Advertisement

ಚೆಂಡು ವಿರೂಪಕ್ಕೆ ವಾರ್ನರ್‌ ಸೂತ್ರಧಾರ!

07:00 AM Mar 31, 2018 | Team Udayavani |

ಸಿಡ್ನಿ: ಇಡೀ ಕ್ರಿಕೆಟ್‌ ವಲಯವೇ ತಲೆ ತಗ್ಗಿಸುವಂತೆ ಮಾಡಿದ್ದ ಆಸೀಸ್‌ ಆಟಗಾರರ “ಚೆಂಡು ವಿರೂಪ’ ಹಗರಣವೀಗ ಕುತೂಹಲಕಾರಿ ತಿರುವನ್ನು ಪಡೆದುಕೊಂಡಿದೆ. ಚೆಂಡು ವಿರೂಪ ಪ್ರಕರಣದ ಸೂತ್ರಧಾರ ಡೇವಿಡ್‌ ವಾರ್ನರ್‌ ಎಂಬ ಸತ್ಯ ಇದೀಗ ಬಯಲಾಗಿದೆ. ಕ್ರಿಕೆಟ್‌ ಆಸ್ಟ್ರೇಲಿಯ (ಸಿಎ) ನಡೆಸಿರುವ ತನಿಖೆಯಲ್ಲಿ ಈ ಅಘಾತಕಾರಿ ವಿಚಾರ ಹೊರಬಿದ್ದಿದೆ.

Advertisement

ಆಸ್ಟ್ರೇಲಿಯನ್‌ ಕ್ರಿಕೆಟ್‌ ಬೋರ್ಡ್‌ ನಡೆಸಿರುವ ತನಿಖಾ ವರದಿಯಂತೆ ಚೆಂಡು ವಿರೂಪದ ಇಡೀ ಕತೆಗೆ ಮಾಜಿ ಉಪ ನಾಯಕ ಡೇವಿಡ್‌ ವಾರ್ನರ್‌ ಸೂತ್ರಧಾರನೆಂಬುದು ಸಾಬೀತಾಗಿದೆ. ನಾಯಕ ಸ್ಟೀವನ್‌ ಸ್ಮಿತ್‌ಗೆ ಈ ಬಗ್ಗೆ ಅರಿವಿದ್ದರೂ ಅವರು ಅದನ್ನು ತಡೆಯುವ ಬದಲು ಕ್ಯಾಮರಾನ್‌ ಬ್ಯಾನ್‌ಕ್ರಾಫ್ಟ್ ಅವರನ್ನು ಬೆಂಬಲಿಸಿದ್ದಾರಷ್ಟೇ. ಹೀಗಾಗಿ “ಚೆಂಡು ವಿರೂಪ’ಗೊಳಿಸುವಿಕೆಯ ಈ ಇಡೀ ಬೆಳವಣಿಗೆಗೆ ವಾರ್ನರ್‌ ಅವರೇ ತೆರೆ ಮರೆಯ ನಾಯಕ ಎಂದು ವರದಿ ಹೇಳಿದೆ.

