Advertisement

ಗಮನ ಸೆಳೆದ ನವನವೀನ ಕೃಷಿ ಯಾಂತ್ರಿಕತೆ

11:15 AM Jan 20, 2020 | Suhan S |

ಧಾರವಾಡ: ಕೃಷಿ ವಿಶ್ವವಿದ್ಯಾಲಯದಲ್ಲಿ ನಡೆಯುತ್ತಿರುವ ಕೃಷಿ ಮೇಳದಲ್ಲಿ ಹಲವು ನೂತನ ಯಂತ್ರಗಳು, ಆವಿಷ್ಕಾರಗಳು ಗಮನ ಸೆಳೆದವು. ರೈತರ ಅನುಕೂಲಕ್ಕಾಗಿ ಕಡಿಮೆ ವೆಚ್ಚದ, ಹೆಚ್ಚು ಅನುಕೂಲ ಕಲ್ಪಿಸುವ ದೃಷ್ಟಿಯಿಂದ ಅಭಿವೃದ್ಧಿಪಡಿಸಿದ ಹಾಗೂ ವಿನ್ಯಾಸಗೊಳಿಸಿದ ಯಂತ್ರಗಳು ರೈತರನ್ನು ಹೆಚ್ಚು ಆಕರ್ಷಿಸಿದವು.

Advertisement

ಸಣ್ಣ ಪ್ರಮಾಣದ ಇನ್‌ ಕ್ಯುಬೇಟರ್‌: ಕಡಿಮೆ ವೆಚ್ಚದಲ್ಲಿ ಕೋಳಿಗಳನ್ನು ಮರಿ ಮಾಡುವ ಯಂತ್ರ ಗಮನ ಸೆಳೆಯಿತು. ಹುಬ್ಬಳ್ಳಿಯ ನಾಗರಾಜ ಗುಡ್ಡಪ್ಪ ಗೋಕಾವಿ ಎಂಬ ಬಿ.ಟೆಕ್‌ ಪದವೀಧರ ಅಭಿವೃದ್ಧಿಪಡಿಸಿರುವ ಯಂತ್ರ ಕುಕ್ಕುಟೋದ್ಯಮ ಕ್ಷೇತ್ರದ ಮೊಟ್ಟೆಯಿಂದ ಮರಿಮಾಡುವ ಸವಾಲನ್ನು ಸಮರ್ಥವಾಗಿ ಎದುರಿಸುವಲ್ಲಿ ಪೂರಕವಾಗಿದೆ. ಸ್ಪಾರ್ಕ್‌ ಟೆಕ್ನಾಲಜಿಸ್‌ ಸಂಸ್ಥೆಯನ್ನು ಆರಂಭಿಸಿ ಯಂತ್ರಗಳನ್ನು ರೂಪಿಸುತ್ತಿದ್ದಾರೆ. 110 ವ್ಯಾಟ್‌ ನಿಂದ 2800 ವ್ಯಾಟ್‌ ಸಾಮರ್ಥ್ಯದ ಯಂತ್ರಗಳನ್ನು ನಿರ್ಮಿಸಲಾಗುತ್ತದೆ.

ಕೋಳಿ ಸಾಕಣೆದಾರರಿಗೆ ಮೊಟ್ಟೆಯಿಂದ ಮರಿ ಮಾಡುವುದು ಸವಾಲಿನ ಕಾರ್ಯ. ಕಡಕನಾಥ ಸೇರಿದಂತೆ ಕೆಲ ಕೋಳಿಗಳು ಕಾವು ಕೊಟ್ಟು ಮೊಟ್ಟೆಮಾಡುವುದಿಲ್ಲ. ಇಂಥ ಸಂದರ್ಭದಲ್ಲಿ ನಾಟಿಕೋಳಿಗಳ ಕಾವು ಕೊಟ್ಟು ಕಡಕನಾಥ ಕೋಳಿಮರಿಗಳನ್ನು ಪಡೆಯಲಾಗುತ್ತದೆ. ಆದರೆ ಇದರಲ್ಲಿ ಮೊಟ್ಟೆಗಳ ಹಾನಿಯ ಪ್ರಮಾಣ ಹೆಚ್ಚಾಗಿರುತ್ತದೆ. ಮೊಟ್ಟೆಗಳನ್ನು ಮರಿ ಮಾಡಲು ಹಲವು ಯಂತ್ರಗಳನ್ನು ಅಭಿವೃದ್ಧಿ ಪಡಿಸಲಾಗಿದ್ದರೂಹಲವು ತಾಂತ್ರಿಕ ಕಾರಣಗಳಿಂದಾಗಿ ಅವುಗಳ ಫಲಿತಾಂಶ ಕುಕ್ಕುಟೋದ್ಯಮಕ್ಕೆ ಪೂರಕವಾಗಿಲ್ಲ.

