Advertisement

ನಗರಸಭೆ ಅಧಿಕಾರಿಗಳಿಂದ ಹಣ್ಣಿನಂಗಡಿಗೆ ದಾಳಿ

11:44 PM Jun 24, 2019 | Team Udayavani |

ನಗರ: ನಗರದ ಗಾಂಧಿಕಟ್ಟೆಯ ಬಳಿಯ ಮುಖ್ಯರಸ್ತೆಯ ಬದಿ ಫುಟ್‌ಪಾತ್‌ನಲ್ಲಿರುವ ಹಣ್ಣಿನ ಅಂಗಡಿಗಳಲ್ಲಿ ಗ್ರಾಹಕರಿಗೆ ವಂಚಿಸಿ ಕೊಳೆತ ಹಣ್ಣುಗಳನ್ನು ಮಾರಾಟ ಮಾಡುತ್ತಿರುವ ಕುರಿತು ಸಾರ್ವಜನಿಕ ದೂರಿನ ಮೇರೆಗೆ ನಗರಸಭೆ ಅಧಿಕಾರಿಗಳು ಸೋಮವಾರ ಕಾರ್ಯಾಚರಣೆ ನಡೆಸಿ ಪರಿಶೀಲಿಸಿದರು.

Advertisement

ನಗರದ ಹೃದಯಭಾಗದ ರಸ್ತೆ ಬದಿ ವ್ಯಾಪಾರ ನಡೆಸುತ್ತಿರುವ ಕೆಲವು ವ್ಯಾಪಾರಿಗಳು ಕೊಳೆತ ಹಣ್ಣುಗಳನ್ನು ಮಾರಾಟ ಮಾಡುತ್ತಿದ್ದಾರೆ ಎನ್ನುವ ಕುರಿತು ರಜೆಯಲ್ಲಿ ಊರಿಗೆ ಬಂದಿರುವ ಸೈನಿಕ ಕೆದಂಬಾಡಿ ನಿವಾಸಿ ಲಕ್ಷ್ಮೀಶ ಪಾಟಾಳಿ ಸ್ಥಳೀಯಾಡಳಿತ ನಗರಸಭೆಗೆ ದೂರು ನೀಡಿದ್ದರು.

ಫುಟ್‌ಪಾತ್‌ ಸ್ಥಳವನ್ನು ಅತಿಕ್ರಮಿಸಿಕೊಂಡು ಹಣ್ಣು ಕಳಪೆ ಹಾಗೂ ಕೊಳೆತ ಹಣ್ಣುಗಳನ್ನು ಮಾರಾಟ ಮಾಡಿ ವಂಚಿಸುತ್ತಿರುವ ಕುರಿತು ಅಂಗಡಿಯವರಲ್ಲಿ ಪ್ರಶ್ನಿಸಿದ ಸಂದರ್ಭ ಉಡಾಫೆಯ ಮಾತುಗಳನ್ನಾಡುವುದು ಮತ್ತು ಈ ಕುರಿತು ಕ್ರಮ ಕೈಗೊಳ್ಳಬೇಕಾದ ನಗರಸಭೆಯ ಅಧಿಕಾರಿಗಳು ನಿರ್ಲಕ್ಷ್ಯ ವಹಿಸುತ್ತಿರುವ ಕುರಿತು ಸಾರ್ವಜನಿಕ ವಲಯದಲ್ಲಿ ಅಸಮಾಧಾನ ವ್ಯಕ್ತವಾಗಿತ್ತು.

