Advertisement

ವಾರ್ನರ್, ಫಿಂಚ್ ಭರ್ಜರಿ ಶತಕ ಆಸೀಸ್ 10 ವಿಕೆಟ್ ಗಳ ಜಯಭೇರಿ

10:14 AM Jan 15, 2020 | Hari Prasad |

ಮುಂಬಯಿ: ಭಾರತದ ವಿರುದ್ಧದ ಪ್ರಥಮ ಏಕದಿನ ಪಂದ್ಯವನ್ನು ಆಸ್ಟ್ರೇಲಿಯಾ 10 ವಿಕೆಟ್ ಗಳಿಂದ ಭರ್ಜರಿಯಾಗಿ ಗೆದ್ದುಕೊಂಡಿದೆ. ನಾಯಕ ಆರೋನ್ ಫಿಂಚ್ (110) ಮತ್ತು ಡೇವಿಡ್ ವಾರ್ನರ್ (128) ಅವರ ಭರ್ಜರಿ ಶತಗಳ ನೆರವಿನಿಂದ ಆಸೀಸ್ ಕೊಹ್ಲಿ ಪಡೆಯನ್ನು ಬಗ್ಗು ಬಡಿಯಿತು. ಈ ಗೆಲುವಿನೊಂದಿಗೆ ಪ್ರವಾಸಿ ಆಸ್ಟ್ರೇಲಿಯಾ ತಂಡವು ಭಾರತ ವಿರುದ್ಧದ ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿದೆ.

Advertisement

ಭಾರತ ನೀಡಿದ 255 ರನ್ ಗಳ ಗುರಿಯನ್ನು ಬೆನ್ನತ್ತಿದ ಆಸ್ಟ್ರೇಲಿಯಾಕ್ಕೆ ಅನುಭವಿ ಆಟಗಾರರಾದ ಡೇವಿಡ್ ವಾರ್ನರ್ ಮತ್ತು ಕಪ್ತಾನ ಆರೋನ್ ಫಿಂಚ್ ಭರ್ಜರಿ ಪ್ರಾರಂಭ ಒದಗಿಸಿದರು. ಮೊದಲ ಓವರಿನಿಂದಲೇ ಭಾರತದ ದಾಳಿಯನ್ನು ದಂಡಿಸುತ್ತಾ ಸಾಗಿದ ಈ ಜೋಡಿಯನ್ನು ಮುರಿಯುವಲ್ಲಿ ಭಾರತೀಯ ಬೌಲರ್ ಗಳಿಗೆ ಸಾಧ್ಯವಾಗಲೇ ಇಲ್ಲ. ಅಂತಿಮವಾಗಿ ಇನ್ನೂ 12.2 ಓವರ್ ಗಳು ಬಾಕಿ ಇರುವಂತೆಯೇ ಆಸ್ಟ್ರೇಲಿಯಾ ಯಾವುದೇ ವಿಕೆಟ್ ಕಳೆದುಕೊಳ್ಳದೆ ಗುರಿಯನ್ನು ಬೆನ್ನತ್ತಿ ಭರ್ಜರಿ ವಿಜಯವನ್ನು ತನ್ನದಾಗಿಸಿಕೊಂಡಿತು.


ವಿಶ್ವದ ಉತ್ತಮ ಏಕದಿನ ಆರಂಭಿಕ ಜೋಡಿಗಳಲ್ಲಿ ಒಂದಾದ ಆರೋನ್ ಫಿಂಚ್ ಮತ್ತು ಡೇವಿಡ್ ವಾರ್ನರ್ ಇಂದು ಭಾರತದ ಬೌಲರ್ ಗಳನ್ನು ವಾಂಖೇಡೆ ಮೈದಾನದಲ್ಲಿ ಬೆವರಿಳಿಸಿದರು. ಇವರಲ್ಲಿ ವಾರ್ನರ್ ಬ್ಯಾಟಿಂಗ್ ಅಬ್ಬರದಿಂದ ಕೂಡಿತ್ತು. 112 ಎಸೆತೆಗಳಲ್ಲಿ ಅಜೇಯ 128 ರನ್ ಬಾರಿಸಿದ ವಾರ್ನರ್ 17 ಭರ್ಜರಿ ಬೌಂಡರಿ ಮತ್ತು 03 ಸಿಕ್ಸರ್ ಸಹ ಹೊಡೆದರು. ಇನ್ನು ನಾಯಕ ಆರೋನ್ ಫಿಂಚ್ 114 ಎಸೆತೆಗಳಿಂದ ಅಜೇಯ 110 ರನ್ ಬಾರಿಸಿದರು. ಇದರಲ್ಲಿ 13 ಬೌಂಡರಿ ಹಾಗೂ 02 ಸಿಕ್ಸರ್ ಒಳಗೊಂಡಿತ್ತು.


ಇನ್ನು ಭಾರತೀಯ ಬೌಲರ್ ಗಳ ವಿಷಯಕ್ಕೆ ಬರುವುದಾದರೆ, ಜಸ್ಪ್ರೀತ್ ಬುಮ್ರಾ, ಮಹಮ್ಮದ್ ಶಮಿ ಮತ್ತು ಶಾರ್ದೂಲ್ ಠಾಕೂರ್ ಸಹಿತವಾಗಿದ್ದ ತ್ರಿವಳಿ ವೇಗಿಗಳ ಪಡೆ ಇಂದು ಆಸೀಸ್ ಆರಂಭಿಕರನ್ನು ಕಟ್ಟಿಹಾಕುವಲ್ಲಿ ಸಂಪೂರ್ಣ ವಿಫಲವಾಯಿತು. ಕುಲದೀಪ್ ಯಾದವ್ ಮತ್ತು ರವೀಂದ್ರ ಜಡೇಜಾ ತಮ್ಮ ಬೌಲಿಂಗ್ ನಲ್ಲಿ ನಿಯಂತ್ರಣ ಸಾಧಿಸಿದರೂ ಫಿಂಚ್-ವಾರ್ನರ್ ಜೊತೆಯಾಟವನ್ನು ಮುರಿಯುವಲ್ಲಿ ಇವರ ಬೌಲಿಂಗ್ ಮ್ಯಾಜಿಕ್ ನಡೆಯಲೇ ಇಲ್ಲ. ಓರ್ವ ಸ್ಪೆಷಲಿಸ್ಟ್ ಬೌಲರ್ ಕೊರತೆ ಕೊಹ್ಲಿ ಪಡೆಯನ್ನು ಇಂದು ಬಹುವಾಗಿ ಕಾಡಿತು.


Advertisement

Udayavani is now on Telegram. Click here to join our channel and stay updated with the latest news.

Next