ಅಡಿಲೇಡ್: ಮಾರ್ಚ್‌ನಲ್ಲಿ ಯುಎಇಯಲ್ಲಿ ನಡೆಯಲಿರುವ ಅಫ್ಘಾನಿಸ್ತಾನ ವಿರುದ್ಧದ ಮೂರು ಪಂದ್ಯಗಳ ಏಕದಿನ ಸರಣಿಯಿಂದ ಆಸ್ಟ್ರೇಲಿಯಾ ಹಿಂದೆ ಸರಿದಿದೆ. ಸರ್ಕಾರ ಸೇರಿದಂತೆ ಪ್ರಮುಖ ಪಾಲುದಾರರೊಂದಿಗೆ ಚರ್ಚಿಸಿದ ನಂತರ ಕ್ರಿಕೆಟ್ ಆಸ್ಟ್ರೇಲಿಯಾ ಗುರುವಾರ (ಜನವರಿ 12) ಈ ಕುರಿತು ಹೇಳಿಕೆಯನ್ನು ಬಿಡುಗಡೆ ಮಾಡಿದೆ.
ಅಫ್ಘಾನಿಸ್ತಾನದಲ್ಲಿ ಮಹಿಳೆಯರು ಮತ್ತು ಬಾಲಕಿಯರ ಶಿಕ್ಷಣ ಮತ್ತು ಉದ್ಯೋಗದ ಮೇಲಿನ ಮತ್ತಷ್ಟು ನಿರ್ಬಂಧಗಳ ಬಗ್ಗೆ ಆಡಳಿತಾರೂಢ ತಾಲಿಬಾನ್ ಘೋಷಣೆಯ ನಂತರ ಈ ನಿರ್ಧಾರಕ್ಕೆ ಬಂದಿರುವುದಾಗಿ ಕ್ರಿಕೆಟ್ ಆಸ್ಟ್ರೇಲಿಯಾ ತನ್ನ ಹೇಳಿಕೆಯಲ್ಲಿ ಬಹಿರಂಗಪಡಿಸಿದೆ.
“ಅಫ್ಘಾನಿಸ್ತಾನ ಸೇರಿದಂತೆ ವಿಶ್ವದಾದ್ಯಂತ ಮಹಿಳೆಯರು ಮತ್ತು ಪುರುಷರಿಗಾಗಿ ಆಟವನ್ನು ಬೆಳೆಸಲು ಕ್ರಿಕೆಟ್ ಆಸ್ಟ್ರೇಲಿಯಾ ಬದ್ಧವಾಗಿದೆ. ದೇಶದಲ್ಲಿ ಮಹಿಳೆಯರು ಮತ್ತು ಹುಡುಗಿಯರಿಗೆ ಸುಧಾರಿತ ಪರಿಸ್ಥಿತಿಗಳ ನಿರೀಕ್ಷೆಯಲ್ಲಿ ಅಫ್ಘಾನಿಸ್ತಾನ ಕ್ರಿಕೆಟ್ ಮಂಡಳಿಯೊಂದಿಗೆ ತೊಡಗಿಸಿಕೊಳ್ಳುವುದನ್ನು ಮುಂದುವರಿಸುತ್ತೇವೆ” ಎಂದು ಮಂಡಳಿ ಹೇಳಿದೆ.
ಅಫ್ಘಾನಿಸ್ತಾನ ಸರ್ಕಾರದ ನೀತಿಗಳ ವಿರುದ್ಧ ಕ್ರಿಕೆಟ್ ಆಸ್ಟ್ರೇಲಿಯಾ ತೀವ್ರ ನಿಲುವು ತಳೆಯುತ್ತಿರುವುದು ಇದೇ ಮೊದಲೇನಲ್ಲ. 2021ರ ಸೆಪ್ಟೆಂಬರ್ ನಲ್ಲಿ ಅಫ್ಘಾನ್ ನಲ್ಲಿ ತಾಲಿಬಾನ್ ಅಧಿಕಾರ ಹಿಡಿದ ಬಳಿಕ ಹೆಣ್ಣುಮಕ್ಕಳ ಸ್ವಾತಂತ್ರ್ಯಕ್ಕೆ ವಿರುದ್ಧವಾದ ನಿಯಮಗಳನ್ನು ಜಾರಿ ಮಾಡಿತ್ತು. ಇದನ್ನು ಆಸ್ಟ್ರೇಲಿಯಾ ವಿರೋಧ ಮಾಡಿತ್ತು.