ಮೊಟ್ಟೆಯಿಂದ ಕೋಳಿ ಮರಿಗಳನ್ನು ಪಡೆಯಲು ಹ್ಯಾಚರಿ ಯುನಿಟ್‌ಗಳಿಗೆ ಹೋಗಬೇಕಾಗುತ್ತದೆ. ಅಲ್ಲಿ ನೀಡಿದ ಮೊಟ್ಟೆಗಳಿಗೆ ಇಷ್ಟೇ ಪ್ರಮಾಣದ ಮೊಟ್ಟೆಗಳು ಬರುತ್ತವೆ ಎಂಬ ಖಾತ್ರಿಯಿಲ್ಲ. ಅಲ್ಲದೇ ಮರಿಗಳನ್ನು ಮಾಡಲು ಹಣ ನೀಡಬೇಕಾಗುತ್ತದೆ. ಇದನ್ನು ಮನಗಂಡ ನಾಗರಾಜ ತಾವೇ ಒಂದು ಯಂತ್ರವನ್ನು ಆವಿಷ್ಕಾರ ಮಾಡಿದ್ದಾರೆ. ಆರಂಭದಲ್ಲಿ ಪ್ಲೈವುಡ್‌ ಬಳಕೆ ಮಾಡಿ ಅದಕ್ಕೆ ಬಲ್ಬ್ಗಳನ್ನು ಜೋಡಿಸಿ, ಪಿವಿಸಿ ಪೈಪ್‌,ತೇವಾಂಶ ನಿಯಂತ್ರಣಕ್ಕೆ ನೀರಿನ ಪಾತ್ರೆ, ಸೆನ್ಸರ್‌ ಅಳವಡಿಸಿ ರೂಪಿಸಿದರು. ಇದರಿಂದ ನಿರೀಕ್ಷಿತ ಫಲಿತಾಂಶ ಬರಲಿಲ್ಲ. ಆದ್ದರಿಂದ ಅದನ್ನು ಇನ್ನಷ್ಟು ಅಭಿವೃದ್ಧಿಪಡಿಸಿದ್ದರಿಂದ ಉತ್ತಮ ಫಲಿತಾಂಶ ಪಡೆಯಲು ಸಾಧ್ಯವಾಯಿತು. ನಾಗರಾಜ ಅವರ ಆವಿಷ್ಕಾರವನ್ನು ಮನಗಂಡ ಕೃಷಿ ವಿಶ್ವವಿದ್ಯಾಲಯ ಕಡಿಮೆ ವೆಚ್ಚದಲ್ಲಿ ಕೋಳಿ ಮರಿ ಮಾಡುವ ಯಂತ್ರ ರೂಪಿಸಿದ್ದಕ್ಕೆ ಪ್ರಮಾಣಪತ್ರ ನೀಡಿ ಗೌರವಿಸಿದೆ.

ಯಂತ್ರಕ್ಕೆ ಸೋಲಾರ್‌ ಪ್ಯಾನೆಲ್‌ ಹಾಗೂ ಬ್ಯಾಟರಿ ಅಳವಡಿಸಬಹುದಾಗಿದ್ದು, ವಿದ್ಯುತ್‌ಸಮಸ್ಯೆಯಿಲ್ಲದೇ 21 ದಿನಗಳಲ್ಲಿ ಮೊಟ್ಟೆಯಿಂದ ಮರಿ ಪಡೆಯಬಹುದಾಗಿದೆ. 50ರಿಂದ 500 ಕೋಳಿಮರಿವರೆಗೆ ವಿವಿಧ ಸಾಮರ್ಥ್ಯದ ಯಂತ್ರ ಅವರು ರೂಪಿಸಿಕೊಡುತ್ತಾರೆ. ಯಂತ್ರದ ರೊಟೇಟರ್‌ನಿಂದಾಗಿ ಮೊಟ್ಟೆಗಳು ತಾವಾಗಿಯೇರೊಟೇಟ್‌ ಆಗುತ್ತವೆ. ಇದರಿಂದ ಇಡೀ ಮೊಟ್ಟೆಗೆ ಶಾಖ ತಲುಪಲು ಸಾಧ್ಯವಾಗುತ್ತದೆ.

