ದೇವನಹಳ್ಳಿ: ಖಾಲಿ ನಿವೇಶನದ ಹಕ್ಕುದಾರಿಕೆ ವಿಚಾರದಲ್ಲಿ ದಲಿತರು ಮತ್ತು ಸವರ್ಣೀಯರ ನಡುವೆ ನಡೆದಿರುವ ಘರ್ಷಣೆ ನಡೆದು ದಲಿತ ಮುಖಂಡ ನಾರಾಯಣಸ್ವಾಮಿಯವರನ್ನು ಮರಕ್ಕೆ ಕಟ್ಟಿಹಾಕಿ ಹಲ್ಲೆ ನಡೆಸಿರುವ ಘಟನೆ ತಾಲೂಕಿನ ಚಿಮಾಚನ ಹಳ್ಳಿ ಗ್ರಾಮದಲ್ಲಿ ನಡೆದಿದೆ. ಚನ್ನರಾಯಪಟ್ಟಣ ಪೊಲೀಸ್ ಠಾಣೆಗೆ ನಾರಾಯಣಸ್ವಾಮಿ ದೂರು ದಾಖಲಿಸಿದ್ದಾರೆ.
ತಾಲೂಕಿನ ಚನ್ನರಾಯಪಟ್ಟಣ ಹೋಬಳಿ ಚೀಮಾಚನಹಳ್ಳಿ ಗ್ರಾಮದಲ್ಲಿ ಗ್ರಾಪಂನಲ್ಲಿರುವ ಅಂಗವಿಕಲ ಮಹಿಳೆ ಅನಸೂಯಮ್ಮ ಅವರಿಗೆ ಪಂಚಾಯಿತಿಯಿಂದ ನಿವೇಶನ ಮಂಜೂರು ಮಾಡಲಾಗಿದೆ. ಆದರೆ ಈ ನಿವೇಶನವನ್ನು ಸೇರಿಸಿಕೊಂಡು ಸವರ್ಣೀಯರು ಕಂಪೌಂಡ್ ನಿರ್ಮಿಸಿರುವುದೇ ಘರ್ಷಣೆಗೆ ಕಾರಣ ಎನ್ನಲಾಗಿದೆ.
ದಬ್ಬಾಳಿಕೆಯಿಂದ ಕಾಂಪೌಂಡ್ ನಿರ್ಮಾಣ: ಕಾಂಪೌಂಡ್ ನಿರ್ಮಾಣ ಮಾಡುವುದನ್ನು ನಿಲ್ಲಿಸುವಂತೆ ಗ್ರಾಪಂ ಹಾಗೂ ಚನ್ನರಾಯಪಟ್ಟಣ ಠಾಣೆಯಲ್ಲಿ ದೂರು ನೀಡಿದ್ದೆವು. ಸ್ಥಳಕ್ಕೆ ಬಂದಿದ್ದ ಪೊಲೀಸರು ಹಾಗೂ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಸ್ಥಳ ಪರಿಶೀಲನೆ ನಡೆಸಿ, ದಾಖಲೆ ತೋರಿಸುವಂತೆ ಸಮಯ ನೀಡಿದ್ದರು. ಅಲ್ಲಿವರೆಗೂ ಕಾಂಪೌಂಡ್ ನಿರ್ಮಾಣ ಮಾಡದಂತೆ ಸೂಚಿಸಿದ್ದರೂ, ದಬ್ಬಾಳಿಕೆ ನಡೆಸಿ ಕಾಂಪೌಂಡ್ ನಿರ್ಮಿಸಿದ್ದಾರೆ ಎಂದು ದಲಿತ ಮುಖಂಡರು ಆರೋಪಿಸಿದ್ದಾರೆ.
ದೌರ್ಜನ್ಯಗಳಿಗೆ ಕಡಿವಾಣ ಹಾಕಿ: ಮುಖಂಡ ಚೌಡಪ್ಪನಹಳ್ಳಿ ಲೋಕೇಶ್ ಮಾತನಾಡಿ, ರಾಜಧಾನಿಗೆ ಹತ್ತಿರವಿದ್ದರೂ ಹೋಬಳಿಯಲ್ಲಿ ದಲಿತರ ಮೇಲೆ ದೌರ್ಜನ್ಯ ನಡೆಯುತ್ತಲೇ ಇದೆ. ಮರಕ್ಕೆ ಕಟ್ಟಿಹಾಕಿ, ಮಹಿಳೆಯರೂ ಎನ್ನುವುದನ್ನೂ ನೋಡದೆ, ಅಂಗವಿಕಲ ಹೆಣ್ಣು ಮಕ್ಕಳನ್ನು ಎಳೆದಾಡಿ ಹಲ್ಲೆ ನಡೆಸಿರುವುದನ್ನು ಖಂಡಿಸುತ್ತೇವೆ. ಪೊಲೀಸ್ ಇಲಾಖೆ ಇಂತಹ ದೌರ್ಜನ್ಯ ಪ್ರಕರಣಗಳಿಗೆ ಕಡಿವಾಣ ಹಾಕಬೇಕು ಎಂದು ಒತ್ತಾಯಿಸಿದರು.
