Advertisement

ರೇಷ್ಮೆ ಗೂಡಿನ ಹಣ ಕೇಳಿದ ರೈತನ ಮೇಲೆ ಹಲ್ಲೆ

12:19 PM May 22, 2022 | Team Udayavani |

ಕನಕಪುರ: ರೇಷ್ಮೆ ಗೂಡಿನ ಬಾಕಿ ಹಣ ಕೇಳಲು ಬಂದ ರೈತನ ಮೇಲೆ ಹಲ್ಲೆ ಮಾಡಿದವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕಾದ ಆರಕ್ಷಕರು ಆರೋಪಿಗಳ ಪರ ನಿಂತು ರಾಜಿ ಮಾಡಿ ಪ್ರಕರಣವನ್ನು ಮುಚ್ಚಿ ಹಾಕಿ ಕರ್ತವ್ಯ ಲೋಪವೇಸಗಿದ್ದಾರೆ ಎಂದು ರೈತ ಸಂಘ ಆಕ್ರೋಶ ವ್ಯಕ್ತಪಡಿಸಿದೆ.

Advertisement

ತಾಲೂಕಿನ ಕೋಡಿಹಳ್ಳಿ ಹೋಬಳಿಯ ಹೊಸದುರ್ಗ ಗ್ರಾಮದ ರಾಮಚಿಕ್ಕಯ್ಯ ಎಂಬ ರೈತ ರೇಷ್ಮೆ ಗೂಡಿನ ಬಾಕಿ ಹಣ ಕೇಳಿದ ಎಂಬ ಕಾರಣಕ್ಕೆ ಟೆಂಟ್‌ ರಾಮಣ್ಣ ಮತ್ತು ಆತನ ಸಹಚರ ನಾಗ ಎಂಬುವರು ಸೇರಿ ಅಮಾಯಕ ರೈತನ ಮೇಲೆ ಅಮಾನುಷವಾಗಿ ಹಲ್ಲೆ ನಡೆಸಿ, ವಿಕೃತಿ ಮೆರೆದಿದ್ದಾರೆ.

ಕಳೆದ ಒಂದುವರೆ ವರ್ಷದ ಹಿಂದೆ ಹೊಸದುರ್ಗ ಗ್ರಾಮದ ರಾಮಚಿಕ್ಕಯ್ಯ ಎಂಬ ರೈತನಿಂದ ರೀಲರ್ ಅಸೋಸಿಯೇಷನ್‌ ಮಾಜಿ ಅಧ್ಯಕ್ಷ ಟೆಂಟ್‌ ರಾಮಣ್ಣ ಅವರು 20 ಸಾವಿರ ರೂ. ಮೌಲ್ಯದ ರೇಷ್ಮೆ ಗೂಡನ್ನು ಖರೀದಿ ಮಾಡಿ, ರೈತನಿಗೆ 10 ಸಾವಿರ ರೂ., ನೀಡಿ 10 ಸಾವಿರ ರೂಪಾಯಿಯನ್ನು ಬಾಕಿ ಉಳಿಸಿಕೊಂಡಿದ್ದರು. ಬಾಕಿ ಹಣ ಕೊಡುವಂತೆ ರೈತ ಕಳೆದ ಒಂದುವರೆ ವರ್ಷಗಳಿಂದಲೂ ಹಲವಾರು ಬಾರಿ ಕೇಳಿಕೊಳ್ಳುತ್ತಿದ್ದರು. ಆದರೂ ರಾಮಣ್ಣ ಹಣ ಕೊಡದೆ ಸತಾಯಿಸುತ್ತಿದ್ದರು ಎಂದು ಆರೋಪ ಕೇಳಿ ಬಂದಿದೆ.

ಘಟನೆ ದೃಶ್ಯ ಸಿಸಿ ಟೀವಿಯಲ್ಲಿ ಸೆರೆ: ಇದೇ ವಿಚಾರವಾಗಿ ರೈತ ರಾಮಚಿಕ್ಕಯ್ಯ ಅವರು ಟೆಂಟ್‌ ರಾಮಣ್ಣ ಅವರ ಬಳಿ ಬಾಕಿ ಹಣ ಕೇಳಲು ಬಂದಾಗ, ಟೆಂಟ್‌ ರಾಮಣ್ಣ ಮತ್ತು ಆತನ ಸಹಚರ ನಾಗ ಇಬ್ಬರು ಸೇರಿ ರೈತ ರಾಮಚಿಕ್ಕಯ್ಯ ಅವರ ಕುತ್ತಿಗೆಗೆ ಟವಲ್‌ ಬಿಗಿದು, ರೈತನ ಮೇಲೆ ಅಮಾನುಷವಾಗಿ ಹಲ್ಲೆ ನಡೆಸಿ, ರೇಷ್ಮೆಗೂಡು ಮಾರುಕಟ್ಟೆ ಆವರಣದಿಂದ ಎಳೆದು ಬಿಸಾಡಿದ್ದಾರೆ. ಈ ಘಟನೆಯ ದೃಶ್ಯ ಮಾರುಕಟ್ಟೆಯ ಸಿಸಿ ಟೀವಿಯಲ್ಲಿ ಸೆರೆಯಾಗಿದೆ.

