Advertisement

ಓಟ ಮುಂದುವರಿಸಿದ ಸೆರೆನಾ, ಒಸಾಕಾ

12:30 AM Jan 22, 2019 | Team Udayavani |

ಮೆಲ್ಬರ್ನ್: ಸೋಮವಾರದ ಆಸ್ಟ್ರೇಲಿಯನ್‌ ಓಪನ್‌ ವನಿತಾ ಸಿಂಗಲ್ಸ್‌ ಹಣಾಹಣಿಯಲ್ಲಿ ನೆಚ್ಚಿನ ಆಟಗಾರ್ತಿ ಸೆರೆನಾ ವಿಲಿಯಮ್ಸ್‌, ಜಪಾನೀ ತಾರೆ ನವೋಮಿ ಒಸಾಕಾ ಗೆಲುವು ಸಾಧಿಸಿ ಕ್ವಾರ್ಟರ್‌ ಫೈನಲ್‌ಗೆ ಓಟ ಬೆಳೆಸಿದ್ದಾರೆ. ಕ್ಯಾರೋಲಿನಾ ಪ್ಲಿಸ್ಕೋವಾ, ಎಲಿನಾ ಸ್ವಿಟೋಲಿನಾ ಕೂಡ ಇವರನ್ನು ಸೇರಿಕೊಂಡಿದ್ದಾರೆ.

Advertisement

4ನೇ ಸುತ್ತಿನಲ್ಲಿ ಪರಾಭವಗೊಂಡು ಹೊರಬಿದ್ದವರೆಂದರೆ ನಂಬರ್‌ ವನ್‌ ಸಿಮೋನಾ ಹಾಲೆಪ್‌, 13ನೇ ಶ್ರೇಯಾಂಕದ ಅನಾಸ್ತಾಸಿಜಾ ಸೆವಸ್ತೋವಾ, 2 ಗ್ರ್ಯಾನ್‌ಸ್ಲಾಮ್‌ಗಳ ಒಡತಿ ಗಾರ್ಬಿನ್‌ ಮುಗುರುಜಾ ಮತ್ತು ಮ್ಯಾಡಿಸನ್‌ ಕೀಸ್‌.

ಸೆರೆನಾ-ಪ್ಲಿಸ್ಕೋವಾ ಮುಖಾಮುಖೀ
ಮಾರ್ಗರೆಟ್‌ ಕೋರ್ಟ್‌ ಅವರ ಸಾರ್ವಕಾಲಿಕ ಗ್ರ್ಯಾನ್‌ಸ್ಲಾಮ್‌ ದಾಖಲೆ ಮೇಲೆ ಕಣ್ಣಿಟ್ಟಿರುವ ಸೆರೆನಾ ವಿಲಿಯಮ್ಸ್‌ 3 ಸೆಟ್‌ಗಳ ಹೋರಾಟ ನಡೆಸಿ ಸಿಮೋನಾ ಹಾಲೆಪ್‌ ಹಾರಾಟವನ್ನು ಕೊನೆಗೊಳಿಸಿದರು. ಸೆರೆನಾ ಗೆಲುವಿನ ಅಂತರ 6-1, 4-6, 6-4. ಮೊದಲ ಸೆಟ್‌ ಕಳೆದುಕೊಂಡ ಬಳಿಕ ಹೆಚ್ಚು ಅಪಾಯಕಾರಿಯಾಗಿ ಗೋಚರಿಸಿದ ಹಾಲೆಪ್‌, ನಿರ್ಣಾಯಕ ಪಂದ್ಯದಲ್ಲೂ ಮೇಲುಗೈ ಸಾಧಿಸುವ ಹಾದಿಯಲ್ಲಿದ್ದರು. ಆದರೆ 7ನೇ ಗೇಮ್‌ನಲ್ಲಿ ಬ್ರೇಕ್‌ ಸಾಧಿಸುವ ಮೂಲಕ ಸೆರೆನಾ ಮೇಲುಗೈ ಕಾಣುವಲ್ಲಿ ಯಶಸ್ವಿಯಾದರು.

