ದೋಹಾ: ಫಿಫಾ ವಿಶ್ವಕಪ್ ಫುಟ್ಬಾಲ್ಪಂದ್ಯಾವಳಿಯಲ್ಲಿ ಆಸ್ಟ್ರೇಲಿಯ ತಂಡ ಮೊದಲ ಗೆಲುವು ಸಾಧಿಸಿದೆ. ಪಂದ್ಯದ 23ನೇ ನಿಮಿಷದಲ್ಲಿ ಫಾರ್ವರ್ಡ್ ಆಟಗಾರ ಮಿಚೆಲ್ ಡ್ನೂಕ್ ಬಾರಿಸಿದ ಏಕೈಕ ಗೋಲಿನ ನೆರವಿನಿಂದ ಅದು ಟ್ಯುನೀಶಿಯವನ್ನು ಮಣಿಸಿತು.
ಮೈಕಲ್ ಡ್ನೂಕ್ 23ನೇ ನಿಮಿಷದಲ್ಲಿ ಈ ಪಂದ್ಯದ ಏಕೈಕ ಗೋಲು ಬಾರಿಸಿದರು. ಕ್ರೆಗ್ ಗುಡ್‌ವಿನ್ ಅವರಿಂದ ಪಾಸ್ ಪಡೆದ ಡ್ನೂಕ್, ಅಮೋಘ ಹೆಡ್ ಗೋಲ್ ಸಾಧಿಸುವಲ್ಲಿ ಯಶಸ್ವಿಯಾದರು. ಕಾಂಗರೂ ಪಡೆ ಕೊನೆಯ ವರೆಗೂ ಈ ಮುನ್ನಡೆಯನ್ನು ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಯಿತು. ದ್ವಿತೀಯಾರ್ಧದಲ್ಲಿ ಟ್ಯುನೀಶಿಯ ಪ್ರಬಲ ಹೋರಾಟ ನಡೆಸಿತಾದರೂ ಗೋಲು ಬಾರಿಸಲು ಸಫಲವಾಗಲಿಲ್ಲ.
ಈಗಾಗಲೇ ಫ್ರಾನ್ಸ್ ವಿರುದ್ಧ ಆಡಿದ ಮೊದಲ ಪಂದ್ಯದಲ್ಲಿ 1-4 ಅಂತರದಿಂದ ಸೋತಿದ್ದ ಆಸ್ಟ್ರೇಲಿಯಕ್ಕೆ ಇಲ್ಲಿ ಗೆಲುವು ಅನಿವಾರ್ಯವಾಗಿತ್ತು. ಟ್ಯುನೀಶಿಯ ಮೊದಲ ಪಂದ್ಯದಲ್ಲ ಡೆನ್ಮಾರ್ಕ್ ವಿರುದ್ಧ ಗೋಲ್‌ಲೆಸ್ ಡ್ರಾ ಮಾಡಿಕೊಂಡಿತ್ತು.
ಇದು 2010ರ ಬಳಿಕ ವಿಶ್ವಕಪ್‌ನಲ್ಲಿ ಆಸ್ಟ್ರೇಲಿಯಕ್ಕೆ ಒಲಿದ ಮೊದಲ ಜಯ. ಹಾಲಿ ಚಾಂಪಿಯನ್ ಫ್ರಾನ್ಸ್, ಬಲಿಷ್ಠ ಡೆನ್ಮಾರ್ಕ್ ತಂಡಗಳನ್ನು ಹೊಂದಿರುವ “ಡಿ’ ಬಣದಿಂದ ಉಳಿದ ತಂಡಗಳ ನಾಕೌಟ್ ಪ್ರವೇಶವನ್ನು ನಿರೀಕ್ಷಿಸುವುದು ಕಷ್ಟ. ಮುಂದಿನ ಪಂದ್ಯದಲ್ಲಿ ಡೆನ್ಮಾರ್ಕ್ ವಿರುದ್ಧ ಗೆದ್ದರೆ ಆಸ್ಟ್ರೇಲಿಯಕ್ಕೆ ಖಂಡಿತವಾಗಿಯೂ ಲಾಭವಾಗಲಿದೆ.