ಬೆಂಗಳೂರು: ಅವಧಿ ಮೀರಿ ಬಾರ್ -ಪಬ್ ತೆರೆದು ಹೊರರಾಜ್ಯಗಳಿಂದ ಯುವತಿಯರನ್ನು ಕರೆಸಿ ಅಸಭ್ಯ ಉಡುಪು ತೊಡಿಸಿ ಗ್ರಾಹಕರಿಗೆ ಲೈಂಗಿಕವಾಗಿ ಪ್ರಚೋದಿಸಿ ಅಕ್ರಮ ಚಟುವಟಿಕೆಯಲ್ಲಿ ತೊಡಗಿದ್ದ ಮೂರು ಸ್ಥಳಗಳ ಮೇಲೆ ಕೇಂದ್ರ ಅಪರಾಧ ವಿಭಾಗ(ಸಿಸಿಬಿ)ದ ಮಹಿಳಾ ಸಂರಕ್ಷಣಾ ದಳದ ಪೊಲೀಸರು ದಾಳಿ ನಡೆಸಿದ್ದು, 9 ಮಂದಿ ಆರೋಪಿಗಳನ್ನು ವಶಕ್ಕೆ ಪಡೆದುಕೊಂಡಿದೆ.
ಇದೇ ವೇಳೆ 87 ಮಂದಿ ಮಹಿಳೆಯರನ್ನು ರಕ್ಷಿಸಲಾಗಿದೆ. ರಿಚ್‌ಮಂಡ್ ರಸ್ತೆಯ ದಿಪ್ರೈಡ್ ಹೋಟೆಲ್‌ನ 1ನೇ ಮಹಡಿಯ “ಫ್ಯೂಯೆಲ್ ರೆಸ್ಟೋ ಬಾರ್’ನಲ್ಲಿ ಹೊರರಾಜ್ಯಗಳಿಂದ ಹುಡುಗಿಯರನ್ನು ಕರೆಸಿ ಬಾರ್‌ನಲ್ಲಿ ಗ್ರಾಹಕರಿಗೆ ಲೈಂಗಿಕ ಪ್ರಚೋದನೆ ಕೊಡಿಸುತ್ತಿದ್ದರು. ಪರಸ್ಪರ ಗ್ರಾಹಕರು ಮತ್ತು ಯುವತಿಯರ ಖಾಸಗಿ ಅಂಗಾಂಗಳನ್ನು ಮುಟ್ಟಿಸಿಕೊಳ್ಳುವುದು, ಚುಂಬಿಸವುದು ಮಾಡುತ್ತಿದ್ದರು. ಈ ಬಗ್ಗೆ ದೊರೆತ ಖಚಿತ ಮಾಹಿತಿ ಮೇರೆಗೆ ಸಿಸಿಬಿ ಪೊಲೀಸರು ಶನಿವಾರ ರಾತ್ರಿ ಏಳು ಗಂಟೆಗೆ ಬಾರ್ ಮೇಲೆ ದಾಳಿ ನಡೆಸಿ ಮೂವರು ಆರೋಪಿಗಳನ್ನು ವಶಕ್ಕೆ ಪಡೆದಿದ್ದಾರೆ.
ದಾಳಿಯ ವೇಳೆ 54 ಮಂದಿ ಗ್ರಾಹಕರು ಬಾರ್‌ನಲ್ಲಿದ್ದು, 19 ಮಂದಿ ಹುಡುಗಿಯರನ್ನು ರಕ್ಷಿಸಿದ್ದಾರೆ. ಈ ಸಂಬಂಧ ಅಶೋಕನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ದೊಮ್ಮಲೂರಿನ ಎಚ್‌ಬಿಸಿಎಸ್ ಲೇಔಟ್‌ನ “ಕ್ಲಬ್ 7 ಪಬ್’ನಲ್ಲಿ ರಾತ್ರಿ ವೇಳೆ ಯುವಕ-ಯುವತಿಯರನ್ನು ಕರೆಸಿಕೊಂಡು ಯಾವುದೇ ಪರವಾನಗಿ ಇಲ್ಲದೆ ಡಿಜೆ ಕಾರ್ಯಕ್ರಮ ಏರ್ಪಡಿಸುತ್ತಿರುವ ಮಾಹಿತಿ ಇತ್ತು. ಈ ಬಗ್ಗೆ ಮಾಹಿತಿ ಸಂಗ್ರಹಿಸಿ ಭಾನುವಾರ ಮುಂಜಾನೆ 1 ಗಂಟೆಗೆ ಸಿಸಿಬಿ ಪೊಲೀಸರು ಪಬ್ ಮೇಲೆ ದಾಳಿ ನಡೆಸಿ ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ. ದಾಳಿ ವೇಳೆ 118 ಯುವಕರು ಮತ್ತು 55 ಯುವತಿಯರು ಪತ್ತೆಯಾಗಿದ್ದಾರೆ. ಈ ಸಂಬಂಧ ಹಲಸೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವಿದೇಶಿ ಪ್ರಜೆಗಳು ವಶಕ್ಕೆ : ಹೆಣ್ಣೂರು ಮುಖ್ಯರಸ್ತೆಯ ಕೊತ್ತನೂರು ಪಟೇಲ್ ರಾಮಯ್ಯ ಗಾರ್ಡನ್‌ನ “ಶಿಗನ ಬಾರ್ ಆ್ಯಂಡ್ ಕಿಚನ್’ ಮೇಲೆ ಸಿಸಿಬಿ ಪೊಲೀಸರು ದಾಳಿ ಮಾಡಿದ್ದಾರೆ. ಅವಧಿ ಮೀರಿ ಬಾರ್ ತೆರೆದು ಮದ್ಯ ಸರಬರಾಜು ಮಾಡಿಕೊಂಡು ಡಿಜೆ ಮ್ಯೂಸಿಕ್ ಕಾರ್ಯಕ್ರಮ ನಡೆಸುತ್ತಿದ್ದರು. ಈ ಬಗ್ಗೆ ದೊರೆತ ಖಚಿತ ಮಾಹಿತಿ ಮೇರೆಗೆ ಭಾನುವಾರ ಮುಂಜಾನೆ ಬಾರ್ ಮೇಲೆ ದಾಳಿ ನಡೆಸಿ ಮೂವರನ್ನು ವಶಕ್ಕೆ ಪಡೆದಿದ್ದಾರೆ. ದಾಳಿ ವೇಳೆ 32 ಮಂದಿ ಯುವಕರು ಇದ್ದು, ಈ ಪೈಕಿ ಆರು ಮಂದಿ ಸೂಡನ್, ಯಮನ್ ಮತ್ತು ಕಾಂಗೋ ದೇಶದ ಇಬ್ಬರು ಪ್ರಜೆಗಳಾಗಿದ್ದಾರೆ. ಇನ್ನು 13 ಮಂದಿ ಯುವತಿಯರ ಪೈಕಿ ಥೈಯ್ಲೆಂಡ್ ದೇಶದ ಮೂವರು ಮತ್ತು ಸೂಡಾನ್ ದೇಶದ ಒಬ್ಬ ಯುವತಿ ಪತ್ತೆಯಾಗಿದ್ದಾರೆ. ಈ ಸಂಬಂಧ ಕೊತ್ತನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.