Advertisement

ಮನಸೆಳೆಯುತ್ತಿವೆ ಗುಲ್‌ಮೋಹರ್‌ ಹೂಗಳು

03:38 PM May 16, 2022 | Team Udayavani |

ಸಿರುಗುಪ್ಪ: ಮೇ ತಿಂಗಳಲ್ಲಿಯೇ ನಗರ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ರಸ್ತೆ ಬದಿಯಲ್ಲಿ ನೋಡಿದಲ್ಲೆಲ್ಲ ಈಗ ಕೆಂಪು ಪುಷ್ಪಗಳು ಸೂಜಿಗಲ್ಲಿನಂತೆ ಗಮನ ಸೆಳೆಯುತ್ತಿವೆ.

Advertisement

ಮೇಫ್ಲವರ್‌ ಎಂದೇ ಕರೆಯಲ್ಪಡುವ ಗುಲ್‌ ಮೋಹರ್‌ ಹೂ ಅರಳುವ ಸಮಯ ಇದಾಗಿದ್ದು, ನಗರ ಸೇರಿದಂತೆ ಗ್ರಾಮ, ರಸ್ತೆ, ಹೊಲ, ಗದ್ದೆ, ಶಾಲೆಗಳ ಬಳಿ ಗುಲ್‌ಮೋಹರ್‌ ಅರಳಿರುವುದು ಈಗ ಕಾಣಸಿಗುತ್ತದೆ. ಉಷ್ಣವಲಯದ ಮರವಾಗಿರುವ ಇದು ಪ್ರಪಂಚದ ಎಲ್ಲೆಡೆ ಬೆಳೆಯುತ್ತದೆ. ಮದುವೆ, ಹಬ್ಬ ಮತ್ತು ಗೃಹ ಪ್ರವೇಶದ ಸಂದರ್ಭದಲ್ಲಿ ಇದರ ಹೂ ಗೊಂಚಲನ್ನು ಕಿತ್ತು ಚಪ್ಪರಗಳ ಮೇಲೆ ಅಲಂಕರಿಸುವ ಪರಂಪರೆ ಗ್ರಾಮೀಣ ಭಾಗಗಳಲ್ಲಿ ಇನ್ನೂ ಉಳಿದಿದೆ. ಸುಮಾರು 10-60ಅಡಿ ಎತ್ತರ ಬೆಳೆಯುವ ಇದನ್ನು ಪಾರ್ಕ್‌ಗಳಲ್ಲಿ ಮತ್ತು ರಸ್ತೆಗಳ ಬದಿಯಲ್ಲಿ ಹೆಚ್ಚಾಗಿ ಬೆಳೆಸಲಾಗುತ್ತದೆ. ಇದು ಕೆಂಪು ಹೂ, ಕಿತ್ತಳೆಗೆಂಪು, ಕೇಸರಿ ಲತೆಗಳು, ಹಸಿರು ವೃಕ್ಷಕ್ಕೆ ಬಾಸಿಂಗ ತೊಡಿಸಿದಂತೆ ಆಕರ್ಷಕವಾಗಿ ಕಾಣುತ್ತದೆ.

ಮಳೆಗಾಲದ ಮುಂಜಾವಿನ ರಸ್ತೆಯಲ್ಲಿ ಪುಷ್ಪಗಳು ಉದುರಿದಾಗ ಪುಷ್ಪದ ಚಾದಾರ ಎದ್ದುಕಾಣುತ್ತದೆ. ಹಳದಿ ಮತ್ತು ಬಿಳಿ ಹೂಗಳ ಸಂತತಿ ಕಾಣಬಹುದು, ಇದರ ಪುಷ್ಪ ಪಾತ್ರೆಯನ್ನು ಕಿತ್ತು ಇದರೊಳಗಿನ ಕೇಸರದ ಕೊಕ್ಕೆಯನ್ನು ತೆಗೆದು ಆಟವಾಡುವ ಸಂಭ್ರಮ ಗ್ರಾಮೀಣ ಭಾಗದಲ್ಲಿ ಇಂದಿಗೂ ಕಾಣಬಹುದಾಗಿದೆ.

