ಬೆಳ್ತಂಗಡಿ: ಸುಮಾರು ಎರಡು ತಿಂಗಳಿಂದ ಸದ್ದು ಮಾಡದ ಕಾಡಾನೆಗಳು ಕಳೆದೊಂದು ವಾರದಿಂದ ಚಾರ್ಮಾಡಿ ಗ್ರಾಮ ಪಂಚಾಯತ್ ವ್ಯಾಪ್ತಿಯ ತೋಟತ್ತಾಡಿ ಗ್ರಾಮದ ಬಾರೆ, ಕುಂಚಾಡಿ, ಮುದ್ದಿನಡ್ಕ ಮೊದಲಾದ ಪ್ರದೇಶಗಳ ತೋಟಗಳಿಗೆ ದಾಳಿ ನಡೆಸಿ ಅಡಿಕೆ, ತೆಂಗು, ಬಾಳೆ ಕೃಷಿಗೆ ಹಾನಿ ಉಂಟು ಮಾಡಿವೆ.
ಉಪವಲಯ ಅರಣ್ಯಾಧಿಕಾರಿ ಭವಾನಿ ಶಂಕರ್ ಹಾಗೂ ಸಿಬಂದಿ ಆನೆಗಳು ದಾಳಿ ನಡೆಸಿರುವ ಸ್ಥಳ ಪರಿಶೀಲನೆ ನಡೆಸಿದ್ದಾರೆ. ಎರಡು ಅಥವಾ ಹೆಚ್ಚಿನ ಆನೆಗಳ ಗುಂಪು ದಾಳಿ ನಡೆಸಿರುವ ಶಂಕೆ ವ್ಯಕ್ತವಾಗಿದೆ.
ಚಾರ್ಮಾಡಿ-ಕನಪಾಡಿ, ಮುಂಡಾಜೆ- ಕಾಪು ರಕ್ಷಿತಾರಣ್ಯ ಪ್ರದೇಶದ ಚಾರ್ಮಾಡಿ, ಚಿಬಿದ್ರೆ, ತೋಟತ್ತಾಡಿ, ಮುಂಡಾಜೆ, ನೆರಿಯ, ಕಡಿರುದ್ಯಾವರ ಮೊದಲಾದ ಕಡೆ ಹಾಗೂ ಸುತ್ತಮುತ್ತಲ ಗ್ರಾಮಗಳಲ್ಲಿ ಕಾಡಾನೆಗಳ ದಾಳಿಗೆ ಹಲವಾರು ಎಕರೆ ಕೃಷಿ ಭೂಮಿ ಈಗಾಗಲೇ ನಾಶವಾಗಿದೆ.