ಶಹಾಪುರ: ನಕಲಿ ಮದ್ಯ ಸಂಗ್ರಹಿಸಿದ್ದ ಸ್ಥಳದ ಮೇಲೆ ದಾಳಿ ನಡೆಸಿದ ಅಧಿಕಾರಿಗಳ ತಂಡದ ಮೇಲಿಯೇ 40-50 ಜನರ ಗುಂಪು ಕಲ್ಲು ತೂರಾಟ ನಡೆಸಿ ಹಲ್ಲೆ ನಡೆಸಿರುವ ಘಟನೆ ತಾಲೂಕಿನ ಚಂದಾಪುರ ಗ್ರಾಮದ ಹೊರ ವಲಯದ ತೋಟವೊಂದರಲ್ಲಿ ನಡೆದಿದೆ.
ಈ ವೇಳೆ ಆರೋಪಿ ಹಣಮಂತ್ರಾಯ ಸದಾಶಿವ ಸಾಹು ಅವರನ್ನು ಅಬಕಾರಿ ಅಧಿಕಾರಿಗಳ ತಂಡ ಬಂಧಿಸಿ ಕರೆದೊಯ್ಯುವಾಗ ಗ್ರಾಮಸ್ಥರು ಹಾಗೂ ಆತನ ಹಿಂಬಾಲಕರು ಅಧಿಕಾರಿಗಳ ಮೇಲೆ ಕಲ್ಲು ತೂರಾಟ ನಡೆಸಿದ್ದಾರೆ. ಗಾಯಗೊಂಡ ಅಧಿಕಾರಿಗಳನ್ನು ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಖಚಿತ ಮಾಹಿತಿ ಮೇರೆಗೆ ಚಂದಾಪುರ ಗ್ರಾಮದ ಹೊರ ವಲಯದ ತೋಟವೊಂದರಲ್ಲಿ ಗುರುವಾರ ಸಂಜೆ ದಾಳಿ ನಡೆಸಿದ ಅಧಿಕಾರಿಗಳು 45 ನಕಲಿ ಮದ್ಯದ ಬಾಕ್ಸ್ (ಅಂದಾಜು 12 ಲಕ್ಷಕ್ಕೂ ಅಧಿಕ ಮೌಲ್ಯ) ವಶಕ್ಕೆ ಪಡೆದಿದ್ದಾರೆ. ಚಾಮನಾಳ ಮೂಲಕ ಚಂದಾಪುರ ಗ್ರಾಮದ ಕಡೆ ಕಾರೊಂದರಲ್ಲಿ ನಕಲಿ ಮದ್ಯ ಸಾಗಿಸಲಾಗುತ್ತಿದೆ ಎಂಬ ಖಚಿತ ಮಾಹಿತಿ ಮೇರೆಗೆ ಅಬಕಾರಿ ಉಪ ನೀರಿಕ್ಷಕ ವಿಜಯಕುಮಾರ ಹಿರೇಮಠ ಹಾಗೂ ತಂಡ ಚಂದಾಪುರ ಮಾರ್ಗದಲ್ಲಿ ತಪಾಸಣೆಗಾಗಿ ನಿಂತ ವೇಳೆ ಕೆಎ 33ಎ 7677 ಸ್ವಿಫ್ಟ್ ಡಿಸೈರ್ ಕಾರು ಪರಿಶೀಲಿಸಿದಾಗ ಡಿಕ್ಕಿಯಲ್ಲಿ ನಕಲಿ ಮದ್ಯ ಪತ್ತೆಯಾಗಿದೆ.
ಚಾಲಕನನ್ನು ವಿಚಾರಿಸಲಾಗಿ, ಆತ ಹಣಮಂತ್ರಾಯ ತಂದೆ ಸದಾಶಿವ ಸಾಹು ಎಂದು ತಿಳಿದು ಬಂದಿದ್ದು, ಸಮೀಪದ ತೋಟದ ಮನೆಯಲ್ಲಿ ಸಂಗ್ರಹಿಸಲು ತೆಗೆದುಕೊಂಡು ಹೋಗುತ್ತಿರುವೆ ಎಂದು ಬಾಯಿ ಬಿಟ್ಟಿದ್ದಾನೆ. ಆತನ ಜೊತೆ ತೋಟದ ಮನೆಗೆ ಹೋಗಿ ಪರಿಶೀಲಿಸಲಾಗಿ 45 ಬಾಕ್ಸ್ ನಕಲಿ ಮದ್ಯ ಪತ್ತೆಯಾಗಿದೆ. ತೋಟದಲ್ಲಿದ್ದ ಇನ್ನೂ ನಾಲ್ವರನ್ನು ಬಂಧಿಸುವಷ್ಟರಲ್ಲಿ ಸುಮಾರು 40-50 ಜನ ಆಗಮಿಸಿ ಕಲ್ಲು ತೂರಾಟ ನಡೆಸಿ ಅಧಿಕಾರಿಗಳನ್ನು ಬಡಿದು ಆರೋಪಿ ಸಮೇತ ಪರಾರಿಯಾದ ಘಟನೆ ನಡೆದಿದೆ.
