Advertisement

ಆರ್ಥಿಕ ಹಿಂಜರಿತಕ್ಕೆ ಆತ್ಮನಿರ್ಭರವೇ ಮದ್ದು

10:40 PM Oct 27, 2022 | Team Udayavani |

ವಿಶ್ವದಾದ್ಯಂತ ಕೇಂದ್ರೀಯ ಬ್ಯಾಂಕ್‌ಗಳು ಬಡ್ಡಿ ದರ ಏರಿಕೆ ಮುಂತಾದ ಬಿಗಿ ವಿತ್ತೀಯ ಕ್ರಮಗಳ ಮೊರೆ ಹೋಗುತ್ತಿರುವುದರ ಹಿನ್ನೆಲೆಯಲ್ಲಿ ಮುಂದಿನ ವರ್ಷ ಆರ್ಥಿಕ ಹಿಂಜರಿತ ಕಾಡಬಹುದು ಎಂದು ವಿಶ್ವಬ್ಯಾಂಕ್‌ ಮತ್ತು ಅಂತಾರಾಷ್ಟ್ರೀಯ ಹಣಕಾಸು ಸಂಸ್ಥೆ ಎಚ್ಚರಿಕೆ ನೀಡಿದೆ. 1970ರಲ್ಲಿ ಉಂಟಾದ ಆರ್ಥಿಕ ಹಿಂಜರಿತದ ಅನಂತರ ಅತೀ ಗರಿಷ್ಠ ಹಿಂಜರಿತ 2023ರಲ್ಲಿ ಆಗಬಹುದು ಎಂದು ವಿಶ್ವಬ್ಯಾಂಕ್‌ನ ವರದಿಯೊಂದು ಅಭಿಪ್ರಾಯಪಟ್ಟಿದೆ.

Advertisement

ಅಭಿವೃದ್ಧಿಶೀಲ ದೇಶಗಳಿಗೆ ಇದರ ಬಿಸಿ ಹೆಚ್ಚಾಗಿ ತಟ್ಟಲಿದೆ ಎಂದು ವಿಶ್ವಬ್ಯಾಂಕ್‌ ವರದಿ ಹೇಳಿದೆ. ಇದೇ ವೇಳೆ ಹಣದುಬ್ಬರಕ್ಕೆ ಕಡಿವಾಣ ಹಾಕಲು ಉತ್ಪಾದನೆ ಹೆಚ್ಚಳ ಹಾಗೂ ಪೂರೈಕೆ ಸರಪಳಿ ಅಡಚಣೆ ನಿರ್ಮೂಲನೆಯಂತಹ ಕ್ರಮಗಳನ್ನು ಕೈಗೊಳ್ಳಲು ಸಲಹೆ ನೀಡಿದೆ.