ಸೆರೆನಾ ಅವರ ಕ್ವಾರ್ಟರ್‌ ಫೈನಲ್‌ ಎದುರಾಳಿ ಜೆಕ್‌ ಗಣರಾಜ್ಯದ 7ನೇ ಶ್ರೇಯಾಂಕಿತ ಆಟಗಾರ್ತಿ ಕ್ಯಾರೋಲಿನಾ ಪ್ಲಿಸ್ಕೋವಾ. ದಿನದ ಇನ್ನೊಂದು ಪಂದ್ಯದಲ್ಲಿ ಪ್ಲಿಸ್ಕೋವಾ ಸ್ಪೇನಿನ ಗಾರ್ಬಿನ್‌ ಮುಗುರುಜಾ ಅವರನ್ನು 6-3, 6-1 ನೇರ ಸೆಟ್‌ಗಳಲ್ಲಿ ಹಿಮ್ಮೆಟ್ಟಿಸಿದರು.

ಪ್ಲಿಸ್ಕೋವಾ “ಮೆಲ್ಬರ್ನ್ ಪಾರ್ಕ್‌’ನಲ್ಲಿ ಕ್ವಾರ್ಟರ್‌ ಫೈನಲ್‌ ತಲುಪಿದ್ದು ಇದು ಸತತ 3ನೇ ಸಲ. ಆಸ್ಟ್ರೇಲಿಯನ್‌ ಓಪನ್‌ಗೂ ಮುನ್ನ ನಡೆದ “ಬ್ರಿಸ್ಬೇನ್‌ ಇಂಟರ್‌ನ್ಯಾಶನಲ್‌’ ಪಂದ್ಯಾವಳಿಯಲ್ಲಿ ಪ್ರಶಸ್ತಿಯನ್ನೆತ್ತಿದ್ದು ಪ್ಲಿಸ್ಕೋವಾ ಹೆಗ್ಗಳಿಕೆಯಾಗಿದೆ. ಇದು ಸೆರೆನಾ ವಿರುದ್ಧ ಸೆಣಸಾಡುವಾಗ ಜೆಕ್‌ ಆಟಗಾರ್ತಿಗೆ ಹೆಚ್ಚಿನ ಸ್ಫೂರ್ತಿ ತುಂಬಬಹುದು.

Advertisement

ಒಸಾಕಾಗೆ 3 ಸೆಟ್‌ ಗೆಲುವು
ಸತತ 2ನೇ ಗ್ರ್ಯಾನ್‌ಸ್ಲಾಮ್‌ ಕನಸಿನಲ್ಲಿ ವಿಹರಿಸುತ್ತಿರುವ ಜಪಾನಿನ 4ನೇ ಶ್ರೇಯಾಂಕದ ನವೋಮಿ ಒಸಾಕಾ 3 ಸೆಟ್‌ಗಳ ಕಾದಾಟದ ಬಳಿಕ ಕ್ವಾರ್ಟರ್‌ ಫೈನಲ್‌ ತಲುಪಿದರು. ಇವರಿಗೆ ಶರಣಾದವರು 13ನೇ ಶ್ರೇಯಾಂಕದ ಲಾತ್ವಿಯಾದ ಆಟಗಾರ್ತಿ ಅನಾಸ್ತಾಸಿಜಾ ಸೆವಸ್ತೋವಾ. ಮೊದಲ ಸೆಟ್‌ ಕಳೆದುಕೊಂಡ ಬಳಿಕ ತಿರುಗಿ ಬಿದ್ದ ಒಸಾಕಾ 4-6, 6-3, 6-4 ಅಂತರದ ಮೇಲಗೈ ಸಾಧಿಸಿದರು.

ಒಸಾಕಾ ಮೊದಲ ಸೆಟ್‌ ಸೋತ ಬಳಿಕವೂ ಗೆಲುವಿನ ಲಯಕ್ಕೆ ಮರಳಿದ ಸತತ 2ನೇ ಪಂದ್ಯ ಇದಾಗಿದೆ. ಹಿಂದಿನ ಸುತ್ತಿನಲ್ಲಿ ಹೀ ಸು ವೀ ವಿರುದ್ಧವೂ ಒಸಾಕಾ ಇದೇ ಸ್ಥಿತಿಯಿಂದ ಮೇಲೆದ್ದು ಬಂದಿದ್ದರು.