ಇಷ್ಟೇ ಅಲ್ಲ, ಕಿರಿಯ ಆಟಗಾರರೊಬ್ಬರಿಗೆ ವಾರ್ನರ್‌ ಚೆಂಡು ವಿರೂಪಗೊಳಿಸುವ ಬಗ್ಗೆ ಮಾರ್ಗದರ್ಶನ ನೀಡಿರುವುದು ಮತ್ತು ಸೂಚಿಸಿರುವುದೂ ತನಿಖೆಯಲ್ಲಿ ವರದಿಯಾಗಿದೆ. ಚೆಂಡು ವಿರೂಪಗೊಳಿಸುವ ಆಲೋಚನೆಯನ್ನು ವಾರ್ನರ್‌ ಹೇಳಿದಷ್ಟೇ ಅಲ್ಲ, ಸ್ವತಃ ಅವರೇ ಬ್ಯಾನ್‌ಕ್ರಾಫ್ಟ್ ಅವರಿಗೆ ಪ್ರಾತ್ಯಿಕ್ಷಿಕೆ ಮೂಲಕ ಮಾಡಿ ತೋರಿಸಿದ್ದಾರೆ ಎಂಬುದು ತನಿಖೆಯಲ್ಲಿ ಬಯಲಾಗಿರುವ ಆಘಾತಕಾರಿ ವಿಚಾರಗಳಲ್ಲಿ ಒಂದಾಗಿದೆ. ಈ ಎಲ್ಲ ಕಾರಣಗಳಿಂದಾಗಿಯೇ ಕ್ರಿಕೆಟ್‌ ಆಸ್ಟ್ರೇಲಿಯ “ಕಳಂಕ ಕತೆ’ಗೆ ನಾಯಕನೆಂದು ಎಡಗೈ ಬ್ಯಾಟ್ಸ್‌ಮನ್‌  ವಾರ್ನರ್‌ ಅವರತ್ತ ಬೆರಳು ತೋರಿಸಿದೆ.

ಸ್ಮಿತ್‌ ಮತ್ತೆ ನಾಯಕರಾಗಬಹುದು
ಹಗರಣ ಬಯಲಾದ ಬೆನ್ನಲ್ಲೇ ವಾರ್ನರ್‌, ಸ್ಮಿತ್‌ ಇಬ್ಬರೂ ಒಂದು ವರ್ಷಗಳ ಕಾಲ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಕ್ರಿಕೆಟ್‌ನಿಂದ ನಿಷೇಧ ಶಿಕ್ಷೆಗೆ ಒಳಗಾಗಿದ್ದು, ಚೆಂಡು ವಿರೂಪ ಮಾಡಿದ ಬೌಲರ್‌ ಬ್ಯಾನ್‌ಕ್ರಾಫ್ಟ್ ಅವರಿಗೆ 9 ತಿಂಗಳ ನಿಷೇಧ ಹೇರಲಾಗಿದೆ. ಘಟನೆಯ ಬಳಿಕ ನಾಯಕ ಮತ್ತು ಉಪನಾಯಕ ಸ್ಥಾನದಿಂದಲೂ ಸ್ಮಿತ್‌, ವಾರ್ನರ್‌ರನ್ನು ಕೆಳಗಿಳಿಸಲಾಗಿದ್ದು, ಮಾಜಿ ನಾಯಕ ಸ್ಮಿತ್‌ ಮತ್ತೆ ನಾಯಕನಾಗಿ ಪರಿಗಣಿಸಬೇಕಾದರೆ ನಿಷೇಧ ಅವಧಿ ಒಂದು ವರ್ಷ ಕಳೆಯಬೇಕಿದೆ. ಆದರೆ ವಾರ್ನರ್‌ ಇನ್ನೆಂದಿಗೂ ದೇಶಿ ತಂಡವನ್ನು ಮುನ್ನಡೆಸಲು ಸಾಧ್ಯವಿಲ್ಲ ಎಂದು ಕ್ರಿಕೆಟ್‌ ಆಸ್ಟ್ರೇಲಿಯ ಹೇಳಿದೆ.

ಕ್ರಿಕೆಟ್‌ ಆಸ್ಟ್ರೇಲಿಯದಿಂದ ಸ್ಟೀವನ್‌  ಸ್ಮಿತ್‌ ಮೇಲೆ ಚೆಂಡು ವಿರೂಪ ಮಾಡುವ ಆಲೋಚನೆ ಜಾರಿಯಾಗುವ ಮುನ್ನ ತಡೆಯುವಲ್ಲಿನ ವೈಫ‌ಲ್ಯ, ಪ್ರಕರಣದ ಮೂಲಕ ಸಾರ್ವಜನಿಕರ ಅಭಿಪ್ರಾಯವನ್ನು ತಪ್ಪು ದಾರಿಗೆಳೆದಿರುವಿಕೆಗೆ ಸಂಬಂಧಿಸಿ ದೂರು ದಾಖಲಾಗಿದೆ. 

