ದುಬಾೖ: ಪಾಕಿಸ್ಥಾನವನ್ನು ಅಂತಿಮ ಏಕದಿನ ಪಂದ್ಯದಲ್ಲೂ ಬಗ್ಗುಬಡಿದ ಆಸ್ಟ್ರೇಲಿಯ, 5 ಪಂದ್ಯಗಳ ಸರಣಿಯನ್ನು ಕ್ಲೀನ್ ಸ್ವೀಪ್ ಆಗಿ ವಶಪಡಿಸಿಕೊಂಡಿದೆ. ವಿಶ್ವಕಪ್‌ಗ್ ಮುನ್ನ ಹಾಲಿ ಚಾಂಪಿಯನ್ನರಿಗೆ ಈ ಗೆಲುವು ದೊಡ್ಡ “ಬೂಸ್ಟ್’ ಆಗಿ ಪರಿಣಮಿಸಿದೆ.
ರವಿವಾರ ರಾತ್ರಿ ದುಬಾೖಯಲ್ಲಿ ನಡೆದ ಈ ಮುಖಾ ಮುಖೀಯಲ್ಲಿ ರನ್ ಹೊಳೆಯೇ ಹರಿಯಿತು. ಮೊದಲು ಬ್ಯಾಟಿಂಗ್ ನಡೆಸಿದ ಆಸ್ಟ್ರೇಲಿಯ 7 ವಿಕೆಟಿಗೆ 327 ರನ್ ಪೇರಿಸಿದರೆ, ಪಾಕಿಸ್ಥಾನ 7 ವಿಕೆಟಿಗೆ 307 ರನ್ ಗಳಿಸಿ ಶರಣಾಯಿತು.
ಆಸ್ಟ್ರೇಲಿಯದ ಅಗ್ರ ಕ್ರಮಾಂಕದ ನಾಲ್ವರ ಅಮೋಘ ಆಟ ದೊಡ್ಡ ಮೊತ್ತಕ್ಕೆ ಕಾರಣವಾಯಿತು. ಉಸ್ಮಾನ್ ಖ್ವಾಜಾ 98, ಆರನ್ ಫಿಂಚ್ 53, ಶಾನ್ ಮಾರ್ಷ್ 61, ಗ್ಲೆನ್ ಮ್ಯಾಕ್ಸ್‌ವೆಲ್ 70 ರನ್ ಬಾರಿಸಿದರು. ಪಾಕ್ ಚೇಸಿಂಗ್ ವೇಳೆ ಆರಂಭಕಾರ ಅಬಿದ್ ಅಲಿ ಶೂನ್ಯಕ್ಕೆ ಔಟಾದರೂ ಶಾನ್ ಮಸೂದ್ ಮತ್ತು ಹ್ಯಾರಿಸ್ ಸೊಹೈಲ್ 108 ರನ್ ಜತೆಯಾಟ ನಿಭಾಯಿಸಿದರು. 40ನೇ ಓವರ್ ತನಕ ಕ್ರೀಸ್ ಆಕ್ರಮಿಸಿಕೊಂಡ ಸೊಹೈಲ್ 130 ರನ್ ಬಾರಿಸಿದರೆ, ಮಸೂದ್ 50 ರನ್ ಮಾಡಿದರು. ನಾಯಕ ಇಮಾದ್ ವಾಸಿಮ್ 50 ರನ್ ಮಾಡಿ ಅಜೇಯರಾಗಿ ಉಳಿದರು. ಆದರೆ ಯಾರಿಂದಲೂ ತಂಡವನ್ನು ದಡ ಮುಟ್ಟಿಸಲಾಗಲಿಲ್ಲ.
ಸಂಕ್ಷಿಪ್ತ ಸ್ಕೋರ್: ಆಸ್ಟ್ರೇಲಿಯ-7 ವಿಕೆಟಿಗೆ 327 (ಖ್ವಾಜಾ 98, ಮ್ಯಾಕ್ಸ್‌ವೆಲ್ 70, ಮಾರ್ಷ್ 61, ಫಿಂಚ್ 53, ಶಿನ್ವರಿ 49ಕ್ಕೆ 4, ಜುನೇದ್ 73ಕ್ಕೆ 3). ಪಾಕಿಸ್ಥಾನ-7 ವಿಕೆಟಿಗೆ 307 (ಸೊಹೈಲ್ 130, ಮಸೂದ್ 50, ಇಮಾದ್ ಔಟಾಗದೆ 50, ಬೆಹೆÅಂಡಾಫ್ì 53ಕ್ಕೆ 3).
ಪಂದ್ಯಶ್ರೇಷ್ಠ: ಗ್ಲೆನ್ ಮ್ಯಾಕ್ಸ್‌ವೆಲ್.
ಸರಣಿಶ್ರೇಷ್ಠ: ಆರನ್ ಫಿಂಚ್.