Advertisement

ಸುಪಾರಿ ಕೊಟ್ಟ ಬೆಳೆಗೆರೆ ಸೆರೆ

06:00 AM Dec 09, 2017 | Team Udayavani |

ಬೆಂಗಳೂರು: ಹತ್ಯೆಗೆ ಸುಪಾರಿ ನೀಡಿದ ಆರೋಪದ ಮೇಲೆ “ಹಾಯ್‌ ಬೆಂಗಳೂರು’ ಪತ್ರಿಕೆ ಸಂಪಾದಕ ರವಿ ಬೆಳೆಗೆರೆಯನ್ನು ಕೇಂದ್ರ ಅಪರಾಧ ವಿಭಾಗದ ಪೊಲೀಸರು ಬಂಧಿಸಿದ್ದಾರೆ.

Advertisement

ಈ ಹಿಂದೆ “ಹಾಯ್‌ ಬೆಂಗಳೂರು’ ಪತ್ರಿಕೆಯಲ್ಲಿ ರವಿ ಬೆಳೆಗೆರೆ ಬಳಿಯೇ ಕೆಲಸ ಮಾಡುತ್ತಿದ್ದ ಪತ್ರಕರ್ತ ಸುನಿಲ್‌ ಹೆಗ್ಗರವಳ್ಳಿಯನ್ನು ವೈಯಕ್ತಿಕ ವೈಷಮ್ಯದ ಹಿನ್ನೆಲೆಯಲ್ಲಿ ಕೊಲೆ ಮಾಡಲು ವಿಜಯಪುರದ ಶಶಿಧರ್‌ ರಾಮಚಂದ್ರ ಮುಂಡೆವಾಡಿ ಎಂಬುವರಿಗೆ 30 ಲಕ್ಷ ರೂ.ಗೆ ಸುಪಾರಿ ನೀಡಿ ಮುಂಗಡವಾಗಿ 15 ಸಾವಿರ ರೂ. ಜತೆಗೆ ಒಂದು ಗನ್‌ ಹಾಗೂ ನಾಲ್ಕು ಗುಂಡು ಸಹ ನೀಡಿದ್ದ ವಿಚಾರ ತನಿಖೆಯಲ್ಲಿ ಬಯಲಾಗಿದೆ.

ಶಶಿಧರ್‌ ರಾಮಚಂದ್ರ ಮುಂಡೆವಾಡಿ ಭೀಮಾ ತೀರದ ಹಂತಕ ಖ್ಯಾತಿಯ ವಿಜಯಪುರದ ಚಂದಪ್ಪ ಹರಿಜನ ಸಹಚರನಾಗಿದ್ದ. ಈ ಹಿಂದೆ ಹಾಯ್‌ ಬೆಂಗಳೂರು ಪತ್ರಿಕೆಯಲ್ಲಿ ಭೀಮಾ ತೀರದ ಹಂತಕರ ಬಗ್ಗೆ ವರದಿ ಮಾಡಲು ರವಿಬೆಳಗೆರೆ ವಿಜಯಪುರಕ್ಕೆ ಹೋಗಿದ್ದಾಗ ಪರಿಚಯವಾಗಿದ್ದ ಎಂದು ಹೇಳಲಾಗಿದೆ.
ಶುಕ್ರವಾರ ಪದ್ಮನಾಭನಗರದಲ್ಲಿರುವ ಹಾಯ್‌ ಬೆಂಗಳೂರ್‌ ಕಚೇರಿಯಿಂದ ರವಿ ಬೆಳಗೆರೆಯನ್ನು ಬಂಧಿಸಿ ಸಿಸಿಬಿ ಕಚೇರಿಗೆ ಕರೆತಂದು ಪ್ರಾಥಮಿಕ ವಿಚಾರಣೆ ಬಳಿಕ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ವೈದ್ಯಕೀಯ ತಪಾಸಣೆ ನಡೆಸಿ ಕೋರಮಂಗಲದಲ್ಲಿರುವ ನ್ಯಾಯಾಧೀಶರ ಮುಂದೆ ಹಾಜರುಪಡಿಸಿ ವಶಕ್ಕೆ ಪಡೆಯಲಾಗಿದೆ ಎಂದು ಸಿಸಿಬಿ ಜಂಟಿ ಆಯುಕ್ತ ಸತೀಶ್‌ಕುಮಾರ್‌ ತಿಳಿಸಿದ್ದಾರೆ.