Advertisement

 ಕೀಟ ನಿಯಂತ್ರಣಕ್ಕೆ ಸೋಲಾರ್‌ ಟ್ರ್ಯಾಪ್‌ : ಮಹಾರಾಷ್ಟ್ರದ ಸಾಂಗ್ಲಿ ಮೂಲದ ಕಿಸಾನ್‌ ಎಕ್ಸ್‌ ಸಂಸ್ಥೆ ಅಭಿವೃದ್ಧಿಪಡಿಸಿದ ಸೋಲಾರ್‌ ಟ್ರ್ಯಾಪ್‌ ರೈತರನ್ನು ಆಕರ್ಷಿಸುವಲ್ಲಿ ಯಶಸ್ವಿಯಾಯಿತು. ಕೀಟಗಳ ನಿರ್ವಹಣೆ ಕೃಷಿ ಕ್ಷೇತ್ರದ ಬಹುದೊಡ್ಡ ಸಮಸ್ಯೆ. ಇದನ್ನು ಮನಗಂಡ ಆಗ್ಶಾ ಪ್‌ ಟೆಕ್ನಾಲಜೀಸ್‌ ಲಿಮಿಟೆಡ್‌ ಸೋಲಾರ್‌ ಟ್ರ್ಯಾಪ್‌ ಅಭಿವೃದ್ಧಿಪಡಿಸಿದೆ. ಸೌರಶಕ್ತಿ ಬಳಕೆ ಮಾಡುವುದರಿಂದ ದಿನಪೂರ್ತಿಇದರಲ್ಲಿನ ಬ್ಯಾಟರಿ ಚಾರ್ಜ್‌ ಆಗಿ ರಾತ್ರಿ ಸಮಯದಲ್ಲಿ ಕಾರ್ಯನಿರ್ವಹಿಸುತ್ತದೆ. ನೀಲಿ ಹಾಗೂ ಹಳದಿ ಬಣ್ಣದ ದೀಪ ಅಳವಡಿಸಲಾಗಿದೆ. ಕೆಲವು ಕೀಟಗಳು ನೀಲಿ ಬಣ್ಣಕ್ಕೆ ಆಕರ್ಷಿತಗೊಂಡರೆ, ಇನ್ನು ಕೆಲವು ಕೀಟಗಳು ಹಳದಿ ಬಣ್ಣಕ್ಕೆ ಆಕರ್ಷಿತವಾಗುತ್ತವೆ. ದೀಪಗಳ ಬುಡದಲ್ಲಿರುವ ಬುಟ್ಟಿಯಲ್ಲಿ ನೀರು ಹಾಕಿರುವುದರಿಂದ ದೀಪದ ಹತ್ತಿರಕ್ಕೆ ಬರುವ ಕೀಟಗಳು ಬುಟ್ಟಿಗೆ ಬೀಳುತ್ತವೆ. ಒಂದು ಎಕರೆಗೆ ಒಂದು ಸೋಲಾರ್‌ ಟ್ರ್ಯಾಪ್‌ ಅಳವಡಿಸಬಹುದಾಗಿದೆ. ದ್ರಾಕ್ಷಿ, ಕಲ್ಲಂಗಡಿ, ದಾಳಿಂಬೆ ಬೆಳೆಗೆ ಸೋಲಾರ್‌ ಟ್ರ್ಯಾಪ್‌ ಅನುಕೂಲಕರವಾಗಿದೆ. ಪೌಡರ್‌ ಕೋಟೆಡ್‌ ಬಾಡಿ ಹೊಂದಿರುವ ಟ್ರ್ಯಾಪ್‌ ದೀರ್ಘಾವಧಿ ಬಾಳಿಕೆ ಬರುತ್ತದೆ. 6 ವೊಲ್ಟೆಜ್‌ ಬ್ಯಾಟರಿಯಿದ್ದು, ಇದಕ್ಕೆ 6 ತಿಂಗಳ ವಾರಂಟಿ ನೀಡಲಾಗುತ್ತದೆ.

 

-ವಿಶ್ವನಾಥ ಕೋಟಿ

Advertisement

Udayavani is now on Telegram. Click here to join our channel and stay updated with the latest news.

Next