Advertisement

ಜನಪದ ಸಂಸ್ಕೃತಿ ಸಂರಕ್ಷಣೆಯಾಗಲಿ

04:09 PM Dec 09, 2019 | Naveen |

ಔರಾದ: ದೇಶದ ಮೂಲ ಸಂಸ್ಕೃತಿ ಉಳಿಯಬೇಕಾದರೆ ಜನಪದ ಕಲೆಯನ್ನು, ಜಾನಪದ ಸಾಹಿತ್ಯವನ್ನು ಸಂರಕ್ಷಿಸಿ ಬೆಳೆಸುವ ಕಾರ್ಯ ನಡೆಯಬೇಕಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಪ್ರಭು ಚವ್ಹಾಣ ಕರೆ ನೀಡಿದರು.

Advertisement

ಪಟ್ಟಣದ ಎಂ.ಐ. ಪ್ರಾಂಗಣದಲ್ಲಿ ರವಿವಾರ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಆಯೋಜಿಸಿದ್ದ ಜನಪರ ಉತ್ಸವ ಕಾರ್ಯಕ್ರಮವನ್ನು ಕುಟ್ಟುವ ಮತ್ತು ಬೀಸುವ ಮೂಲಕ ಉದ್ಘಾಟಿಸಿ ಮಾತನಾಡಿದ ಅವರು, ನಮ್ಮ ಶ್ರೀಮಂತ ಸಂಸ್ಕೃತಿ ದಿನನಿತ್ಯದ ಬದುಕಿನಲ್ಲಿ ಬಳಸಬೇಕು ಎಂದು ಹೇಳಿದರು.

ಮೊಬೈಲ್‌ ಬಳಕೆಗೆ ಬಲಿಯಾಗುತ್ತಿರುವ ಯುವ ಜನಾಂಗ ಜನಪದ ಕಲೆಯತ್ತ ಮುಖ ಮಾಡಬೇಕಿದೆ. ದಿನವಿಡಿ ಸಾಮಾಜಿಕ ಜಾಲತಾಣಗಳ ದಾಸ್ಯಕ್ಕೆ ಬಲಿಯಾಗಿ ಜೀವನದಲ್ಲಿ ಎಂದಿಗೂ ಮರಳದಿರುವ ಸಮಯವನ್ನು ವ್ಯರ್ಥ ಮಾಡಿಕೊಳ್ಳುತ್ತಿರುವುದು ದುರಾದೃಷ್ಟ ಎಂದು ಬೇಸರ ವ್ಯಕ್ತಪಡಿಸಿದರು.

ಸಂತ, ಮಹಾತ್ಮ, ಶರಣ, ದಾಸರ ಪರಂಪರೆಯಿಂದ ಪ್ರಭಾವಿತವಾದ ನಮ್ಮ ನಾಡು ಇಡಿ ದೇಶದಲ್ಲಿಯೇ ವಿಭಿನ್ನ ಮತ್ತು ವಿಶೇಷ ಸಂಸ್ಕೃತಿ ಹೊಂದಿದ್ದು, ಕನ್ನಡದ ಸಂಸ್ಕೃತಿ ಸ್ವಾಭಿಮಾನದಿ ಮಾನವೀಯತೆ ಮೆರೆದ ಸಂಸ್ಕೃತಿಯ ತವರೂರು. ಇದನ್ನು ಯಾವತ್ತೂ ಅಳಿಸದಂತೆ ಕನ್ನಡ ತಾಯಿ ಭುವನೇಶ್ವರಿಯ ಸೇವೆ ಅತ್ಯಂತ ಪ್ರಾಮಾಣಿಕವಾಗಿ ನಡೆಯಬೇಕಿದೆ ಎಂದು ಹೇಳಿದರು.

ಜಿಪಂ ಅಧ್ಯಕ್ಷೆ ಗೀತಾ ಪಂಡಿತರಾವ್‌ ಚಿದ್ರಿ ಅಧ್ಯಕ್ಷತೆ ವಹಿಸಿ ಮಾತನಾಡಿ, ಗಡಿ ತಾಲೂಕು ಔರಾದನಲ್ಲಿ ಜನಪದ ಕಲಾವಿದರು ಹೆಚ್ಚಿನ ಸಂಖ್ಯೆಯಲ್ಲಿ ಕಾಣಸಿಗುತ್ತಾರೆ. ಅದೆಷ್ಟೋ ವಯಸ್ಸಾದ ಹಿರಿಯ ಜನಪದ ಕಲಾವಿದರು, ಜಾನಪದ ಹಾಡುಗಾರ್ತಿಯರು ಆರ್ಥಿಕ ಸಂಕಷ್ಟಕ್ಕೆ ಸಿಲುಕಿ ಸಮಸ್ಯೆ ಅನುಭವಿಸುತ್ತಿದ್ದು, ಅವರಿಗೆ ನೆರವು ನೀಡಬೇಕಿದೆ ಎಂದರು.

Advertisement

ಸ್ವಾಸ್ಥ್ಯ ಕಳೆದುಕೊಳ್ಳದೆ ಇಳಿ ವಯಸ್ಸಿನಲ್ಲಿಯೂ ಕೂಡ ತೋರುವ ಸಾಹಸ ಕಲೆಯನ್ನು ಹಣದ ಮೌಲ್ಯದಿಂದ ಅಳಿಯದೇ ನಮ್ಮ ಸಂಸ್ಕೃತಿಯ ಪ್ರತೀಕವಾಗಿ ಕಾಣಬೇಕಿದೆ. ಹೆಚ್ಚಿನ ಕಲಾವಿದರು ಇರುವ ಔರಾದ ಕಲಾವಿದರಿಗೆ ಮಾಸಾಶನ ವ್ಯವಸ್ಥೆಯನ್ನು ಸರಿಯಾಗಿ ಮಾಡಬೇಕಿದೆ ಎಂದು ಸಲಹೆ ನೀಡಿದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಸಿದ್ರಾಮ ಸಿಂಧೆ ಸ್ವಾಗತಿಸಿದರು. ಈ ಸಂದರ್ಭದಲ್ಲಿ ರಾಜ್ಯದ ವಿವಿಧ ಜಿಲ್ಲೆಗಳಿಂದ ಆಗಮಿಸಿದ ಕಲಾವಿದರು ಹಲವು ಬಗೆಯ ಕಲೆಯನ್ನು ಪ್ರದರ್ಶಿಸಿದರು. ವೇದಿಕೆಯ ಮೇಲೆ ಕಸಾಪ ಅಧ್ಯಕ್ಷ ಜಗನ್ನಾಥ ಮೂಲಗೆ, ಜಾನಪದ ಅಕಾಡೆಮಿಯ ಮಾಜಿ ಸದಸ್ಯ ವಿಜಯಕುಮಾರ ಸೋನಾರೆ ಪ್ರಮುಖರಾದ ಸುರೇಶ ಭೋಸ್ಲೆ, ಮಾಣಿಕ ಚವ್ಹಾಣ, ಬಂಡೆಪ್ಪ ಕಂಟೆ ಮತ್ತಿತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next