ಆರೋಪಿಗಳ ಪರ ನಿಂತ ಆರಕ್ಷಕರು: ಬಳಿಕ ಹಲ್ಲೆಗೊಳಗಾದ ರೈತ ನ್ಯಾಯಕ್ಕಾಗಿ ಪೊಲೀಸ್‌ ಠಾಣೆ ಮೆಟ್ಟಿಲೇರಿದ್ದ ರೈತನಿಗೆ ರಕ್ಷಣೆ ಕೊಟ್ಟು ಪ್ರಕರಣ ದಾಖಲಿಸಿಕೊಂಡು ಹಲ್ಲೆಕೋರರ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕಾದ ಆರಕ್ಷಕರು, ರೈತನ ಮೇಲೆ ಹಲ್ಲೆ ಮಾಡಿದ ಆರೋಪಿಗಳ ಪರವಾಗಿ ನಿಂತು ರೈತನಿಗೆ ಧಮ್ಕಿ ಹಾಕಿ ಆತನಿಗೆ ನ್ಯಾಯ ಕಲ್ಪಿಸದೆ, ಬಾಕಿ 10 ಸಾವಿರದ ಹಣದ ಬದಲಾಗಿ 5 ಸಾವಿರ ರೂ., ನೀಡಿ ಪ್ರಕರಣವನ್ನು ಮುಚ್ಚಿ ಹಾಕಿದ್ದಾರೆ ಎಂದು ಗಂಭೀರ ಆರೋಪ ಕೇಳಿ ಬರುತ್ತಿದೆ.

Advertisement

ಅಧಿಕಾರಿಗಳ ಕರ್ತವ್ಯಕ್ಕೆ ಅಡ್ಡಿಪಡಿಸಿ ದೌರ್ಜನ್ಯ: ರೀಲರ್ ಅಸೋಸಿಯೇಷನ್‌ ಮಾಜಿ ಅಧ್ಯಕ್ಷ ರಾಮಣ್ಣ ಮಾರುಕಟ್ಟೆಯ ಅಧಿಕಾರಿಗಳನ್ನು ಅವಾಚ್ಯ ಶಬ್ದಗಳಿಂದ ನಿಂದನೆ ಮಾಡಿ, ಕರ್ತವ್ಯಕ್ಕೆ ಅಡ್ಡಿಪಡಿಸಿ ದೌರ್ಜನ್ಯ ಮೆರೆದಿದ್ದಾರೆ. ಇಂತಹ ದುಷ್ಟರನ್ನು ರಕ್ಷಣೆ ಮಾಡಲು ಪೊಲೀಸರು ಆರೋಪಿಗಳ ಬೆನ್ನಿಗೆ ನಿಂತಿದ್ದಾರೆ. ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿಗಳು ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ, ಸೂಕ್ತ ತನಿಖೆ ನಡೆಸಿ, ಹಲ್ಲೆಗೊಳಗಾದ ರೈತನಿಗೆ ನ್ಯಾಯ ಕಲ್ಪಿಸಬೇಕು. ತಪ್ಪಿತಸ್ಥರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದರೆ ರೈತ ಸಂಘ ಹೋರಾಟ ಮಾಡಬೇಕಾಗುತ್ತದೆ ಎಂದು ರೈತ ಸಂಘದ ಜಿಲ್ಲಾಧ್ಯಕ್ಷ ಚೀಲೂರು ಮುನಿರಾಜು ಎಚ್ಚರಿಕೆ ನೀಡಿದ್ದಾರೆ.

