ಕಾರ್ಕಳ : ನಮ್ಮನ್ನು ಪ್ರೀತಿಯಿಂದ ಸಲಹುವ ದೇವರು ಎಲ್ಲ ವೇಳೆಯಲ್ಲಿಯೂ ನಮ್ಮೊಡನೆ ಇರುತ್ತಾರೆ. ದೈನಂದಿನ ಚಟುವಟಿಕೆಗಳಲ್ಲಿ ನಮ್ಮೊಡನೆ ದೇವರ ಇರುವಿಕೆಯನ್ನು ಗುರುತಿಸಿ ಅವರನ್ನು ಅಖಂಡವಾಗಿ ಪ್ರೀತಿಸಿ, ಪರರಿಗೆ ಒಳಿತು ಮಾಡಿದಾಗ ನಾವು ಅವರ ಸಾಕ್ಷಿಗಳಾಗಲು ಸಾಧ್ಯ ಎಂದು ರೈ| ರೆ| ಡಾ| ಅಲೋಶಿಯಸ್ ಪಾವ್É ಡಿ’ಸೋಜಾ ಹೇಳಿದರು.
ಅವರು ಅತ್ತೂರು ಸಂತ ಲಾರೆನ್ಸ್ ಬಸಿಲಿಕಾ ಪುಣ್ಯಕ್ಷೇತ್ರದ ಮಹೋತ್ಸವದ ನಾಲ್ಕನೇ ದಿನವಾದ ಬುಧವಾರ ಪ್ರಮುಖ ಬಲಿಪೂಜೆಯನ್ನು ಅರ್ಪಿಸಿ ಪ್ರಬೋಧನೆ ನೀಡಿದರು.
ಪರಮ ಪ್ರಸಾದದಲ್ಲಿರುವ ಪ್ರಭು ಕ್ರಿಸ್ತರು ನಾವು ದೇವರ ಸಾಕ್ಷಿಗಳಾಗಲು ಕೃಪೆ ನೀಡುತ್ತಾರೆ. ಅವರನ್ನು ಅನುಸರಿಸಿ ಈ ಪ್ರಪಂಚದಲ್ಲಿ ನೈಜ ವಿಶ್ವಾಸಿಗಳಾಗಿ ಬಾಳ್ಳೋಣ ಎಂದರು.
ಜ. 22ರಂದು ಆರಂಭಗೊಂಡ ವಾರ್ಷಿಕ ಮಹೋತ್ಸವದ ನಾಲ್ಕನೇ ದಿನದಂದು ದೇವರ ವಾಕ್ಯವನ್ನು ಧ್ಯಾನಿಸಿ ವಿಶೇಷ ಪೂಜೆ ಪ್ರಾರ್ಥನೆ ಗಳನ್ನು ನೆರವೇರಿಸಲಾಯಿತು. ದಿನದ ಇತರ ಬಲಿಪೂಜೆಗಳನ್ನು ವಂ| ಹೆರಾಲ್ಡ್ ಪಿರೇರಾ ಉಡುಪಿ, ವಂ| ಸಂತೋಷ್ ಮಿನೇಜಸ್ ಮಂಗಳೂರು, ವಂ| ಸ್ಟ್ಯಾನಿ ಡಿ’ಸೋಜಾ ಶಿವಮೊಗ್ಗ, ವಂ| ಸುನಿಲ್ ಡಿಸಿಲ್ವ ಸಾಸ್ತಾನ ನೆರ
ವೇರಿಸಿದರು.
ಬಸಿಲಿಕಾದ ನಿರ್ದೇಶಕರಾದ ವಂ| ಆಲ್ಬನ್ ಡಿ’ಸೋಜಾ ಕನ್ನಡ ಬಲಿ ಪೂಜೆಯನ್ನು ಅರ್ಪಿಸಿ, ರೋಗಿಗಳಿಗಾಗಿ ವಿಶೇಷ ಪ್ರಾರ್ಥನೆಯನ್ನು ಸಲ್ಲಿಸಿದರು. ದಿನದ ಅಂತಿಮ ಬಲಿಪೂಜೆಯನ್ನು ವಂ| ವಲೇರಿಯಮ್ ಮೆಂಡೋನ್ಸಾ ಕಲ್ಯಾಣ್ಪುರ ಅವರು ನೆರವೇರಿಸುವುದರೊಂದಿಗೆ ಮಹೋತ್ಸವದ ನಾಲ್ಕನೇ ದಿನದ ಕಾರ್ಯಕ್ರಮಗಳಿಗೆ ತೆರೆ ಬಿದ್ದಿತು.
ಮಂಗಳೂರು ವಿಭಾಗದ ಲೋಕಾಯುಕ್ತ ಎಸ್ಪಿ ಸೈಮನ್, ಕಾರ್ಕಳ ಡಿವೈಎಸ್ಪಿ ವಿಜಯಪ್ರಸಾದ್ ಮೊದಲಾದ ಗಣ್ಯರು ಭೇಟಿಯಿತ್ತರು.
Related Articles
ಅಂತಿಮ ದಿನ ಗುರುವಾರ
ಮಹೋತ್ಸವದ ಐದನೇ ಮತ್ತು ಅಂತಿಮ ದಿನ ಗುರುವಾರ ಬೆಳಗ್ಗೆ 8, 10, 12 ಹಾಗೂ ಮಧ್ಯಾಹ್ನ 2, 4, 6 ಮತ್ತು 8 ಗಂಟೆಗೆ ಬಲಿಪೂಜೆಗಳು ನೆರವೇರಲಿವೆ. ಬೆಳಗ್ಗೆ 10 ಗಂಟೆಯ ವಿಶೇಷ ಸಾಂಭ್ರಮಿಕ ಬಲಿಪೂಜೆಯನ್ನು ಬೆಂಗಳೂರಿನ ನಿವೃತ್ತ ಧರ್ಮಾಧ್ಯಕ್ಷ ರೈ| ರೆ| ಡಾ| ಬರ್ನಾರ್ಡ್ ಮೊರಾಸ್ನೆರವೇರಿಸಿ ಪ್ರಬೋಧನೆ ನೀಡಲಿದ್ದಾರೆ. ಮಹೋತ್ಸವದ ಅಂತಿಮ ಪೂಜೆ ಸಂಜೆ 8 ಗಂಟೆಗೆ ನೆರವೇರಲಿದೆ.