ಟೌನ್ಸ್‌ವಿಲ್ಲೆ: ಪ್ರವಾಸಿ ಜಿಂಬಾಬ್ವೆ ಎದುರಿನ ಮೊದಲ ಏಕದಿನ ಪಂದ್ಯವನ್ನು ಆಸ್ಟ್ರೇಲಿಯ 5 ವಿಕೆಟ್‌ಗಳಿಂದ ಸುಲಭದಲ್ಲಿ ಜಯಿಸಿದೆ. 3 ಪಂದ್ಯಗಳ ಸರಣಿಯಲ್ಲಿ 1-0 ಮುನ್ನಡೆ ಗಳಿಸಿದೆ.
ಬ್ಯಾಟಿಂಗ್‌ಗೆ ಇಳಿಸಲ್ಪಟ್ಟ ಜಿಂಬಾಬ್ವೆ ಕ್ಯಾಮರೂನ್ ಗ್ರೀನ್ ದಾಳಿಗೆ ಸಿಲುಕಿ 47.3 ಓವರ್‌ಗಳಲ್ಲಿ ಸರಿಯಾಗಿ 200 ರನ್ನಿಗೆ ಆಲೌಟ್ ಆಯಿತು. ಆಸ್ಟ್ರೇಲಿಯ 33.3 ಓವರ್‌ಗಳಲ್ಲಿ 5 ವಿಕೆಟಿಗೆ 201 ರನ್ ಬಾರಿಸಿತು.
ಜಿಂಬಾಬ್ವೆಯ ಓಪನಿಂಗ್ ಉತ್ತಮವಾಗಿಯೇ ಇತ್ತು. ಆದರೆ ಕ್ಯಾಮರಾನ್ ಗ್ರೀನ್ ದಾಳಿ ಆರಂಭಗೊಂಡ ಬಳಿಕ ಒಂದೇ ಸಮನೆ ವಿಕೆಟ್ ಉರುಳತೊಡಗಿತು. ಕೊನೆಯ 6 ವಿಕೆಟ್ ಬರೀ 15 ರನ್ ಅಂತರದಲ್ಲಿ ಬಿತ್ತು. ಗ್ರೀನ್ 33 ರನ್ ವೆಚ್ಚದಲ್ಲಿ 5 ವಿಕೆಟ್ ಕೆಡವಿದರು. ಈ ಪಂದ್ಯಕ್ಕೂ ಮುನ್ನ ಗ್ರೀನ್ ಏಕದಿನದಲ್ಲಿ ಉರುಳಿಸಿದ್ದು ಒಂದು ವಿಕೆಟ್ ಮಾತ್ರ.
ಚೇಸಿಂಗ್ ವೇಳೆ ಡೇವಿಡ್ ವಾರ್ನರ್ 57, ಸ್ಟೀವನ್ ಸ್ಮಿತ್ 48 ರನ್ ಹೊಡೆದರು. ಜಿಂಬಾಬ್ವೆ ಸರದಿಯಲ್ಲಿ ಮಧೆವೇರ್ 72, ಮರುಮನಿ 45 ರನ್ ಮಾಡಿದರು. ಇದು ಆಸ್ಟ್ರೇಲಿಯದಲ್ಲಿ ಜಿಂಬಾಬ್ವೆ ಆಡುತ್ತಿರುವ ಮೊದಲ ಏಕದಿನ ಸರಣಿ.
ಸೈಮಂಡ್ಸ್‌ಗೆ ಗೌರವ
ಪಂದ್ಯಕ್ಕೂ ಮುನ್ನ ನಡೆದ ಕಾರ್ಯಕ್ರಮವೊಂದರಲ್ಲಿ, ಅಗಲಿದ ಕ್ರಿಕೆಟಿಗ ಆ್ಯಂಡ್ರೂé ಸೈಮಂಡ್ಸ್ ಅವರಿಗೆ ಕುಟುಂಬದವರು ಹಾಗೂ ಮಿತ್ರರು ಸೇರಿ ಗೌರವಿಸಿ ನಮನ ಸಲ್ಲಿಸಿದರು. ಸೈಮಂಡ್ಸ್ ಜೂನ್ ತಿಂಗಳಲ್ಲಿ ಸಂಭವಿಸಿದ ಕಾರು ಅಪಘಾತದಲ್ಲಿ ದುರ್ಮರಣಕ್ಕೀಡಾಗಿದ್ದರು.