ರವಿ ಬೆಳಗೆರೆ ಅವರ ಕಚೇರಿಯಲ್ಲಿ ಒಂದು ರಿವಾಲ್ವಾರ್‌, 53 ಜೀವಂತ ಗುಂಡುಗಳು, ಒಂದು ಡಬ್ಬಲ್‌ ಬ್ಯಾರೆಲ್‌ ಗನ್‌, 41 ಜೀವಂತ ಗುಂಡುಗಳು, 1.5 ಅಡಿ ಉದ್ದ ಅಗಲದ ಆಮೆ ಚಿಪ್ಪು, ಜಿಂಕೆ ಚರ್ಮ ವಶಪಡಿಸಿಕೊಳ್ಳಲಾಗಿದೆ. ಅವರ ನಿವಾಸಕ್ಕೂ ಕರೆದೊಯ್ದು ಕೆಲವು ದಾಖಲೆ ಪರಿಶೀಲಿಸಿ ವಶಕ್ಕೆ ಪಡೆಯಲಾಗಿದೆ.

ನಗರದಲ್ಲಿ ನಾಡ ಪಿಸ್ತೂಲ್‌ ಮಾರಾಟ ಮಾಡಲು ಯತ್ನಿಸುತ್ತಿದ್ದ ತಾಹಿರ್‌ ಹುಸೇನ್‌ ಅಲಿಯಾಸ್‌ ಅನೂಪ್‌ಗೌಡ ಎಂಬಾತನನ್ನು ಬಂಧಿಸಿ ವಿಚಾರಣೆ ನಡೆಸಿದ ಸಂದರ್ಭದಲ್ಲಿ ವಿಜಯಪುರದ ಶಶಿಧರ್‌ ರಾಮಚಂದ್ರ ಮುಂಡೆವಾಡಿ ಸಹ ನಾಡಪಿಸ್ತೂಲ್‌ ಮತ್ತು ಎರಡು ಜೀವಂತ ಗುಂಡು ಪಡೆದಿರುವುದು ಪತ್ತೆಯಾಗಿದೆ. ಶಶಿಧರ್‌ನನ್ನು ಬಂಧಿಸಿದಾಗ ರವಿ ಬೆಳೆಗೆರೆ ಸುನಿಲ್‌ ಹೆಗ್ಗರವಳ್ಳಿ ಹತ್ಯೆಗೆ ಸುಪಾರಿ ನೀಡಿದ್ದ ವಿಚಾರ ಬಯಲಾಯಿತು ಎಂದು ಪೊಲೀಸರು ತಿಳಿಸಿದ್ದಾರೆ.

Advertisement

ಶಶಿಧರ್‌ ಮುಂಡೆವಾಡಿ ನೀಡಿದ ಮಾಹಿತಿ ಮೇರೆಗೆ ಸಿಸಿಬಿ ಎಸಿಪಿ ಸುಬ್ರಹ್ಮಣ್ಯ ನೇತೃತ್ವದ ತಂಡ ನ್ಯಾಯಾಲಯದಿಂದ ಸರ್ಚ್‌ವಾರೆಂಟ್‌ ಪಡೆದಕೊಂಡು ಎರಡು ದಿನಗಳ ಹಿಂದೆಯಷ್ಟೇ ದಾಂಡೇಲಿಯಿಂದ ಆಗಮಿಸಿದ್ದ ರವಿಬೆಳಗೆರೆಯನ್ನು ಶುಕ್ರವಾರ ಬೆಳಗ್ಗೆ “ಹಾಯ್‌ ಬೆಂಗಳೂರು’ ಪತ್ರಿಕೆಯ ಕಚೇರಿಯಲ್ಲಿ ಮಧ್ಯಾಹ್ನ 1.30ರ ಸುಮಾರಿಗೆ ಬಂಧಿಸಿದರು.