ಜಪಾನೀ ಆಟಗಾರ್ತಿಯ ಕ್ವಾರ್ಟರ್‌ ಫೈನಲ್‌ ಎದುರಾಳಿ ಉಕ್ರೇನಿನ ಎಲಿನಾ ಸ್ವಿಟೋಲಿನಾ. 6ನೇ ಶ್ರೇಯಾಂಕದ ಸ್ವಿಟೋಲಿನಾ ಅಮೆರಿಕದ ಮ್ಯಾಡಿಸನ್‌ ಕೀಸ್‌ ವಿರುದ್ಧ 6-2, 1-6, 6-1 ಅಂತರದಿಂದ ಪಾಸ್‌ ಆದರು. ಸ್ವಿಟೋಲಿನಾ ಕಳೆದ ವರ್ಷವೂ ಇಲ್ಲಿ ಎಂಟರ ಘಟ್ಟ ತಲುಪಿದ್ದರು. ಫ್ರೆಂಚ್‌ ಓಪನ್‌ನಲ್ಲೂ 2 ಸಲ ಕ್ವಾರ್ಟರ್‌ ಫೈನಲ್‌ ಮುಟ್ಟಿದ್ದರು. ಆದರೆ ಗ್ರ್ಯಾನ್‌ಸ್ಲಾಮ್‌ನಲ್ಲಿ ಇಲ್ಲಿಂದ ಮುಂದೆ ಓಟ ಬೆಳೆಸಿಲ್ಲ.

ಸ್ಲೋನ್‌ ಸ್ಟೀಫ‌ನ್ಸ್‌ಗೆ ಸೋಲು
ರವಿವಾರ ರಾತ್ರಿಯ ಹಣಾಹಣಿಯಲ್ಲಿ ಅಮೆರಿಕದ ಸ್ಲೋನ್‌ ಸ್ಟೀಫ‌ನ್ಸ್‌ ರಶ್ಯದ ಅನಾಸ್ತಾಸಿಜಾ ಪಾವುÉಚೆಂಕೋವಾ ವಿರುದ್ಧ ಪರಾಭವಗೊಂಡು ಹೊರಬಿದ್ದರು. ಪಾವುಚೆಂಕೋವಾ ಕ್ವಾರ್ಟರ್‌ ಫೈನಲ್‌ನಲ್ಲಿ ಅಮೆರಿಕದ ಮತ್ತೋರ್ವ ಆಟಗಾರ್ತಿ ಡೇನಿಯಲ್‌ ಕಾಲಿನ್ಸ್‌ ವಿರುದ್ಧ ಕಾದಾಡಲಿದ್ದಾರೆ.

ಪಂದ್ಯದ ಆರಂಭದಲ್ಲಿ ಸೆರೆನಾ ಎಡವಟ್ಟು
ಸಿಮೋನ ಹ್ಯಾಲೆಪ್‌ ವಿರುದ್ಧ ಪಂದ್ಯದ ಆರಂಭಕ್ಕೂ ಮುನ್ನ  ಸೆರೆನಾ ವಿಲಿಯಮ್ಸ್‌ ಸಣ್ಣ ಎಡವಟ್ಟು ಒಂದನ್ನು ಮಾಡಿದ್ದಾರೆ.
2002ರಲ್ಲಿ ವಿಶ್ವ ರ್‍ಯಾಂಕಿಂಗನಲ್ಲಿ ಅಗ್ರ ಸ್ಥಾನದಲ್ಲಿದ್ದ ಸೆರೆನಾ ವಿಲಿಯಮ್ಸ್‌, ಸದ್ಯ 16ನೇ ಸ್ಥಾನದಲ್ಲಿದ್ದಾರೆ. 

“ಲೆಟ್ಸ್‌ ವೆಲಕಮ್‌ ವರ್ಲ್ಡ್ ನಂ. ವನ್‌..’ ಎಂದು ಗೌರವದಿಂದ ಸಿಮೋನ್‌ ಹ್ಯಾಲೆಪ್‌ ಅವರನ್ನು ಸ್ವಾಗತಿಸಿದ ಸಂದರ್ಭ ಕೋರ್ಟ್‌ಗೆ ಹ್ಯಾಲೆಪ್‌ ಬದಲು ಕೋರ್ಟ್‌ಗೆ ಸೆರೆನಾ ಎಂಟ್ರಿಯಾಗಿ ಎಡವಟ್ಟಿನಲ್ಲಿ ಸಿಲಿಕಿಕೊಂಡರು. ಹೆಡ್‌ಫೋನ್‌ ಧರಿಸಿದ್ದ ಸೆರೆನಾಗೆ ಹ್ಯಾಲೆಪ್‌ ಹೆಸರನ್ನು ಹೇಳಿದ್ದು ಕೇಳದ ಕಾರಣ ಅವಾಂತರವನ್ನು ಮಾಡಿಕೊಂಡಿದ್ದಾರೆ. ಬಳಿಕ ತಾನು ಮಾಡಿರುವ ತಪ್ಪಿನ ಅರಿಮೆ ಕೋರ್ಟ್‌ನಿಮದ ಕಾಲ್ಕಿತ್ತಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next