ಜಿಲ್ಲೆಯಲ್ಲಿ ರೈತರ ಮೇಲೆ ಹಲ್ಲೆ, ದೌರ್ಜನ್ಯ ಹೆಚ್ಚಳ: ರಾಮನಗರ ಜಿಲ್ಲೆಯಲ್ಲಿ ಇತ್ತೀಚೆಗೆ ರೇಷ್ಮೆ ಮಾರುಕಟ್ಟೆಗಳಲ್ಲಿ ರೈತರ ರೇಷ್ಮೆಗೂಡು ಕಳ್ಳತನ, ರೈತರ ಮೇಲೆ ಹಲ್ಲೆ, ದೌರ್ಜನ್ಯ ಪ್ರಕರಣಗಳು ಹೆಚ್ಚಾಗಿವೆ. ಕಳೆದ 6 ತಿಂಗಳ ಹಿಂದೆಯಷ್ಟೇ ರಾಮನಗರದ ರೇಷ್ಮೆ ಮಾರುಕಟ್ಟೆಯಲ್ಲಿ ರೈತರ ಮೇಲೆ ಅಲ್ಲಿನ ರೀಲರುಗಳು ಹಲ್ಲೆ ಮಾಡಿದ್ದರು. ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ರೈತರ ಪರವಾಗಿ ನಿಂತು ರೈತರಿಗೆ ತೊಂದರೆಕೋಡದಂತೆ ರೀಲರ್ಗಳಿಗೆ ಎಚ್ಚರಿಕೆ ನೀಡಿದ್ದರು. ಕಳೆದ ಮೂರು ತಿಂಗಳ ಹಿಂದೆಯಷ್ಟೇ ಕನಕಪುರ ರೇಷ್ಮೆ ಮಾರುಕಟ್ಟೆಯಲ್ಲಿ ರೀಲರುಗಳು ರೇಷ್ಮೆಗೂಡಿನ ಗುಣಮಟ್ಟ ಪರಿಶೀಲಿಸುವ ನೆಪದಲ್ಲಿ ರೇಷ್ಮೆ ಗೂಡನ್ನು ಕೆಳಗೆ ಚೆಲ್ಲಿ ಸಂಗ್ರಹ ಮಾಡಿಕೊಳ್ಳುತ್ತಿದ್ದರು. ನಿತ್ಯ 10ರಿಂದ 20 ಕೆ.ಜಿ. ರೈತರಿಗೆ ವಂಚನೆ ಮಾಡುತ್ತಿದ್ದರು. ಆದರೆ, ಬಾಕಿ ಉಳಿಸಿಕೊಂಡಿದ್ದ ಹಣ ಕೇಳಲು ಹೋದ ರೈತನ ಮೇಲೆ ಹಲ್ಲೆ ಮಾಡಲು ಮುಂದಾಗಿರುವುದು ರೀಲರ್ ಗಳ ವರ್ತನೆ ಅತಿರೇಕಕ್ಕೇರಿದೆ. ಅಲ್ಲದೆ, ರೇಷ್ಮೆ ಮಾರುಕಟ್ಟೆ ಅಧಿಕಾರಿಗಳಿಗೂ ನಿಂದನೆ ಮಾಡಿದ್ದಾರೆ.

ಈ ಘಟನೆಯ ಸಂಬಂಧ ಸಾರ್ವಜನಿಕ ವಲಯದಲ್ಲೂ ಆಕ್ರೋಶ ವ್ಯಕ್ತವಾಗಿದೆ. ಎಲ್ಲ ಬೆಳವಣಿಗೆಗಳ ನಡುವೆ ರೇಷ್ಮೆ ಮಾರುಕಟ್ಟೆ ಅಧಿಕಾರಿ ಚಿಕ್ಕ ಕೆಂಪೇಗೌಡ ಅವರು ರೀಲರ್ ಅಸೋಸಿಯೇಷನ್‌ ಮಾಜಿ ಅಧ್ಯಕ್ಷ ಟೆಂಟ್‌ ರಾಮಣ್ಣ ಅವರ ಮೇಲೆ ದೂರು ನೀಡಿದರು. ಆದರೆ, ಪ್ರಕರಣ ದಾಖಲಿಸಿಕೊಂಡು ಕ್ರಮ ಕೈಗೊಳ್ಳಬೇಕಾದ ಪೊಲೀಸರು ರಾಜಿ ಮಾಡಲು ತಾಸುಗಟ್ಟಲೆ ಮಾರುಕಟ್ಟೆಯಲ್ಲಿ ಹರಸಾಹಸಪಟ್ಟರು. ಇದು ಪೊಲೀಸರ ಕರ್ತವ್ಯಕ್ಕೆ ಹಿಡಿದ ಕೈಗನ್ನಡಿಯಂತಿತ್ತು.

ಪೊಲೀಸರು ಆರೋಪಿಗಳ ಬೆನ್ನಿಗೆ ನಿಂತಿದ್ದಾರೆ. ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿಗಳು ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ, ಸೂಕ್ತ ತನಿಖೆ ನಡೆಸಿ, ಹಲ್ಲೆಗೊಳಗಾದ ರೈತನಿಗೆ ನ್ಯಾಯ ಕಲ್ಪಿಸಬೇಕು. ತಪ್ಪಿತಸ್ಥರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದರೆ ರೈತ ಸಂಘ ಹೋರಾಟ ಮಾಡಬೇಕಾಗುತ್ತದೆ.  – ಚೀಲೂರು ಮುನಿರಾಜು ಜಿಲ್ಲಾಧ್ಯಕ್ಷ, ರೈತ ಸಂಘ

Advertisement

Udayavani is now on Telegram. Click here to join our channel and stay updated with the latest news.

Next