ಸುಫಾರಿ ಕೊಟ್ಟಿದ್ದು ನಿಜ
ರವಿಬೆಳಗೆರೆ ಮತ್ತು ಸುನೀಲ್‌ ಹೆಗ್ಗರವಳ್ಳಿ ನಡುವೆ ವೈಯಕ್ತಿಕ ವಿಚಾರವಾಗಿ ವೈಷಮ್ಯವಿತ್ತು. ಈ ಹಿನ್ನೆಲೆಯಲ್ಲಿ ರವಿಬೆಳಗೆರೆ ಆ.28ರಂದು ನನ್ನ ಸ್ನೇಹಿತ ವಿಜು ಬಡಿಗೇರ್‌ ಹಾಗೂ ನನ್ನನ್ನು ಕಚೇರಿಗೆ ಕರೆಸಿಕೊಂಡರು. ಒಂದು ಗನ್‌ ಮತ್ತು ನಾಲ್ಕು ಜೀವಂತ ಗುಂಡುಗಳು ಹಾಗೂ ಒಂದು ಚಾಕು ನೀಡಿ  “ನನ್ನ ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದ ಸುನೀಲ್‌ ಹೆಗ್ಗರವಳ್ಳಿ ನನಗೆ ದ್ರೋಹವೆಸಗಿದ್ದಾನೆ. ಆತನನ್ನು ಕೊಲ್ಲಬೇಕು. ನಿನಗೆ ಎಷ್ಟು ಬೇಕೋ ಅಷ್ಟು ಹಣ ಕೊಡುತ್ತೇನೆ’ ಎಂದಿದ್ದರು. ಇದಕ್ಕಾಗಿ ಮುಂಗಡವಾಗಿ 15 ಸಾವಿರ ರೂ.ಕೂಡ ನೀಡಿದ್ದರು. ಬಳಿಕ ರವಿ ಬೆಳಗೆರೆ ಕಚೇರಿಯ ಒಬ್ಬ ಯುವಕನನ್ನು ನಮ್ಮೊಂದಿಗೆ ಕಳುಹಿಸಿ ಉತ್ತರಹಳ್ಳಿಯಲ್ಲಿರುವ ಸುನೀಲ್‌ ಹೆಗ್ಗರವಳ್ಳಿ ಮನೆಯನ್ನು ತೋರಿಸಿದ್ದರು.

ಬಳಿಕ ನಾನು ಹಾಗೂ ವಿಜು ಬಡಿಗೇರ್‌, ಸುನೀಲ್‌ನನ್ನು ಕೊಲ್ಲಲು ಆತನ ಮನೆ ಬಳಿ ರಾತ್ರಿ ಕಾಯುತ್ತಿದ್ದೆವು. ಆದರೆ, ಆತ ಅಂದು ತಪ್ಪಿಸಿಕೊಂಡ ಹೀಗಾಗಿ ಹತ್ಯೆ ಮಾಡಲು ಸಾಧ್ಯವಾಗಲಿಲ್ಲ. ಅನಂತರ ಗನ್‌ ಮತ್ತು ಗುಂಡುಗಳನ್ನು ರವಿ ಬೆಳಗೆರೆ ಸೂಚನೆ ಮೇರೆಗೆ ವಾಪಸ್‌ ಕೊಟ್ಟು ಒಂದು ತಿಂಗಳ ನಂತರ ಕೆಲಸ ಮುಗಿಸಿಕೊಡುವುದಾಗಿ ಹೇಳಿ ವಿಜಯಪುರಕ್ಕೆ ವಾಪಸ್‌ ಹೋದೆವು ಎಂದು ಪ್ರಾಥಮಿಕ ಹೇಳಿಕೆಯಲ್ಲಿ ಶಶಿಧರ್‌ ರಾಮಚಂದ್ರ ಮುಂಡೆವಾಡಿ ತಿಳಿಸಿದ್ದಾನೆ ಎಂದು ಸಿಸಿಬಿ ಜಂಟಿ ಪೊಲೀಸ್‌ ಆಯುಕ್ತ ಸತೀಶ್‌ ಕುಮಾರ್‌ ತಿಳಿಸಿದ್ದಾರೆ.

