ನವದೆಹಲಿ: ಒಂದು ಸಣ್ಣ ನಾಣ್ಯದ ಗಾತ್ರದ, ತೆಳುವಾದ ಕ್ಯಾಪ್ಸೂಲ್ ಒಂದು ಇಡೀ ಆಸ್ಟ್ರೇಲಿಯ ಸರ್ಕಾರವನ್ನೇ ತುದಿಗಾಲಲ್ಲಿ ನಿಲ್ಲಿಸಿದೆ. ಕಾರಣವೇನು ಗೊತ್ತಾ? ಅದು ಕಳೆದುಹೋಗಿದೆ. ಸರಿ ಅಂತಹದ್ದೇನಿದೆ ಅದರಲ್ಲಿ ಅನ್ನುತ್ತೀರಾ? ಅದು ಪ್ರಬಲ ವಿಕಿರಣಗಳನ್ನು ಹೊರಸೂಸಬಲ್ಲ ಸಾಮರ್ಥ್ಯ ಹೊಂದಿದೆ. ಅದರ ಸಂಪರ್ಕದಲ್ಲಿ ಬಹಳ ಕಾಲ ಇದ್ದರೆ ಚರ್ಮರೋಗ ಬರಬಹುದು, ಕಾಲಾಂತರದಲ್ಲಿ ಕ್ಯಾನ್ಸರ್‌ಗೂ ಕಾರಣವಾಗಬಹುದು. ಪಶ್ಚಿಮ ಆಸ್ಟ್ರೇಲಿಯದ ಒಂದು ಕಬ್ಬಿಣದ ಗಣಿಗಾರಿಕೆ ಪ್ರದೇಶ ಮತ್ತು ಪರ್ಥ್ ನಗರದ ನಡುವೆ ಈ ಕ್ಯಾಪ್ಸೂಲ್ ಟ್ರಕ್‌ನಲ್ಲಿ ಸಾಗಿಸುತ್ತಿದ್ದಾಗ ಕಳೆದುಹೋಗಿದೆ.
ಕ್ಯಾಪ್ಸೂಲ್ ಅನ್ನು ಕಬ್ಬಿಣದ ಅದಿರಿನಲ್ಲಿ ಕಬ್ಬಿಣದ ಪ್ರಮಾಣ ಎಷ್ಟಿದೆ ಎಂದು ಪರಿಶೀಲಿಸುವ ಮಾಪಕದಲ್ಲಿ ಬಳಸುತ್ತಾರೆ. ಈ ಮಾಪಕವನ್ನು ಜ.25ರಂದು ಮಾಡಬೇಕಾಗಿದ್ದ ಪರಿಶೀಲನೆಗಾಗಿ, ಜ.12ಕ್ಕೆ ಸಿದ್ಧಪಡಿಸಲಾಗಿತ್ತು. ಎಡವಟ್ಟಾಗಿದ್ದೆಂದರೆ ಈ ಕ್ಯಾಪ್ಸೂಲ್ ಮಾಪಕದಿಂದ ಹೊರಬಿದ್ದಿದೆ. ಬಹುಶಃ ಟ್ರಕ್‌ನ ಕುಲುಕಾಟದ ಪರಿಣಾಮ ಮಾಪಕದ ಬೋಲ್ಟ್‌ಗಳು ಕಳಚಿಕೊಂಡು, ಕ್ಯಾಪ್ಸೂಲ್ ಕಳೆದುಹೋಗಿದೆ. ಇದು ಗೊತ್ತಾಗಿದ್ದು ಜ.16ಕ್ಕೆ.
ಈ ಕ್ಯಾಪ್ಸೂಲನ್ನು ಸೀಸಿಯಮ್-137 ಎಂಬ ರಾಸಾಯನಿಕದಿಂದ ಸಿದ್ಧಪಡಿಸಲಾಗಿದೆ. ಇದಕ್ಕೆ ಪ್ರಬಲ ವಿಕಿರಣಗಳನ್ನು ಹೊರಸೂಸುವ ಶಕ್ತಿಯಿದೆ. ಇದರ ಅಡ್ಡಳತೆ ಕೇವಲ 6 ಮಿಲಿಮೀಟರ್, ಉದ್ದ 8 ಮಿಲಿಮೀಟರ್ ಇದೆ.