ಅವರೆ ಕಾಯಿಯಂತಹ ಉದ್ದನೆಯ ಕತ್ತಿ ಆಕಾರದ ಕೋಡು, ಸಣ್ಣ ಗಾತ್ರದ 20-30 ಬೀಜಗಳನ್ನು ಹೊಂದಿರುತ್ತದೆ. 5 ಸೆಂ.ಮೀ. ಉದ್ದ ಬೆಳೆಯುವ ಹಸಿರು ಬಣ್ಣದ ಕೋಡು ಬಲಿತಾಗ ಕಡು ಕಂದು ಬಣ್ಣ ಹೊಂದಿದರೆ ಮರದ ಕಾಂಡ ಬೂದಿ ಮಿಶ್ರಿತ ಕಂದು ಬಣ್ಣ ಪಡೆಯುತ್ತದೆ. ಬೀಜ ಮತ್ತು ರೆಂಬೆ ನೆಟ್ಟು ಹೊಸ ಸಸ್ಯ ಬೆಳೆಸಬಹುದು. ಅಲಂಕಾರಕ್ಕೆ ಇಲ್ಲವೆ ನೆರಳಿಗಾಗಿ ಸಾಲು ಮರದಂತೆ ಬೆಳೆಸುತ್ತಾರೆ. ಮೇ, ಜೂನ್‌, ಜುಲೈಗಳಲ್ಲಿ ಹೂಗಳಿಂದ ಜನರನ್ನು ಆಕರ್ಷಿಸುವ ಈ ಮರ ವರ್ಷಪೂರ್ತಿ ನೆರಳು ನೀಡುತ್ತವೆ. ಬೇಸಿಗೆಯ ದಾಹ ನೀಗಲು ಸಂಜೆ ಮತ್ತು ಬೆಳಿಗ್ಗೆ ವಾಯು ವಿಹಾರಿಗಳು ನಡೆದಾಡುವಾಗ ಮರದ ನೆರಳಿನಲ್ಲಿ ಸ್ವಲ್ಪ ಸಮಯ ಕುಳಿತು ವಿಶ್ರಮಿಸುತ್ತಾರೆ. ನಗರದ ಕೃಷ್ಣನಗರ, ಮಹಾವೀರ ನಗರ ಬಡಾವಣೆಯಲ್ಲಿ ಗುಲ್‌ ಮೋಹರ್‌ ಲತೆಗಳು ಹಸಿರು ವೃಕ್ಷಕ್ಕೆ ಕೆಂಪು ಛತ್ರಿ ತೊಟ್ಟಂತೆ ಜನರನ್ನು ಆಕರ್ಷಿಸುತ್ತದೆ. ಬೀಜದಿಂದ ಉತ್ಪಾದಿಸುವ ಅಂಟು ಎಣ್ಣೆಯನ್ನು ಜವಳಿ, ಚರ್ಮ, ಸಾಬೂನು, ಔಷಧ  ಮೊದಲಾದ ಉದ್ದಿಮೆಗಳಲ್ಲಿ ಬಳಸಲಾಗುತ್ತದೆ.

ಈ ವೃಕ್ಷದ ಮೂಲ ಮಡಗಾಸ್ಕರ್‌, ಸೆಭಾಷಿಯೇ ಕುಟುಂಬದ ಸೀತಂತಿನಿಯೋಯಿಡೆ ಉಪ ಕುಟುಂಬಕ್ಕೆ ಸೇರಿದೆ. ಇದರ ಸಸ್ಯ ಶಾಸ್ತ್ರೀಯ ಹೆಸರು ಡೊಲೋನಿಕ್ಸ್‌ ರೇಜಿಯಾ, ಕನ್ನಡದಲ್ಲಿ ಕತ್ತಿಕಾಯಿ, ಹಿಂದಿಯಲ್ಲಿ ಗುಲ್‌ಮೋಹರ್‌, ಬೆಂಕಿ ಮರ, ದೊಡ್ಡ ರತ್ನಗಂದಿ, ಸೀಮೆ ಸಂಕೇಶ್ವರ, ಕೃಷ್ಣಾಚುರ, ರಾಧಾಚುರ ಎಂಬ ಹೆಸರುಗಳಿಂದ ಕರೆಯಲಾಗುತ್ತದೆ

Advertisement

-ಆರ್.ಬಸವರೆಡ್ಡಿ ಕರೂರು

Advertisement

Udayavani is now on Telegram. Click here to join our channel and stay updated with the latest news.

Next