Advertisement

ರೈತ ನಾಯಕ ಟಿಕಾಯತ್‌ ಮೇಲಿನ ಹಲ್ಲೆಗೆ ಖಂಡನೆ

05:14 PM Jun 01, 2022 | Shwetha M |

ವಿಜಯಪುರ: ರೈತ ನಾಯಕ ರಾಕೇಶ ಟಿಕಾಯತ್‌ ಅವರ ಮೇಲೆ ಬೆಂಗಳೂರಿನಲ್ಲಿ ನಡೆದ ಹಲ್ಲೆ ಹಾಗೂ ಮುಖಕ್ಕೆ ಮಸಿ ಬಳಿದ ಪ್ರಕರಣ ಖಂಡಿಸಿ ನಗರದಲ್ಲಿ ರೈತರು ಹಾಗೂ ಪ್ರಗತಿಪರ ಸಂಘಟನೆಗಳು ಕಪ್ಪು ಪಟ್ಟಿ ಧರಿಸಿ ಪ್ರತಿಭಟನೆ ನಡೆಸಿದವು.

Advertisement

ಮಂಗಳವಾರ ನಗರದ ಡಾ| ಬಿ.ಆರ್‌. ಅಂಬೇಡ್ಕರ್‌ ವೃತ್ತದಲ್ಲಿ ಕಪ್ಪು ಬಟ್ಟೆ ಪ್ರದರ್ಶಸಿ ಆಕ್ರೋಶ ವ್ಯಕ್ತಪಡಿಸಿದ ಪ್ರತಿಭಟನಾಕಾರರು, ರೈತ ಮುಖಂಡರಿಗೆ ಮಸಿ ಬಳಿದು, ಹಲ್ಲೆ ನಡೆಸಿದ ಕಿಡಿಗೇಡಿಗಳನ್ನು ಜೈಲಿಗೆ ಹಾಕಬೇಕು. ಬೇಜವಾಬ್ದಾರಿತನ ತೋರಿದ ಸರ್ಕಾರಕ್ಕೆ ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ಸಹನೆ-ಸಜ್ಜನಿಕೆಗೆ ಹೆಸರಾದ ಕರ್ನಾಟಕವನ್ನು ಬಿಜೆಪಿ ಗೂಂಡಾ ರಾಜ್ಯವನ್ನಾಗಿಸುತ್ತಿದೆ. ರಾಷ್ಟ್ರೀಯ ರೈತ ನಾಯಕ ರಾಕೇಶ ಟಿಕಾಯತ್‌ ಅವರ ಮೇಲೆ ನಡೆಸಿದ ಹಲ್ಲೆ ಇಡೀ ರೈತ ಸಮುದಾಯಕ್ಕೆ ಮಾಡಿದ ಅಪಮಾನ. ಪ್ರಜಾತಂತ್ರದ ಕಗ್ಗೊಲೆ ಮಾಡಲು ಪ್ರೇರಣೆ ನೀಡುತ್ತಿರುವ ಫ್ಯಾಸಿಸ್ಟ್‌ ಮನಸ್ಥಿತಿ ಪ್ರದರ್ಶಿಸುತ್ತಿರುವ ಶಕ್ತಿಗಳಿಗೆ ಧಿಕ್ಕಾರ ಎಂದು ಘೋಷಣೆ ಕೂಗಿದರು.

ವೈಚಾರಿಕ ಭಿನ್ನಾಭಿಪ್ರಾಯವನ್ನು ಸಿದ್ಧಾಂತದ ಮೂಲಕ ಎದುರಿಸಲಾಗದ ಬಿಜೆಪಿ ಮತ್ತು ಬೆಂಬಲಿಗರರು ನಡೆಸಿರುವ ದಾಳಿ ಅವರ ಬೌದ್ಧಿಕ ದಿವಾಳಿತನಕ್ಕೆ ಸಾಕ್ಷಿಯಾಗಿದೆ. ಇಂಥ ದಾಳಿಗಳಿಗೆ ಕುಮ್ಮಕ್ಕು ನೀಡುತ್ತಿರುವ ರಾಜ್ಯ ಸರ್ಕಾರ ಮತ್ತು ಪೊಲೀಸ್‌ ಇಲಾಖೆ ಬೇಜವಾಬ್ದಾರಿತನ ಎದ್ದು ಕಾಣುತ್ತದೆ ಎಂದು ಹರಿಹಾಯ್ದರು.

