Advertisement

ಆತ್ಮತೃಪ್ತಿ, ಹೃದಯ ಶ್ರೀಮಂತಿಕೆಯೇ ಶ್ರೇಷ್ಠ

12:39 AM May 25, 2022 | Team Udayavani |

ಒಳ್ಳೆಯ ಸಂಸ್ಕಾರಗಳು ವ್ಯಕ್ತಿಗೆ ಅನುಪಮ ವ್ಯಕ್ತಿತ್ವ ತಂದು ಕೊಡುವು ದಲ್ಲದೇ ಆತ್ಮತೃಪ್ತಿಗೂ ಕಾರಣವಾಗುತ್ತದೆ. ಎಲ್ಲವನ್ನು ಕಾಂಚಾಣದಿಂದ ಅಳೆದು ತೂಗುವ ಪ್ರಸಕ್ತ ಕಾಲಘಟ್ಟದಲ್ಲಿ ಮತ್ತು ಆಧುನಿಕ-ಯಾಂತ್ರಿಕ ಯುಗ ದಿಂದ ಬದಲಾದ ಮನುಷ್ಯರ ಜನ ಜೀವನದ ದೃಷ್ಟಿಕೋನ, ಬದುಕಿನ ಶೆೃಲಿ ಸಮಾಜವನ್ನು ಸಂಸ್ಕಾರದ ವಿಸ್ಮತಿಯತ್ತ ಕೊಂಡೊಯ್ಯುತ್ತಿದೆ. ಇದರ ಪರಿ ಣಾಮವೇ ಸಮಾಜದ ಅಲ್ಲಲ್ಲಿ ದುಃಖ, ವ್ಯಥೆ, ದುರ್ವ್ಯಸನ, ರೋಷ, ಕಲಹ, ದ್ವೇಷ, ಜುಗುಪ್ಸೆ, ಗೊಂದಲ, ಖನ್ನತೆ, ಅನಾಚಾರ, ಕೌರ್ಯ, ಸ್ವಾರ್ಥ ವಿಜೃಂಭಿಸುತ್ತಿದೆ.

Advertisement

ಇದಕ್ಕೆ ಇನ್ನಿತರ ಕಾರಣಗಳ ವಿಶ್ಲೇಷಣೆಯತ್ತ ಹೊರಟರೆ ಎದ್ದು ಕಾಣುವ ಮುಖ್ಯ ಬಿಂದುಗಳೆಂದರೆ ಕೂಡು ಕುಟುಂಬಗಳು/ಅವಿಭಕ್ತ ಮನೆತನಗಳು ನಶಿಸಿ ಮಾಯವಾಗುತ್ತಿರುವುದು. ಹಿರಿ ಜೀವಗಳ ಮಾರ್ಗದರ್ಶನಗಳನ್ನು ಆಲಿಸುವ ಕಿವಿಗಳು ಕಡಿಮೆಯಾಗಿವೆ, ಸಂಸ್ಕಾರ-ಸಂಸ್ಕೃತಿ- ಸಂಪ್ರದಾಯಗಳ ಕೊರತೆ, ಅಪ್ರಸ್ತುತ ಶಿಕ್ಷಣ, ಆಧುನಿಕ ಸಾಧನಗಳ, ಭೌತಿಕ ಸುಖ ಬೆನ್ನೆತ್ತಿ ಹೊರಡುವ ಮನುಷ್ಯರು ಹೆಚ್ಚಾಗುತ್ತಿದ್ದಾರೆ. ಹೀಗೆ ಆತ್ಮತೃಪ್ತಿಯ ಹುಡುಕಾಟದಲ್ಲಿ ಸಂತೋಷದ ಪ್ರಾಪ್ತಿಗಾಗಿ ಮನುಷ್ಯ ಹಪಹಪಿಸುತ್ತಿದ್ದಾನೆ, ಹಾತೊರೆಯುತ್ತಿದ್ದಾನೆ. ಇದಕ್ಕೊಂದು ಅತ್ಯುತ್ತಮ ಉದಾಹರಣೆ ಎಂದರೆ ಅದೆಷ್ಟೋ ಸಿರಿವಂತರು, ಸಂಪದ್ಭರಿತರು ಆತ್ಮತೃಪ್ತಿಯಿಂದ ವಂಚಿತರಾಗಿ, ದುಃಖೀತರಾಗಿ ರೋದಿಸುವ, ಇನ್ನೊಂದೆಡೆ ಅತ್ಯಲ್ಪ ಸಂಪತ್ತು- ಸಂಪಾದನೆಯ ಸಭ್ಯ ವ್ಯಕ್ತಿತ್ವದವರು ಸಂತೃಪ್ತಿಯ ಬದುಕು ಸಾಗಿಸುವ ಅದೆಷ್ಟೋ ಸನ್ನಿವೇಶಗಳು ನಮ್ಮ ನಿಮ್ಮೆಲ್ಲರ ಕಣ್ಣ ಮುಂದಿವೆ. ಇವಕ್ಕೆಲ್ಲ ಬುನಾದಿ ವಿನಮ್ರತೆ, ವಿನಯತೆ, ವಿಧೇಯತೆ, ಸಭ್ಯತೆಯ ಬದುಕಿನ ಸಂಗಮ.

