Advertisement

ಬೆಳೆಗಳ ಮೇಲೆ ವಿದೇಶಿ ಪಕ್ಷಿ ಗಳ ದಾಳಿ

02:31 PM Dec 12, 2019 | Suhan S |

ಲಕ್ಷ್ಮೇಶ್ವರ: ತಾಲೂಕಿನ ಮಾಗಡಿ ಕೆರೆಗೆ ಆಗಮಿಸುವ ವಿದೇಶಿ ಪಕ್ಷಿಗಳು ರೈತರು ಬೆಳೆದ ಕಡಲೆ, ಶೇಂಗಾ, ಸೂರ್ಯಕಾಂತಿ ಬೆಳೆಗಳ ಮೇಲೆ ದಾಳಿ ಮಾಡುತ್ತಿರುವುದು ರೈತರ ಕಳವಳಕ್ಕೆ ಕಾರಣವಾಗಿದೆ. ಮಾಗಡಿ ಸುತ್ತಮುತ್ತಲಿನ ಗ್ರಾಮಗಳಾದ ಬಸಾಪುರ, ರಾಮಗೇರಿ, ಯಳವತ್ತಿ, ಯತ್ನಳ್ಳಿ, ಮಾಡಳ್ಳಿ, ಗೊಜನೂರ, ಲಕ್ಷ್ಮೇಶ್ವರದ ಯಳವತ್ತಿ, ಗುಂಜಳ ರಸ್ತೆಯ ಜಮೀನುಗಳಲ್ಲಿ ಬೆಳೆದಿರುವ ಕಡಲೆ ಬೆಳೆಯ ಎಸೆಳನ್ನು ತಿಂದು ಬೆಳೆ ಹಾನಿ ಮಾಡುತ್ತಿವೆ. ಇದರಿಂದ ಮುಂಗಾರಿನಲ್ಲಿ ಅತಿವೃಷ್ಟಿಯಿಂದ ಬೆಳೆ ಹಾನಿಗೀಡಾಗಿ ನಷ್ಟದಲ್ಲಿರುವ ರೈತ ಸಮುದಾಯ ಈಗ ವಿದೇಶಿ ಪಕ್ಷಿಗಳ ಹಾವಳಿಯಿಂದ ಸಂಕಷ್ಟಕ್ಕೀಡಾಗಿದ್ದಾರೆ.

Advertisement

ಬೆಳೆ ಉಳಿಸಿಕೊಳ್ಳಲು ರೈತರು ಚಳಿಯ ನಡುವೆಯೂ ನಸುಕಿನ ಜಾವ ಮತ್ತು ಸಂಜೆ ಗತ್ತಲ ಅವ ಧಿಯಲ್ಲಿ ಜಮೀನಿನಲ್ಲಿ ಹಕ್ಕಿ ಕಾಯುವುದು ಅನಿವಾರ್ಯವಾಗಿದೆ. ಅಲ್ಲದೇ ಜಮೀನಿನಲ್ಲಿ ಪ್ಲಾಸ್ಟಿಕ್‌ ಹಾಳೇ ಕಟ್ಟುವುದು, ಖಾಲಿ ಬೀರ್‌ ಬಾಟಲ್‌ ಕಟ್ಟಿ ಸಪ್ಪಳ ಮಾಡುವ ತಂತ್ರಗಳಿಗೆ ಮೊರೆ ಹೋಗಿದ್ದಾರೆ. ಚಳಿಗಾಲಕ್ಕೆ ಆಗಮಿಸುವ ಈ ಪಕ್ಷಿಗಳು ನಿತ್ಯ ಬೆಳಗ್ಗೆ ಮತ್ತು ಸಂಜೆ ವೇಳೆ ಆಹಾರ ಅರಸುತ್ತಾ ನೂರಾರು ಕಿ.ಮೀ ಸುತ್ತಾಡಿ ಕೊನೆಗೆ ಲಭ್ಯವಾಗುವ ಎಳೆಯ ಬೆಳೆ, ಶೇಂಗಾ, ಸೂರ್ಯಕಾಂತಿ ಬೆಳೆ ತಿನ್ನುತ್ತಿವೆ. ಈ ಬಾರಿ ಕೆರೆಯ ಆಸುಪಾಸಿನ ಗ್ರಾಮಗಳ ರೈತರು ಹಿಂಗಾರಿಗೆ ಬಹಳಷ್ಟು ಕಡಲೆ ಬೆಳೆ ಬೆಳೆದಿರುವುದರಿಂದ ಎಳೆಯ ಎಸಳನ್ನು ತಿಂದು ಹಾಕುತ್ತಿವೆ. ಈ ವರ್ಷ ಮೊದಲೇ ಬಿತ್ತನೆಗೆ ತಡವಾಗಿದ್ದು, ಇದೀಗ ನೆಲಬಿಟ್ಟು ಮೇಲೇಳುತ್ತಿರುವ ಕಡಲೆ ಬೆಳೆಯನ್ನೇ ಗುರಿಯಾಗಿಸಿ ಯಾರೂ ಇಲ್ಲದ ಸಮಯದಲ್ಲಿ ಜಮೀನಿಗಿಳಿದು ಸಾಲುಗಟ್ಟಿ ಮೇಯುತ್ತಿವೆ. ಇದರಿಂದಾಗಿ ರೈತರು ಯಾರನ್ನು ಕೇಳಬೇಕು ಎಂದು ರೈತರು ದಿಕ್ಕು ತೋಚದಂತಾಗಿದ್ದಾರೆ.

ಪಕ್ಷಿಗಳಿಂದ ಬೆಳೆಹಾನಿಗೀಡಾದ ಲಕ್ಷ್ಮೇಶ್ವರದ ರೈತ ರವಿ ಎಸ್‌ ಕುಡವಕ್ಕಲಿಗೇರ, ದುಂಡೇಶ ಕೊಟಗಿ ಅವರು ಮಾತನಾಡಿ, “ಮುಂಗಾರಿನಲ್ಲಿ ಯಾವುದೇ ಬೆಳೆಯನ್ನು ಬೆಳೆಯದೇ ಹಿಂಗಾರಿಗಾಗಿ ಸಿದ್ಧಪಡಿಸಿದ್ದ 16 ಎಕರೆ ಜಮೀನಿನಲ್ಲಿ ಕಡಲೆ ಬಿತ್ತನೆ ಮಾಡಲಾಗಿತ್ತು. 20 ದಿನಗಳ ಅವಧಿಯ ಕಡಲೆ ಬೆಳೆ ಮಾಗಡಿ ಕೆರೆಯಲ್ಲಿರುವ ಪಕ್ಷಿಗಳು ತಿಂದು ಹಾಕಿದ್ದರಿಂದ ಬೆಳೆ ಹಾನಿಗೀಡಾಗಿದೆ. ಅದಕ್ಕಾಗಿ ಪ್ರತಿ ಎಕರೆಗೆ ಕನಿಷ್ಠ 6-8 ಸಾವಿರ ಖರ್ಚು ಮಾಡಿದ್ದು, ಹಿಂಗಾರಿಯ ಈ ಬೆಳೆಯ ಮೇಲೆ ನಂಬಿಕೊಂಡಿದ್ದ ಕನಸು ನುಚ್ಚು ನೂರಾಗಿದೆ ಎಂದು ನೋವು ತೋಡಿಕೊಂಡರು.

Advertisement

Udayavani is now on Telegram. Click here to join our channel and stay updated with the latest news.

Next