Advertisement

ಭಾರತ-ಆಸೀಸ್‌ ಮಹಿಳಾ ಹಗಲುರಾತ್ರಿ ಟೆಸ್ಟ್‌ ಪಂದ್ಯಕ್ಕೆ ಮಳೆ ಅಡ್ಡಿ

08:54 PM Sep 30, 2021 | Team Udayavani |

ಗೋಲ್ಡ್‌ಕೋಸ್ಟ್‌: ಭಾರತ-ಆಸ್ಟ್ರೇಲಿಯ ಮಹಿಳಾ ಕ್ರಿಕೆಟ್‌ ತಂಡದ ನಡುವಿನ ಹಗಲುರಾತ್ರಿ ಟೆಸ್ಟ್‌ ಪಂದ್ಯಕ್ಕೆ ಮಳೆಯಿಂದ ಅಡ್ಡಿಯಾಗಿದೆ. ಮೊದಲ ದಿನ ಕೇವಲ 44.1 ಓವರ್‌ಗಳ ಆಟವಷ್ಟೇ ನಡೆದಿದ್ದು, ಬ್ಯಾಟಿಂಗಿಗೆ ಇಳಿಸಲ್ಪಟ್ಟ ಭಾರತ ಒಂದು ವಿಕೆಟಿಗೆ 132 ರನ್‌ ಗಳಿಸಿ ಗಮನ ಸೆಳೆದಿದೆ. ಇದು ಭಾರತ ಮಹಿಳಾ ಆಡುತ್ತಿರುವ ಮೊದಲ ಹಗಲುರಾತ್ರಿ ಟೆಸ್ಟ್‌ ಪಂದ್ಯವೆನ್ನುವುದು ಗಮನಾರ್ಹ.

Advertisement

ಆರಂಭಿಕ ಆಟಗಾರ್ತಿ ಸ್ಮೃತಿ ಮಂಧನಾ ಅವರ ಜೀವನಶ್ರೇಷ್ಠ ಬ್ಯಾಟಿಂಗ್‌ ಮೊದಲ ದಿನದ ಆಕರ್ಷಣೆ ಎನಿಸಿಕೊಂಡಿತು. ಅವರು 80 ರನ್‌ ಮಾಡಿ ಬ್ಯಾಟಿಂಗ್‌ ಕಾಯ್ದುಕೊಂಡಿದ್ದಾರೆ. ಮಂಧನಾ ಅವರ ಹಿಂದಿನ ಸರ್ವಾಧಿಕ ಗಳಿಕೆ 78 ರನ್‌ ಆಗಿತ್ತು.

144 ಎಸೆತ ನಿಭಾಯಿಸಿರುವ ಮಂಧನಾ 15 ಬೌಂಡರಿ ಜತೆಗೆ 1 ಸಿಕ್ಸರ್‌ ಕೂಡ ಸಿಡಿಸಿ ಆಸೀಸ್‌ ದಾಳಿಗೆ ಸವಾಲಾಗಿ ಉಳಿದಿದ್ದಾರೆ. ಇವರೊಂದಿಗೆ 16 ರನ್‌ ಮಾಡಿರುವ ಪೂನಂ ರಾವತ್‌ (57 ಎಸೆತ, 1 ಬೌಂಡರಿ) ಕ್ರೀಸಿನಲ್ಲಿದ್ದಾರೆ. ಮಂಧನಾ ಮತ್ತು ಶಫಾಲಿ ವರ್ಮ ಆರಂಭಿಕ ವಿಕೆಟಿಗೆ 25.1 ಓವರ್‌ಗಳಿಂದ 93 ರನ್‌ ಪೇರಿಸಿದರು. ಶಫಾಲಿ ಗಳಿಕೆ 31 ರನ್‌ (64 ಎಸೆತ, 4 ಬೌಂಡರಿ). ಇವರ ವಿಕೆಟ್‌ ಮೊಲಿನೆಕ್ಸ್‌ ಪಾಲಾಯಿತು. ಮಳೆಯಿಂದಾಗಿ ಅಂತಿಮ ಅವಧಿಯ ಆಟ ಸಂಪೂರ್ಣ ನಷ್ಟವಾಯಿತು. ದ್ವಿತೀಯ ದಿನದಾಟವನ್ನು ಅರ್ಧ ಗಂಟೆ ಬೇಗ ಆರಂಭಿಸಲು ನಿರ್ಧರಿಸಲಾಗಿದೆ.

6 ಮಂದಿಗೆ ಮೊದಲ ಟೆಸ್ಟ್‌: ಈ ಪಂದ್ಯದ ಮೂಲಕ 6 ಆಟಗಾರ್ತಿಯರು ಟೆಸ್ಟ್‌ ಕ್ಯಾಪ್‌ ಧರಿಸಿದರು. ಇದರಲ್ಲಿ ಆಸ್ಟ್ರೇಲಿಯದ ನಾಲ್ವರು, ಭಾರತದ ಇಬ್ಬರು ಸೇರಿದ್ದಾರೆ. ಮೇಘನಾ ಸಿಂಗ್‌ ಮತ್ತು ಯಾಸ್ತಿಕಾ ಭಾಟಿಯಾ ಚೊಚ್ಚಲ ಟೆಸ್ಟ್‌ ಆಡಲಿಳಿದ ಭಾರತದ ಆಟಗಾರ್ತಿಯರು. ಆಸ್ಟ್ರೇಲಿಯ ಪರ ಅನ್ನಾಬೆಲ್‌ ಸದರ್ಲೆಂಡ್‌, ಡಾರ್ಸಿ ಬ್ರೌನ್‌, ಜಾರ್ಜಿಯಾ ವೇರ್‌ಹ್ಯಾಮ್‌ ಮತ್ತು ಸ್ಟೆಲ್ಲಾ ಕ್ಯಾಂಬೆಲ್‌ ಚೊಚ್ಚಲ ಟೆಸ್ಟ್‌ ಆಡುವ ಅದೃಷ್ಟ ಸಂಪಾದಿಸಿದರು.

ಸಂಕ್ಷಿಪ್ತ ಸ್ಕೋರ್‌: ಭಾರತ ಮೊದಲ ಇನಿಂಗ್ಸ್‌ 132/1 (ಸ್ಮತಿ ಮಂಧನಾ ಅಜೇಯ 80, ಶಫಾಲಿ ವರ್ಮಾ 31).

Advertisement
Advertisement

Udayavani is now on Telegram. Click here to join our channel and stay updated with the latest news.

Next