Advertisement

ಪರ್ತ್‌ ಏಕದಿನ: ಸ್ಮಿತ್‌ ಸೆಂಚುರಿ; ಮುನ್ನಡೆದ ಆಸೀಸ್‌

03:45 AM Jan 20, 2017 | |

ಪರ್ತ್‌: ನಾಯಕ ಸ್ಟೀವನ್‌ ಸ್ಮಿತ್‌ ಅವರ ಶತಕ ಸಾಹಸದಿಂದ ಪರ್ತ್‌ ಏಕದಿನ ಪಂದ್ಯದಲ್ಲಿ ಪಾಕಿಸ್ಥಾನಕ್ಕೆ 7 ವಿಕೆಟ್‌ ಸೋಲುಣಿಸಿದ ಆಸ್ಟ್ರೇಲಿಯ 2-1 ಮುನ್ನಡೆ ಸಾಧಿಸಿದೆ.

Advertisement

ಗುರುವಾರದ 3ನೇ ಏಕದಿನದಲ್ಲಿ ಬ್ಯಾಟಿಂಗಿಗೆ ಇಳಿಸಲ್ಪಟ್ಟ ಪಾಕಿಸ್ಥಾನ 7 ವಿಕೆಟಿಗೆ 263 ರನ್‌ ಗಳಿಸಿದರೆ, ಆಸ್ಟ್ರೇಲಿಯ 45 ಓವರ್‌ಗಳಲ್ಲಿ ಮೂರೇ ವಿಕೆಟಿಗೆ 265 ರನ್‌ ಬಾರಿಸಿ ವಿಜಯಿಯಾಯಿತು. ಆಗ ನಾಯಕ ಸ್ಮಿತ್‌ 108 ರನ್‌ ಗಳಿಸಿ ಅಜೇಯರಾಗಿದ್ದರು.

ಸ್ಮಿತ್‌ 93ನೇ ಏಕದಿನದಲ್ಲಿ ಬಾರಿಸಿದ 8ನೇ ಶತಕ ಇದಾಗಿದೆ. 104 ಎಸೆತ ನಿಭಾಯಿಸಿದ ಅವರು 11 ಬೌಂಡರಿ ಹಾಗೂ ಒಂದು ಸಿಕ್ಸರ್‌ ಎತ್ತಿದರು. ಈ ಪಂದ್ಯಶ್ರೇಷ್ಠ ಇನ್ನಿಂಗ್ಸ್‌ ವೇಳೆ 3 ಸಾವಿರ ರನ್‌ ಕೂಡ ಪೂರ್ತಿಗೊಳಿಸಿದರು. ಇದಕ್ಕಾಗಿ ಸ್ಮಿತ್‌ ಆಡಿದ್ದು 79 ಇನ್ನಿಂಗ್ಸ್‌ ಮಾತ್ರ. ಇದು ಆಸೀಸ್‌ ದಾಖಲೆಯಾಗಿದೆ. ಬೆವನ್‌ ಮತ್ತು ಬೈಲಿ 80 ಇನ್ನಿಂಗ್ಸ್‌ಗಳಲ್ಲಿ ಈ ಸಾಧನೆ ಮಾಡಿದ್ದರು.

ಸ್ಮಿತ್‌ ಅವರಿಗೆ ಪೀಟರ್‌ ಹ್ಯಾಂಡ್ಸ್‌ಕಾಂಬ್‌ ಉತ್ತಮ ಬೆಂಬಲ ನೀಡಿದರು (82). ಇವರಿಬ್ಬರ 3ನೇ ವಿಕೆಟ್‌ ಜತೆಯಾಟದಲ್ಲಿ 183 ರನ್‌ ಒಟ್ಟುಗೂಡಿತು.

ಬಾಬರ್‌ ಜಂಟಿ ವಿಶ್ವದಾಖಲೆ
ಕಳೆದ ಪಂದ್ಯದ ಹೀರೋ, ಉಸ್ತುವಾರಿ ನಾಯಕ ಮೊಹಮ್ಮದ್‌ ಹಫೀಜ್‌ (4) ಅವರನ್ನು ಬೇಗನೇ ಕಳೆದುಕೊಂಡ ಪಾಕಿಸ್ಥಾನಕ್ಕೆ ಮತ್ತೂಬ್ಬ ಆರಂಭಕಾರ ಶಾರ್ಜೀಲ್‌ ಖಾನ್‌ ಹಾಗೂ ವನ್‌ಡೌನ್‌ ಬ್ಯಾಟ್ಸ್‌ಮನ್‌ ಬಾಬರ್‌ ಆಜಂ ಆಧಾರವಾದರು. ಇವರಿಬ್ಬರಿಂದ ಅರ್ಧ ಶತಕ ದಾಖಲಾಯಿತು. ಶಾರ್ಜೀಲ್‌ ಸರಿಯಾಗಿ 50 ರನ್‌ ಹೊಡೆದರೆ, ಬಾಬರ್‌ ಸರ್ವಾಧಿಕ 84 ರನ್‌ ಬಾರಿಸಿದರು.

