Advertisement

ಗಮನ ಸೆಳೆದ ಶ್ವಾನ ಪ್ರದರ್ಶನ

05:45 PM Dec 17, 2018 | |

ಶಿವಮೊಗ್ಗ: ಹಲವರು ನಾಯಿಯನ್ನು ಬೀದಿಗೆ ಬಿಡುತ್ತಾರೆ. ನಗರದಲ್ಲಿ ಬೀದಿನಾಯಿಗಳ ಹೆಚ್ಚಳಕ್ಕೆ ಇದೂ ಕಾರಣವಾಗಿದೆ. ಆ ಕಾರಣಕ್ಕಾಗಿಯೇ ಶ್ವಾನ ಪ್ರದರ್ಶನ ಹಮ್ಮಿಕೊಳ್ಳಲಾಗಿದೆ. ಶಿವಮೊಗ್ಗವನ್ನು ಬರುವ ದಿನಗಳಲ್ಲಿ ಬೀದಿ ನಾಯಿ ರಹಿತವಾಗಿಸಲು ಇದು ಪೂರಕವಾಗಿದೆ ಎಂದು ಶಿವಮೊಗ್ಗ ಕೆನಲ್‌ ಕ್ಲಬ್‌ ಅಧ್ಯಕ್ಷ ರಾಜೇಂದ್ರ ಕಾಮತ್‌ ತಿಳಿಸಿದರು.

Advertisement

ಕೆನಲ್‌ ಕ್ಲಬ್‌ ವತಿಯಿಂದ ನಗರದ ಕುವೆಂಪು ರಂಗಮಂದಿರ ಹಿಂಭಾಗದಲ್ಲಿರುವ ಎನ್‌ಇಎಸ್‌ ಮೈದಾನದಲ್ಲಿ ಭಾನುವಾರ ಹಮ್ಮಿಕೊಂಡಿದ್ದ “ರಾಜ್ಯಮಟ್ಟದ ಶ್ವಾನ ಪ್ರದರ್ಶನ’ದಲ್ಲಿ ಮಾತನಾಡಿದ ಅವರು, ಶ್ವಾನದ ತಳಿ, ಯಾವ ವಾತಾವರಣಕ್ಕೆ ಹೊಂದಿಕೊಳ್ಳುತ್ತದೆ, ಎಂತಹ ಆಹಾರ ನೀಡಬೇಕು ಎಂಬಿತ್ಯಾದಿ ಅಂಶಗಳ ಕುರಿತು ಅರಿತುಕೊಳ್ಳದೇ ಶ್ವಾನ ಸಾಕಲು ಹೋಗಬೇಡಿ. ಇದರಿಂದ ಶ್ವಾನವಷ್ಟೇ ಅಲ್ಲದೆ ಸಾಕುವವರಿಗೆ ಸಮಸ್ಯೆ. ಮುಂದೊಂದು ದಿನ ಸಾಕಾಣಿಕೆ ಭಾರವಾಗಿ ಅದನ್ನು ಬೀದಿಗೆ ಬಿಡಲಾಗುತ್ತದೆ. ಇಂತಹ ಕೆಲಸ ಯಾವುದೇ ಕಾರಣಕ್ಕೂ ಮಾಡಬೇಡಿ ಎಂದು ಸಲಹೆ ನೀಡಿದರು.

ತಳಿ ಆಯ್ಕೆಯ ಬಗ್ಗೆ ಗಮನ ಹರಿಸಬೇಕು. ಮಾಹಿತಿ ಇಲ್ಲದೇ ಸಾಕಲು ಮುಂದಾದ ವ್ಯಕ್ತಿಗಳು ಅದರೆಡೆಗೆ ವಿಶೇಷ ಮುತುವರ್ಜಿ ವಹಿಸಬೇಕು. ಶ್ವಾನ ಖರೀದಿಸಿದಾಗ ನೋಡಲು ಆಕರ್ಷಕವಾಗಿರುತ್ತದೆ. ಆದರೆ, ಸಾಕಣೆ ಮಾಡಲಾರಂಭಿಸಿದ್ದ ಕೆಲವೇ ವರ್ಷಗಳಲ್ಲಿ ವಿಚಿತ್ರ ದೇಹಸ್ಥಿತಿ ಹೊಂದುತ್ತದೆ. ಇದರಿಂದಾಗಿ 2007ರಲ್ಲಿ ಆರಂಭವಾಗಿರುವ ಕ್ಲಬ್‌ ಈವರೆಗೆ ನಾಲ್ಕು ಸಲ ರಾಜ್ಯಮಟ್ಟದ ಶ್ವಾನ ಪ್ರದರ್ಶನ ಹಮ್ಮಿಕೊಂಡಿದೆ. ಕಳೆದ ವರ್ಷ ನಡೆದ ಕಾರ್ಯಕ್ರಮದಲ್ಲಿ 160 ಶ್ವಾನಗಳು ಪಾಲ್ಗೊಂಡಿದ್ದವು. ಈ ಸಲ ಸಂಖ್ಯೆಯಲ್ಲಿ ಏರಿಕೆಯಾಗಿದೆ. ಒಂದು ವೇಳೆ, ಉತ್ತಮ ಪ್ರತಿಕ್ರಿಯೆ ಸಿಕ್ಕರೆ ಬರುವ ದಿನಗಳಲ್ಲಿ ರಾಷ್ಟ್ರಮಟ್ಟದ ಕಾರ್ಯಕ್ರಮ ಆಯೋಜಿಸುವುದಾಗಿ ಭರವಸೆ ನೀಡಿದರು.

ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಎಂಎಲ್‌ಸಿ ರುದ್ರೇಗೌಡ, 18ನೇ ಶತಮಾನದಿಂದ ನಾಯಿಗಳಲ್ಲಿನ ವಿಶೇಷ ಗುಣ ಮನಗಂಡು ಸಾಮಾಜಿಕ ಕಾರಣಕ್ಕಾಗಿ ಇದನ್ನು ಬಳಸಲು ಶುರುಮಾಡಲಾಯಿತು. ಇದಕ್ಕೂ ಮುಂಚೆಯೂ ನಾಯಿಗಳನ್ನು ಸಾಕಲಾಗುತ್ತಿತ್ತು. ಆದರೆ, ಶೋಧ ಕಾರ್ಯ ಮತ್ತಿತರ ಕೆಲಸಗಳಿಗೆ ಬಳಸುತ್ತಿರಲಿಲ್ಲ. ಇದರಲ್ಲಿರುವ ಸೂಕ್ಷ್ಮತೆ, ನಿಯತ್ತಿನಿಂದಾಗಿ ಸೇನೆ, ಪೊಲೀಸ್‌ ಇಲಾಖೆಯಲ್ಲೂ ಸ್ಥಾನಮಾನ ನೀಡಲಾಗಿದೆ. ಪ್ರಕೃತಿ
ಅನಾಹುತಗಳಾದಾಗ ದೇಹಗಳನ್ನು ಹುಡುಕುವುದೂ ಸೇರಿ ಬಾಂಬ್‌ ಶೋಧಕ್ಕೂ ಬಳಸಲಾಗುತ್ತಿದೆ.

ಶ್ವಾನಗಳನ್ನು ಇನ್ನೂ ಸರಿಯಾಗಿ ಅರ್ಥ ಮಾಡಿಕೊಳ್ಳಬೇಕಾದ ಅಗತ್ಯತೆ ಇದೆ ಎಂದು ಸಲಹೆ ನೀಡಿದರು. ವಾಯುವಿಹಾರಕ್ಕಾಗಿ ಕರೆತಂದಾಗ ವಿದೇಶಗಳಲ್ಲಿ ಅನುಸರಿಸುವಂತೆ ಇಲ್ಲಿಯೂ ಪ್ರಾಣಿ ಸಾಕುವವರು ಕೆಲ ಅಂಶಗಳೆಡೆಗೆ ಗಮನ ಹರಿಸಬೇಕು. ಪರಿಸರ ಹಾಳಾಗದಂತೆ ನೋಡಿಕೊಳ್ಳಬೇಕು. ಮಾನವ ಸ್ನೇಹಿ ನಾಯಿಗಳು ಅಪಾಯಕಾರಿ ಆಗಬಾರದು. ಬೀದಿನಾಯಿಗಳ ಸಂಖ್ಯೆ ತಡೆಗೆ ಯಾವ ಕ್ರಮ ಕೈಗೊಳ್ಳಬೇಕೆಂಬ ಬಗ್ಗೆ ಕ್ಲಬ್‌ನವರು ಸಲಹೆಗಳನ್ನು ನೀಡಬಹುದು ಎಂದು ತಿಳಿಸಿದರು.

Advertisement

ಪಶುಪಾಲನಾ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆಯ ಉಪ ನಿರ್ದೇಶಕ ಸದಾಶಿವ ಮಾತನಾಡಿ, ಪ್ರಾಣಿಗಳೊಂದಿಗೆ ಹೆಚ್ಚಿನ ಒಡನಾಟ ರೂಪಿಸಿಕೊಂಡಲ್ಲಿ ತಾನಾಗಿಯೇ ದಯೆ, ಪ್ರೀತಿ ಮೂಡುತ್ತದೆ ಎಂದರು.
 
ಪರೋಪಕಾರಂನ ತ್ಯಾಗರಾಜ್‌ ಸೇರಿ ಎಲ್ಲ ಸದಸ್ಯರು, ಪ್ರದೀಪ್‌ ಸ್ಟೀವನ್‌ಸನ್‌ ಅವರನ್ನು ಸನ್ಮಾನಿಸಲಾಯಿತು. ಜೆಎನ್‌ಎನ್‌ಸಿಇ ಡೀನ್‌ ಡಾ| ಕೆ.ಸಿ. ವೀರಣ್ಣ, ತೀರ್ಪುಗಾರ ವಿಶ್ವಾಸ್‌ ಭರದ್ವಾಜ್‌, ವೈಜನಾಥ್‌, ಸತೀಶ್‌ ಇತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next