ಕುಳಗೇರಿ ಕ್ರಾಸ್: ಗ್ರಾಮದ ಹೊರವಲಯದ ರಾಷ್ಟೀಯ ಹೆದ್ದಾರಿಗೆ ಹೊಂದಿಕೊಂಡ ಕೆರೂರ ಗ್ರಾಮದ ಮಳಗಲಿ ಡಾಬಾದಲ್ಲಿದ್ದ ನಾಲ್ಕೈದು ಜನರ ಮೇಲೆ ಕಿಡಗೇಡಿಗಳು ಹಾಡ ಹಗಲೆ ಹಲ್ಲೆ ನಡೆಸಿದ್ದಾರೆ.
ಕೆರೂರ ಗಲಾಟೆ ಪ್ರಕರಣ ಬೆನ್ನಲ್ಲೆ ಈ ಘಟನೆ ನಡೆದಿದ್ದು ಕೆರೂರ ಗಾಲಾಟೆಗೂ ಈ ಪ್ರಕರಣಕ್ಕೂ ಸಂಬಂದ ಇದೆಯಾ ಎಂಬ ಸಂಶಯ ಶುರುವಾಗಿದೆ. ಕೆರೂರ ಗಲಾಟೆಯಲ್ಲಿ ಬಾಗಿಯಾದವನಿಗೆ ಡಾಬಾದಲ್ಲಿ ಆಶ್ರಯ ಕೊಟ್ಟಿದ್ದಾರೆಂಬ ಕಾರಣಕ್ಕೆ ಈ ಗಲಾಟೆ ನಡೆದಿರಬಹುದು ಎಂಬ ಮಾತು ಕೇಳಿಬರುತ್ತಿದೆ.
ಕೆರೂರ ನಿವಾಸಿಗಳಾದ ಮಳಗಲಿ ಎಂಬುವರ ಡಾಬಾ ಇದಾಗಿದ್ದು ಹಾಡ ಹಗಲೆ ನಡೆದ ಗಲಾಟೆಯಲ್ಲಿ ರಾಜೇಸಾಬ, ಹನೀಫ ಹಾಗೂ ಮಲೀಕ್ ಎಂಬುವರಿಗೆ ತಿವ್ರ ಗಾಯಗಳಾಗಿವೆ. ಒಟ್ಟು ಐದು ಜನರಿಗೆ ಗಾಯಗಳಾಗಿದ್ದು ಮೂವರನ್ನು ತಕ್ಷಣ ಅಂಬುಲೆನ್ಸ್ ಮೂಲಕ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ಕೆರೂರ ಗಲಾಟೆ ಪ್ರಕರಣ ಬೆನ್ನಲ್ಲೆ ಈ ಹಲ್ಲೆ ನಡೆದಿದ್ದು ಸಾಕಷ್ಟು ಅನುಮಾನಗಳು ಹುಟ್ಟಿಕೊಂಡಿವೆ.
ಸದ್ಯ ಡಾಬಾ ಬಳಿ ಹೆಚ್ಚುವರಿ ಪೊಲೀಸ್ ನಿಯೋಜಿಸಲಾಗಿದೆ. ಘಟನೆ ನಡೆದ ಸ್ಥಳದಲ್ಲಿ ಬಿದ್ದಿದ್ದ ನಾಲ್ಕೈದು ಬಡಿಗೆಗಳನ್ನ ಹಾಗೂ ಡಾಬಾ ಪಕ್ಕದಲ್ಲಿದ್ದ ಕೋಳಿ ಫಾರ್ಮ್ ನಲ್ಲಿನ ಸಿಸಿ ಟಿವಿ ಫೂಟೇಜ್ ಪಡೆದುಕೊಂಡಿದ್ದಾರೆ. ಡಾಬಾದ ಸುತ್ತ ಹೊಲ-ಗದ್ದೆಗಳಲ್ಲಿ ಸಂಚರಿಸಿ ಮಾಹಿತಿ ಕಲೆಹಾಕಿದರು. ಈ ಘಟನೆ ಸಂಬಂದ ಪಟ್ಟಂತೆ ಗ್ರಾಮದ ಕೆಲವರನ್ನ ವಿಚಾರಣೆ ನಡೆಸಲಾಗುತ್ತಿದೆ.
ಘಟನೆ ಬೆನ್ನಲ್ಲೆ ಸ್ಥಳಕ್ಕೆ ಎಸ್.ಪಿ ಜಯಪ್ರಕಾಶ ಭೇಟಿ ನೀಡಿದ್ದು ಹಲ್ಲೆ ನಡೆದ ಸ್ಥಳದಲ್ಲಿ ಪರಿಶೀಲನೆ ನಡೆಸಿದರು. ಘಟನೆ ಬಗ್ಗೆ ಮಾಹಿತಿ ಪಡೆಯುತ್ತಿದ್ದವೆ ಸದ್ಯ ಗಾಯಾಳುಗಳನ್ನ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಪತ್ರಿಕೆಗೆ ತಿಳಿಸಿದರು. ಬಾಗಲಕೋಟೆ ಡಿಎಸ್‌ಪಿ ಹೊಸಹಳ್ಳಿ, ಬಾದಾಮಿ ಪ್ರಭಾರಿ ಸಿಪಿಐ ವಿಜಯ ಮುರಗುಂಟಿ, ಪಿಎಸ್‌ಐ ನೇತ್ರಾವತಿ ಪಾಟೀಲ ಸೇರಿದಂತೆ ಅಧಿಕಾರಿಗಳ ತಂಡ ಭೇಟಿ ನೀಡಿದ್ದಾರೆ.