Advertisement

ಬೆಳ್ಳಂಬೆಳಗ್ಗೆ ರೌಡಿಗಳ ಮನೆ ಮೇಲೆ ದಾಳಿ

06:30 AM Mar 11, 2019 | |

ಬೆಂಗಳೂರು: ಕುಖ್ಯಾತ ರೌಡಿ ಲಕ್ಷ್ಮಣನ ಭೀಕರ ಹತ್ಯೆ ಹಾಗೂ ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಪಶ್ಚಿಮ ವಲಯ ಪೊಲೀಸರು ಭಾನುವಾರ ಬೆಳ್ಳಂಬೆಳಗ್ಗೆ ದಾಳಿ ನಡೆಸಿ 150ಕ್ಕೂ ಹೆಚ್ಚು ರೌಡಿಶೀಟರ್‌ಗಳನ್ನು ವಶಕ್ಕೆಪಡೆದುಕೊಂಡಿದ್ದಾರೆ.

Advertisement

ಇತ್ತೀಚೆಗೆ ಪಶ್ಚಿಮ ವಲಯದಲ್ಲಿ ರೌಡಿಗಳು ಹೆಚ್ಚು ಸಕ್ರಿಯರಾಗಿದ್ದರು. ಅಲ್ಲದೆ, ಲಕ್ಷ್ಮಣನ ಭೀಕರ ಹತ್ಯೆ ಬಳಿಕ ಸಣ್ಣ-ಪುಟ್ಟ ರೌಡಿಗಳು ಅಕ್ರಮ ಚಟುವಟಿಕೆಗಳಲ್ಲಿ ತೊಡಗುತ್ತಿರುವ ಮಾಹಿತಿ ಲಭ್ಯವಾಗಿತ್ತು. ಈ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ಪೊಲೀಸರ ತಂಡ ಮುಂಜಾನೆ 4 ಗಂಟೆಯಿಂದ ಬೆಳಗ್ಗೆ 9 ಗಂಟೆವರೆಗೆ ಎಲ್ಲ ಪೊಲೀಸ್‌ ಠಾಣೆಗಳ ವ್ಯಾಪ್ತಿಯಲ್ಲಿರುವ ರೌಡಿಶೀಟರ್‌ಗಳ ಮನೆಗಳ ಮೇಲೆ ದಾಳಿ ನಡೆಸಿದರು.

ಈ ವೇಳೆ ಕೆಲ ರೌಡಿಗಳು ಅಕ್ರಮವಾಗಿ ಇಟ್ಟುಕೊಂಡಿದ್ದ ಮಾರಕಾಸ್ತ್ರಗಳನ್ನು ವಶಪಡಿಸಿಕೊಳ್ಳಲಾಗಿದೆ. ನಂತರ ಠಾಣೆಗೆ ಕರೆತಂದು ರೌಡಿಶೀಟರ್‌ಗಳ ಪ್ರಸ್ತುತ ವೃತ್ತಿ, ಪ್ರವೃತ್ತಿಗಳು ಹಾಗೂ ಅವರು ಬಳಸುತ್ತಿರುವ ಮೊಬೈಲ್‌ ನಂಬರ್‌ಗಳ ಬಗ್ಗೆ ಮಾಹಿತಿ ಪಡೆದುಕೊಳ್ಳಲಾಯಿತು.

ಹಿರಿಯ ಅಧಿಕಾರಿಗಳ ಸಮ್ಮುಖದಲ್ಲಿ ಮುಚ್ಚಳಿಕೆ ಪತ್ರ ಬರೆಸಿಕೊಂಡು, ಮುಂದಿನ ದಿನಗಳಲ್ಲಿ ಕಾನೂನು ಬಾಹಿರ ಚಟುವಟಿಕೆಗಳಲ್ಲಿ ತೊಡಗದಂತೆ ಎಚ್ಚರಿಕೆ ನೀಡಿದರು. ಅಲ್ಲದೆ, ಒಂದು ವೇಳೆ ಅಕ್ರಮ ಚಟುವಟಿಕೆ ನಡೆಸುವ ಇತರೆ ವ್ಯಕ್ತಿಗಳ ಜತೆ ಕೈಜೋಡಿಸಿದರೂ ಕಠಿಣ ಕ್ರಮಕೈಗೊಳ್ಳಬೇಕಾಗುತ್ತದೆ ಎಚ್ಚರಿಕೆ ನೀಡಲಾಯಿತು.

