ಮನಸ್ಸಿಗೆ ಮುದ ನೀಡುವ ದೃಶ್ಯ ಹಾಗೂ ಆಶು ಚಿತ್ರ ಕಾರ್ಯಕ್ರಮವನ್ನು ಆರ್ಟಿಸ್ಟ್ಸ್ ಫೋರಂ ಉಡುಪಿ ಇತ್ತೀಚೆಗೆ ಹಮ್ಮಿಕೊಂಡಿತ್ತು. ಕಲಾವಿದರಾದ ಗಣೇಶ್ ಸೋಮಯಾಜಿಯವರ ಜಲವರ್ಣ ಆಶು ಚಿತ್ರ ಪ್ರಾತ್ಯಕ್ಷಿಕೆಯ ಕ್ಷಣಗಳು ಅವಿಸ್ಮರಣೀಯ. ಸೋಮಯಾಜಿಯವರು ಜಲವರ್ಣದಲ್ಲಿ ನುರಿತವರಾಗಿದ್ದು, ಕರಾವಳಿಯ ಬದುಕನ್ನು, ಪ್ರಕೃತಿಚಿತ್ರವನ್ನು ತನ್ನದೇ ಶೈಲಿಯಲ್ಲಿ ಚಿತ್ರಿಸಿದ್ದಾರೆ. ಉಡುಪಿಯ ಪುತ್ತೂರಿನ ಹೆರಿಟೇಜ್ ಹೌಸ್ ಕಲಾಪ್ರೇಮಿ ಕೃಷ್ಣಮೂರ್ತಿ ಭಟ್ಟರು ನಿರ್ಮಿಸಿದ ಮನೆ ಪುರಾತನ ಜೀವನ ಶೈಲಿಯನ್ನು ನೆನೆಪಿಸುತ್ತದೆ.ಅವರ ಸಂಗ್ರಹದ ವಸ್ತುಗಳು, ಅವುಗಳ ಜೋಡಣೆ ಮನಸನ್ನು ಮುದಗೊಳಿಸುತ್ತದೆ. ಆ ದೃಶ್ಯವನ್ನು ಸೋಮಯಾಜಿಯವರು ಜಲವರ್ಣದಲ್ಲಿ ಆಶುಚಿತ್ರ ಬಿಡಿಸಿದರು. ಯಥಾ ದೃಶ್ಯ ಚಿತ್ರಣಕ್ಕಾಗಿ ಒಂದು ಸ್ಥಳ ಆಯ್ಕೆ ಮಾಡಿದ ಸೋಮಯಾಜಿಯವರು ಅಸಂಗತ, ವಿಸ್ತೀರ್ಣವಾದ ಚಿತ್ರಣ ಮೂಡಿಸಿದರು. ನೇರ ದೃಷ್ಟಿಗೆ ಮುಂಭಾಗ ಮಾತ್ರ ಗೋಚರಿಸಿದರೂ ಮೂರೂ ಆಯಾಮಗಳಲ್ಲಿ ತೋರಲ್ಪಡುವ ಚಿತ್ರಣ ಮೂಡಿಬಂತು. ಇದು ಛಾಯಾ ಚಿತ್ರಣದಲ್ಲಿ ಸಾಧ್ಯವಾದರೂ ಆಶುಚಿತ್ರದಲ್ಲಿ ತೋರ್ಪಡಿಸಲು ಅಭ್ಯಾಸ, ಅನುಭವ ಬೇಕಾಗುತ್ತದೆ. ಯಥಾಚಿತ್ರ ರೂಪಣ (perspective) ಕೈಗತ ಆಗಿದ್ದಾಗಲೇ ಇಂತಹ ಚಿತ್ರಣಗಳು ಚೆನ್ನಾಗಿ ಮೂಡಿಬರಲು ಸಾಧ್ಯ. ಕಲೆಯಲ್ಲಿ ಹೊಸ ಹುಡುಕಾಟದ ಶೀರ್ಷಿಕೆಯಲ್ಲಿ ಅಮೂರ್ತ ಕಲೆಗಳು ರಾರಾಜಿಸುವ ಈ ಹಂತದಲ್ಲಿ- ಬಣ್ಣಗಳ ಮಿಶ್ರಣ, ಯೋಗ್ಯಬಣ್ಣಗಳ ಬಳಕೆಯಲ್ಲಿ ಸಿದ್ಧ ಹಸ್ತರಾದ ಮತ್ತು ಯಥಾ ಚಿತ್ರಣ ರೂಪಣದಲ್ಲಿ ಜ್ಞಾನಹೊಂದಿದ ಸೋಮಯಾಜಿಯವರ ಆಶು ಚಿತ್ರ ಹೊಸಚಿಂತನೆಯತ್ತ ಕೊಂಡೊಯ್ಯಿತು.
ಸಕು ಪಾಂಗಾಳ