ಶಾರ್ಪ್‌ಶೂಟರ್‌ ಶಶಿಧರ್‌
ಶಶಿಧರ್‌ ಒಬ್ಬ ಶಾರ್ಪ್‌ಶೂಟರ್‌. ಈತನ ವಿರುದ್ಧ 2006ರಲ್ಲಿ ಮುತ್ತು ಮಾಸ್ತರ್‌ ಎಂಬಾತನ ಹತ್ಯೆ, 2013ರಲ್ಲಿ ಬಸಪ್ಪ ಹರಿಜನ್‌ ಕೊಲೆ, 2014ರಲ್ಲಿ  ಸ್ನೇಹಿತ ಸುರೇಶ್‌ ಲಾಳಸಂಗಿ ಕೊಲೆ ಪ್ರಕರಣಗಳು ದಾಖಲಾಗಿದ್ದವು.  2016ರಲ್ಲಿ ಈತನ ವಿರುದ್ಧ ಇಂಡಿ ಠಾಣೆಯಲ್ಲಿ ದರೋಡೆ ಪ್ರಕರಣ ದಾಖಲಾಗಿದೆ. ಅಷ್ಟೇ ಅಲ್ಲದೇ 2017ರಲ್ಲಿ ಮಹಾರಾಷ್ಟ್ರದ ಮೀರಜ್‌ನ ಗಾಂಧಿಚೌಕ್‌ ಠಾಣೆಯಲ್ಲಿ ಅಕ್ರಮವಾಗಿ ಶಸ್ತ್ರಾಸ್ತ್ರ ಇಟ್ಟುಕೊಂಡಿದ್ದ ಸಂಬಂಧ ಪ್ರಕರಣ ದಾಖಲಾಗಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.

ತಮ್ಮ ಮೇಲಿನ ಆರೋಪ ಸತ್ಯಕ್ಕೆ ದೂರವಾದುದು ಎಂದು ರವಿ ಬೆಳಗೆರೆ ನನಗೆ ಸ್ಪಷ್ಟಪಡಿಸಿದ್ದಾರೆ. ನ್ಯಾಯಾಂಗದ ಮೇಲೆ ನಮಗೆ ಸಂಪೂರ್ಣ ವಿಶ್ವಾಸ ಇದೆ. ಹೀಗಾಗಿ, ಪ್ರಕರಣದ ತನಿಖೆಗೆ ಎಲ್ಲ ರೀತಿಯ ಸಹಕಾರ ನೀಡಲಾಗುವುದು. ಆದರೆ, ರವಿ ಬೆಳಗೆರೆ ಅವರು ಅನಾರೋಗ್ಯದಿಂದ ಬಳಲುತ್ತಿರುವುದರಿಂದ ವಿಶೇಷ ಪ್ರಕರಣವೆಂದು ಪರಿಗಣಿಸಬೇಕು. ಒಂದು ವೇಳೆ ಬಂಧನಕ್ಕೆ ಒಳಗಾದರೆ, ಚಿಕಿತ್ಸೆ ಸೇರಿದಂತೆ ಎಲ್ಲ ರೀತಿಯ ಸೌಲಭ್ಯ ನೀಡಬೇಕು.
 - ದಿವಾಕರ್‌, ರವಿ ಬೆಳಗೆರೆ ಪರ ವಕೀಲ

ನನ್ನನ್ನು ಕೊಲ್ಲಲು ರವಿ ಬೆಳಗೆರೆ ಸುಪಾರಿ ನೀಡಿದ್ದರು ಎಂದು ಸಿಸಿಬಿ ಅಧಿಕಾರಿಗಳು ತಿಳಿಸಿದಾಗ, ನನಗೆ ಒಂದು ಕ್ಷಣ ಶಾಕ್‌ ಆಯ್ತು. ಹಿಂದಿನ ಘಟನೆಗಳ ಮೆಲುಕು ಹಾಕಿದಾಗ, ಇಂತಹದ್ದೊಂದು ಯತ್ನ ನಡೆದಿದೆ ಅನ್ನಿಸಿತು.”ಸಿಸಿಬಿ ಅಧಿಕಾರಿಗಳು ತಮ್ಮ ಕಚೇರಿಗೆ ಕರೆದು, ರವಿ ಬೆಳಗೆರೆ ಅವರು ನನ್ನ ಕೊಲೆಗಾಗಿ ಶಶಿಧರ ಮಂಡೆವಾಡಿ ಎಂಬುವನಿಗೆ ಸುಪಾರಿ ನೀಡಿದ್ದಾರೆ ಎಂದು ಮಾಹಿತಿ ನೀಡಿದರು. ರವಿ ಬೆಳಗೆರೆ ಅವರು ತಪ್ಪು ತಿಳಿವಳಿಕೆಯಿಂದ ಈ ಯತ್ನ ನಡೆಸಿರಬಹುದು ಅನಿಸಿತು.
 – ಸುನೀಲ್‌  ಹೆಗ್ಗರವಳ್ಳಿ