Advertisement

ಡೇವಿಡ್‌ ವಾರ್ನರ್‌ ಅವರ ಮೇಲೆ ಚೆಂಡು ವಿರೂಪದ ಆಲೋಚನೆ ಮಾಡಿದ್ದು, ಕಿರಿಯ ಆಟಗಾರನಿಗೆ ಮಾರ್ಗದರ್ಶನ ಮತ್ತು ಪ್ರೇರೇಪಿಸಿದ್ದು, ಪ್ರಾತ್ಯಕ್ಷಿಕೆ ತೋರಿಸಿದ್ದು, ಆಲೋಚನೆ ಜಾರಿಯಾಗುವ ಮುನ್ನ ತಡೆಯದಿರುವುದರ ಮೇಲೆ ದೂರು ದಾಖಲಾದರೆ, ಬ್ಯಾನ್‌ಕ್ರಾಫ್ಟ್ ಮೇಲೆ ಕ್ರೀಡೆಯ ಭಾಗವಾಗಿದ್ದರ ಅರಿವಿದ್ದರೂ ಚೆಂಡು ವಿರೂಪಕ್ಕೆ ಯತ್ನಿಸಿರುವುದಕ್ಕೆ, ಚೆಂಡು ವಿರೂಪ ಮಾಡುವ ಮಾರ್ಗದರ್ಶನವನ್ನು ಅನುಸರಿಸಿರುವುದಕ್ಕೆ ಸಂಬಂಧಿಸಿ ದೂರು ದಾಖಲಾಗಿದೆ.

ನುಣುಚಿಕೊಳ್ಳುವ ಯತ್ನ
ಪ್ರಕರಣದ ಕೆಲವು ದಿನಗಳ ಬೆಳವಣಿಗೆಗಳನ್ನು ಗಮನಿಸಿದರೆ ಪ್ರಕರಣದಲ್ಲಿ ಭಾಗಿಯಾದ ಸ್ಮಿತ್‌, ವಾರ್ನರ್‌, ಬ್ಯಾನ್‌ಕ್ರಾಫ್ಟ್ ಈ ಮೂವರೂ ಆಟಗಾರರಲ್ಲಿ  ಕಡಿಮೆ ಪಶ್ಚಾತ್ತಾಪ ವ್ಯಕ್ತಪಡಿಸಿದವರೆಂದರೆ ವಾರ್ನರ್‌ ಅವರೇ. ಮಾಧ್ಯಮದ ಮುಂದೆ ಹಾಜರಾಗಿದ್ದ ಸ್ಮಿತ್‌, ಬ್ಯಾನ್‌ಕ್ರಾಫ್ಟ್ ಇಬ್ಬರೂ ಹಲವಾರು ಬಾರಿ ಕ್ಷಮೆಯಾಚಿಸಿದರು. ಇಡೀ ಘಟನೆಗೆ ಕಾರಣ ನಾವೇ ಎಂದು ಪ್ರಕರಣದ ಜವಾಬ್ದಾರಿ ಹೊತ್ತುಕೊಳ್ಳುವ ಹೇಳಿಕೆಯನ್ನು ಮತ್ತೆ ಮತ್ತೆ ನೀಡಿದ್ದರು. ಆದರೆ ಅವರಿಬ್ಬರಿಗೆ ಹೋಲಿಸಿದರೆ ವಾರ್ನರ್‌ ಕೊಂಚ ನುಣುಚಿಕೊಂಡೇ ಉಳಿದಿದ್ದನ್ನು ಗಮನಿಸಬಹುದು.

Advertisement

Udayavani is now on Telegram. Click here to join our channel and stay updated with the latest news.

Next