ರಷ್ಯಾ-ಉಕ್ರೇನ್‌ ಕದನ, ಜಾಗತಿಕ ಆಹಾರ ಪೂರೈಕೆಯಲ್ಲಿ ಅಡಚಣೆ, ಕೃಷಿ ಉತ್ಪಾದನೆಯಲ್ಲಿ ಕುಂಠಿತ, ಕೊರೊನಾ ಹೀಗೆ ಹಲವು ಕಾರಣಗಳಿಂದಾಗಿ ಹಣದುಬ್ಬರ ಉಂಟಾಗಿ ನಿರೀಕ್ಷಿತ ಆರ್ಥಿಕ ಪ್ರಗತಿಯನ್ನು ಸಾಧಿಸಲಾಗುತ್ತಿಲ್ಲ. ಇದೇ ಪರಿಸ್ಥಿತಿ ಮುಂದುವರಿದರೆ ವಿಶ್ವದ ಬಲಾಡ್ಯ ರಾಷ್ಟ್ರಗಳು ಮುಂದಿನ ವರ್ಷ ಆರ್ಥಿಕ ಹಿಂಜರಿತ ಕಾಣಬಹುದು ಎಂಬ ಭಯದ ವಾತಾವರಣ ಸೃಷ್ಟಿಯಾಗಿದೆ. ಈಗಾಗಲೇ ಇಂಥ ಬೆಳವಣಿಗೆಗಳ ಮುನ್ಸೂಚನೆ ಲಭಿಸಲಾರಂಭಿಸಿದೆ. ಆದರೆ ಭಾರತದ ಮೇಲೆ ಈ ಆರ್ಥಿಕ ಹಿಂಜರಿತ ಅಷ್ಟೇನೂ ಪರಿಣಾಮ ಬೀರಲಾರದು ಎಂದು ಆರ್ಥಿಕ ತಜ್ಞರು ಮತ್ತು ಸರಕಾರ ಆಶಾವಾದವನ್ನು ವ್ಯಕ್ತಪಡಿಸಿದೆ. ಆತ್ಮನಿರ್ಭರ ಭಾರತ ಪರಿಕಲ್ಪನೆ ನಿರೀಕ್ಷಿಸಲಾದ ಆರ್ಥಿಕ ಹಿಂಜರಿತದ ಕನಿಷ್ಠ ಪರಿಣಾಮಗಳೊಂದಿಗೆ ಭಾರತವನ್ನು ಮುನ್ನೆಡಸಲಿದೆಯಾ ಎಂಬುದು ಸದ್ಯದ ಯಕ್ಷಪ್ರಶ್ನೆ.

1990 ರಲ್ಲಿ ಹುಸಿಯಾದ ಭವಿಷ್ಯವಾಣಿ :

ರವಿಭಾತ್ರಾ ಅವರು 1985ರಲ್ಲಿ ಪ್ರಕಟಿಸಿದ ನ್ಯೂಯಾರ್ಕ್‌ ಟೈಮ್ಸ… ಬೆಸ್ಟ್‌ ಸೆಲ್ಲರ್‌ ಪಟ್ಟಿಯನ್ನು ಪ್ರವೇಶಿಸಿದ  ಪುಸ್ತಕ “1990ರ ಮಹಾ ಕುಸಿತ’ ಒಂದು ಮಹಾ ದುರಂತದ ಮನ್ಸೂಚನೆಯನ್ನು ತೆರೆದಿಟ್ಟಿತ್ತು. ಆದರೆ ಅಂದಿನ ಭವಿಷ್ಯವಾಣಿ ಸುಳ್ಳಾಯಿತು. ಇದು ಸಾಮಾನ್ಯವಾಗಿ ಭವಿಷ್ಯ ನುಡಿಯುವ ಪ್ರಾಮಾಣಿತ ಸೂತ್ರವನ್ನು ಅನುಸರಿಸಿದೆ ಎಂದು  ಆರ್ಮ್ಸ್ಟ್ರಾಂಗ್‌ 1988ರಲ್ಲಿ ಬರೆದಿದ್ದರು. ಒಂದು ವೇಳೆ ಅನಾಹುತ ಸಂಭವಿಸಿದರೆ “ನಾನು ಹೇಳಿದ್ದೇನೆ’ ಎಂದು ಹೇಳಬಹುದು. ಅದು ಸಂಭವಿಸದಿದ್ದರೆ “ಮುನ್ಸೂಚನೆ ನೀಡಿದ ಪರಿಣಾಮವಾಗಿ ನನ್ನ ಸಲಹೆಯಂತೆ ಮುಂಜಾಗರೂಕತ ಹೆಜ್ಜೆಗಳಿಂದಾಗಿ ದೊಡ್ಡ ದುರಂತ ತಪ್ಪಿತು’ ಎನ್ನುತ್ತಾರೆ. ಆದರೆ ನಾವು ಆಯ್ದುಕೊಂಡ ರಚನಾತ್ಮಕ ಹೆಜ್ಜೆಗಳು ಜಾಗತಿಕ ಹಿಂಜರಿತದ ಬಿಸಿಯಿಂದ ನಮಗೆ ರಕ್ಷಣೆ ಕೊಡಲಿದೆಯಾ ಎಂದು ಕಾದು ನೋಡಬೇಕಾಗಿದೆ.