ಗೌರಿ ಹತ್ಯೆಗೂ ಮತ್ತು ರವಿ ಬೆಳಗೆರೆ ಪ್ರಕರಣಕ್ಕೂ ಸಂಬಂಧ ಇಲ್ಲ. ಶಶಿಧರ್‌ ಮಂಡೆವಾಡಿ ಓರ್ವ ಸುಪಾರಿ ಕಿಲ್ಲರ್‌ ಆಗಿದ್ದು, ವಿಚಾರಣೆ ನಡೆಸುತ್ತಿರುವಾಗ ರವಿ ಬೆಳಗೆರೆ ಪ್ರಕರಣ ಬೆಳಕಿಗೆ ಬಂದಿದೆ ಅಷ್ಟೇ. ಶಶಿಧರ್‌ ಬಳಸಿದ ಗನ್‌ ಅನ್ನು ಫೋರೆನ್ಸಿಕ್‌ ಲ್ಯಾಬ್‌ಗ ಕಳುಹಿಸಲಾಗಿದೆ. ವರದಿ ಬಂದ ನಂತರ ಆ ಗನ್‌ ಎಲ್ಲೆಲ್ಲಿ ಬಳಸಿದ್ದನು ಎಂಬುದು ಗೊತ್ತಾಗಲಿದೆ.
 - ರಾಮಲಿಂಗಾ ರೆಡ್ಡಿ, ಗೃಹ ಸಚಿವ

ಗೌರಿ ಹತ್ಯೆ ಪ್ರಕರಣ ವಿಷಯಾಂತರ ಮಾಡಲು ಈ ತಂತ್ರ. ನನ್ನ ತಂದೆ ರವಿ ಬೆಳಗೆರೆ ಹಾಗೂ ಸುನೀಲ್‌ ನಡುವೆ ಯಾವುದೇ ವೈಮನಸ್ಸು ಇಲ್ಲ
– ಭಾವನಾ ಬೆಳಗೆರೆ, ರವಿ ಬೆಳಗೆರೆ ಪುತ್ರಿ

ಸುಪಾರಿ ಕಿಲ್ಲರ್‌ ಶಶಿಧರ್‌ನ ವಿಚಾರಣೆ ವೇಳೆ ಪತ್ರಕರ್ತ ರವಿ ಬೆಳಗೆರೆ ಸುಪಾರಿ ನೀಡಿರುವ ಬಗ್ಗೆ ಮಾಹಿತಿ ನೀಡಿದ್ದಾನೆ. ಇದನ್ನು ಆಧರಿಸಿ ಬೆಳಿಗ್ಗೆ ರವಿ ಬೆಳಗೆರೆ ನಿವಾಸದ ಮೇಲೆ ದಾಳಿ ನಡೆಸಲಾಗಿದೆ. ವೈಯಕ್ತಿಕ ದ್ವೇಷದ ಹಿನ್ನೆಲೆಯಲ್ಲಿ ಸುಪಾರಿ ನೀಡಿರುವ ಬಗ್ಗೆ ಮಾಹಿತಿ. ರವಿ ಬೆಳಗೆರೆ ಅವರನ್ನು 2ನೇ ಎಸಿಎಂಎಂ ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು. ನಂತರ ಹೆಚ್ಚಿನ ವಿಚಾರಣೆಗಾಗಿ ವಶಕ್ಕೆ ಪಡೆಯಲಾಗುವುದು.
 - ಸತೀಶ್‌ಕುಮಾರ್‌, ಜಂಟಿ ಪೊಲೀಸ್‌ ಆಯುಕ್ತ, ಸಿಸಿಬಿ