ರೈತ ನಾಯಕರಿಗೆ ಮಸಿ ಬಳಿದು ಹಲ್ಲೆ ನಡೆಸಿರುವುದು ಇಡಿ ದೇಶಕ್ಕೆ ಅನ್ನ ನೀಡುವ ರೈತರಿಗೆ ರೈತ ಸಮುದಾಯಕ್ಕೆ ಮಾಡಿದ ಅವಮಾನವಾಗಿದೆ. ಇದರಿಂದ ದೇಶದ ಪ್ರಜ್ಞಾವಂತ ನಾಗರಿಕರ ತಾಳ್ಮೆ ಪರೀಕ್ಷೆ ಮಾಡಿದಂತಾಗಿದೆ. ಬಿಜೆಪಿ ಸರ್ಕಾರಕ್ಕೆ ದೆಹಲಿ ರೈತರ ಹೋರಾಟದಿಂದ ಅವಮಾನವಾಗಿದೆ ಹಾಗಾಗಿ ಆ ಸೇಡು ತೀರಿಸಿಕೊಳ್ಳಲು ಆ ಹೋರಾಟದ ಮುಂಚೂಣಿ ನಾಯಕರಿಗೆ ಮಸಿ ಬಳಿದು ತಮ್ಮ ಕೀಳುಮಟ್ಟದ ರಾಜಕೀಯದ ಕುತಂತ್ರ ಬುದ್ಧಿ ಎದ್ದು ಕಾಣುತ್ತಿದೆ. ಬಿಜೆಪಿಯವರು ಕೀಳು ರಾಜಕೀಯ ಮಾಡಿ ಸರ್ಕಾರ ನಡೆಸುತ್ತಿರುವುದು ಇದೇ ಮೊದಲೇನಲ್ಲ. ಹಲವಾರು ಪ್ರಗತಿಪರ ಚಿಂತಕರಿಗೆ ಮಹಾತ್ಮರಿಗೆ ಗುಂಡಿಟ್ಟು ಕೊಲೆ ಮಾಡಿದ ಸಂಸ್ಕೃತಿ ದೇಶದ ಸಾಮಾನ್ಯ ಪ್ರಜೆಗೂ ತಿಳಿದಿದೆ. ಪಠ್ಯ ಪುಸ್ತಕಗಳಲ್ಲಿ ತಮಗೆ ಇಷ್ಟವಾದ ವ್ಯಕ್ತಿಗಳನ್ನು ಸೇರಿಸುವ ಮೂಲಕ ದೇಶಕ್ಕಾಗಿ ಸ್ವಾತಂತ್ರ್ಯಕ್ಕಾಗಿ ತಮ್ಮನ್ನೇ ತ್ಯಾಗ-ಬಲಿದಾನಗೈದ ಹೋರಾಟಕ್ಕೆ ಸ್ಫೂರ್ತಿಯಾದ ಮಹಾನ್‌ ನಾಯಕರ ಚರಿತ್ರೆಯನ್ನು ಅಳಿಸಿಹಾಕುವ ಕೃತ್ಯದಲ್ಲಿ ತೊಡಗಿದೆ ಎಂದರು ದೂರಿದರು.

Advertisement

ವಿವಿಧ ರೈತ, ಕಾರ್ಮಿಕ ಹಾಗೂ ಪ್ರಗತಿಪರ ಸಂಘಟನೆಗಳ ಪ್ರಮುಖದಾರ ಭೀಮಶಿ ಕಲಾದಗಿ, ಬಿ.ಭಗವಾನರೆಡ್ಡಿ, ಅಣ್ಣಾರಾಯ ಈಳಗೇರ, ಬಾಳು ಜೇವೂರ, ಸದಾನಂದ ಮೋದಿ, ಅಪ್ಪಾಸಾಹೇಬ ಯರನಾಳ, ಲಕ್ಷ್ಮಣ ಹಂದ್ರಾಳ, ಇರ್ಫಾನ್‌ ಶೇಖ್‌, ಸಿ.ಬಿ. ಪಾಟೀಲ, ಸಿದ್ದಲಿಂಗ ಬಾಗೇವಾಡಿ, ಭರತಕುಮಾರ, ದೀಪಾ ವಡ್ಡರ, ಮಾಹಾದೇವಿ ರಾಠೊಡ, ಶರಣಗೌಡ ಇತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next