ಆತ್ಮತೃಪ್ತಿ ಮತ್ತು ಹೃದಯ ಶ್ರೀಮಂತಿಕೆ ಪರಸ್ಪರ ಒಂದಕ್ಕೊಂದು ಸಂಬಂಧ ಹೊಂದಿದವು. ಹೃದಯ ಸಿರಿವಂತಿಕೆ ಸಂಸ್ಕಾರದ ತಾಯಿ ಬೇರು. ಹೃದಯ ಶ್ರೀಮಂತಿಕೆ ಹೊಂದಿದವನ ವ್ಯಕ್ತಿತ್ವವೂ ಅಮೇಯ ಸ್ವರೂಪದ್ದಾಗಿರುತ್ತದೆ ಮಾತ್ರ ವಲ್ಲದೇ ಇಂಥವರು ಸದಾ ಆತ್ಮತೃಪ್ತಿಯಿಂದ ಪ್ರಸನ್ನರಾಗಿರುತ್ತಾರೆ. ಸಮಾಜಕ್ಕೆ ಕುಠಾರಪ್ರಾಯರಾಗುತ್ತಾರೆ.

ಮೇಲಿನ ಸಮಾಜದ ಅಪಸವ್ಯಗಳಿಗೆ ಪರಿಹಾರದತ್ತ ನೋಡ ಹೊರಟರೆ, ಸುಲಭ ಸಾಧ್ಯತೆಯ ಚಿತ್ರಣವೇ ಕಣ್ಣೆದುರು ಕಾಣುವುದು. ನಮ್ಮೊಳಗೆಯೇ ಅಂತರ್ಗತ ವಾಗಿರುವ ಆತ್ಮ ಸಂತೋಷದ ಹುಡುಕಾಟವೇಕೇ? ಆತ್ಮ ಸಂತೋಷವೆಂಬುದು ಎಲ್ಲೂ ಖರೀದಿಗೆ ಸಿಗುವಂಥದ್ದಲ್ಲ. ಆತ್ಮ ಸಂತೋಷಕ್ಕಾಗಿ ಎಲ್ಲೂ ಹುಡುಕುವ ಆವಶ್ಯಕತೆಯೂ ಇಲ್ಲ. ನಮ್ಮ ಆತ್ಮದಲ್ಲೇ ನೆಲೆಸಿದ್ದು, ಅಂತರ್ಮುಖೀಯಾಗಿದ್ದು, ಆತ್ಮಸ್ಥಿತವಾಗಿದ್ದು, ನಮ್ಮ ಧರ್ಮ-ಕರ್ಮ ಆಚರಣೆಗಳ ಮೇಲೆ ನೆಲೆ ನಿಂತಿದೆ, ಅವಲಂಬಿಸಿದೆ.

