್ನು ಗೆಲ್ಲುವ ಸಂಕಲ್ಪವನ್ನು ಹೊಂದಿ ರೋಚಕ ಕಾದಾಟ ನಡೆಸಿದರು.