ಬೆಂಗಳೂರು: ಇನ್ನು ಮುಂದೆ ಆರೋಗ್ಯ ಇಲಾಖೆಯ ಅಧಿಕಾರಿಗಳು ಮತ್ತು ಸಿಬ್ಬಂದಿಗೆ ಅವರ ಬಯೋಮೆಟ್ರಿಕ್ ಹಾಜರಾತಿಯ ಆಧಾರದಲ್ಲೇ ವೇತನ ಸಿಗಲಿದೆ. ಹಾಜರಾತಿ ಕಡಿಮೆಯಿದ್ದರೆ ವೇತನಕ್ಕೂ ಕತ್ತರಿ ಬೀಳಲಿದೆ!
ಆರೋಗ್ಯ ಇಲಾಖೆಯಲ್ಲಿ ಸುಧಾರಣೆ ಹಾಗೂ ಗುಣಾತ್ಮಕ ಬದಲಾವಣೆ ತರುವ ನಿಟ್ಟಿನಲ್ಲಿ ಬಯೋಮೆಟ್ರಿಕ್ ಹಾಜರಾತಿ ಆಧರಿಸಿ ವೇತನ ಪಾವತಿಸುವ ವ್ಯವಸ್ಥೆ ಕಡ್ಡಾಯಗೊಳಿಸುವ ತೀರ್ಮಾನ ಕೈಗೊಂಡಿರುವುದಾಗಿ ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ. ಸುಧಾಕರ್ ಹೇಳಿದ್ದಾರೆ
ಆರೋಗ್ಯ ಇಲಾಖೆ ವ್ಯಾಪ್ತಿಯಲ್ಲಿ 3230 ಸಂಸ್ಥೆಗಳಿದ್ದು 65,318 ಅಧಿಕಾರಿ ಹಾಗೂ ಸಿಬ್ಬಂದಿ ಕಾರ್ಯನಿರ್ವಹಿಸುತ್ತಿದ್ದಾರೆ. ಎಲ್ಲರಿಗೂ ಇದು ಅನ್ವಯವಾಗಲಿದೆ. ಅನಗತ್ಯವಾಗಿ ಕೆಲಸದ ಸಮಯದಲ್ಲಿ ಗೈರು ಹಾಜರಾಗುವುದನ್ನು ಸಹಿಸಲಾಗದು. ಅವರ ಕರ್ತವ್ಯಲೋಪದಿಂದ ಆರೋಗ್ಯ ಸೇವೆಯಲ್ಲಿ ವ್ಯತ್ಯಯ ಆಗುತ್ತದೆ. ಹೀಗಾಗಿ ಕರ್ತವ್ಯದ ವೇಳೆಯಲ್ಲಿ ಹಾಜರಿಲ್ಲದ ಯಾರೇ ಆಗಲಿ ಅಂತಹವರ ವೇತನ ಕಡಿತಕ್ಕೆ ಸೂಚನೆ ನೀಡಲಾಗಿದೆ ಎಂದು ಸಚಿವರು ಹೇಳಿದ್ದಾರೆ..
ಡಿಡಿಒ ಹೊಣೆ:
ಆಸ್ಪತ್ರೆ, ಸಂಸ್ಥೆ ಮತ್ತು ಕೇಂದ್ರಗಳ ಜವಾಬ್ದಾರಿ ನಿರ್ವಹಿಸುವ ಡಿಡಿಒ(ಸ್ಯಾಲರಿ ಡ್ರಾಯಿಂಗ್ ಆಫೀಸ್) ಪ್ರತಿ ತಿಂಗಳು ಎಇಬಿಎಎಸ್‌ನಲ್ಲಿ ತಮ್ಮ ವ್ಯಾಪ್ತಿಯ ಎಲ್ಲ ಸಿಬ್ಬಂದಿಯ ಹಾಜರಾತಿ ಪರಿಶೀಲಿಸಿ ಅದರನುಸಾರ ವೇತನ ಪಾವತಿಗೆ ವರದಿ ಸಿದ್ಧಪಡಿಸಬೇಕು. ನಂತರ ಆಯಾ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗೆ ಸಲ್ಲಿಸಬೇಕು. ಅವರು ಅದನ್ನು ಪರಿಶೀಲಿಸಿ ವೇತನ ಬಿಡುಗಡೆ ಮತ್ತು ಕಡಿತಕ್ಕೆ ಸೂಚನೆ ನೀಡಲಿದ್ದಾರೆ ಎಂದು ಸ್ಪಷ್ಟಪಡಿಸಿದರು
ಯಾರೇ ಆಗಲಿ ಶೇ.80ರಷ್ಟು ಹಾಜರಾತಿಗಿಂತ ಕಡಿಮೆ ಇದ್ದಲ್ಲಿ ಅವರ ವೇತನ ತಡೆ ಹಿಡಿಯಲಾಗುತ್ತದೆ. ನಂತರ ಮಾರ್ಗಸೂಚಿ ಅನ್ವಯ ಮುಂದಿನ ಕ್ರಮ ಕೈಗೊಳ್ಳಲಾಗುವುದು. ಒಂದು ವೇಳೆ ಶೇ.80ರಷ್ಟು ಹಾಜರಾತಿ ಇದ್ದಲ್ಲಿ ವೇತನ ಬಿಡುಗಡೆ ಮಾಡಿ, ಉಳಿದ ಶೇ.20 ಹಾಜರಾತಿ ದಾಖಲು ಮಾಡದಿರುವುದಕ್ಕೆ ಕಾರಣ ಕೇಳಿ ನೋಟಿಸ್ ಜಾರಿಗೊಳಿಸಲಾಗುತ್ತದೆ. ಸಿಬ್ಬಂದಿ ನೀಡುವ ಕಾರಣ ನಿಜವಾಗಿದ್ದಲ್ಲಿ ಪ್ರಕರಣ ಮುಕ್ತಾಯಗೊಳಿಸಲಾಗುವುದು. ಸಬೂಬು ನೀಡಿದರೆ ಅಥವಾ ನೀಡಿರುವ ಮಾಹಿತಿ ಸುಳ್ಳಾಗಿದ್ದರೆ ಮುಂದಿನ ತಿಂಗಳ ವೇತನದಲ್ಲಿ ನಿರ್ದಿಷ್ಟಪಡಿಸಿರುವ ಮೊತ್ತವನ್ನು ಕಡಿತಗೊಳಿಸಲಾಗುವುದು ಎಂದರು.