Advertisement

ಯಾಕೆ ಹಿಂಜರಿತದ ಭೀತಿ? :

ಕೋವಿಡ್‌-19 ಸಾಂಕ್ರಾಮಿಕ ರೋಗವು ಪ್ರಾರಂಭವಾದಾಗ ಹೆಚ್ಚಿನ ದೇಶಗಳು ಚಲನೆಯ ಮೇಲೆ ನಿರ್ಬಂಧಗಳನ್ನು ಹೇರಿದ್ದರಿಂದ ವ್ಯಾಪಾರ ಮತ್ತು ಆದಾಯದ ಮೇಲೆ ಹೆಚ್ಚು ಋಣಾತ್ಮಕ ಪರಿಣಾಮ ಬೀರಿತು. ಹೆಚ್ಚಿನ ರಾಷ್ಟ್ರಗಳು ಜಾನ್‌ ಮೇನಾರ್ಡ್‌ ಕೇನ್ಸ್‌ನ ಪ್ರತಿಪಾದನೆಯನ್ನು ಒಪ್ಪಿಕೊಂಡು ನಗದು ಹಣದ ರೂಪದಲ್ಲಿ ಭಾರೀ ಖರ್ಚು ಮಾಡಿ ಜನರ ಜೇಬಿಗೆ ಹಣವನ್ನು ಹಾಕಿದವು. ಅಂಥ ಕ್ರಮಗಳು ಬೇಡಿಕೆಯನ್ನು ಉತ್ತೇಜಿಸುತ್ತದೆ. ಆದರೆ ಅನಿವಾರ್ಯವಾಗಿ ಹಣದುಬ್ಬರಕ್ಕೆ ಕಾರಣವಾಗುತ್ತದೆ. ಮತ್ತೂಂದೆಡೆ ಹೇಯಾಕ್‌ ಬೋಧಿಸಿದಂತೆ ಕನಿಷ್ಠ ಸರಕಾರಿ ಹಸ್ತಕ್ಷೇಪದೊಂದಿಗೆ ಮಾರುಕಟ್ಟೆಯು ತನ್ನ ಹಾದಿಯನ್ನು ನಡೆಸಲು ಬಿಡುವುದು ನಮ್ಮ ಅತ್ಯಂತ ದುರ್ಬಲ ಜನರನ್ನು ಅನಪೇಕ್ಷಿತ ಪರಿಸ್ಥಿತಿಗಳಿಗೆ ತಳ್ಳುತ್ತದೆ.

ಇದಕ್ಕೆ ವ್ಯತಿರಿಕ್ತವಾಗಿ ಕೋವಿಡ್‌-19 ಸಾಂಕ್ರಾಮಿಕದಂತಹ ಸಂದಿಗ್ಧ ಸಮಯದಲ್ಲಿ ಬಿಕ್ಕಟ್ಟಿನಿಂದ ಹೊರಬರುವ ಮಾರ್ಗವೆಂದರೆ ಎರಡು ಸಿದ್ಧಾಂತಗಳ ಸಮ್ಮಿಲನವಾದ ನೀತಿ ಕ್ರಮಗಳನ್ನು ತೆಗೆದುಕೊಳ್ಳುವುದು ಎಂದು ಭಾರತೀಯ ಅರ್ಥಶಾಸ್ತ್ರಜ್ಞರು ನಂಬಿದ್ದರು. “ಸರಿಯಾದ ಸಮಯದಲ್ಲಿ’  ಮತ್ತು “ಸೂಕ್ತ ಗುಂಪುಗಳಿಗೆ’ ಆರ್ಥಿಕ ಉತ್ತೇಜನದ ಪರಿಣಾಮವಾಗಿ ಭಾರತವು ಇಂದು ತನ್ನ ಆರ್ಥಿಕತೆಯನ್ನು ವಿಸ್ತರಿಸುತ್ತಿದೆ ಎಂದು ಒಂದು ವಾದ.

