ಕೋಟ: ಕುಕ್ಕರ್ ಪ್ರಕರಣ ಗಂಭೀರವಾಗಿದ್ದು ಹಿಂದೂಗಳನ್ನು ಕೇಂದ್ರೀಕರಿಸಿಕೊಂಡು ಇಂತಹ ದಾಳಿ ನಡೆಯುತ್ತಿದೆ. ಈ ಕೃತ್ಯವನ್ನು ಬಗ್ಗು ಬಡಿಯುತ್ತೇವೆ, ಯಾವುದೇ ಕಾರಣಕ್ಕೂ ಇಂತಹ ಚಟುವಟಿಕೆ ವಿಜೃಂಭಿಸಲು ಬಿಡುವುದಿಲ್ಲ ಎಂದು ಇಂಧನ ಸಚಿವ ಸುನಿಲ್ ಕುಮಾರ್ ತಿಳಿಸಿದರು.
ಶನಿವಾರ ಕೋಟದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿ, ಕುಕ್ಕರ್ ಪ್ರಕರಣ ಆರೋಪಿ ಕದ್ರಿ ದೇವಸ್ಥಾನದ ವಿರುದ್ಧ ಹುನ್ನಾರ ನಡೆಸಿದ್ದ. ಆತ ನಕಲಿ ಆಧಾರ್ ಕಾರ್ಡ್ ಹೊಂದಿದ್ದ ಮತ್ತು ಕೇಸರಿ ಶಾಲು ಧರಿಸಿಕೊಂಡಿದ್ದ. ಇದು ಇಸ್ಲಾಮಿನ ಚಟುವಟಿಕೆಗಳನ್ನು ಇನ್ನಾವುದೋ ಸಂಘಟನೆಯ ಮೇಲೆ ಹೊರಿಸುವ ಹುನ್ನಾರವಾಗಿದೆ. ಇದರ ಸಮಗ್ರ ತನಿಖೆಯನ್ನು ಎನ್‌ಐಎ ಮಾಡಲಿದೆ. ಕರಾವಳಿಯಲ್ಲಿ ಎನ್‌ಐಎ ಕಚೇರಿ ತೆರೆಯುವ ಪ್ರಕ್ರಿಯೆ ಚಾಲ್ತಿಯಲ್ಲಿದೆ. ಕೇಂದ್ರ ಸರಕಾರ ಅಗತ್ಯ ಕ್ರಮ ಕೈಗೊಳ್ಳಲಿದೆ ಎಂದರು.
ಸಮಾನ ನಾಗರಿಕ ಸಂಹಿತೆಗೆ ಬದ್ಧ
ಕರ್ನಾಟಕದಲ್ಲಿ ಸಮಾನ ನಾಗರಿಕ ಸಂಹಿತೆ ತರಬೇಕು ಎನ್ನುವ ಒಲವನ್ನು ಮುಖ್ಯಮಂತ್ರಿ ವ್ಯಕ್ತಪಡಿಸಿದ್ದಾರೆ. ಸರಕಾರ ಇದಕ್ಕೆ ಬದ್ಧವಾಗಿದೆ. ಮುಂದಿನ ಅಧಿವೇಶನದ ಸಂದರ್ಭ ಸಚಿವ ಸಂಪುಟದಲ್ಲಿ ಚರ್ಚೆ ನಡೆಯಲಿದೆ ಎಂದು ಅವರು ತಿಳಿಸಿದರು.