ಔರಾದ: ತಾಲೂಕಿನಲ್ಲಿ ಭೂ ಸೇನಾ ನಿಗಮದಿಂದ ನಡೆದ ಕಾಮಗಾರಿಗಳು ಸಂಪೂರ್ಣ ಕಳಪೆಯಾಗಿವೆ ಎಂದು ಆರೋಪಿಸಿ ರಾಯಿಪಳ್ಳಿ ಗ್ರಾಮಸ್ಥರು ಹಾಗೂ ದಲಿತ ಸಂಘರ್ಷ ಸಮಿತಿ ಕಾರ್ಯಕರ್ತರು ಪಟ್ಟಣದಲ್ಲಿ ಪ್ರತಿಭಟನಾ ರ್ಯಾಲಿ ನಡೆಸಿ ಮುಖ್ಯಮಂತ್ರಿಗಳಿಗೆ ಬರೆದ ಮನವಿಯನ್ನು ತಹಶೀಲ್ದಾರಗೆ ಸಲ್ಲಿಸಿದರು. ಭೂ ಸೇನಾ ನಿಗಮ ಕೈಗೊಂಡ ಶೆಂಬೆಳ್ಳಿ-ಬೀದರ ರಸ್ತೆ ಕಾಮಗಾರಿ, ನಾಗಮಾರಪಳ್ಳಿ-ರಾಯಿಪಳ್ಳಿ ರಸ್ತೆ, ಧರಿ ಹನುಮಾನ ಮಂದಿರ ರಸ್ತೆ, ಕಮಲನಗರ-ಮದನೂರ ರಸ್ತೆ, ತಾಲೂಕಿನಲ್ಲಿನ ಅಂಗನವಾಡಿ ಕಟ್ಟಡಗಳು ಅರ್ಧಕ್ಕೆ ನಿಂತಿವೆ. ಅಲ್ಲದೇ ತಾಲೂಕು ಕೆಂದ್ರ ಸ್ಥಾನದಲ್ಲಿನ ಬಿಇಒ ಕಚೇರಿ ಕಾಮಗಾರಿ ಕಳಪೆಯಾಗಿದೆ ದಸಂದ ತಾಲೂಕು ಸಂಚಾಲಕ ಧನರಾಜ ಮುಸ್ತಾಪೂರೆ ಹೇಳಿದರು. ಶೆಂಬೆಳ್ಳಿ ಗ್ರಾಮದ ವರೆಗಿನ ರಸ್ತೆ ನಿರ್ಮಿಸಿದ ವರ್ಷದಲ್ಲೇ ಹಾಳಾಗಿದೆ. ಈ ಹಿನ್ನೆಲೆಯಲ್ಲಿ ಕಾಮಗಾರಿಗಳ ಕುರಿತು ತನಿಖೆ ನಡೆಸಲು ಜಿಲ್ಲಾಧಿಕಾರಿಗಳು ಕ್ರಮ ಕೈಗೊಳ್ಳಬೇಕು. ಇಲ್ಲವಾದಲ್ಲಿ ಮುಂಬರುವ ದಿನಗಳಲ್ಲಿ ಬೀದರ ಜಿಲ್ಲಾ ಕೆಂದ್ರದ ಭೂಸೇನಾ ನಿಗಮದ ಕಚೇರಿಗೆ ಮುತ್ತಿಗೆ ಹಾಕಿ ಉಗ್ರ ಪ್ರತಿಭಟನೆ ನಡೆಸಲಾಗುತ್ತದೆ ಎಂದರು. ಗ್ರಾಮ ಹಾಗೂ ತಾಲೂಕಿನ ಅಭಿವೃದ್ಧಿಗಾಗಿ ಸರ್ಕಾರ ಪ್ರತಿವರ್ಷ ಕೋಟ್ಯಂತರ ರೂಪಾಯಿ ಅನುದಾನ ನೀಡುತ್ತಿದೆ. ಆದರೆ ತಾಲೂಕಿನಲ್ಲಿ 2014-15ನೇ ಸಾಲಿನ ಶೇ.70ಕಟ್ಟಡ ಕಾಮಗಾರಿಗಳು ಅರ್ಧಕ್ಕೆ ನಿಂತಿವೆ ಎಂದು ಆರೋಪಿಸಿದರು. ರಾಯಿಪಳ್ಳಿ ಗ್ರಾಮದ ದಿನೇಶ, ನಾಗಮಾರಪಳ್ಳಿ-ರಾಯಿಪಳ್ಳಿ ಗ್ರಾಮದ 1.50 ಕಿ.ಮೀ ರಸ್ತೆ ಕಾಮಗಾರಿ ಪೂರ್ಣಗೊಂಡ ಕೇಲವೇ ತಿಂಗಳಲ್ಲಿ ಹಾಳಾಗಿದೆ. ಹಾಗಾಗಿ ಪ್ರತಿಭಟನೆ
ಅನಿವಾರ್ಯವಾಗಿದೆ ಎಂದರು. ಬಸವರಾಜ ಮಾಳಗೆ, ಸುಭಾಷ ಲಾದಾ, ಗಣಪತಿ ವಾಸುದೇವ, ಮಲ್ಲಿಕಾರ್ಜುನ, ಸಂಜುಚಿಕಲಿ, ಪಂಡರಿ ವಾಸುದೇವ, ರಮೇಶ ಖಾಶೆಂಪುರ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು. ನಾಗಮಾರಪಳ್ಳಿ-ರಾಯಿಪಳ್ಳಿ ಗ್ರಾಮದ ಹಾಳಾದ ರಸ್ತೆಯಲ್ಲಿ ಸಣ್ಣ ಗುಂಡಿಗಳು ಬಿದ್ದಿವೆ. ವಾರದಲ್ಲಿ ಎಲ್ಲಾ ಗುಂಡಿಗಳನ್ನು ಮುಚ್ಚಲಾಗುತ್ತದೆ ಎಂದು ಭೂಸೇನಾ ನಿಗಮದ ಎಡಿಎಸ್‌ಜಿ ಬಿರಾದರ ತಿಳಿಸಿದ್ದಾರೆ.