ಸೂಕ್ಷ್ಮವಾಗಿ ಅವಲೋಕಿಸಿದರೆ ದೇಶದಲ್ಲಿ ಆರ್ಥಿಕ ಹಿಂಜರಿತವಿರುವುದರಲ್ಲಿ ಯಾವ ಅನುಮಾನವೂ ಇಲ್ಲ. ಅನೇಕ ಕ್ಷೇತ್ರಗಳು ಸಂಕಷ್ಟದಲ್ಲಿವೆ. ವಿದೇಶಿ ಹೂಡಿಕೆದಾರರು ಹಾಗೂ ಭಾರತೀಯ ಉದ್ಯಮಿಗಳು ದೇಶದಲ್ಲಿ ಉದ್ದಿಮೆಗೆ ಸಂಬಂಧಿಸಿದ ನೀತಿ ನಿಯಮಗಳು ಸ್ಥಿರವಾಗಿಲ್ಲ, ಪದೇಪದೆ ಬದಲಾಗುತ್ತಿವೆ ಎಂದು ದೂರುತ್ತಿದ್ದಾರೆ.

ಭರವಸೆಯ ಮೇಲೆ ಆರ್ಥಿಕತೆ ಬೆಳೆಯುತ್ತದೆ:

ಭವಿಷ್ಯ ಚೆನ್ನಾಗಿದೆ ಎಂಬ ಭರವಸೆಯೇ ದೇಶದ ಆರ್ಥಿಕತೆಯನ್ನು ಮುಂದಕ್ಕೆ ಕೊಂಡೊಯ್ಯುತ್ತದೆ. ಆತ್ಮನಿರ್ಭರ ಭಾರತದ ಹಿನ್ನೆಲೆಯಲ್ಲಿ ದೇಶವು ಒತ್ತು ನೀಡಿದ ಸ್ವಾವಲಂಬನೆಯ ಸ್ತಂಭಗಳಾದ ಆರ್ಥಿಕತೆ, ಮೂಲ ಸೌಕರ್ಯ, ಬೇಡಿಕೆ ಈಡೇರಿಸಲು ಕೃಷಿ ಪೂರೈಕೆಯ ಸುಧಾರಣೆ, ತರ್ಕಬದ್ಧ ತೆರಿಗೆ ವ್ಯವಸ್ಥೆ, ಬಲಶಾಲಿ ಹಣಕಾಸಿನ ಪ್ರಯತ್ನಗಳು ಆರ್ಥಿಕತೆಗೆ ಭದ್ರ ಅಡಿಪಾಯವನ್ನು ಒದಗಿಸಿದೆ. ಎಪ್ರಿಲ್‌-ಜೂನ್‌ 2022 ತ್ರೆ„ಮಾಸಿಕದಲ್ಲಿ ದಾಖಲೆಯ ವಿಸ್ತರಣೆಯೊಂದಿಗೆ, ಭಾರತೀಯ ಆರ್ಥಿಕತೆಯು ಈಗ ಆರನೇ ಸ್ಥಾನಕ್ಕೆ ಕುಸಿದಿರುವ ಖೀಓ ಯನ್ನು ಹಿಂದಿಕ್ಕಿದೆ ಎಂದು ಬ್ಲೂಮ್‌ಬರ್ಗ್‌ ವರದಿ ಹೇಳಿದೆ.