ಇತ್ತೀಚೆಗೆ ರೌಡಿಶೀಟರ್‌ ಲಕ್ಷ್ಮಣನನ್ನು ದುಷ್ಕರ್ಮಿಗಳು ನಡುರಸ್ತೆಯಲ್ಲಿ ಬರ್ಬರವಾಗಿ ಹತ್ಯೆಗೈದಿದ್ದರು. ಈ ಹಿನ್ನೆಲೆಯಲ್ಲಿ ನಗರದಲ್ಲಿ ಮತ್ತೆ ರೌಡಿಗಳು ಸಕ್ರಿಯರಾಗಿರುವ ಸುಳಿವು ಸಿಕ್ಕಿತ್ತು. ಮತ್ತೂಂದೆಡೆ ಲೋಕಸಭೆ ಚುನಾವಣೆ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಅಕ್ರಮ ಚಟುವಟಿಕೆಗಳಲ್ಲಿ ತೊಡಗಿರುವ ಎಲ್ಲ ವ್ಯಕ್ತಿಗಳ ಮನೆಗಳ ಮೇಲೆ ದಾಳಿ ನಡೆಸಿ,

Advertisement

ಅವರ ಕಾರ್ಯಚಟುವಟಿಕೆಗಳ ಬಗ್ಗೆ ಮಾಹಿತಿ ಸಂಗ್ರಹಿಸುವಂತೆ ನಗರ ಪೊಲೀಸ್‌ ಆಯುಕ್ತ ಟಿ.ಸುನಿಲ್‌ ಕುಮಾರ್‌ ಆದೇಶಿಸಿದ್ದರು. ಈ ಹಿನ್ನೆಲೆಯಲ್ಲಿ ದಾಳಿ ನಡೆಸಲಾಗಿದೆ ಎಂದು ಪೊಲೀಸರು ಹೇಳಿದರು. ರೌಡಿಶೀಟರ್‌ಗಳು ಮಾತ್ರವಲ್ಲದೆ, ದರೋಡೆಕೋರರು, ಮೊಬೈಲ್‌ ಕಳ್ಳರು, ಸರಗಳ್ಳರು ಹಾಗೂ ಪದೇ ಪದೆ ಕಾನೂನು ಬಾಹಿರ ಚಟುವಟಿಕೆಗಳಲ್ಲಿ ತೊಡಗುವ ವ್ಯಕ್ತಿಗಳನ್ನು ವಶಕ್ಕೆ ಪಡೆದು ಮುನ್ನೆಚ್ಚರಿಕೆ ಕ್ರಮವಾಗಿ ಎಚ್ಚರಿಕೆ ನೀಡಲಾಗಿದೆ ಎಂದು ಪೊಲೀಸರು ಹೇಳಿದರು.

ಈ ಕುರಿತು ಪ್ರತಿಕ್ರಿಯೆ ನೀಡಿದ ಪಶ್ಚಿಮ ವಲಯ ಡಿಸಿಪಿ ರವಿ ಡಿ. ಚೆನ್ನಣ್ಣನವರ್‌, ಲೋಕಸಭೆ ಚುನಾವಣೆ ಹಿನ್ನೆಲೆ ಹಾಗೂ ಮುನ್ನೆಚ್ಚರಿಕೆ ಕ್ರಮವಾಗಿ ಅಕ್ರಮ ಚಟುವಟಿಕೆಗಳಲ್ಲಿ ಸಕ್ರಿಯವಾಗಿರುವ ಸುಮಾರು 150ಕ್ಕೂ ಹೆಚ್ಚು ರೌಡಿಶೀಟರ್‌ಗಳ ಮೇಲೆ ಮನೆಗಳ ಮೇಲೆ ದಾಳಿ ನಡೆಸಿ ಎಚ್ಚರಿಕೆ ನೀಡಲಾಗಿದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next