Advertisement
ಮಕ್ಕಳ ಕಲ್ಯಾಣ ಸಮಿತಿ ವಶಕ್ಕೆ: ಮಾಡಪ್ಪಲ್ಲಿ ಸುತ್ತಮುತ್ತ ನಡೆಯುತ್ತಿರುವ ಕಲ್ಲು ಗಣಿಗಾರಿಕೆಯಲ್ಲಿ ಮಾಲೀಕರು ಬಾಲ ಕಾರ್ಮಿಕರನ್ನು ಕಾನೂನು ಬಾಹಿರವಾಗಿ ಬಳಸಿಕೊಳ್ಳುತ್ತಿರುವ ಕುರಿತು ಸಾರ್ವಜನಿಕ ವಲಯದಲ್ಲಿ ಆರೋಪ ಕೇಳಿ ಬಂದ ಹಿನ್ನೆಲೆಯಲ್ಲಿ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಹುಸ್ಮಾನ್‌ಸಾಬ್ ನೇತೃತ್ವದ ತಂಡ ಕಲ್ಲು ಕ್ವಾರಿಗಳ ಮೇಲೆ ದಾಳಿ ನಡೆಸಿದ್ದು, ಈ ವೇಳೆ ಅಪ್ರಾಪ್ತರಾದ ಕೊಂಡಪ್ಪ, ರಂಗನಾಥ ಎಂಬುವರನ್ನು ರಕ್ಷಿಸಿ ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿ ವಶಕ್ಕೆ ನೀಡಿದ್ದಾರೆ.
Related Articles
Advertisement
ಸಾಂತ್ವನ ಕೇಂದ್ರಕ್ಕೆ ಮಕ್ಕಳು: ರಕ್ಷಿಸಿರುವ ಮಕ್ಕಳನ್ನು ಕಾರ್ಮಿಕ ಇಲಾಖೆ ಹಾಗೂ ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಅಧಿಕಾರಿಗಳು, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ನಡೆಸುತ್ತಿರುವ ಸಾಂತ್ವನ ಕೇಂದ್ರದಲ್ಲಿ ಬಿಟ್ಟಿದ್ದಾರೆ. ಬಾಗೇಪಲ್ಲಿ ಕಾರ್ಮಿಕ ಇಲಾಖೆಯಲ್ಲಿ ಮಾಲೀಕರ ವಿರುದ್ಧ ದೂರು ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
ಕಾರ್ಯಾಚರಣೆಯಲ್ಲಿ ಬಾಗೇಪಲ್ಲಿ ತಾಲೂಕಿನ ಕಾರ್ಮಿಕ ಇಲಾಖೆ ನಿರೀಕ್ಷಕ ಸುರೇಂದ್ರ, ಜಿಲ್ಲಾ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಕಾನೂನು ಪರಿವೀಕ್ಷಕ ರಾಮೇಗೌಡ, ಬಾಲ ಕಾರ್ಮಿಕ ಯೋಜನಾ ಸಂಘದ ರಮೇಶ್ ಸೇರಿದಂತೆ ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಸದಸ್ಯರು ಭಾಗವಹಿಸಿದ್ದರು.
ಅಕ್ರಮ ಕಲ್ಲು ಗಣಿಗಾರಿಕೆಗೆ ಕುಖ್ಯಾತಿ: ಬಾಗೇಪಲ್ಲಿ ತಾಲೂಕು ತೀರಾ ಹಿಂದುಳಿದಿದ್ದು, ಇತ್ತೀಚೆಗೆ ಅಕ್ರಮ ಗಣಿಗಾರಿಕೆ ಭೂತ ತಾಲೂಕಿಗೆ ಅಂಟಿಕೊಂಡಿದೆ. ಬೆಟ್ಟಗುಡ್ಡಗಳಿಂದ ಕೂಡಿರುವ ಬಾಗೇಪಲ್ಲಿ ತಾಲೂಕಿನ ಮೇಲೆ ಕೆಲ ಬೆಂಗಳೂರಿನ ಉದ್ದಿಮೆಗಳ ಕಣ್ಣು ಬಿದ್ದು ಅಕ್ರಮ ಗಣಿಗಾರಿಕೆಗೆ ತುತ್ತಾಗಿದೆ.
ಹೀಗಾಗಿ ಬಾಗೇಪಲ್ಲಿ ತಾಲೂಕಿನಲ್ಲಿರುವ ಬೆಟ್ಟಗುಡ್ಡಗಳು ಕಣ್ಣು ಮುಂದೆಯೇ ಕರಗ ತೊಡಗಿದ್ದು, ಇದಕ್ಕೆ ಆಂಧ್ರಪ್ರದೇಶದಿಂದ ಬಾಲ ಕಾರ್ಮಿಕರನ್ನು ಮಾಲೀಕರು ಕರೆ ತಂದು ದುಡಿಸಿಕೊಳ್ಳುತ್ತಿರುವುದು ಕಂಡು ಬರುತ್ತಿದೆ. ಕಾರ್ಮಿಕ ಹಾಗೂ ಮಕ್ಕಳ ರಕ್ಷಣಾ ಘಟಕದ ಅಧಿಕಾರಿಗಳು ದಾಳಿ ಸುಳಿವು ಅರಿತು ಕೆಲ ಬಾಲ ಕಾರ್ಮಿಕರನ್ನು ಕೆಲಸಕ್ಕೆ ಕರೆಸಿಲ್ಲ ಎನ್ನುವ ಮಾತು ಸಹ ಕೇಳಿ ಬಂದಿದೆ.
ಜಿಲ್ಲೆಯ ಬಾಗೇಪಲ್ಲಿ ತಾಲೂಕಿನ ಮಾಡಪ್ಪಲ್ಲಿ ಗ್ರಾಮದ ಕಲ್ಲು ಕ್ವಾರಿಯಲ್ಲಿ ಕೆಲಸ ಮಾಡುತ್ತಿದ್ದ ಆಂಧ್ರ ಮೂಲದ ಇಬ್ಬರು ಬಾಲ ಕಾರ್ಮಿಕರನ್ನು ರಕ್ಷಿಸಲಾಗಿದೆ. ಮಾಲೀಕರ ವಿರುದ್ಧ ಬಾಗೇಪಲ್ಲಿ ಕಾರ್ಮಿಕ ಇಲಾಖೆಯಲ್ಲಿ ದೂರು ದಾಖಲಿಸಲಾಗಿದೆ. ಇಲಾಖೆ ಕೂಡ ಕಾನೂನು ಕ್ರಮ ಕೈಗೊಳ್ಳಲಿದೆ. ರಕ್ಷಣೆಯಾದ ಮಕ್ಕಳನ್ನು ಸಾಂತ್ವನ ಕೇಂದ್ರದಲ್ಲಿ ಇರಿಸಲಾಗಿದ್ದು ಪೋಷಕರನ್ನು ಕರೆದು ಅವರಿಗೆ ಬುದ್ಧಿವಾದ ಹೇಳುತ್ತೇವೆ.-ಹುಸ್ಮಾನ್‌ಸಾಬ್, ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