ಆರ್ಥಿಕ ಸಂಕಷ್ಟವನ್ನು ಮೊದಲು ಅರ್ಥಮಾಡಿಕೊಳ್ಳಬೇಕು :

ದೇಶದಲ್ಲಿ ಆರ್ಥಿಕ ಹಿಂಜರಿತವಿರುವುದರಲ್ಲಿ ಯಾವ ಅನುಮಾನವೂ ಇಲ್ಲ. ಅನೇಕ ಕ್ಷೇತ್ರಗಳು ಸಂಕಷ್ಟದಲ್ಲಿವೆ. ಜಾರ್ಜ್‌ ಬರ್ನಾರ್ಡ್‌ ಶಾ ಹೇಳಿದ ಮಾತು “ಎಲ್ಲ ಅರ್ಥಶಾಸ್ತ್ರಜ್ಞರನ್ನು ಒಂದೇ ಕಡೆ ಸಾಲಾಗಿ ನಿಲ್ಲಿಸಿದರೂ ಅವರು ಒಮ್ಮತದ ನಿರ್ಧಾರಕ್ಕೆ ಬರುವುದಿಲ್ಲ’ ಎಂಬುದು. ಇವರ ಮಾತಿನ ಅರ್ಥವೇನೆಂದರೆ ದೇಶದ ಎಲ್ಲ ಆರ್ಥಿಕ ಸಮಸ್ಯೆಗಳಿಗೆ ಸರಿಯಾದ ಒಮ್ಮತದ ಪರಿಹಾರವನ್ನು ನೀಡಲು ಸಾಧ್ಯವಿಲ್ಲ. ಸಾಕಷ್ಟು ವಿಶ್ಲೇಷಣೆ ಹಾಗೂ ಚರ್ಚೆಯ ಮೂಲಕ ವಾಸ್ತವಗಳನ್ನು ಅರ್ಥಮಾಡಿಕೊಳ್ಳಬೇಕು. ಆಗ ಸರಿಯಾದ ಪರಿಹಾರೋಪಾಯಗಳು ಕಾಣಿಸತೊಡಗುತ್ತವೆ.

ಇದು ಯುದ್ಧದ ಯುಗವಲ್ಲ’ :

ಇತ್ತೀಚೆಗೆ ನಡೆದ ಎಸ್‌ಸಿಒ ಶೃಂಗದ ವೇಳೆ ರಷ್ಯಾ ಅಧ್ಯಕ್ಷ ವ್ಲಾದಿಮಿರ್‌ ಪುತಿನ್‌ಗೆ “ಇದು ಯುದ್ಧದ ಯುಗವಲ್ಲ’ ಎಂದು ಭಾರತದ ಪ್ರಧಾನಿ ನರೇಂದ್ರ ಮೋದಿ ಅವರು ಹೇಳಿದ್ದು ಸರಿಯಾಗಿಯೇ ಇದೆ ಎಂದು ಫ್ರಾನ್ಸ್‌ ಅಧ್ಯಕ್ಷ ಇಮ್ಯಾನುವೆಲ್‌ ಮ್ಯಾಕ್ರನ್‌ ಅಭಿಪ್ರಾಯಪಟ್ಟಿದ್ದಾರೆ. ಇದು ಯುದ್ಧದ ಸಮಯವಲ್ಲ. ಪಾಶ್ಚಾತ್ಯರ ವಿರುದ್ಧ ಪ್ರತೀಕಾರ ತೀರಿಸುವ ಸಮಯವೂ ಅಲ್ಲ. ನಾವೆಲ್ಲರೂ ಎದುರಿಸುವಂತಹ ಸವಾಲುಗಳನ್ನು ಸಮರ್ಪಕ ಹಾಗೂ ಒಗ್ಗಟ್ಟಾಗಿ ಎದುರಿಸುವ ಸಮಯ ಎಂದು ಮ್ಯಾಕ್ರನ್‌ ಹೇಳಿರುವುದು ಸಮಯೋಚಿತವಾಗಿದೆ.