ಆಶೆ-ಆಕಾಂಕ್ಷೆಗಳು ಬೇಕು ಮತ್ತು ಇವು ಸಹಜ, ಸ್ವಾಭಾವಿಕ ಗುಣವೂ ಸರಿ. ಆದರೆ ದುರಾಶೆ, ಮಿತಿ ಇಲ್ಲದ, ಅಸಹಜ, ಅಸ್ವಾಭಾವಿಕ ಆಶೆಗಳು ಮಾನವನ ಪತನಕ್ಕೊಂದು ರಾಜ ಮಾರ್ಗ. ತಪ್ಪು ರೀತಿ- ನೀತಿಯ ಬದುಕಿನ ವಿಧಾನಗಳೇ ಅಸಂತೋಷವನ್ನು ನೀಡುತ್ತಿವೆ, ವೃದ್ಧಿಸು ತ್ತಿವೆ. ಇತರರ ಜೀವನದ ಅನುಕರಣೆ, ದಿಢೀರ್‌ ಸಿರಿವಂತಿಕೆಯ ಕನವರಿಕೆ ಇವೆಲ್ಲ ನೆಮ್ಮದಿಯನ್ನು ಇನ್ನಷ್ಟು ಹಾಳು ಮಾಡುತ್ತಿವೆ. ಆರ್ಥಿಕತೆಯಲ್ಲಿ ನಮಗಿಂತ ಕೆಳಗಿನವರನ್ನು ನೋಡಿದರೆ, ಸಾಧನೆಯ ವಿಚಾರದಲ್ಲಿ ನಮಗಿಂತ ಮೇಲಿನ ಸಾಧಕರನ್ನು ನೋಡುವುದು. ಈ ನಿಟ್ಟಿನಲ್ಲಿ ನೋಡುವುದು ಯಾವತ್ತೂ ಸಂತಸಕರ ಮತ್ತು ಶ್ರೇಯಸ್ಕರ. ಸಮಾಜ ಇದನ್ನು ತಿರುವು- ಮರುವು ಆಗಿ ಕಂಡು ಎಡವುತ್ತಿದೆ.

Advertisement

ಧರ್ಮಾಧಾರಿತ ಜೀವನವೇ ಸುಜೀವನ. ಹೀಗೆ ಧರ್ಮ ಬದ್ಧ ಕರ್ಮಾಧಾರಿತ ಜೀವನ, ಆತ್ಮ ಜ್ಞಾನ ತೀರ್ಥದ ಸ್ನಾನ-ಅಮೃತಪಾನ, ಅಲೌಕಿಕ, ಪಾರಮಾರ್ಥಿಕತೆಯ ತಿಳಿವಳಿಕೆ, ಇತರರ ಸುಖ-ದುಃಖಗಳಲ್ಲಿ ಭಾಗಿಯಾಗುವಿಕೆ, ಸಹಾನುಭೂತಿ, ಅನುಕಂಪ, ತಾನಾರು, ತನ್ನ ಇತಿ-ಮಿತಿಗಳೇನು ಎಂಬುದರ ತಿಳಿವಳಿಕೆ, ತನ್ನೊಳಗೆ ನೆಲೆಯೂರುವಿಕೆ, ಯೋಗ- ಧ್ಯಾನ, ವಿಹಾರಗಳಲ್ಲಿ ತಲ್ಲೀನತೆ- ಏಕಾಗ್ರತೆ, ಸ್ವಯಂ ನಿಯಂತ್ರಣ, ಜೀವನದ ಧ್ಯೇಯ- ಉದ್ದೇಶಗಳ ಜ್ಞಾನ ಇವೆಲ್ಲವುಗಳು ಆತ್ಮತೃಪ್ತಿ, ಆತ್ಮ ಸಂತೋಷದ ಮೂಲಾಧಾರಗಳು. ಇವೇ ಆತೊ¾àದ್ಧಾರದ ಮತ್ತು ಮುಕ್ತಿ ಮಾರ್ಗದ ಸಾಧನಗಳಲ್ಲವೇ.

– ಸಂದೀಪ್‌ ನಾಯಕ್‌ ಸುಜೀರ್‌

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next