ಮುದಗಲ್ಲ: ಸಮೀಪದ ಹಿರೇಲೆಕ್ಕಿಹಾಳ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಗೆ ಕಳೆದ ಎರಡು ದಿನಗಳಿಂದ ಶಿಕ್ಷಕರು ಬಾರದ್ದರಿಂದ ವಿದ್ಯಾರ್ಥಿಗಳು ಶಾಲಾ ಆವರಣದಲ್ಲಿಯೇ ಕಾಲ ಕಳೆಯುವಂತಾಗಿದೆ.
ಹಿರೇಲೆಕ್ಕಿಹಾಳದ ದಲಿತರ ಓಣಿಯ ಸರ್ಕಾರಿ ಶಾಲೆಯಲ್ಲಿ 1ರಿಂದ 5ನೇ ತರಗತಿವರೆಗೆ 58 ಮಕ್ಕಳಿದ್ದಾರೆ. ಮುಖ್ಯ ಶಿಕ್ಷಕರು, ಅತಿಥಿ ಶಿಕ್ಷಕರು ಸೇರಿ ಒಟ್ಟು ಮೂವರು ಶಿಕ್ಷಕರನ್ನು ಇಲಾಖೆ ನೇಮಿಸಿದೆ. ಆದರೆ ಕಳೆದ ಒಂದು ವರ್ಷದಿಂದ ಸಹ ಶಿಕ್ಷಕರೊಬ್ಬರು ಶಾಲೆಗೆ ಬಂದೆ ಇಲ್ಲ. ಇನ್ನು ಮುಖ್ಯ ಶಿಕ್ಷಕರು ಕಚೇರಿ ಕೆಲಸ ಎಂದು ವಾರದಲ್ಲಿ ಎರಡು ದಿನ ಬರುವುದಿಲ್ಲ. ಅತಿಥಿ ಶಿಕ್ಷಕರು ಇನ್ನೂ ನೇಮಕವಾಗಿಲ್ಲ. ಇದರಿಂದ ವಿದ್ಯಾರ್ಥಿಗಳು ನಿತ್ಯ ಪಾಠ ಬೋಧನೆಯಿಂದ ವಂಚಿತರಾಗುತ್ತಿದ್ದಾರೆ ಎಂದು ಗ್ರಾಮಸ್ಥರು ದೂರಿದ್ದಾರೆ.
ಹಲವು ಬಾರಿ ಕ್ಷೇತ್ರ ಶಿಕ್ಷಣಾಧಿಕಾರಿಗಳ ಗಮನಕ್ಕೆ ತಂದರೂ ಪ್ರಯೋಜನವಾಗಿಲ್ಲ. ಒಂದು ವರ್ಷದಿಂದ ಶಾಲೆಗೆ ಸಹ ಶಿಕ್ಷಕ ಬಾರದಿದ್ದರೂ ಕೂಡ ಪ್ರತಿ ತಿಂಗಳು ವೇತನ ಪಡೆಯುತ್ತಾರೆ. ಹೆಚ್ಚುವರಿ ಶಿಕ್ಷಕರನ್ನು ನೇಮಿಸುವಂತೆ ಅಧಿಕಾರಿಗಳಲ್ಲಿ ಮನವಿ ಮಾಡಿದರೆ ಈಗಾಗಲೆ ನಿಮ್ಮ ಶಾಲೆಗೆ ಮೂರು ಜನ ಶಿಕ್ಷಕರಿದ್ದಾರೆ ಎಂಬ ಉತ್ತರ ನೀಡುತ್ತಾರೆ. ಶಿಕ್ಷಕರು ಬಾರದ್ದರಿಂದ ಮಕ್ಕಳ ಭವಿಷ್ಯ ಡೋಲಾಯಮಾನವಾಗುತ್ತಿದೆ ಎಂದು ಪಾಲಕರಾದ ಮಾನಪ್ಪ ಭಜಂತ್ರಿ, ಲಕ್ಷ್ಮಣ ದೊಡ್ಡಮನಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕಳೆದ ಒಂದು ವರ್ಷದಿಂದ ಒಬ್ಬ ಶಿಕ್ಷಕರು ಶಾಲೆಗೆ ಬಾರದ್ದರಿಂದ ಮತ್ತು ಇರುವ ಶಿಕ್ಷಕರು ಸರಿಯಾಗಿ ಶಾಲೆ ಆಗಮಿಸದ್ದರಿಂದ ನಿತ್ಯ ಮಕ್ಕಳು ತಮ್ಮಷ್ಟಕ್ಕೆ ತಾವು ಅಭ್ಯಾಸ ಮಾಡುತ್ತ ಶಾಲಾ ಆವರಣದಲ್ಲಿ ಕೂಡುತ್ತಾರೆ. ಇದರ ಬಗ್ಗೆ ಅಧಿಕಾರಿಗಳ ಗಮನಕ್ಕೆ ತಂದು ಶಿಕ್ಷಕರನ್ನು ನೇಮಿಸುವಂತೆ ಒತ್ತಾಯಿಸುತ್ತ ಬರುತಿದ್ದರೂ ನೇಮಕ ಮಾಡುತ್ತಿಲ್ಲ. ಅಲ್ಲದೆ ಸಹ ಶಿಕ್ಷಕರಿಗೆ ಶಾಲೆಗೆ ಹಾಜರಾಗುವಂತೆ ಮನವಿ ಮಾಡಿದರೆ ಪಾಲಕರಿಗೆ ಬಾಯಿಗೆ ಬಂದಂತೆ ಮಾತನಾಡುತಿದ್ದಾರೆ. ಈ ಬಗ್ಗೆ ಅಧಿಕಾರಿಗಳು ಗಮನ ಹರಿಸಿ ಶಾಲೆಗೆ ಚಕ್ಕರ್ ಹಾಕುತ್ತಿರುವ ಶಿಕ್ಷರನ್ನು ಅಮಾನತು ಮಾಡಬೇಕು. ಉತ್ತಮ ಶಿಕ್ಷಕರನ್ನು ನೇಮಿಸಬೇಕು. ಇಲ್ಲದಿದ್ದರೆ ಶಾಲೆಗೆ ಶಾಶ್ವತ ಬೀಗ ಜಡಿದು ಪ್ರತಿಭಟನೆ ನಡೆಸಲಾಗುವುದು ಎಂದು ಗ್ರಾಮಸ್ಥರಾದ ಅಂಬಣ್ಣ, ಮೌನೇಶ ತಲೆಕಟ್, ರೆಡ್ಡೆಪ್ಪ ತುರಡಗಿ ಇತರರು ಎಚ್ಚರಿಸಿದ್ದಾರೆ.
•ದೇವಪ್ಪ ರಾಠೊಡ