ಕಾರ್ಯಾಚರಣೆ
ಸಾರ್ವಜನಿಕ ದೂರನ್ನು ಆಧರಿಸಿ ನಗರಸಭೆಯ ಹಿರಿಯ ಆರೋಗ್ಯ ನಿರೀಕ್ಷಕ ರಾಮಚಂದ್ರ ಹಾಗೂ ಪರಿಸರ ಅಭಿಯಂತರ ಗುರುಪ್ರಸಾದ್‌ ಶೆಟ್ಟಿ ನೇತೃತ್ವದಲ್ಲಿ ಹಣ್ಣಿನ ಅಂಗಡಿಗಳಿಗೆ ದಾಳಿ ನಡೆಸಿ ಪರಿಶೀಲನೆ ನಡೆಸಲಾಯಿತು. ಈ ವೇಳೆ ರಂಬೂಟಾನ್‌, ಮೂಸಂಬಿ ಸಹಿತ ಕೆಲವು ಕೊಳೆತ ಹಣ್ಣುಗಳನ್ನು ಮಾರಾಟ ಮಾಡುತ್ತಿರುವುದು ಹಾಗೂ ಅಂಗಡಿಗಳ ಬಳಿ ಸ್ವತ್ಛತೆ ಕಾಪಾಡಿಕೊಳ್ಳದೇ ಇರುವುದು ಗಮನಕ್ಕೆ ಬಂದಿದೆ. ಕೂಡಲೇ ಅಂಗಡಿಗಳನ್ನು ತೆರವುಗೊಳಿಸಬೇಕು. ಉದ್ಯಮ ಪರವಾನಿಗೆಯನ್ನು ಪಡೆದೇ ವ್ಯಾಪಾರ ನಡೆಸಬೇಕು ಎಂದು ಅಧಿಕಾರಿಗಳು ಎಚ್ಚರಿಕೆ ನೀಡಿದರು.

ಹೊಟೇಲ್‌ಗೆ ದಾಳಿ
ಅನಂತರ ಪಕ್ಕದ ಲಿಬರ್ಟಿ ಹೊಟೇಲ್‌ಗೆ ದಾಳಿ ನಡೆಸಿದ ಅಧಿಕಾರಿಗಳು ಸ್ವತ್ಛತೆಗೆ ನಿರ್ಲಕ್ಷ್ಯ ವಹಿಸಿರುವುದನ್ನು ಕಂಡು ಎಚ್ಚರಿಕೆ ನೀಡಿದರು. ಮಳೆಗಾಲದಲ್ಲಿ ಹೊಟೇಲ್‌ಗ‌ಳಲ್ಲಿ ಕಡ್ಡಾಯವಾಗಿ ಗ್ರಾಹಕರಿಗೆ ಬಿಸಿ ನೀರು ಕೊಡಬೇಕು. ಆದರೆ ಈ ಹೊಟೇಲ್‌ನಲ್ಲಿ ನೀಡುತ್ತಿಲ್ಲ. ಈ ಹಿಂದೆಯೂ ಹೊಟೇಲ್‌ನವರಿಗೆ ಎಚ್ಚರಿಕೆ ನೀಡಲಾಗಿದೆ. ಸರಿಪಡಿಸದಿದ್ದಲ್ಲಿ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಆರೋಗ್ಯ ನಿರೀಕ್ಷಕ ರಾಮಚಂದ್ರ ಎಚ್ಚರಿಕೆ ನೀಡಿದರು.

Advertisement

ನೋಟಿಸ್‌ ನೀಡುತ್ತೇವೆ
ಇಲ್ಲಿ ಉದ್ಯಮ ಪರವಾನಿಗೆ ಪಡೆಯದೆ ಹಣ್ಣಿನ ವ್ಯಾಪಾರ ನಡೆಸಲಾಗುತ್ತಿದೆ. ಕೊಳೆತ ಹಣ್ಣುಗಳನ್ನು ಮಾರಾಟ ಮಾಡುತ್ತಿರುವುದು ಹಾಗೂ ಸ್ವತ್ಛತೆಗೆ ಗಮನಹರಿಸದಿರುವುದು ಕಂಡುಬಂದಿದೆ. ಈ ಅಂಗಡಿಯವರಿಗೆ ನೋಟಿಸ್‌ ನೀಡಲಾಗುವುದು. ಅನಂತರ ಕಾನೂನು ಕ್ರಮದ ಕುರಿತೂ ಯೋಚಿಸಲಾಗುತ್ತಿದೆ.
– ರಾಮಚಂದ್ರ, ನಗರಸಭೆ ಹಿರಿಯ ಆರೋಗ್ಯ ನಿರೀಕ್ಷಕ

Advertisement

Udayavani is now on Telegram. Click here to join our channel and stay updated with the latest news.

Next