ಹಕ್ಕುಚ್ಯುತಿ ಪ್ರಕರಣದಲ್ಲೂ ಬಂಧನ ಭೀತಿ
ಹಕ್ಕುಚ್ಯುತಿ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಧಾನಸಭೆಯಲ್ಲಿ ಕೈಗೊಂಡ ನಿರ್ಣಯದ ಮೇರೆಗೆ ರವಿ ಬೆಳೆಗೆರೆ ಅವರನ್ನು ಬಂಧಿಸಲು  ಒಮ್ಮೆ ಪೊಲೀಸರು ಮುಂದಾಗಿದ್ದರು. ನ್ಯಾಯಾಲಯ ಮಧ್ಯಪ್ರವೇಶದಿಂದ ಸ್ಪೀಕರ್‌ ಆದೇಶ ಪರಿಶೀಲನೆಗೆ ಮನವಿ ಮಾಡುವ ಅವಕಾಶ ಕಲ್ಪಿಸಲಾಗಿತ್ತು. ಆದರೆ, ಎರಡನೇ ಬಾರಿ ಇದೇ ವಿಚಾರ ವಿಧಾನಸಭೆಯಲ್ಲಿ ಪ್ರಸ್ತಾಪವಾಗಿ  ಈ ಹಿಂದೆ ಕೈಗೊಂಡಿದ್ದ ತೀರ್ಮಾನವೇ ಅಂತಿಮ. ಅದರಂತೆ ಕ್ರಮ ಕೈಗೊಳ್ಳಬೇಕು ಎಂದು ಪರಿಶೀಲನೆ ಮನವಿ ತಳ್ಳಿಹಾಕಲಾಗಿತ್ತು. ಹೀಗಾಗಿ, ಆ ಪ್ರಕರಣದಲ್ಲಿ ರವಿ ಬೆಳೆಗೆರೆಗೆ ಬಂಧನ ಭೀತಿಯಿತ್ತು.

ಶಾಕ್‌ ನೀಡಿದ ಸುಪಾರಿ ಸುದ್ದಿ
ಸಿಸಿಬಿ ಅಧಿಕಾರಿಗಳಿಗೆ ಪತ್ರಕರ್ತ ಸುನಿಲ್‌ ಹೆಗ್ಗರವಳ್ಳಿ ಹೇಳಿಕೆ
ಬೆಂಗಳೂರು:
ನನ್ನನ್ನು ಕೊಲ್ಲಲು ರವಿ ಬೆಳಗೆರೆ ಸುಪಾರಿ ನೀಡಿದ್ದರು ಎಂದು ಸಿಸಿಬಿ ಅಧಿಕಾರಿಗಳು ತಿಳಿಸಿದಾಗ, ನನಗೆ ಒಂದು ಕ್ಷಣ ಶಾಕ್‌ ಆಯ್ತು. ಹಿಂದಿನ ಘಟನೆಗಳ ಮೆಲುಕು ಹಾಕಿದಾಗ, ಇಂತಹದ್ದೊಂದು ಯತ್ನ ನಡೆದಿರಬಹುದು ಅನಿಸಿತು ಎಂದು ಪತ್ರಕರ್ತ ಸುನಿಲ್‌ ಹೆಗ್ಗರವಳ್ಳಿ ತಿಳಿಸಿದ್ದಾರೆ.

ಹತ್ಯೆಗೆ ಸುಪಾರಿ ನೀಡಿದ ವಿಚಾರ ಕುರಿತು ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಆವರು, “ಸಿಸಿಬಿ ಅಧಿಕಾರಿಗಳು ತಮ್ಮ ಕಚೇರಿಗೆ ಕರೆದು, ರವಿ ಬೆಳಗೆರೆ ಅವರು ನನ್ನ ಕೊಲೆಗಾಗಿ ಶಶಿಧರ ಮಂಡೆವಾಡಿ ಎಂಬುವನಿಗೆ ಸುಪಾರಿ ನೀಡಿದ್ದಾರೆ ಎಂದು ಮಾಹಿತಿ ನೀಡಿದರು. ಆಗ, ಹಿಂದಿನ ಘಟನೆಗಳ ಮೆಲುಕು ಹಾಕಿದಾಗ, ರವಿ ಬೆಳಗೆರೆ ಅವರು ತಪ್ಪು ತಿಳಿವಳಿಕೆಯಿಂದ ಈ ಯತ್ನ ನಡೆಸಿರಬಹುದು ಅನಿಸಿತು ಎಂದು ಹೇಳಿದರು.