Advertisement

ಈ ಆಟದ ವೇಳೆ ಬಾಬರ್‌ ಆಜಂ ಆತ್ಯಂತ ಕಡಿಮೆ ಇನ್ನಿಂಗ್ಸ್‌ಗಳಲ್ಲಿ ಸಾವಿರ ರನ್‌ ಪೂರ್ತಿಗೊಳಿಸಿದ ಜಂಟಿ ವಿಶ್ವದಾಖಲೆ ಸಾªಪಿಸಿದರು. ಇದಕ್ಕಾಗಿ ಬಾಬರ್‌ ಆಡಿದ್ದು 21 ಇನ್ನಿಂಗ್ಸ್‌ ಮಾತ್ರ. ವಿವಿಯನ್‌ ರಿಚರ್ಡ್ಸ್‌, ಕೆವಿನ್‌ ಪೀಟರ್‌ಸನ್‌, ಜೊನಾಥನ್‌ ಟ್ರಾಟ್‌ ಮತ್ತು ಕ್ವಿಂಟನ್‌ ಡಿ ಕಾಕ್‌ ಕೂಡ ಇಷ್ಟೇ ಇನ್ನಿಂಗ್ಸ್‌ಗಳಲ್ಲಿ ಈ ಮೈಲಿಗಲ್ಲು ನೆಟ್ಟಿದ್ದಾರೆ.

ಬಾಬರ್‌ ಸರಿಯಾಗಿ 100 ಎಸೆತ ಎದುರಿಸಿ 84 ರನ್‌ ಹೊಡೆದರು. ಇದರಲ್ಲಿ 4 ಬೌಂಡರಿ, ಒಂದು ಸಿಕ್ಸರ್‌ ಒಳಗೊಂಡಿತ್ತು. ಶಾರ್ಜೀಲ್‌ ಅವರ 50 ರನ್‌ 47 ಎಸೆತಗಳಿಂದ ಬಂತು. ಸಿಡಿಸಿದ್ದು 8 ಬೌಂಡರಿ ಹಾಗೂ ಒಂದು ಸಿಕ್ಸರ್‌. ಇವರಿಬ್ಬರನ್ನು ಹೊರತುಪಡಿಸಿದರೆ ತಲಾ 39 ರನ್‌ ಮಾಡಿದ ಶೋಯಿಬ್‌ ಮಲಿಕ್‌ ಮತ್ತು ಉಮರ್‌ ಅಕ್ಮಲ್‌ ಅವರದೇ ಹೆಚ್ಚಿನ ಗಳಿಕೆ.

ಕೊನೆಯ 10 ಓವರ್‌ಗಳಲ್ಲಿ ಆಸ್ಟ್ರೇಲಿಯ ಬಿಗಿಯಾದ ಬೌಲಿಂಗ್‌ ದಾಳಿ ಸಂಘಟಿಸಿದ್ದರಿಂದ ಪಾಕ್‌ ರನ್ನಿಗಾಗಿ ತಿಣುಕಾಡಿತು. ಈ 10 ಓವರ್‌ಗಳಲ್ಲಿ ಪಾಕಿಸ್ಥಾನಕ್ಕೆ ಗಳಿಸಲು ಸಾಧ್ಯವಾದದ್ದು ಕೇವಲ 50 ರನ್‌ ಮಾತ್ರ.

ಆಸೀಸ್‌ ಪರ ಜೋಶ್‌ ಹ್ಯಾಝಲ್‌ವುಡ್‌ 32ಕ್ಕೆ 3 ವಿಕೆಟ್‌ ಕಿತ್ತು ಹೆಚ್ಚಿನ ಯಶಸ್ಸು ಸಾಧಿಸಿದರು. ಟ್ರ್ಯಾವಿಸ್‌ ಹೆಡ್‌ 2 ವಿಕೆಟ್‌ ಕಿತ್ತರು.

ಸಂಕ್ಷಿಪ್ತ ಸ್ಕೋರ್‌: ಪಾಕಿಸ್ಥಾನ-7 ವಿಕೆಟಿಗೆ 263 (ಬಾಬರ್‌ 84, ಶಾರ್ಜೀಲ್‌ 50, ಮಲಿಕ್‌ 39, ಅಕ್ಮಲ್‌ 39, ಹ್ಯಾಝಲ್‌ವುಡ್‌ 32ಕ್ಕೆ 3, ಹೆಡ್‌ 65ಕ್ಕೆ 2). ಆಸ್ಟ್ರೇಲಿಯ-45 ಓವರ್‌ಗಳಲ್ಲಿ 3 ವಿಕೆಟಿಗೆ 265 (ಸ್ಮಿತ್‌ ಔಟಾಗದೆ 108, ಹ್ಯಾಂಡ್ಸ್‌ಕಾಂಬ್‌ 82, ವಾರ್ನರ್‌ 35).

ಪಂದ್ಯಶ್ರೇಷ್ಠ: ಸ್ಟೀವನ್‌ ಸ್ಮಿತ್‌.

ಸರಣಿಯ 4ನೇ ಪಂದ್ಯ ಜ. 22ರಂದು ಸಿಡ್ನಿಯಲ್ಲಿ ನಡೆಯಲಿದೆ.
 

Advertisement

Udayavani is now on Telegram. Click here to join our channel and stay updated with the latest news.

Next