ಹೊಣೆಯರಿತ ಹೆಜ್ಜೆಯಿರಲಿ :

ಭಾರತದಲ್ಲಿ ಹಣದುಬ್ಬರ ಹೆಚ್ಚುತ್ತಿರುವುದು, ರೂಪಾಯಿ ಮೌಲ್ಯ ಕಳೆದುಕೊಳ್ಳುತ್ತಿರುವುದು ಆರ್ಥಿಕ ದುಃಸ್ಥಿತಿಯ ಸೂಚಕವೆಂದು ಪರಿಗಣಿಸಲಾಗಿದೆ. ಸರಕಾರ ಇನ್ನೂ ಸಮರ್ಪಕವಾದ ಕ್ರಮಗಳನ್ನು ಕೈಗೊಳ್ಳದೇ ಹೋದರೆ ಆರ್ಥಿಕ ಪ್ರಗತಿಯ ದಾರಿ ಹಳಿ ತಪ್ಪಿ ಉರುಳುವ ಅಪಾಯ ಇದ್ದೇ ಇದೆ. ನಮ್ಮ ನೆರೆಯ ಶ್ರೀಲಂಕಾದಲ್ಲೂ ಹಲವು ವರ್ಷಗಳ ಹಿಂದೆಯೇ ಆರ್ಥಿಕ ಮಗ್ಗಟ್ಟು ಸೃಷ್ಟಿಯಾಗಬಹುದು ಎಂದು ತಜ್ಞರು ಎಚ್ಚರಿಸಿದ್ದರು. ಆದರೆ ಸರಕಾರ ಅದನ್ನು ನಿರ್ಲಕ್ಷಿಸಿ ಜನಪ್ರಿಯ ಯೋಜನೆಗಳ ಮೂಲಕ ಮತದಾರರನ್ನು ಓಲೈಸುವತ್ತ ಗಮನ ನೀಡಿತು. ಪರಿಣಾಮವಾಗಿ ಈಗ ಶ್ರೀಲಂಕಾ ಅರ್ಥಿಕ ವಿನಾಶದ ಅಂಚಿನಲ್ಲಿದೆ.

ಭಾರತಕ್ಕೆ ಒತ್ತಡದ ಆರ್ಥಿಕ ಸವಾಲುಗಳು ಆಂತರಿಕವಾಗಿಯೇ ಉಳಿದಿರುವುದು ಧನಾತ್ಮಕ ಅಂಶ. ಯಾಕೆಂದರೆ ನಮ್ಮ ಆರ್ಥಿಕ ಸಮಸ್ಯೆಗಳು ನಮ್ಮ ನೇರ ನಿಯಂತ್ರಣದಲ್ಲಿವೆ. ಆಂತರಿಕವಾದ ಸಮಸ್ಯೆಗಳಾದ ಸಣ್ಣ ಉದ್ಯಮಗಳ ಸ್ಪರ್ಧಾತ್ಮಕತೆ, ಆರ್ಥಿಕ ಸ್ವಾಸ್ಥ್ಯವನ್ನು ಉತ್ತಮಗೊಳಿಸುವುದು ಮತ್ತು ರಾಜ್ಯಗಳ ವಿತ್ತೀಯ ಸ್ವಾಸ್ಥ್ಯವನ್ನು ಕಾಪಾಡಿಕೊಳ್ಳುವ ಸವಾಲುಗಳು ಹೊಸದಲ್ಲದಿರುವುದು ಆತಂಕಕ್ಕೆ ಕಾರಣ. ಆತ್ಮನಿರ್ಭರ ಭಾರತ ಪರಿಕಲ್ಪನೆ ಭಾರತವನ್ನು ನಿರೀಕ್ಷಿಸಲಾದ ಆರ್ಥಿಕ ಹಿಂಜರಿತದ ಕನಿಷ್ಠ ಪರಿಣಾಮಗಳೊಂದಿಗೆ ಮುನ್ನಡೆಸಲಿ ಎಂಬುದೇ ನಮ್ಮ ಹಾರೈಕೆ.

-ಡಾ| ಎ. ಜಯ ಕುಮಾರ ಶೆಟ್ಟಿ, ಉಜಿರೆ

Advertisement

Udayavani is now on Telegram. Click here to join our channel and stay updated with the latest news.

Next