ಆರೋಪಿಗಳನ್ನು ಬಂಧಿಸಿ ಕ್ರಮಕೈಗೊಳ್ಳಿ: ಕರ್ನಾಟಕ ಮಾದಿಗ ದಂಡೋರ ರಾಜ್ಯ ಘಟಕದ ಉಪಾಧ್ಯಕ್ಷ ಬುಳ್ಳಹಳ್ಳಿ ರಾಜಪ್ಪ ಮಾತನಾಡಿ, ಸರ್ಕಾರ ದಲಿತರ ರಕ್ಷಣೆಗಾಗಿ ಎಷ್ಟೇ ಕಾನೂನುಗಳು ಜಾರಿಗೆ ತಂದರೂ ಗ್ರಾಮಾಂತರ ಪ್ರದೇಶಗಳಲ್ಲಿ ದೌರ್ಜನ್ಯ ಪ್ರಕರಣಗಳು ನಡೆಯುತ್ತಲೇ ಇರುವುದು ಆತಂಕ ಹುಟ್ಟಿಸಿದೆ. ನಿವೇಶನ ಪರಿಶೀಲನೆ ಹಂತದಲ್ಲಿದ್ದು, ಸೂಕ್ತ ದಾಖಲೆಗಳನ್ನು ತೋರಿಸಿ, ಕಾಂಪೌಂಡ್ ನಿರ್ಮಾಣ ಮಾಡಿಕೊಳ್ಳಲಿ. ಅದನ್ನು ಬಿಟ್ಟು ದಲಿತ ಮುಖಂಡನನ್ನು ಮರಕ್ಕೆ ಕಟ್ಟಿಹಾಕಿ ಹಲ್ಲೆ ಮಾಡಿರುವುದನ್ನು ಖಂಡಿಸುತ್ತೇವೆ. ಆರೋಪಿಗಳನ್ನು ಕೂಡಲೇ ಬಂಧಿಸಿ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಶುಕ್ರವಾರ ಬೆಳಗ್ಗೆ ಅನಸೂಯಮ್ಮ ತಿಪ್ಪೆಗೆ ಕಸ ಹಾಕಲಿಕ್ಕಾಗಿ ಹೋಗಿದ್ದಾಗ ಸವರ್ಣೀಯ ಮಹಿಳೆಯರು ಆಕೆ ಮೇಲೆ ಹಲ್ಲೆ ಮಾಡಿದ್ದಾರೆ. ಇದನ್ನು ಕಂಡು ಬಿಡಿಸಲು ಪ್ರಯತ್ನಿಸಿದಾಗ ನಾರಾಯಣಸ್ವಾಮಿ, ಚಂದ್ರ, ಭೈರೇಗೌಡ, ನಂಜಪ್ಪ, ಕೃಷ್ಣಪ್ಪ ಕುಟುಂಬದವರು ನನ್ನ ಮೇಲೆ ದೊಣ್ಣೆಗಳಿಂದ ಹಲ್ಲೆ ನಡೆಸಿದ್ದಾರೆ. ನನ್ನ ಪತ್ನಿಯ ಬಟ್ಟೆಗಳನ್ನು ಹರಿದುಹಾಕಿ, ಜಾತಿ ನಿಂದನೆ ಮಾಡಿ, ಅಮಾನವೀಯವಾಗಿ ನಡೆದುಕೊಂಡಿದ್ದಾರೆ. ನನ್ನನ್ನು ಮರಕ್ಕೆ ಕಟ್ಟಿಹಾಕಿ ಕೊಲೆ ಬೆದರಿಕೆ ಹಾಕಿದ್ದಾರೆ ಎಂದು ದೂರು ನೀಡಿದ್ದೇನೆ ಎಂದು ಹೇಳಿದರು.