ಈ ಹಿಂದೆ ಶಶಿಧರ್‌ ಮಂಡೆವಾಡಿ ನನ್ನ ಮನೆ ಕಡೆಗೆ ಓಡಾಡಿದ್ದು, ಮಂಜುನಾಥ್‌ ಎಂಬುವರಿಂದ ಕೊರಿಯರ್‌ ಬಂದಿದ್ದು, ರವಿ ಬೆಳಗೆರೆ ನನ್ನನ್ನು ಕಚೇರಿಗೆ ಕರೆಸಿಕೊಂಡಾಗ, ಅಲ್ಲಿ ಅನುಮಾನಾಸ್ಪದ ವ್ಯಕ್ತಿಗಳು ಇದ್ದದ್ದು ಸೇರಿದಂತೆ ಹಲವು ಘಟನೆಗಳು ನನ್ನ ಕೊಲೆಗೆ ಸುಪಾರಿ ಕೊಟ್ಟಿರುವುದನ್ನು ಪುಷ್ಟೀಕರಿಸುತ್ತವೆ ಎಂದು ಹೇಳಿದರು.

ಆದರೆ, ರವಿ ಬೆಳಗೆರೆ ಅವರಿಗೆ ಇಂತಹ ಆಲೋಚನೆ ಯಾಕೆ ಬಂತು ಎಂಬುದನ್ನು ಸ್ವತಃ ಅವರೇ ಪೊಲೀಸರ ಮುಂದೆ ಬಾಯಿಬಿಡಬೇಕು ಎಂದು  ತಿಳಿಸಿದರು. ಈ ಹಿಂದೆ ಹಾಯ್‌ ಬೆಂಗಳೂರು ಪತ್ರಿಕೆ ತೊರೆದಿದ್ದೆ, ಸ್ವತಃ ರವಿ ಬೆಳಗೆರೆ ಕರೆ ಮಾಡಿ, ನೀನು ವಾಪಸ್‌ ಬಾ. ಪದೇ ಪದೇ ಫೋನ್‌ ಮಾಡಿ, ಉತ್ತಮ ಬರಹಗಾರನಾದ ನೀನು ಪತ್ರಿಕೋದ್ಯಮದಲ್ಲಿ ಇರಬೇಕು. ಹಾಯ್‌ ಬೆಂಗಳೂರು ನೀನೇ ನಡೆಸಿಕೊಂಡು ಹೋಗಬೇಕು’ ಎಂದು ನಿರಂತರವಾಗಿ ಒತ್ತಡ ಹಾಕಿದ್ದರು.
“ನಂತರ ಈ ಬಗ್ಗೆ ನಾನು ಈ ವಿಚಾರ ಫೇಸ್‌ಬುಕ್‌ನಲ್ಲಿ ಹಾಕಿದಾಗ, ನೂರಾರು ಸ್ನೇಹಿತರು ವಾಪಸ್‌ ಹೋಗು ಎಂದು ಸಲಹೆ ನೀಡಿದರು.  ಅದರಂತೆ ನಾನು ಹಾಯ್‌ ಬೆಂಗಳೂರಿಗೆ ವಾಪಸ್‌ ಹೋದೆ ಎಂದು ಹೇಳಿದರು.

ಸುನೀಲ್‌ ಹೆಗ್ಗರವಳ್ಳಿ ಹಲವು ವರ್ಷಗಳಿಂದ ರವಿ ಬೆಳಗೆರೆ ಅವರೊಂದಿಗೆ ಕಾರ್ಯನಿರ್ವಹಿಸುತ್ತಿದ್ದರು. ಒಂದು ವರ್ಷದಿಂದ ಪರಸ್ಪರ ದೂರವಾಗಿದ್ದರು. ಆಗಸ್ಟ್‌ನಲ್ಲಿ ಸುನೀಲ್‌ ಕೊಲೆಗೆ ರವಿ ಬೆಳಗೆರೆ ಸುಪಾರಿ ನೀಡಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next