ಮಹದೇವಪುರ: ನಿವೇಶನ ವಿಚಾರಕ್ಕೆ ಸಂಬಂಧಿಸಿದಂತೆ ಕೂಲಿ ಕಾರ್ಮಿಕನ ಮೇಲೆ ಪೊಲೀಸರು ಹಲ್ಲೆ ನಡೆಸಿದ್ದಾರೆ ಎಂದು ದಲಿತ ಸಂಘರ್ಷ ಸಮಿತಿ ಅಂಬೇಡ್ಕರ್ ವಾದ ಬೆಂಗಳೂರು ನಗರ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮುನಿನಂಜಪ್ಪ ಆರೋಪಿಸಿದರು.
ಮಾರಗೊಂಡಹಳ್ಳಿಯಲ್ಲಿ ಪ್ರತಿಕಾಗೊಷ್ಠಿ ನಡೆಸಿದ ಅವರು, ಕೂಲಿ ಕಾರ್ಮಿಕನಾಗಿರುವ ಆಂಧ್ರ ಮೂಲದ ಚಂದ್ರ ಮೋಹನ್ ಕಿತ್ತಗನೂರು ಕಾಲೋನಿಯಲ್ಲಿ ವಾಸವಾಗಿದ್ದಾರೆ. ನಿವೇಶನ ಹುಡುಕಾಟದಲ್ಲಿದ ಸ್ನೇಹಿತ ರಮೇಶ್ ಗೆ ತಮ್ಮ ಮನೆಯಲ್ಲಿ ಸಮೀಪವಿರುವ ಸಂಬಂಧಿಯ ಸೈಟ್ ತೋರಿಸಿದ್ದರು. ವೆಂಕಟಚಾಲಪತಿಯಿಂದ ನಿವೇಶನ ಖರೀದಿಸಿ ರಮೇಶ್ ಮನೆ ನಿರ್ಮಿಸಿದ್ದರು. ಕಳೆದ ತಿಂಗಳ ಹಿಂದೆ ನಿವೇಶನ ವಿಚಾರಕ್ಕೆ ಗಲಾಟೆ ನಡೆದಿತ್ತು.
ಇದರಿಂದ ಬೇಸರಗೊಂಡ ರಮೇಶ್ ನಿವೇಶನ ತೋರಿಸಿದ್ದ ಚಂದ್ರಮೊಹನ್ ವಿರುದ್ಧ ದೂರು ದಾಖಲಿಸಿದ್ದರು. ಇದನ್ನೇ ಬಂಡವಾಳ ಮಾಡಿಕೊಂಡ ಡಿವೈಎಸ್‌ಪಿ ಉಮಾಶಂಕರ್ ಮತ್ತು ಆವಲಹಳ್ಳಿ ಠಾಣೆ ಪೊಲೀಸ್ ಮಹೇಶ್ ಕುಮಾರ್ ನಿವೇಶನ ಮಾರಾಟ ಮಾಡಿದ ವೆಂಕಟಚಾಲಪತಿಯನ್ನು ವಿಚಾರಣೆ ನೆಪದಲ್ಲಿ ಕರೆಸಿಕೊಂಡು ಸೆಟಲ್‌ಮೆಂಟ್ ಮಾಡಿಕೊಂಡಿದ್ದಾರೆ. ಬಳಿಕ ಚಂದ್ರ ಮೋಹನ್ ನನ್ನು ಠಾಣೆಗೆ ಕರೆಸಿಕೊಂಡು “ರಮೇಶನಿಗೆ ನೀನು ಮೋಸ ಮಾಡಿದ್ದೀಯಾ’ ಎಂದು ನಿಂದಿಸಿ ಹಲ್ಲೆ ನಡೆಸಿದ್ದಾರೆ. ಅಲ್ಲದೆ 5 ಲಕ್ಷ ರೂ. ನೀಡುವಂತೆ ಬೆದರಿಕೆ ಹಾಕಿದ್ದಾರೆ ಎಂದು ದೂರಿದರು.
ಈ ಸಂಬಂಧ ಪೊಲೀಸರ ವಿರುದ್ಧ ಉನ್ನತ ಅಧಿಕಾರಿಗಳಿಗೆ ದೂರು ನೀಡಲಾಗಿದೆ. ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳದಿದ್ದರೆ ಹೋರಾಟ ನಡೆಸಲಾಗುವುದು ಎಂದರು.
ಇದನ್ನೂ ಓದಿ:ಗುತ್ತಿಗೆದಾರ ಸಂತೋಷ್ ಆತ್ಮಹತ್ಯೆ ಪ್ರಕರಣ: ತನಿಖೆ ಆರಂಭ
ಪತ್ರಿಕಾಗೋಷ್ಠಿಯಲ್ಲಿ ಮುಖಂಡರಾದ ಮಣಿಪಾಲ್ ರಾಜಪ್ಪ, ಗೋವಿಂದ ಕುಮಾರ್, ಆದೂರು ಮಂಜುನಾಥ್, ಶಂಬು ಲಿಂಗೇಗೌಡ, ನಾರಾಯಣ್ ಇತರರಿದ್ದರು.