Related Articles
ಕಾರು ಮತ್ತು ನಕಲಿ ಮದ್ಯ ವಶಕ್ಕೆ ಪಡೆಯಲಾಗಿ ಮುಖ್ಯ ಆರೋಪಿ ಸೇರಿ ಐದು ಜನರ ವಿರುದ್ಧ ನಕಲಿ ಮದ್ಯ ಮಾರಾಟ ಪ್ರಕರಣ ದಾಖಲಿಸಲಾಗಿದೆ. ಆರೋಪಿಗಳ ಬಂಧನಕ್ಕೆ ಅಬಕಾರಿ ಅಧಿಕಾರಿಗಳ ತಂಡ ಜಾಲ ಬೀಸಿದೆ.
40 ಜನ ಮೇಲೆ ಪ್ರಕರಣ: ದಾಳಿ ವೇಳೆ ಅಬಕಾರಿ ಅಧಿಕಾರಿಗಳು ಮತ್ತು ಪೊಲೀಸರ ಮೇಲೆ ಹಲ್ಲೆ ನಡೆಸಿದ ಸುಮಾರು 40 ಜನರ ಮೇಲೆ ಮಾರಣಾಂತಿಕ ಹಲ್ಲೆ ಪ್ರಕರಣ ಗೋಗಿ ಠಾಣೆಯಲ್ಲಿ ಅಬಕಾರಿ ಉಪ ನಿರೀಕ್ಷಕ ವಿಜಯಕುಮಾರ ಹಿರೇಮಠ ಪ್ರಕರಣ ದಾಖಲಿಸಿದ್ದಾರೆ. ಹಲ್ಲೆಕೋರರ ಪತ್ತೆಗೆ ಪೊಲೀಸರು ಜಾಲ ಬೀಸಿದ್ದಾರೆ. ಎಫ್‌ಐಆರ್‌ನಲ್ಲಿ 20 ಜನರ ಹೆಸರು ದಾಖಲಿಸಿದ್ದು, ಇನ್ನುಳಿದ 20 ಜನರ ಹೆಸರು ವಿಳಾಸ ಪತ್ತೆ ಮಾಡಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ದಾಳಿ ವೇಳೆ ಶಹಾಪುರ ಉಪ ವಿಭಾಗ ಉಪ ಅಧೀಕ್ಷಕ ಶ್ರೀರಾಮ ರಾಠೊಡ ನೇತೃತ್ವದಲ್ಲಿ ಶಹಾಪುರ ಉಪ ನಿರೀಕ್ಷಕ ಧನರಾಜ ಹಳ್ಳಿಖೇಡ, ಉಪ ನಿರೀಕ್ಷಕ ಸಾದಿಕ್ ಹುಸೇನ್, ಅಬಕಾರಿ ಪೇದೆಗಳು ಸೇರಿದಂತೆ ಆಯುಕ್ತರು ರಚಿಸಿದ ವಿಶೇಷ ತಂಡ ಭಾಗವಹಿಸಿತ್ತು.
ನಕಲಿ ಮದ್ಯದ ಜಾಲ ಆಳವಾಗಿ ವ್ಯಾಪಿಸಿದ್ದು, ಅದರ ನಿರ್ಮೂಲನೆಗೆ ಪಣ ತೊಡಲಾಗಿದೆ. ಅದನ್ನು ಬೇರು ಸಮೇತ ಕಿತ್ತೆಸೆಯುವವರಿಗೆ ಬಿಡುವುದಿಲ್ಲ. ಚಂದಾಪುರದಲ್ಲಿ ನಕಲಿ ಮದ್ಯ ಮಾರಾಟಗಾರ ಆರೋಪಿಯನ್ನು ನಮ್ಮ ಅಧಿಕಾರಿಗಳ ತಂಡ ಬಂಧಿಸಿ ತರುವಾಗ ಗ್ರಾಮಸ್ಥರೇ ಅಧಿಕಾರಿಗಳ ಮೇಲೆ ಮಾರಣಾಂತಿಕ ಹಲ್ಲೆ ನಡೆಸಲಾಗಿದೆ. ಅಂದಾಜು 12 ಲಕ್ಷಕ್ಕೂ ಅಧಿಕ ಮೌಲ್ಯದ 45 ಬಾಕ್ಸ್ ನಕಲಿ ಮದ್ಯ ಮತ್ತು ಆರೋಪಿಯ ಸ್ವಿಫ್ಟ್ ಡಿಸೈರ್ ಕಾರು ವಶಕ್ಕೆ ಪಡೆಯಲಾಗಿದೆ. –ಮೋತಿಲಾಲ್, ಅಬಕಾರಿ ಆಯುಕ್ತರು. ಯಾದಗಿರಿ